WPLನಲ್ಲಿ ಹೊಸ ಇತಿಹಾಸ: ಯಾರು ಈ ಉಮಾ ಕಾಶ್ವಿ?

ವುಮೆನ್ಸ್ ಪ್ರೀಮಿಯರ್ ಲೀಗ್​ಗೆ ಉಮಾ ಕಾಶ್ವಿ ಎಂಟ್ರಿ ಕೊಟ್ಟಿದ್ದಾರೆ. ಬೆಂಗಳೂರಿನ ಉಮಾ, WPLನ ಮುಂಬರುವ ಸೀಸನ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅದು ಸಹ ಕೇವಲ 15ನೇ ವಯಸ್ಸಿನಲ್ಲಿ ಎಂಬುದು ವಿಶೇಷ! ಇದರ ಬೆನ್ನಲ್ಲೇ, "ಯಾರು ಈ ಉಮಾ ಕಾಶ್ವಿ?" ಎಂಬ ಕುತೂಹಲದ ಪ್ರಶ್ನೆಯೊಂದು ಎಲ್ಲರಲ್ಲೂ ಮೂಡಿದೆ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...

WPLನಲ್ಲಿ ಹೊಸ ಇತಿಹಾಸ: ಯಾರು ಈ ಉಮಾ ಕಾಶ್ವಿ?
Uma Kashvi - Vaibhav
Image Credit source: x.com

Updated on: Oct 29, 2026 | 9:14 AM

ವುಮೆನ್ಸ್ ಪ್ರೀಮಿಯರ್ ಲೀಗ್ (WPL) ಇತಿಹಾಸದಲ್ಲೇ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಇದೀಗ ಕನ್ನಡತಿ ಉಮಾ ಕಾಶ್ವಿ ಪಾತ್ರರಾಗಿದ್ದಾರೆ. ಕೊಚ್ಚಿಯಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ಉಮಾ ಕಾಶ್ವಿಯವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ 10 ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿದೆ. ಈ ಮೂಲಕ WPL ಇತಿಹಾಸದಲ್ಲೇ ಹರಾಜಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಐತಿಹಾಸಿಕ ದಾಖಲೆಯನ್ನು ಉಮಾ ತಮ್ಮದಾಗಿಸಿಕೊಂಡಿದ್ದಾರೆ.

WPL ಹರಾಜಿನ ಮೂಲಕ ಇತಿಹಾಸ ಸೃಷ್ಟಿಸಿರುವ ಉಮಾ ಕಾಶ್ವಿ ಅವರ ವಯಸ್ಸು ಕೇವಲ 15 ವರ್ಷ 202 ದಿನಗಳು! ಈ ಹಿಂದೆ 16ನೇ ವಯಸ್ಸಿಗೆ ಹರಾಜಾಗಿದ್ದ ಹರಿಯಾಣದ ದಿಯಾ ಯಾದವ್ (ಡೆಲ್ಲಿ ಕ್ಯಾಪಿಟಲ್ಸ್​) ಅವರ ದಾಖಲೆಯನ್ನು ಧೂಳೀಪಟ ಮಾಡಿರುವ ಉಮಾ, ಇದೀಗ ಭಾರತೀಯ ಕ್ರಿಕೆಟ್‌ನ ಮುಂದಿನ ಸೂಪರ್‌ಸ್ಟಾರ್ ಆಗುವ ಭರವಸೆ ಮೂಡಿಸಿದ್ದಾರೆ.

  • ಇಂಡಿಯನ್ ಪ್ರೀಮಿಯರ್ ಲೀಗ್​ ಇತಿಹಾಸದ ಅತ್ಯಂತ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ.
  • ವುಮೆನ್ಸ್ ಪ್ರೀಮಿಯರ್ ಲೀಗ್​ ಇತಿಹಾಸದ ಅತ್ಯಂತ ಕಿರಿಯ ಆಟಗಾರ್ತಿ ಉಮಾ ಕಾಶ್ವಿ.

ಅಪ್ಪಟ ಆಲ್-ರೌಂಡರ್!

