ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ವಿಂಡೀಸ್ ಮಿಸ್ಟರಿ ಸ್ಪಿನ್ನರ್..!

|

Updated on: Nov 06, 2023 | 4:33 PM

Sunil Narine Retires: ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್ ರೌಂಡರ್ ಮತ್ತು ಮಿಸ್ಟರಿ ಸ್ಪಿನ್ನರ್ ಸುನಿಲ್ ನರೈನ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕೊನೆಯ ಬಾರಿಗೆ ವಿಂಡೀಸ್ ಪರ ಆಡಿದ್ದ ನರೈನ್, ನಿವೃತ್ತಿಯ ನಿರ್ಧಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ವಿಂಡೀಸ್ ಮಿಸ್ಟರಿ ಸ್ಪಿನ್ನರ್..!
ಸುನಿಲ್ ನರೈನ್
Follow us on

ವೆಸ್ಟ್ ಇಂಡೀಸ್ (West Indies) ತಂಡದ ಸ್ಟಾರ್ ಆಲ್ ರೌಂಡರ್ ಮತ್ತು ಮಿಸ್ಟರಿ ಸ್ಪಿನ್ನರ್ ಸುನಿಲ್ ನರೈನ್ (Sunil Narine) ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಕೊನೆಯ ಬಾರಿಗೆ ವಿಂಡೀಸ್ ಪರ ಆಡಿದ್ದ ನರೈನ್, ನಿವೃತ್ತಿಯ ನಿರ್ಧಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ನರೈನ್, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. 35 ವರ್ಷ ವಯಸ್ಸಿನ ನರೈನ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ 65 ಏಕದಿನ, 51 ಟಿ20 ಮತ್ತು 6 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಎಲ್ಲಾ ಮಾದರಿಗಳಲ್ಲಿ 165 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.

ನಿವೃತ್ತಿಯ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ನರೈನ್, ನಾನು ಸಾರ್ವಜನಿಕವಾಗಿ ಬಹಳ ಕಡಿಮೆ ಮಾತುಗಳನ್ನು ಆಡುವ ವ್ಯಕ್ತಿ. ನೀವು ಸಹ ಅದನ್ನು ನೋಡಿರುತ್ತೀರಿ. ನಾನು ದೇಶಕ್ಕಾಗಿ (ವೆಸ್ಟ್ ಇಂಡೀಸ್) ಕೊನೆಯ ಬಾರಿಗೆ ಆಡಿ 4 ವರ್ಷಗಳು ಕಳೆದಿವೆ. ಇಂದು ನಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ. ವೆಸ್ಟ್ ಇಂಡೀಸ್ ಪರ ಆಡುವ ನನ್ನ ಕನಸನ್ನು ನನಸಾಗಿಸಲು ಸಹಾಯ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ವಿಶೇಷವಾಗಿ ನನ್ನ ಕುಟುಂಬ, ನನ್ನ ತಂದೆ ನನ್ನ ಕನಸನ್ನು ನನಸಾಗಿಸಲು ಸಾಕಷ್ಟು ಸಹಾಯ ಮಾಡಿದ್ದಾರೆ.ಅವರ ಪ್ರೀತಿಗೆ ನಾನು ಯಾವಾಗಲೂ ಋಣಿಯಾಗಿದ್ದೇನೆ. ಇಷ್ಟು ವರ್ಷ ನನ್ನನ್ನು ಬೆಂಬಲಿಸಿದವರ ಪ್ರೀತಿಗೆ ನಾನು ಚಿರಋಣಿ ಎಂದು ಬರೆದುಕೊಂಡಿದ್ದಾರೆ.

ಮೊದಲ ಮತ್ತು ಕೊನೆಯ ಪಂದ್ಯ ಭಾರತ ವಿರುದ್ಧ

ಸುನಿಲ್ ನರೈನ್ ವೆಸ್ಟ್ ಇಂಡೀಸ್ ಪರ 2011ರಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದರೆ ಅವರ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯ ಭಾರತದ ವಿರುದ್ಧವಾಗಿತ್ತು. ಕಾಕತಾಳೀಯವೆಂಬಂತೆ ನರೈನ್ ಅವರ ಕೊನೆಯ ಪಂದ್ಯ ಕೂಡ ಭಾರತದ ವಿರುದ್ಧವಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನರೈನ್, 2019 ರಲ್ಲಿ ಟಿ20ಯಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನರೈನ್ ಪ್ರದರ್ಶನ

ಸುನಿಲ್ ನರೈನ್ ವೆಸ್ಟ್ ಇಂಡೀಸ್ ಪರ 8 ವರ್ಷಗಳಲ್ಲಿ 122 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 165 ವಿಕೆಟ್ ಪಡೆದಿದ್ದಾರೆ. ಇಲ್ಲಿ ವಿಶಿಷ್ಟ ಸಂಗತಿಯೆಂದರೆ ನರೈನ್, ಈ ಅವಧಿಯಲ್ಲಿ 10 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಕೊಹ್ಲಿಯನ್ನು ಎದುರಿಸಿ, ಎರಡು ಬಾರಿ ಔಟ್ ಮಾಡಿದರು. ವಿರಾಟ್ ಕೂಡ ನರೈನ್ ವಿರುದ್ಧ 102 ಎಸೆತಗಳನ್ನು ಎದುರಿಸಿದ್ದು, 45ರ ಸರಾಸರಿಯಲ್ಲಿ 90 ರನ್ ಕಲೆಹಾಕಿದ್ದರು.

ಟಿ20 ವಿಶ್ವಕಪ್ ಹೀರೋ

ವೆಸ್ಟ್ ಇಂಡೀಸ್ ಕ್ರಿಕೆಟ್‌ಗೆ ಸುನಿಲ್ ನರೈನ್ ಅವರ ಕೊಡುಗೆಯ ಬಗ್ಗೆ ಮಾತನಾಡುವುದಾದರೆ, ವೆಸ್ಟ್ ಇಂಡೀಸ್ ತಂಡ 2012 ರ ಟಿ20 ವಿಶ್ವಕಪ್ ಗೆಲ್ಲಲು ನರೈನ್ ಅವರ ಕೊಡುಗೆ ಅಪಾರವಾಗಿತ್ತು. ಇನ್ನು ಐಪಿಎಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡುವ ನರೈನ್ 2012 ರಿಂದ ಈ ತಂಡದ ಜೊತೆಗಿನ ತನ್ನ ಒಡನಾಟವನ್ನು ಮುಂದುವರೆಸಿದ್ದಾರೆ. ನರೈನ್ ಕೆಕೆಆರ್ ಪರ 162 ಪಂದ್ಯಗಳನ್ನು ಆಡಿದ್ದು, 163 ವಿಕೆಟ್ ಪಡೆದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:33 pm, Mon, 6 November 23