ಏನಿದು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ? ಇದರ ನಿಯಮಗಳೇನು ಗೊತ್ತಾ?

ಅಕ್ಟೋಬರ್ ತಿಂಗಳಾಂತ್ಯದಿಂದ ಶುರುವಾಗಲಿರುವ ಪ್ರತಿಷ್ಠಿತ ಹಾಂಕಾಂಗ್ ಸಿಕ್ಸಸ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 7 ಆಟಗಾರರನ್ನು ಒಳಗೊಂಡಿರುವ ಈ ತಂಡವನ್ನು ಟೀಮ್ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಮುನ್ನಡೆಸಲಿದ್ದಾರೆ. ಇನ್ನು ಈ ಟೂರ್ನಿ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಏನಿದು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ? ಇದರ ನಿಯಮಗಳೇನು ಗೊತ್ತಾ?
Team India
Image Credit source: BCCI

Updated on: Oct 06, 2026 | 7:58 AM

ಕ್ರಿಕೆಟ್ ಎಂದರೆ ಕೇವಲ ಟೆಸ್ಟ್, ಒನ್‌ಡೇ ಅಥವಾ ಟಿ20 ಮಾತ್ರವಲ್ಲ! ಗಲ್ಲಿ ಕ್ರಿಕೆಟ್‌ನ ಮಜಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರೆ ಹೇಗಿರುತ್ತದೆ? ಅದಕ್ಕೇ ಅತ್ಯುತ್ತಮ ಉದಾಹರಣೆ ಹಾಂಗ್ ಕಾಂಗ್ ಸೂಪರ್ ಸಿಕ್ಸಸ್ ಟೂರ್ನಿ. ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್  ಮಾನ್ಯತೆ ಹೊಂದಿರುವ ಈ ಟೂರ್ನಿಯು ತನ್ನ ವಿಶಿಷ್ಟ, ಅತಿ ವೇಗದ ಮತ್ತು ರೋಮಾಂಚಕ ನಿಯಮಗಳಿಂದಲೇ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳನ್ನು ಸೆಳೆದಿದೆ. ಅಷ್ಟಕ್ಕೂ ಏನಿದು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ?

ಏನಿದು ಹಾಂಗ್ ಕಾಂಗ್ ಸಿಕ್ಸಸ್​?

ಇದು ಸಿಕ್ಸ್-ಎ-ಸೈಡ್ (ಆರು ಆಟಗಾರರ) ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯಾಗಿದೆ. ಇಲ್ಲಿ ಸಾಂಪ್ರದಾಯಿಕ 11 ಆಟಗಾರರ ಬದಲಿಗೆ ಪ್ರತಿ ತಂಡದಲ್ಲಿ ಕೇವಲ 6 ಆಟಗಾರರು ಮಾತ್ರ ಇರುತ್ತಾರೆ. ಪಂದ್ಯವು ಕೇವಲ 6 ಓವರ್‌ಗಳಿಗೆ ಸೀಮಿತವಾಗಿರುತ್ತದೆ. ಕೇವಲ 45 ರಿಂದ 60 ನಿಮಿಷಗಳಲ್ಲಿ ಒಂದು ಪಂದ್ಯ ಮುಗಿಯುವುದರಿಂದ, ಇದನ್ನು ಕ್ರಿಕೆಟ್‌ನ ‘ಫಾಸ್ಟ್ ಫುಡ್’ ಆವೃತ್ತಿ ಎಂದರೂ ತಪ್ಪಾಗಲಾರದು!

ಟೂರ್ನಿಯ ನಿಯಮಗಳೇನು?

ಗಲ್ಲಿ ಕ್ರಿಕೆಟ್‌ನಲ್ಲಿ ನಾವು ಆಡುವಂತಹ ಕೆಲವು ನಿಯಮಗಳನ್ನು ಈ ಅಧಿಕೃತ ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಅಳವಡಿಸಲಾಗಿದೆ.

ಬೌಲಿಂಗ್ ಕಡ್ಡಾಯ: ವಿಕೆಟ್ ಕೀಪರ್ ಹೊರತುಪಡಿಸಿ, ಫೀಲ್ಡಿಂಗ್ ಮಾಡುವ ತಂಡದ ಉಳಿದ ಐದೂ ಆಟಗಾರರು ತಲಾ 1 ಓವರ್ ಬೌಲಿಂಗ್ ಮಾಡುವುದು ಕಡ್ಡಾಯವಾಗಿದೆ. ಹಾಗೆಯೇ ಒಬ್ಬನಿಗೆ ಮಾತ್ರ 2 ಓವರ್​ಗಳನ್ನು ಎಸೆಯಲು ಅವಕಾಶ ನೀಡಲಾಗಿದೆ.

ಡಬಲ್ ರನ್: ಪಂದ್ಯದಲ್ಲಿ ರನ್ ವೇಗ ಹೆಚ್ಚಿಸಲು, ಪ್ರತಿ ವೈಡ್ ಅಥವಾ ನೋ-ಬಾಲ್‌ಗೆ ಎದುರಾಳಿ ತಂಡಕ್ಕೆ 2 ರನ್‌ಗಳನ್ನು ನೀಡಲಾಗುತ್ತದೆ ಹಾಗೂ ಹೆಚ್ಚುವರಿ ಎಸೆತವನ್ನು ಹಾಕಬೇಕಾಗುತ್ತದೆ.