2011ರ ಏಪ್ರಿಲ್ 9 ರಂದು ಜನಿಸಿದ ಉಮಾ ಕಾಶ್ವಿ ಬಲಗೈ ಬ್ಯಾಟಿಂಗ್ ಮೂಲಕ ರನ್ ಮಳೆ ಹರಿಸುವುದಷ್ಟೇ ಅಲ್ಲದೆ, ಬಲಗೈ ಆಫ್-ಸ್ಪಿನ್ ಮೂಲಕ ವಿಕೆಟ್ ಉರುಳಿಸಬಲ್ಲ ಚತುರೆ. ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಭಾರತ ಅಂಡರ್-19 ತಂಡದ ಪರ 4 ವಿಕೆಟ್ ಕಿತ್ತು ಮಿಂಚಿರುವ ಉಮಾ, ಮುಂದಿನ ಅಂಡರ್-19 ವಿಶ್ವಕಪ್‌ನಲ್ಲೂ ಭಾರತದ ಪ್ರಮುಖ ಅಸ್ತ್ರವಾಗಲಿದ್ದಾರೆ.

 ರನ್ ಸರದಾರಿಣಿ:

ಉಮಾ ಕಾಶ್ವಿ ಕೇವಲ ದೇಶಿ ಟೂರ್ನಿಗಳಲ್ಲಿ ಮಾತ್ರವಲ್ಲ, ಒಟ್ಟಾರೆ ಕ್ರಿಕೆಟ್‌ನಲ್ಲಿ ಸೃಷ್ಟಿಸಿರುವ ದಾಖಲೆಗಳು ಹಿಮಾಲಯದಷ್ಟಿವೆ. ಕರ್ನಾಟಕದಾದ್ಯಂತ ಒಟ್ಟು 530 ಪಂದ್ಯಗಳನ್ನಾಡಿರುವ ಉಮಾ, ಬರೋಬ್ಬರಿ 13,000ಕ್ಕೂ ಹೆಚ್ಚು ರನ್ ಕಲೆಹಾಕಿದ್ದಾರೆ. ಇದರಲ್ಲಿ 24 ಭರ್ಜರಿ ಶತಕಗಳು ಹಾಗೂ 68 ಅರ್ಧಶತಕಗಳು ಸೇರಿವೆ.

ಬಿಸಿಸಿಐ ಮಹಿಳಾ ಅಂಡರ್-15 ಏಕದಿನ ಟೂರ್ನಿಯಲ್ಲಿ 172ರ ನಂಬಲಸಾಧ್ಯ ಬ್ಯಾಟಿಂಗ್ ಸರಾಸರಿಯಲ್ಲಿ 516 ರನ್ ಚಚ್ಚಿದ್ದ ಉಮಾ, ಕರ್ನಾಟಕ ಅಂಡರ್-15 ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ, ಮಹಾರಾಣಿ ಟ್ರೋಪಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ನಾಯಕತ್ವವನ್ನೂ ವಹಿಸಿದ್ದರು.

ಇನ್ನು ಅವರ ಸಾಧನೆಯ ಮುಕುಟಕ್ಕೆ ಮತ್ತಷ್ಟು ಗರಿ ಎಂಬಂತೆ, ಮಹಿಳಾ ಅಂಡರ್-19 ಟಿ20 ಟ್ರೋಫಿ ವಿಜೇತ ತಂಡದ ಭಾಗವಾಗಿದ್ದ ಅವರು, ಮಹಿಳಾ ಅಂಡರ್-19 ಏಕದಿನ ಟ್ರೋಫಿಯಲ್ಲಿ ತಂಡವನ್ನು ಸೆಮಿಫೈನಲ್ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹೆತ್ತವರ ಕಠಿಣ ತ್ಯಾಗಕ್ಕೆ ಸಿಕ್ಕ ಪ್ರತಿಫಲ:

