18 ಎಸೆತಗಳಲ್ಲಿ 10 ಬೌಂಡರಿ, ಸಿಕ್ಸರ್‌..! ವಿಂಡೀಸ್ ವಿರುದ್ಧ ಸ್ಯಾಂಟ್ನರ್ ಏಕಾಂಗಿ ಹೋರಾಟ ವ್ಯರ್ಥ

West Indies vs New Zealand T20: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ 7 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಶಾಯ್ ಹೋಪ್ ನಾಯಕತ್ವದ ಇನ್ನಿಂಗ್ಸ್ ನೆರವಿನಿಂದ 164 ರನ್ ಗಳಿಸಿದ ವಿಂಡೀಸ್, ನ್ಯೂಜಿಲೆಂಡ್ ತಂಡವನ್ನು 157 ರನ್‌ಗಳಿಗೆ ಕಟ್ಟಿಹಾಕಿತು. ಮಿಚೆಲ್ ಸ್ಯಾಂಟ್ನರ್ 55* ರನ್ ಸಿಡಿಸಿ ಹೋರಾಟ ನಡೆಸಿದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಈ ಜಯದೊಂದಿಗೆ ವೆಸ್ಟ್ ಇಂಡೀಸ್ ಸರಣಿಯಲ್ಲಿ 1-0 ಮುನ್ನಡೆ ಗಳಿಸಿದೆ.

18 ಎಸೆತಗಳಲ್ಲಿ 10 ಬೌಂಡರಿ, ಸಿಕ್ಸರ್‌..! ವಿಂಡೀಸ್ ವಿರುದ್ಧ ಸ್ಯಾಂಟ್ನರ್ ಏಕಾಂಗಿ ಹೋರಾಟ ವ್ಯರ್ಥ
Wi Vs Nz

Updated on: Nov 05, 2025 | 5:24 PM

ತವರಿನಲ್ಲಿ ನಡೆದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿ ದಾಖಲೆ ಬರೆದಿದ್ದ ನ್ಯೂಜಿಲೆಂಡ್ ತಂಡ, ಇದೀಗ ವೆಸ್ಟ್ ಇಂಡೀಸ್ ( West Indies vs New Zealand) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋಲಿಗೆ ಕೊರಳೊಡ್ಡಿದೆ. ಐದು ಪಂದ್ಯಗಳ ಟಿ20 ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಮಾಡಿರುವ ವೆಸ್ಟ್ ಇಂಡೀಸ್ ತಂಡ ಸರಣಿಯ ಮೊದಲ ಪಂದ್ಯವನ್ನು 7 ರನ್​ಗಳಿಂದ ಗೆದ್ದುಕೊಂಡಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಈ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ವಿಂಡೀಸ್ ಪಡೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಪಂದ್ಯದುದ್ದಕ್ಕೂ ಪ್ರಾಬಲ್ಯ ಸಾಧಿಸಿತು. ಆದರೆ ಅಂತಿಮ ಓವರ್‌ಗಳಲ್ಲಿ, ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಸ್ಫೋಟಕ ಇನ್ನಿಂಗ್ಸ್ ಆಡಿ ಕೊನೆಯ ವಿಕೆಟ್‌ಗೆ ದಾಖಲೆಯ ಪಾಲುದಾರಿಕೆಯನ್ನು ನಿರ್ಮಿಸಿದರು. ಆದಾಗ್ಯೂ ಅವರಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.

ನಾಯಕತ್ವದ ಇನ್ನಿಂಗ್ಸ್ ಆಡಿದ ಶೈ ಹೋಪ್

ಈ ಪಂದ್ಯದಲ್ಲಿ ಟಾಸ್ ಸೋತ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಬೇಕಾಯಿತು. ಆದಾಗ್ಯೂ ತಂಡಕ್ಕೆ ಹೇಳಿಕೊಳ್ಳುವಂತಹ ಆರಂಭ ಸಿಗಲಿಲ್ಲ. ಏಕೆಂದರೆ ಮೊದಲ ಮೂರು ವಿಕೆಟ್‌ಗಳು ಕೇವಲ 43 ರನ್‌ಗಳಿಗೆ ಪತನಗೊಂಡವು. ಆದಾಗ್ಯೂ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಶಾಯ್ ಹೋಪ್ 39 ಎಸೆತಗಳಲ್ಲಿ 53 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅವರ ಈ ಇನ್ನಿಂಗ್ಸ್​ನಲ್ಲಿ ನಾಲ್ಕು ಬೌಂಡರಿಗಳು ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು. ಇವರ ಜೊತೆಗೆ ರೋವ್‌ಮನ್ ಪೊವೆಲ್ ಕೂಡ 33 ರನ್‌ಗಳ ಕೊಡುಗೆ ನೀಡಿದರೆ, ರೋಸ್ಟನ್ ಚೇಸ್ 28 ರನ್ ಬಾರಿಸಿದರು. ಪರಿಣಾಮವಾಗಿ, ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 164 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ನ್ಯೂಜಿಲೆಂಡ್ ಪರ ಜ್ಯಾಕ್ ಫೌಲ್ಕ್ಸ್ ಮತ್ತು ಜಾಕೋಬ್ ಡಫಿ ತಲಾ ಎರಡು ವಿಕೆಟ್‌ಗಳನ್ನು ಪಡೆದರು.

