AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲ್ಲವೂ ಒತ್ತಾಯಪೂರ್ವಕ… ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿಯ ಅಸಲಿ ರಹಸ್ಯ!

ಭಾರತೀಯ ಟೆಸ್ಟ್ ಕ್ರಿಕೆಟ್ ಅನ್ನು ಜಾಗತಿಕ ಮಟ್ಟದಲ್ಲಿ ಅಧಿಪತ್ಯ ಸ್ಥಾಪಿಸುವಂತೆ ಮಾಡಿದ ವಿರಾಟ್ ಕೊಹ್ಲಿ ಅವರ ಅಕಾಲಿಕ ಟೆಸ್ಟ್ ನಿವೃತ್ತಿಯ ಹಿಂದಿನ ಅಸಲಿ ರಹಸ್ಯ ಈಗ ಕೊನೆಗೂ ಹೊರಬಿದ್ದಿದೆ. ಕೇವಲ ವೈಯಕ್ತಿಕ ಫಾರ್ಮ್ ಕೊರತೆಯಿಂದಲೇ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದರು ಎಂದು ನಂಬಿದ್ದ ಕ್ರಿಕೆಟ್ ಜಗತ್ತಿಗೆ, ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರ ಸ್ಫೋಟಕ ಹೇಳಿಕೆ ತೀವ್ರ ಆಘಾತ ನೀಡಿದೆ.

ಎಲ್ಲವೂ ಒತ್ತಾಯಪೂರ್ವಕ... ವಿರಾಟ್ ಕೊಹ್ಲಿಯ ಟೆಸ್ಟ್ ನಿವೃತ್ತಿಯ ಅಸಲಿ ರಹಸ್ಯ!
Virat Kohli Image Credit source: GettyImages
ಝಾಹಿರ್ ಯೂಸುಫ್
|

Updated on: Sep 30, 2026 | 8:23 AM

Share

ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಹಾಗೂ ರನ್ ಮಷೀನ್ ಎಂದೇ ಖ್ಯಾತರಾದ ವಿರಾಟ್ ಕೊಹ್ಲಿ ಹಠಾತ್ತನೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆದರೆ, ಈಗ ಅವರ ಈ ದಿಢೀರ್ ನಿವೃತ್ತಿಯ ಹಿಂದಿನ ಕಹಿ ಸತ್ಯವೊಂದನ್ನು ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಬಹಿರಂಗಪಡಿಸಿದ್ದಾರೆ.

ತಂಡದ ಒಳಗಿದ್ದ ಪ್ರಮುಖರಿಗೆ ಕೊಹ್ಲಿ ಮೇಲಿದ್ದ “ನಂಬಿಕೆಯ ಕೊರತೆ” ಹಾಗೂ ಮ್ಯಾನೇಜ್‌ಮೆಂಟ್‌ನ ಅಸಹಕಾರವೇ ಅವರು ಟೆಸ್ಟ್ ಕ್ರಿಕೆಟ್‌ಗೆ ಅಕಾಲಿಕವಾಗಿ ವಿದಾಯ ಹೇಳಲು ಪ್ರಮುಖ ಕಾರಣ ಎಂದು ಕೈಫ್ ಗಂಭೀರ ಆರೋಪ ಮಾಡಿದ್ದಾರೆ.

ತಂಡದಿದಂದ ಸಿಗದ ಬೆಂಬಲ!

ಇತ್ತೀಚಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ಮುಕ್ತವಾಗಿ ಮಾತನಾಡಿರುವ ಮೊಹಮ್ಮದ್ ಕೈಫ್, “ಫಾರ್ಮ್ ಎಂಬುದು ಯಾವುದೇ ಆಟಗಾರನಿಗಾದರೂ ಏರಿಳಿತಗಳಿಂದ ಕೂಡಿರುತ್ತದೆ. ಆದರೆ ವಿರಾಟ್ ಕೊಹ್ಲಿಯಂತಹ ದಿಗ್ಗಜ ಆಟಗಾರನನ್ನು ನಡೆಸಿಕೊಂಡ ರೀತಿ ಸರಿಯಿರಲಿಲ್ಲ. ಕೊಹ್ಲಿ ನೀಡಿದ ಸಂದರ್ಶನಗಳನ್ನು ಗಮನಿಸಿದರೆ ಅವರ ಮುಖದಲ್ಲಿನ ಬೇಸರ ಎದ್ದುಕಾಣುತ್ತಿತ್ತು. ಮ್ಯಾನೇಜ್‌ಮೆಂಟ್‌ನಿಂದ ಅವರಿಗೆ ಯಾವುದೇ ಬೆಂಬಲ ಸಿಗಲಿಲ್ಲ, ಅವರು ತಂಡದಲ್ಲಿ ಒಂಟಿಯಾಗಿದ್ದರು” ಎಂದು ಹೇಳಿದ್ದಾರೆ.