ಉಮಾ ಅವರ ಈ ಯಶಸ್ಸು ಕೇವಲ ಒಂದು ದಿನದ ಆಟವಲ್ಲ, ಇದರ ಹಿಂದೆ ಅವರ ಇಡೀ ಕುಟುಂಬದ ತ್ಯಾಗದ ಕಥೆಯಿದೆ… ಮನೆಯಲ್ಲಿ ಆಟವಾಡುವಾಗ ಉಮಾ ಅವರಲ್ಲಿದ್ದ ಅಪ್ರತಿಮ ಕ್ರಿಕೆಟ್ ಪ್ರತಿಭೆಯನ್ನು ಮೊಟ್ಟಮೊದಲ ಬಾರಿಗೆ ಗುರುತಿಸಿದ್ದೇ ಚಿಕ್ಕಪ್ಪ ವಿಜಯ್.

ಮಗಳ ಕ್ರಿಕೆಟ್ ಕನಸಿಗೆ ರೆಕ್ಕೆ ಕಟ್ಟಲು ಅವರು ತಮ್ಮ ಪೂರ್ಣಾವಧಿಯ ಸಾಫ್ಟ್‌ವೇರ್ ಉದ್ಯೋಗವನ್ನೇ ತೊರೆದರು. ಉಮಾ 8 ವರ್ಷದ ಬಾಲಕಿಯಾಗಿದ್ದಾಗಿನಿಂದಲೇ ಮುಂಜಾನೆ 5 ಗಂಟೆಗೆ ರನ್ನಿಂಗ್ ಮತ್ತು ಕ್ರಿಕೆಟ್ ಡ್ರಿಲ್ಸ್ ಮಾಡಿಸುತ್ತಾ, ಪಾರ್ಟ್-ಟೈಮ್ ಕೆಲಸದ ಜೊತೆಗೆ ಅವಳು ಆಡಿದ 500ಕ್ಕೂ ಹೆಚ್ಚು ಪಂದ್ಯಗಳಿಗೆ ದೇಶಾದ್ಯಂತ ಜೊತೆಯಾಗಿ ಪ್ರಯಾಣ ಬೆಳೆಸಿದರು.

ಇತ್ತ  ಕಾರ್ಪೊರೇಟ್ ವಲಯದಲ್ಲಿ ಬ್ಯುಸಿಯಾಗಿದ್ದ ಉಮಾ ಅವರ ತಾಯಿ, ಮಗಳ 400ಕ್ಕೂ ಹೆಚ್ಚು ಪಂದ್ಯಗಳನ್ನು ಸ್ಟೇಡಿಯಂನಲ್ಲಿ ಕುಳಿತೇ ವೀಕ್ಷಿಸಿದ್ದಾರೆ. ಮಗಳು ಮೈದಾನದಲ್ಲಿ ಬ್ಯಾಟ್ ಮಾಡುತ್ತಿದ್ದರೆ, ತಾಯಿ ಗ್ಯಾಲರಿಯಲ್ಲೇ ಲ್ಯಾಪ್‌ಟಾಪ್ ನಲ್ಲಿ ಆಫೀಸ್ ಮೀಟಿಂಗ್‌ಗಳನ್ನು ನಿಭಾಯಿಸುತ್ತಿದ್ದರು!

ಆರ್‌ಸಿಬಿ ನೆಟ್ಸ್‌ನಲ್ಲಿ ಕಾಣಿಸಿಕೊಂಡಿದ್ದ ಬಾಲಕಿ!

ಕಳೆದ WPL ಸೀಸನ್ ಬೆಂಗಳೂರಿನಲ್ಲಿ ನಡೆಯುತ್ತಿದ್ದಾಗ, ಉಮಾ ಅವರ ಕೋಚ್ ಅರ್ಜುನ್ ದೇವ್ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮ್ಯಾನೇಜ್‌ಮೆಂಟ್‌ನೊಂದಿಗೆ ಮಾತನಾಡಿ, ಕೇವಲ 14 ವರ್ಷದವರಾಗಿದ್ದ ಉಮಾ ಅವರಿಗೆ ಆರ್‌ಸಿಬಿ ತಂಡದ ನೆಟ್ ಬೌಲರ್ ಆಗುವ ಅವಕಾಶ ಗಿಟ್ಟಿಸಿಕೊಟ್ಟಿದ್ದರು.

