ಏನಿದು ಇರಾನಿ ಕಪ್? ಇದರ ಹಿನ್ನಲೆಯೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ದೇಶಿ ಕ್ರಿಕೆಟ್‌ನ 'ಮಹಾ ಸಮರ' ಎಂದೇ ಕರೆಯಲ್ಪಡುವ ಇರಾನಿ ಕಪ್ (ಇರಾನಿ ಟ್ರೋಫಿ) ಭಾರತೀಯ ಕ್ರಿಕೆಟ್‌ನ ಅತ್ಯಂತ ಪ್ರತಿಷ್ಠಿತ ಮತ್ತು ಐತಿಹಾಸಿಕ ಪ್ರಥಮ ದರ್ಜೆ ಪಂದ್ಯಾವಳಿಯಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಮುನ್ನಡೆಸಿ, ದೇಶದಲ್ಲಿ ಕ್ರಿಕೆಟ್ ಕ್ರೀಡೆಯ ಪ್ರಗತಿಗೆ ಅಪಾರ ಕೊಡುಗೆ ನೀಡಿದ ಬಿಸಿಸಿಐನ ಮಾಜಿ ಅಧ್ಯಕ್ಷ ಝಡ್.ಆರ್. ಇರಾನಿ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಈ ಮಹತ್ವದ ಪಂದ್ಯವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ಏನಿದು ಇರಾನಿ ಕಪ್? ಇದರ ಹಿನ್ನಲೆಯೇನು? ಇಲ್ಲಿದೆ ಸಂಪೂರ್ಣ ಮಾಹಿತಿ
Irani Cup
Image Credit source: x.com

Updated on: Sep 30, 2026 | 12:32 PM

ಇರಾನಿ ಕಪ್ ಮಹಾ ಸಮರಕ್ಕೆ ವೇದಿಕೆ ಸಿದ್ಧವಾಗಿದೆ. ಅಕ್ಟೋಬರ್ 1 ರಂದು ಶ್ರೀನಗರದ ಐತಿಹಾಸಿಕ ಶೇರ್-ಇ-ಕಾಶ್ಮೀರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಈ ಮಹತ್ವದ ಪ್ರಥಮ ದರ್ಜೆ ಪಂದ್ಯದಲ್ಲಿ ಹಾಲಿ ರಣಜಿ ಚಾಂಪಿಯನ್ ಜಮ್ಮು-ಕಾಶ್ಮೀರ ಹಾಗೂ ಶೇಷ ಭಾರತ (ರೆಸ್ಟ್ ಆಫ್ ಇಂಡಿಯಾ) ತಂಡಗಳು ಮುಖಾಮುಖಿಯಾಗಲಿವೆ. ಈ ರೋಚಕ ಪಂದ್ಯದಲ್ಲಿ ಗೆಲ್ಲುವ ತಂಡವು ಪ್ರತಿಷ್ಠಿತ ಇರಾನಿ ಕಪ್ ಅನ್ನು ತನ್ನದಾಗಿಸಿಕೊಳ್ಳಲಿದೆ. ಅಷ್ಟಕ್ಕೂ ಏನಿದು ಇರಾನಿ ಕಪ್? ಎಂಬ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ…

ಏನಿದು ಇರಾನಿ ಕಪ್?

ಝಡ್​.ಆರ್​ ಇರಾನಿ ಅಥವಾ ಝಲ್ ಇರಾನಿ, ಇವರು ಬಿಸಿಸಿಐನ ಮಾಜಿ ಅಧ್ಯಕ್ಷರು. ಲಂಡನ್‌ನಲ್ಲಿ ಚಾರ್ಟರ್ಡ್ ಅಕೌಂಟೆನ್ಸಿ ಅಧ್ಯಯನ ಮಾಡಿದ್ದ ಇರಾನಿ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದೆಹಲಿಯ ರೋಶನಾರಾ ಕ್ಲಬ್ ಮತ್ತು ಮುಂಬೈನ ಪಾರ್ಸಿ ಜಿಮ್ಖಾನಾ ಕ್ಲಬ್ ಪರ ಕ್ರಿಕೆಟ್ ಆಡುತ್ತಿದ್ದರು. ಅಷ್ಟೇ ಅಲ್ಲದೆ 1928-29 ರಿಂದ 1945-46 ಮತ್ತು 1948-49 ರಿಂದ 1961-62 ಅವರು ಭಾರತ ಕ್ರಿಕೆಟ್ ಮಂಡಳಿಯ ಖಜಾಂಚಿಯಾಗಿ ಸೇವೆ ಸಲ್ಲಿಸಿದ್ದರು.