“ಯಾರೋ ಒತ್ತಾಯಪೂರ್ವಕವಾಗಿ ಅವರನ್ನು ನಿವೃತ್ತಿ ಪಡೆಯುವಂತೆ ಮಾಡಿದ ವಾತಾವರಣ ಸೃಷ್ಟಿಯಾಗಿತ್ತು. ಕೊಹ್ಲಿ ಇನ್ನೂ ಟೆಸ್ಟ್ ಆಡಲು ಬಯಸಿದ್ದರು, ಆದರೆ ಒಳಗಿದ್ದ ಜನರಿಗೆ ಅವರ ಮೇಲೆ ನಂಬಿಕೆ ಇರಲಿಲ್ಲ” ಎಂದು ಕೈಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೊಸಬರಂತೆ ನಡೆಸಿಕೊಳ್ಳುವುದು ಎಷ್ಟು ಸರಿ?

ಆಸ್ಟ್ರೇಲಿಯಾ ಪ್ರವಾಸದ ಕಠಿಣ ಹಂತದ ಬಳಿಕ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ ಕೈಫ್, “ವಿರಾಟ್ ಕೊಹ್ಲಿ ಏನೂ ಹೊಸ ಆಟಗಾರನಲ್ಲ. ಅವರನ್ನು ಹೊಸಬರಂತೆ ನಡೆಸುವುದು ತಪ್ಪು. ಆಸ್ಟ್ರೇಲಿಯಾದಲ್ಲಿ ಎರಡು ಪಂದ್ಯಗಳಲ್ಲಿ ಡಕ್‌ ಔಟ್ ಆದ ತಕ್ಷಣ ಅವರ ಸಾಮರ್ಥ್ಯವನ್ನು ಶಂಕಿಸುವುದು ಸರಿಯಲ್ಲ. ಯಾರೂ ಇಲ್ಲಿ ಮಷೀನ್ ಅಲ್ಲ, ಕ್ರಿಕೆಟ್ ವಿಡಿಯೋ ಗೇಮ್ ಅಲ್ಲ. ಅವರಿಗೆ ಸರಿಯಾದ ಬೆಂಬಲ ನೀಡಿದ್ದರೆ ಅವರು ಖಂಡಿತವಾಗಿ ಕಂಬ್ಯಾಕ್ ಮಾಡುತ್ತಿದ್ದರು” ಎಂದು ಮ್ಯಾನೇಜ್‌ಮೆಂಟ್ ನಿರ್ಧಾರಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಯ್ಕೆ ಸಮಿತಿಯ ನಡೆ ಮತ್ತು ಕೊಹ್ಲಿ ಬೇಸರ:

ವರದಿಗಳ ಪ್ರಕಾರ, ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಆಯ್ಕೆ ಸಮಿತಿಯು ಕೊಹ್ಲಿಗೆ “ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿ, ನಂತರ ನಿಮ್ಮ ಫಾರ್ಮ್ ನೋಡಿ ಮುಂದಿನ ಪಂದ್ಯಗಳಿಗೆ ಆಯ್ಕೆ ಮಾಡುತ್ತೇವೆ” ಎಂದು ಹೇಳಿದ್ದು ಕೊಹ್ಲಿ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿತ್ತು. ಇಂತಹ ಅಪನಂಬಿಕೆಯ ವಾತಾವರಣವೇ ಅವರು ರೆಡ್-ಬಾಲ್ ಕ್ರಿಕೆಟ್‌ನಿಂದ ದೂರ ಸರಿಯಲು ಪ್ರಮುಖ ಪ್ರಚೋದನೆಯಾಯಿತು ಎನ್ನಲಾಗಿದೆ.

ಇದನ್ನೂ ಓದಿ: ಇರಾನಿ ಕಪ್​ ಪಂದ್ಯಕ್ಕೆ ತಂಡಗಳು ಪ್ರಕಟ

ಒಟ್ಟಾರೆಯಾಗಿ, ವಿರಾಟ್ ಕೊಹ್ಲಿ ಅವರ ಟೆಸ್ಟ್ ನಿವೃತ್ತಿಯ ನಿರ್ಧಾರ ಕೇವಲ ವೈಯಕ್ತಿಕ ಫಾರ್ಮ್‌ಗೆ ಸೀಮಿತವಾಗಿರದೆ, ಮ್ಯಾನೇಜ್‌ಮೆಂಟ್‌ನ ಅಪನಂಬಿಕೆ ಮತ್ತು ಆಂತರಿಕ ರಾಜಕೀಯದ ಒತ್ತಡದಿಂದ ಮೂಡಿಬಂದಿದೆ ಎಂಬುದು ಮೊಹಮ್ಮದ್ ಕೈಫ್ ಅವರ ಈ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಆದಾಗ್ಯೂ, ಇಷ್ಟೆಲ್ಲಾ ಸಾಧನೆ ಮಾಡಿದ ‘ಕಿಂಗ್ ಕೊಹ್ಲಿ’ಗೆ ಗೌರವಯುತವಾದ ಒಂದು ವಿದಾಯದ ಪಂದ್ಯವನ್ನು ಆಡುವ ಅವಕಾಶವೂ ಸಿಗದೇ ಹೋದದ್ದು ಮಾತ್ರ ಕ್ರಿಕೆಟ್ ಇತಿಹಾಸದ ಬಹುದೊಡ್ಡ ವಿಪರ್ಯಾಸವೇ ಸರಿ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More