ನ್ಯೂಜಿಲೆಂಡ್ ಬ್ಯಾಟಿಂಗ್ ವೈಫಲ್ಯ

165 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್‌ನ ಬ್ಯಾಟಿಂಗ್ ಕಳಪೆಯಾಗಿತ್ತು. ತಂಡವು ಕೇವಲ 109 ರನ್‌ಗಳಿಗೆ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ತಂಡದ ಪರ ಟಿಮ್ ರಾಬಿನ್ಸನ್ 27 ರನ್‌ಗಳಿಸಿದರೆ, ಡೆವೊನ್ ಕಾನ್ವೇ ಕೇವಲ 13 ರನ್ ಗಳಿಸಿದರು. ಈ ಮಧ್ಯೆ, ರಚಿನ್ ರವೀಂದ್ರ 21 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಮಾರ್ಕ್ ಚಾಪ್‌ಮನ್ ಸಹ ಏಳು ರನ್​ಗಳಿಗೆ ಸುಸ್ತಾದರೆ, ಡ್ಯಾರಿಲ್ ಮಿಚೆಲ್ 13 ರನ್​ಗಳಿಗೆ ಪೆವಿಲಿಯನ್ ದಾರಿ ಹಿಡಿದರು. ಆದಾಗ್ಯೂ ಎಂಟನೇ ಕ್ರಮಾಂಕದಲ್ಲಿ ಬಂದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಹೋರಾಟದ ಇನ್ನಿಂಗ್ಸ್ ಆಡಿದರು.

ಮಿಚೆಲ್ ಸ್ಯಾಂಟ್ನರ್ ಏಕಾಂಗಿ ಹೋರಾಟ

ನ್ಯೂಜಿಲೆಂಡ್ ತನ್ನ ಒಂಬತ್ತನೇ ವಿಕೆಟ್ ಕಳೆದುಕೊಂಡಾಗ, ಗೆಲ್ಲಲು 20 ಎಸೆತಗಳಲ್ಲಿ 57 ರನ್​ಗಳ ಅಗತ್ಯವಿತ್ತು. ಆದರೆ ಆ ನಂತರ ಬಂದ ಮಿಚೆಲ್ ಸ್ಯಾಂಟ್ನರ್ ಬೌಂಡರಿ ಮತ್ತು ಸಿಕ್ಸರ್​ಗಳ ಸುರಿಮಳೆಗೈದರು. ಇನ್ನಿಂಗ್ಸ್​ನ 18 ನೇ ಓವರ್​ನಲ್ಲಿ, ಅವರು ಸತತ ಐದು ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ ಐದು ಬೌಂಡರಿಗಳನ್ನು ಬಾರಿಸಿ ಒಟ್ಟು 23 ರನ್ ಕಲೆಹಾಕಿದರು. ನಂತರ 19 ನೇ ಓವರ್​ನಲ್ಲಿಯೂ ಸತತ ಮೂರು ಬೌಂಡರಿಗಳನ್ನು ಬಾರಿಸಿದರು. ಬಳಿಕ 20ನೇ ಓವರ್​ನಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು, ಆದರೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಅವರು 28 ಎಸೆತಗಳಲ್ಲಿ ಒಟ್ಟು 55 ರನ್ ಬಾರಿಸಿದರು. ಅದರಲ್ಲೂ ತಮ್ಮ ಇನ್ನಿಂಗ್ಸ್​ನ ಕೊನೆಯ 18 ಎಸೆತಗಳಲ್ಲಿ 10 ಬೌಂಡರಿ ಮತ್ತು ಸಿಕ್ಸರ್​ಗಳನ್ನು ಬಾರಿಸಿದರು. ಹಾಗೆಯೇ ಹತ್ತನೇ ವಿಕೆಟ್​ಗೆ 50 ರನ್​ಗಳ ಪಾಲುದಾರಿಕೆಯನ್ನು ಹಂಚಿಕೊಂಡರು. ಇದು ಟಿ20ಕ್ರಿಕೆಟ್​ನಲ್ಲಿ ನ್ಯೂಜಿಲೆಂಡ್​ನ ಅತ್ಯಧಿಕ ಕೊನೆಯ ವಿಕೆಟ್ ಜೊತೆಯಾಟ ಎಂಬ ದಾಖಲೆಯನ್ನು ಬರೆಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:18 pm, Wed, 5 November 25