ಕಡ್ಡಾಯ ನಿವೃತ್ತಿ: ಒಬ್ಬ ಬ್ಯಾಟ್ಸ್‌ಮನ್ ವೈಯಕ್ತಿಕವಾಗಿ 31 ರನ್ ಗಳಿಸಿದ ತಕ್ಷಣ ಅಜೇಯರಾಗಿಯೇ ಮೈದಾನದಿಂದ ಹೊರನಡೆಯಬೇಕು. ತಂಡದ ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಔಟ್ ಆದ ನಂತರವೇ ಈ ನಿವೃತ್ತ ಬ್ಯಾಟ್ಸ್‌ಮನ್ ಮತ್ತೆ ಬ್ಯಾಟಿಂಗ್ ಮಾಡಲು ಮರಳಿ ಬರಬಹುದು.

‘ಸಿಂಗಲ್’ ಬ್ಯಾಟಿಂಗ್: ತಂಡದ 5 ವಿಕೆಟ್‌ಗಳು ಉರುಳಿದರೂ ಇನಿಂಗ್ಸ್ ಮುಗಿಯುವುದಿಲ್ಲ! 6ನೇ ಆಟಗಾರ ಒಬ್ಬನೇ ಬ್ಯಾಟಿಂಗ್ ಮುಂದುವರಿಸಬಹುದು. ಆ ಸಮಯದಲ್ಲಿ ಕೊನೆಯದಾಗಿ ಔಟಾದ 5ನೇ ಬ್ಯಾಟ್ಸ್‌ಮನ್ ಕೇವಲ ರನ್ನರ್ ಆಗಿ ಕ್ರೀಸ್‌ನಲ್ಲಿ ನಿಲ್ಲಬೇಕಾಗುತ್ತದೆ.

ಎಷ್ಟು ತಂಡಗಳ ನಡುವಣ ಟೂರ್ನಿ?

ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿಯಲ್ಲಿ ಈ ಬಾರಿ 12 ತಂಡಗಳು ಭಾಗವಹಿಸಲಿದೆ. ಆ ತಂಡಗಳ ಪಟ್ಟಿ ಈ ಕೆಳಗಿನಂತಿದೆ…

  1. ಭಾರತ
  2. ಪಾಕಿಸ್ತಾನ್
  3. ಆಸ್ಟ್ರೇಲಿಯಾ
  4. ಇಂಗ್ಲೆಂಡ್
  5. ಸೌತ್ ಆಫ್ರಿಕಾ
  6. ಹಾಂಗ್ ಕಾಂಗ್
  7. ಸ್ಕಾಟ್ಲೆಂಡ್
  8. ಬಾಂಗ್ಲಾದೇಶ್
  9. ಶ್ರೀಲಂಕಾ
  10. ಯುಎಇ
  11. ಅಫ್ಘಾನಿಸ್ತಾನ್
  12. ಒಮಾನ್

ಹಾಲಿ ಚಾಂಪಿಯನ್ ಯಾರು?

ಕಳೆದ ಆವೃತ್ತಿಯ ಫೈನಲ್‌ನಲ್ಲಿ ಕುವೈತ್ ತಂಡವನ್ನು ಸೋಲಿಸಿ ದಾಖಲೆಯ 6ನೇ ಬಾರಿಗೆ ಟ್ರೋಫಿ ಗೆದ್ದಿರುವ ಪಾಕಿಸ್ತಾನ್ ತಂಡವು ಈ ಬಾರಿ ಡಿಫೆಂಡಿಂಗ್ ಚಾಂಪಿಯನ್ ಆಗಿ ಕಣಕ್ಕಿಳಿಯಲಿದೆ.

ಟೂರ್ನಿ ಯಾವಾಗ ಶುರು?

2026ರ ಹಾಂಕಾಂಗ್ ಸಿಕ್ಸಸ್ ಕ್ರಿಕೆಟ್ ಟೂರ್ನಿಯು 2026ರ ಅಕ್ಟೋಬರ್ 30 ರಂದು ಶುರುವಾಗಲಿದೆ. ನವೆಂಬರ್ 1, 2026 ರವರೆಗೆ ನಡೆಯಲಿರುವ ಈ ಟೂರ್ನಿಯ ಎಲ್ಲಾ ಪಂದ್ಯಗಳಿಗೆ ಹಾಂಕಾಂಗ್‌ನ ‘ಟಿನ್ ಕ್ವಾಂಗ್ ರೋಡ್ ರಿಕ್ರೀಯೇಷನ್ ಗ್ರೌಂಡ್’ ಆತಿಥ್ಯವಹಿಸಲಿದೆ.

ಇದನ್ನೂ ಓದಿ: IPL 2027: ರಿಟೈನ್-ರಿಲೀಸ್ ಆಟಗಾರರ ಪಟ್ಟಿ ಸಲ್ಲಿಸಲು ದಿನಾಂಕ ನಿಗದಿ

ಹಾಂಗ್ ಕಾಂಗ್ ಸೂಪರ್ ಸಿಕ್ಸಸ್​ಗೆ ಭಾರತ ತಂಡ:

  • ಭುವನೇಶ್ವರ್ ಕುಮಾರ್ (ನಾಯಕ)
  • ಕೃನಾಲ್ ಪಾಂಡ್ಯ
  • ನಿತೀಶ್ ರಾಣಾ
  • ಶಶಾಂಕ್ ಸಿಂಗ್
  • ರಾಹುಲ್ ತ್ರಿಪಾಠಿ
  • ರಾಹುಲ್ ತೆವಾಠಿಯಾ
  • ಟಿ. ನಟರಾಜನ್

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us