
ಏಪ್ರಿಲ್ 2025… ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ನಡೆಸಿಕೊಡುವ ಬಿಯಾಂಡ್23 ಪಾಡ್ ಕಾಸ್ಟ್ನಲ್ಲಿ ರೋಹಿತ್ ಶರ್ಮಾ (Rohit Sharma) ಕಾಣಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಹಿಟ್ಮ್ಯಾನ್, ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದೇನೆ. ಅಲ್ಲದೆ ಈ ಸರಣಿಯಲ್ಲಿ ನಾನು ನನ್ನ ಕೈಲಾದಷ್ಟು ಅತ್ಯುತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇನೆ ಎಂದಿದ್ದರು.
ಈ ಹೇಳಿಕೆ ನೀಡಿ ವಾರಗಳು ಕಳೆಯುವಷ್ಟರಲ್ಲಿ ರೋಹಿತ್ ಶರ್ಮಾ ತಮ್ಮ ಟೆಸ್ಟ್ ಕೆರಿಯರ್ ಅಂತ್ಯಗೊಳಿಸಿದ್ದರು. ಅಲ್ಲದೆ ಮೇ 7 ರಂದು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅದನ್ನು ಅಧಿಕೃತಗೊಳಿಸಿದರು.
ಫೆಬ್ರವರಿ 2025… ಟೀಮ್ ಇಂಡಿಯಾ ಆಟಗಾರರು ರಣಜಿ ಟೂರ್ನಿ ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿತು. ಅದರಂತೆ ವಿರಾಟ್ ಕೊಹ್ಲಿ ದೆಹಲಿ ರಣಜಿ ತಂಡದ ಪರ ಕಣಕ್ಕಿಳಿದಿದ್ದರು. ಈ ವೇಳೆ ದೆಹಲಿ ತಂಡದ ಕೋಚ್ ಆಗಿದ್ದವರು ಸರಣ್‌ದೀಪ್ ಸಿಂಗ್. ರೈಲ್ವೇಸ್ ವಿರುದ್ಧದ ಪಂದ್ಯ ನಡುವೆ ವಿರಾಟ್ ಕೊಹ್ಲಿ ಹಾಗೂ ಸರಣ್‌ದೀಪ್ ಸಿಂಗ್ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು.
ಅದರಲ್ಲೂ ಮುಂಬರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕುರಿತಾಗಿ ಮಾತುಕತೆ ನಡೆಸಿದ್ದರು. ಈ ವೇಳೆ ಕೊಹ್ಲಿ, ಇಂಗ್ಲೆಂಡ್ ಸರಣಿಗಾಗಿ ಸಜ್ಜಾಗುತ್ತಿರುವುದಾಗಿ ತಿಳಿಸಿದ್ದರು. ಅಲ್ಲದೆ 2018 ರಲ್ಲಿ 3-4 ಶತಕಗಳನ್ನು ಬಾರಿಸಿದ್ದೆ. ಈ ಬಾರಿ ಕೂಡ ಇಂಗ್ಲೆಂಡ್ನಲ್ಲಿ ಅಂತಹ ಪ್ರದರ್ಶನ ನೀಡಬೇಕೆಂದಿರುವೆ ಎಂದು ವಿರಾಟ್ ಕೊಹ್ಲಿ, ಸರಣ್‌ದೀಪ್ ಸಿಂಗ್ ಅವರಲ್ಲಿ ಹೇಳಿದ್ದರು.
ಆದರೆ ಇದೀಗ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಮೇ 12 ರಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ದೀರ್ಘಾವಧಿ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ಅಂದರೆ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿ ದಿನಗಳು ಕಳೆಯುವ ಮುನ್ನವೇ ವಿರಾಟ್ ಕೊಹ್ಲಿ ಕೂಡ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾಗಿದ್ದಾರೆ. ಆದರೆ ಇಬ್ಬರು ಕೂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಬೇಕೆಂದು ಆಗ್ರಹಿಸಿದ್ದರು ಎಂಬುದಕ್ಕೆ ಈ ಮೇಲಿನ ಹೇಳಿಕೆಗಳೇ ಸಾಕ್ಷಿ.
ಅತ್ತ ರೋಹಿತ್ ಶರ್ಮಾ ಏಪ್ರಿಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಆಡಲು ಸಜ್ಜಾಗುತ್ತಿರುವುದಾಗಿ ಬಹಿರಂಗ ಹೇಳಿಕೆ ನೀಡಿದ್ದರು. ಇತ್ತ ವಿರಾಟ್ ಕೊಹ್ಲಿ ಕೂಡ ತಮ್ಮ ಟೆಸ್ಟ್ ಕೆರಿಯರ್ ಅನ್ನು ಅಂತ್ಯಗೊಳಿಸುವ ಯಾವುದೇ ಇರಾದೆಯಲ್ಲಿ ಇರಲಿಲ್ಲ. ಇದಾಗ್ಯೂ ಒಂದೇ ವಾರದಲ್ಲಿ ಇಬ್ಬರು ದಿಗ್ಗಜರು ವಿದಾಯ ಹೇಳಿರುವುದೇ ಅಚ್ಚರಿ.
ಇದನ್ನೂ ಓದಿ: IPL 2025: 3 ಬಿಗ್ ಮ್ಯಾಚಸ್: RCB ತಂಡದ ಹೊಸ ವೇಳಾಪಟ್ಟಿ ಇಲ್ಲಿದೆ
ಅದರಲ್ಲೂ ದಶಕಗಳ ಕಾಲ ತಂಡದ ಭಾಗವಾಗಿದ್ದ ಇಬ್ಬರು ಆಟಗಾರರು ವಿದಾಯದ ಪಂದ್ಯವಿಲ್ಲದೇ ನಿವೃತ್ತಿ ಘೋಷಿಸಿರುವುದೇ ಪರಮಾಶ್ಚರ್ಯ. ಇದಾಗ್ಯೂ ಬಿಸಿಸಿಐ ಇಬ್ಬರು ದಿಗ್ಗಜರಿಗೆ ಬೀಳ್ಕೊಡುಗೆ ಪಂದ್ಯವನ್ನು ಆಯೋಜಿಸುವ ಬಗ್ಗೆಯಾಗಲಿ, ಗೌರವಯುತವಾಗಿ ಬೀಳ್ಕೊಡುಗೆ ಏರ್ಪಾಡು ಮಾಡುವುದರ ಬಗ್ಗೆಯಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿಯೇ ಏನಾಗ್ತಿದೆ ಟೀಮ್ ಇಂಡಿಯಾದಲ್ಲಿ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
Published On - 12:56 pm, Tue, 13 May 25