ಸ್ಮೃತಿ ಮಂಧಾನ, ಎಲಿಸ್ ಪೆರ್ರಿ ಮತ್ತು ಜಾರ್ಜಿಯಾ ವೋಲ್ ಅವರಂತಹ ವಿಶ್ವದ ದಿಗ್ಗಜ ಆಟಗಾರ್ತಿಯರಿದ್ದ ಆರ್‌ಸಿಬಿ  ನೆಟ್ಸ್‌ನಲ್ಲಿ ಉಮಾ ಕಾಶ್ವಿ ಎಸೆದ ನಿಖರವಾದ ಆಫ್-ಸ್ಪಿನ್ ಮತ್ತು ಇನ್‌ಸ್ವಿಂಗರ್‌ಗಳು ಘಟಾನುಘಟಿ ಬ್ಯಾಟರ್‌ಗಳನ್ನೇ ಚಕಿತಗೊಳಿಸಿದ್ದವು! ಇತ್ತ ಜೆಮಿಮಾ ರೊಡ್ರಿಗಸ್ ಅವರೊಂದಿಗೆ ಬಾಲ್ಯದಿಂದಲೇ ಪರಿಚಯವಿದ್ದ ಉಮಾಗೆ, ನೆಟ್ಸ್ ತರಬೇತಿಯು ಅವರೊಂದಿಗೆ ಮತ್ತಷ್ಟು ಆಪ್ತರಾಗಲು ವೇದಿಕೆಯಾಯಿತು.

ಅಂದು ನೆಟ್ಸ್‌ನಲ್ಲಿ ದಿಗ್ಗಜರ ವಿರುದ್ಧ ಬೌಲಿಂಗ್ ಮಾಡಿ ಪಡೆದ ಅನುಭವ ಮತ್ತು ಆತ್ಮವಿಶ್ವಾಸವೇ ಇಂದು ಉಮಾ ಕಾಶ್ವಿ ಅವರನ್ನು ಕೇವಲ 15ರ ಹರೆಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅಧಿಕೃತ ಆಟಗಾರ್ತಿಯನ್ನಾಗಿ ಮಾಡಿದೆ. ಮುಂಬರುವ WPL ಸೀಸನ್‌ನಲ್ಲಿ ಈ ಕರ್ನಾಟಕದ ಸಿಂಹಿಣಿ ಅಂತರರಾಷ್ಟ್ರೀಯ ಬೌಲರ್‌ಗಳನ್ನು ಹೇಗೆ ದಂಡಿಸಲಿದ್ದಾಳೆ ಎಂದು ನೋಡಲು ಇಡೀ ದೇಶವೇ ಕಾಯುತ್ತಿದೆ!

ಇದನ್ನೂ ಓದಿ: ಹಾಂಗ್​ ಕಾಂಗ್ ಸಿಕ್ಸಸ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

ಒಟ್ಟಾರೆಯಾಗಿ, ಕೇವಲ 15ರ ಹರೆಯದಲ್ಲೇ WPL ಇತಿಹಾಸ ಪುಟಗಳಲ್ಲಿ ತಮ್ಮ ಹೆಸರು ದಾಖಲಿಸಿರುವ ಉಮಾ ಕಾಶ್ವಿ, ಕನ್ನಡಿಗರ ಹೆಮ್ಮೆಯ ತಾರೆಯಾಗಿ ಹೊರಹೊಮ್ಮಿದ್ದಾರೆ. ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟೊಂದು ದೊಡ್ಡ ಸಾಧನೆ ಮಾಡಿರುವ ಈ ಯುವ ಪ್ರತಿಭೆ, ಮುಂಬರುವ ದಿನಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಅಬ್ಬರಿಸಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಧಾರಸ್ತಂಭವಾಗಲಿ ಎಂಬುದೇ ಎಲ್ಲರ ಆಶಯ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us