ಶತಕ ಸಿಡಿಸಿದರೂ… ಯಶಸ್ವಿ ಜೈಸ್ವಾಲ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ!

India vs England: ಐರ್ಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜುಲೈ 1 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ಮೊದಲಿಗೆ 5 ಮ್ಯಾಚ್​ಗಳ ಟಿ20 ಸರಣಿಯನ್ನು ಆಡಲಾಗುತ್ತದೆ. ಇದಾದ ಬಳಿಕ ಭಾರತ ಮತ್ತು ಇಂಗ್ಲೆಂಡ್ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಈ ಸರಣಿಗೆ ಆಯ್ಕೆ ಮಾಡಲಾದ ತಂಡದಲ್ಲಿ ಯಶಸ್ವಿ ಜೈಸ್ವಾಲ್ ಕಾಣಿಸಿಕೊಂಡಿಲ್ಲ.

ಶತಕ ಸಿಡಿಸಿದರೂ... ಯಶಸ್ವಿ ಜೈಸ್ವಾಲ್ ಆಯ್ಕೆಯಾಗದಿರಲು ಇದುವೇ ಅಸಲಿ ಕಾರಣ!
Yashasvi Jaiswal
Image Credit source: GettyImages

Updated on: Jun 22, 2026 | 9:24 AM

ಸೌತ್ ಆಫ್ರಿಕಾ ವಿರುದ್ಧ ಶತಕ, ಅಫ್ಘಾನಿಸ್ತಾನ್ ವಿರುದ್ಧ ಸೆಂಚುರಿ… ಹೀಗೆ ಮೊದಲ 6 ಪಂದ್ಯಗಳಲ್ಲಿ 2 ಏಕದಿನ ಶತಕಗಳನ್ನು ಬಾರಿಸಿದ ಭಾರತದ ಮೊದಲ ಬ್ಯಾಟರ್​ ಎನಿಸಿಕೊಂಡಿರುವ ಯಶಸ್ವಿ ಜೈಸ್ವಾಲ್​ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿಲ್ಲ. ಅದರಲ್ಲೂ ಅಫ್ಘಾನಿಸ್ತಾನ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಜೈಸ್ವಾಲ್ ಕೇವಲ 86 ಎಸೆತಗಳಲ್ಲಿ ಅಜೇಯ 110 ರನ್ ಚಚ್ಚಿದ್ದರು.

ಇದಾಗ್ಯೂ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಆಯ್ಕೆ ಮಾಡಲಾದ ಭಾರತ ತಂಡದಲ್ಲಿ ಯಶಸ್ವಿ ಜೈಸ್ವಾಲ್​ಗೆ ಸ್ಥಾನ ಸಿಕ್ಕಿಲ್ಲ ಎಂಬುದೇ ಅಚ್ಚರಿ. ಅತ್ಯುತ್ತಮ ಪ್ರದರ್ಶನ ನೀಡಿದರೂ ಜೈಸ್ವಾಲ್ ಅವರನ್ನು ಆಯ್ಕೆ ಮಾಡದಿರಲು ಕಾರಣವೇನು? ಎಂದು ನೋಡುವುದಾದರೆ…

ವಿರಾಟ್ ಕೊಹ್ಲಿಯ ಪುನರಾಗಮನ: ಅಫ್ಘಾನಿಸ್ತಾನ್ ವಿರುದ್ಧದ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯ ಕಾರಣ ಹೊರಗುಳಿದಿದ್ದರು. ಅವರ ಬದಲಿಗೆ ಜೈಸ್ವಾಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಇದೀಗ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸರಣಿಯ ಮೂಲಕ ಏಕದಿನ ಕ್ರಿಕೆಟ್​ಗೆ ಮರಳಲು ಸಜ್ಜಾಗಿದ್ದಾರೆ. ಸಹಜವಾಗಿಯೇ ಜೈಸ್ವಾಲ್ ತಮ್ಮ ಸ್ಥಾನವನ್ನು ಹಿರಿಯ ಆಟಗಾರನಿಗೆ ಬಿಟ್ಟುಕೊಡಬೇಕಾಗಿ ಬಂದಿದೆ.