1966ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಝಡ್.ಆರ್. ಇರಾನಿ ಅವರು ಭಾರತೀಯ ಕ್ರಿಕೆಟ್ ಅನ್ನು ಪ್ರಗತಿಪಥದತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಸ್ವತಂತ್ರ ಭಾರತದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಉತ್ತೇಜಿಸುವಲ್ಲಿ ತಮ್ಮದೇ ಆದ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಈ ಅಪಾರ ಕೊಡುಗೆಯ ಸ್ಮರಣಾರ್ಥವಾಗಿಯೇ ಪ್ರತಿವರ್ಷ ಪ್ರತಿಷ್ಠಿತ ‘ಇರಾನಿ ಕಪ್’ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ.

ವಿಶೇಷ ಎಂದರೆ ಇರಾನಿ ಕಪ್​ನಲ್ಲಿ ಹಾಲಿ ರಣಜಿ ಚಾಂಪಿಯನ್ ತಂಡ ಹಾಗೂ ಶೇಷ ಭಾರತ ತಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತದೆ. ಅಂದರೆ ಇಲ್ಲಿ ಶೇಷ ಭಾರತ ತಂಡದಲ್ಲಿ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿವಿಧ ರಾಜ್ಯಗಳ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ.

ಇರಾನಿ ಕಪ್ ಶುರುವಾಗಿದ್ದು ಯಾವಾಗ?

ಇರಾನಿ ಕಪ್ ಪಂದ್ಯಾವಳಿಯು ಮೊದಲ ಬಾರಿಗೆ 1959-60ರ ಕ್ರಿಕೆಟ್ ಸೀಸನ್‌ನಲ್ಲಿ ಪ್ರಾರಂಭವಾಯಿತು. ಭಾರತದ ಪ್ರತಿಷ್ಠಿತ ದೇಶಿ ಟೂರ್ನಿಯಾದ ರಣಜಿ ಟ್ರೋಫಿಯು ಯಶಸ್ವಿಯಾಗಿ 25 ವರ್ಷಗಳನ್ನು (ರಜತ ಮಹೋತ್ಸವ) ಪೂರೈಸಿದ ನೆನಪಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಈ ಇರಾನಿ ಟ್ರೋಫಿಯನ್ನು ಪರಿಚಯಿಸಿತು.

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ (ಈಗಿನ ಅರುಣ್ ಜೇಟ್ಲಿ ಸ್ಟೇಡಿಯಂ) ನಡೆದ ಉದ್ಘಾಟನಾ ಪಂದ್ಯದಲ್ಲಿ  ಅಂದಿನ ರಣಜಿ ಚಾಂಪಿಯನ್ ಬಾಂಬೆ (ಮುಂಬೈ) ಹಾಗೂ ಶೇಷ ಭಾರತ ತಂಡಗಳು ಮುಖಾಮುಖಿಯಾಗಿದ್ದವು.

ಅತ್ಯಂತ ರೋಚಕವಾಗಿದ್ದ ಈ ಮೊದಲ ಪಂದ್ಯವು ಡ್ರಾ ಆಗಿ ಮುಕ್ತಾಯಗೊಂಡರೂ, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಪಾಲಿ ಉಮ್ರಿಗರ್ ನೇತೃತ್ವದ ಬಲಿಷ್ಠ ಬಾಂಬೆ ತಂಡವನ್ನು ಮೊದಲ ಇರಾನಿ ಕಪ್ ಚಾಂಪಿಯನ್ ಎಂದು ಘೋಷಿಸಲಾಯಿತು.

ಯಾಕಾಗಿ ಈ ಪಂದ್ಯವನ್ನು ಆಯೋಜಿಸಲಾಗುತ್ತದೆ?

ಚಾಂಪಿಯನ್ನರ ಚಾಂಪಿಯನ್ ಯಾರು ಎಂದು ನಿರ್ಧರಿಸಲು. ಹೌದು, ಇರಾನಿ ಕಪ್ ಕೇವಲ ಒಂದು ಪ್ರದರ್ಶನ ಪಂದ್ಯವಲ್ಲ. ಆಯಾ ವರ್ಷದ ಹಾಲಿ ರಣಜಿ ಟ್ರೋಫಿ ಚಾಂಪಿಯನ್ ತಂಡ ನಿಜಕ್ಕೂ ದೇಶದಲ್ಲೇ ಅತ್ಯುತ್ತಮವೇ ಅಥವಾ ದೇಶದ ಇತರ ರಾಜ್ಯಗಳ ಶ್ರೇಷ್ಠ ಆಟಗಾರರನ್ನು ಒಳಗೊಂಡ ‘ಶೇಷ ಭಾರತ’ ತಂಡ ಬಲಿಷ್ಠವೇ ಎಂದು ಒರೆಗೆ ಹಚ್ಚಲು ಈ ಪಂದ್ಯವನ್ನು ಆಯೋಜಿಸಲಾಗುತ್ತದೆ.