ಅಗ್ರ ಕ್ರಮಾಂಕದ ಪೈಪೋಟಿ: ವಿರಾಟ್ ಕೊಹ್ಲಿಯ ಅನುಪಸ್ಥಿತಿಯಲ್ಲಿ ತಂಡಕ್ಕೆ ಆಯ್ಕೆಯಾಗಿದ್ದ ಯಶಸ್ವಿ ಜೈಸ್ವಾಲ್ 3ನೇ ಕ್ರಮಾಂಕದ ಬದಲಿಗೆ ಆರಂಭಿಕನಾಗಿ ಕಣಕ್ಕಿಳಿದಿದ್ದರು. ಅಂದರೆ ಜೈಸ್ವಾಲ್​ಗಾಗಿ ಆರಂಭಿಕನ ಸ್ಥಾನವನ್ನು ಭಾರತ ತಂಡದ ನಾಯಕ ಶುಭ್​ಮನ್ ಗಿಲ್ ತ್ಯಜಿಸಿದ್ದರು. ಇದೀಗ ಕೊಹ್ಲಿಯ ಆಗಮನದೊಂದಿಗೆ ಗಿಲ್ ಮತ್ತೆ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ಅಂದರೆ ಅಗ್ರ ಕ್ರಮಾಂಕದ ಸ್ಲಾಟ್​ಗಳು ತುಂಬಿರುವುದರಿಂದ ಯಶಸ್ವಿ ಜೈಸ್ವಾಲ್ ಅವರನ್ನು ಇಂಗ್ಲೆಂಡ್ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿಲ್ಲ.

ಇಶಾನ್ ಡಬಲ್ ರೋಲ್: ಯಶಸ್ವಿ ಜೈಸ್ವಾಲ್ ಅವರನ್ನು ಹೆಚ್ಚುವರಿ ಆರಂಭಿಕನಾಗಿ ಆಯ್ಕೆ ಮಾಡಬಹುದಿತ್ತಲ್ಲವಾ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಅತ್ತ ಮತ್ತೋರ್ವ ಆರಂಭಿಕನಾಗಿ ಇಶಾನ್ ಕಿಶನ್ ತಂಡದಲ್ಲಿದ್ದಾರೆ. ಇಲ್ಲಿ ಇಶಾನ್ ಕಿಶನ್ ವಿಕೆಟ್ ಕೀಪರ್ + ಓಪನರ್ ಆಗಿರುವ ಕಾರಣ, ಆಯ್ಕೆ ಸಮಿತಿ ಯಶಸ್ವಿ ಜೈಸ್ವಾಲ್ ಬದಲಿಗೆ ಇಶಾನ್ ಅವರನ್ನು ಡಬಲ್ ರೋಲ್​ಗಾಗಿ ಆಯ್ಕೆ ಮಾಡಿದ್ದಾರೆ.

ಇವೆಲ್ಲದರ ಜೊತೆಗೆ ಇಂಗ್ಲೆಂಡ್​ನ ಪಿಚ್​ಗಳು  ವೇಗ ಮತ್ತು ಸ್ವಿಂಗ್ ಬೌಲಿಂಗ್​ಗೆ ಸಹಕಾರಿ. ಇಲ್ಲಿ ಕೇವಲ ಬ್ಯಾಟಿಂಗ್ ಆಳಕ್ಕಿಂತ ಹೆಚ್ಚಾಗಿ ಬೌಲಿಂಗ್ ಮತ್ತು ಆಲ್ ರೌಂಡರ್ ಸಮತೋಲನ ಮುಖ್ಯವಾಗುತ್ತದೆ. ಹೀಗಾಗಿ ಹೆಚ್ಚುವರಿ ಬ್ಯಾಟರ್ ಸ್ಥಾನವನ್ನು ಕಡಿತಗೊಳಿಸಿ ಹರ್ಷಿತ್ ರಾಣಾ, ಅಕ್ಷರ್ ಪಟೇಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಬೌಲಿಂಗ್​ ಆಲ್ ರೌಂಡರ್‌ಗಳಿಗೆ ಬಿಸಿಸಿಐ ಆದ್ಯತೆ ನೀಡಿದೆ. ಹೀಗಾಗಿಯೇ 3 ಪಂದ್ಯಗಳಲ್ಲಿ 2 ಸೆಂಚುರಿ ಸಿಡಿಸಿದರೂ ಯಶಸ್ವಿ ಜೈಸ್ವಾಲ್ ಅವಕಾಶ ವಂಚಿತರಾಗಿದ್ದಾರೆ.

ಇದನ್ನೂ ಓದಿ: ಬಲಿಷ್ಠ ಪಡೆಗಳ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತಿರುವ ಕೇಪ್ ವರ್ಡೆ..!

ಭಾರತ ಏಕದಿನ ತಂಡ: ಶುಭ್​ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಗುರ್ನೂರ್ ಬ್ರಾರ್.

 

Follow Us