ಹಾಗೆಯೇ ರಾಷ್ಟ್ರೀಯ ತಂಡಕ್ಕೆ  ಆಟಗಾರರನ್ನು ಆಯ್ಕೆ ಮಾಡಲು ಇದೊಂದು ಪ್ರಮುಖ ವೇದಿಕೆಯಾಗಿದೆ. ರಣಜಿ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಯುವ ಪ್ರತಿಭೆಗಳನ್ನು ‘ಶೇಷ ಭಾರತ’ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ. ಈ ಪಂದ್ಯದಲ್ಲಿ ಅವರು ತೋರುವ ಪ್ರದರ್ಶನದ ಆಧಾರದ ಮೇಲೆ ಅವರಿಗೆ ಭಾರತ ಟೆಸ್ಟ್ ತಂಡದ ಬಾಗಿಲು ತೆರೆಯುತ್ತದೆ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಝಡ್.ಆರ್. ಇರಾನಿ ಅವರ ಸ್ಮರಣೆ ಹಾಗೂ ದೇಶದ ಅತ್ಯುತ್ತಮ ದೇಶಿ ಕ್ರಿಕೆಟ್ ಪ್ರತಿಭೆಗಳಿಗೆ ಅತ್ಯುನ್ನತ ಮಟ್ಟದ ಸವಾಲು ಮತ್ತು ಮನ್ನಣೆ ನೀಡುವುದಕ್ಕಾಗಿ ಈ ಇರಾನಿ ಕಪ್ ಪಂದ್ಯವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ.

ಈ ಬಾರಿಯ ಇರಾನಿ ಕಪ್ ಪಂದ್ಯದ ವಿವರಗಳು:

  • ಪಂದ್ಯ: ಜಮ್ಮು ಮತ್ತು ಕಾಶ್ಮೀರ vs ರೆಸ್ಟ್ ಆಫ್ ಇಂಡಿಯಾ
  • ದಿನಾಂಕ: ಅಕ್ಟೋಬರ್ 1 ರಿಂದ ಅಕ್ಟೋಬರ್ 5, 2026
  • ಸಮಯ: ಪ್ರತಿದಿನ ಬೆಳಗ್ಗೆ 9:30ಕ್ಕೆ (IST) ಪಂದ್ಯ ಆರಂಭವಾಗುತ್ತದೆ.
  • ನೇರ ಪ್ರಸಾರ: ಜಿಯೋ ಹಾಟ್​ಸ್ಟಾರ್ ಆ್ಯಪ್ ಹಾಗೂ ಸ್ಪೋರ್ಟ್ಸ್ 18 ಚಾನೆಲ್​ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.

ಉಭಯ ತಂಡಗಳು:

ಜಮ್ಮು-ಕಾಶ್ಮೀರ ತಂಡ: ಪಾರಸ್ ಡೋಗ್ರಾ (ನಾಯಕ), ಅಬ್ದುಲ್ ಸಮದ್, ಶುಭಂ ಖಜುರಿಯಾ, ಕಮ್ರಾನ್ ಇಕ್ಬಾಲ್, ಶುಭಂ ಪುಂಡಿರ್, ಯಾವರ್ ಹಸನ್, ಕನ್ಹಯ್ಯಾ ವಾಧವನ್, ಆಬಿದ್ ಮುಷ್ತಾಕ್, ಸಾಹಿಲ್ ಲೋತ್ರಾ, ಲೋನ್ ನಾಸಿರ್ ಮುಜಾಫರ್, ರಿದ್ಧಮ್ ಶರ್ಮಾ, ಉಮರ್ ನಜೀರ್, ರೋಹಿತ್ ಶರ್ಮಾ, ಸುನಿಲ್ ಕುಮಾರ್, ವಂಶಜ್ ಶರ್ಮಾ, ಕವಲಪ್ರೀತ್ ಸಿಂಗ್, ವಸೀಮ್ ಬಶೀರ್.

ಇದನ್ನೂ ಓದಿ: ಎಲ್ಲವೂ ಒತ್ತಾಯಪೂರ್ವಕ… ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿಯ ಅಸಲಿ ರಹಸ್ಯ!

ರೆಸ್ಟ್ ಆಫ್ ಇಂಡಿಯಾ ತಂಡ: ರಿಷಭ್ ಪಂತ್ (ನಾಯಕ), ಸನತ್ ಸಾಂಗ್ವಾನ್, ಶಿಖರ್ ಮೋಹನ್, ಸುದೀಪ್ ಘರಾಮಿ, ಸರ್ಫರಾಜ್ ಖಾನ್ (ಉಪನಾಯಕ), ಸ್ಮರಣ್ ರವಿಚಂದ್ರನ್, ಮಾನವ್ ಸುತಾರ್, ಸರನ್ಶ್ ಜೈನ್, ಆಕಾಶ್ ದೀಪ್*, ಮುಖೇಶ್ ಕುಮಾರ್, ಮುಖೇಶ್ ಚೌಧರಿ, ಆರ್ಯನ್ ಜುಯಲ್ (ವಿಕೆಟ್ ಕೀಪರ್), ಆರ್ಯನ್ ಪಾಂಡೆ, ಅನುಕುಲ್ ರಾಯ್, ಆಯುಷ್ ದೋಸೆಜಾ.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us