ಇಂದು ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ಮೂರನೇ ಟಿ20 ಪಂದ್ಯ ಆಯೋಜಿಸಲಾಗಿದೆ. ದ್ವಿತೀಯ ಪಂದ್ಯ ನಡೆದಿದ್ದ ಗಯಾನದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲೇ ಈ ಪಂದ್ಯ ಕೂಡ ನಡೆಯಲಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಟೀಮ್ ಇಂಡಿಯಾ (Team India) ಸರಣಿ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಇಂದಿನದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ವೆಸ್ಟ್ ಇಂಡೀಸ್ ಸದ್ಯ ಐದು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಹಾರ್ದಿಕ್ (Hardik Pandya) ಪಡೆ ಮಾನ ಉಳಿಸಿಕೊಳ್ಳಬೇಕಾದರೆ ಉಳಿದಿರುವ ಮೂರು ಪಂದ್ಯವನ್ನು ಗೆಲ್ಲಲೇ ಬೇಕಿದೆ. ಅತ್ತ ಕೆರಿಬಿಯನ್ ಪಡೆ ಇತಿಹಾಸ ಸೃಷ್ಟಿಸಲು ಕೇವಲ ಒಂದು ಪಂದ್ಯ ಗೆದ್ದರೆ ಸಾಕು.
ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಖಚಿತ ಎಂದೇ ಹೇಳಬಹುದು. ಯಾಕೆಂದರೆ ಹಿಂದಿನ ಎರಡೂ ಪಂದ್ಯದಲ್ಲಿ ಭಾರತ ಉತ್ತಮ ಆರಂಭ ಪಡೆದುಕೊಳ್ಳಲಿಲ್ಲ. ಪವರ್ ಪ್ಲೇನಲ್ಲಿ ಭಾರತದ ಬ್ಯಾಟರ್ಗಳಿಂದ ಪವರ್ ಇರಲೇ ಇಲ್ಲ. ಹೀಗಾಗಿ ಸತತ ವೈಫಲ್ಯ ಅನುಭವಿಸುತ್ತಿರುವ ಶುಭ್ಮನ್ ಗಿಲ್ ಅವರನ್ನು ಕೈಬಿಟ್ಟು ಯಶಸ್ವಿ ಜೈಸ್ವಾಲ್ಗೆ ಅವಕಾಶ ಸಿಗುವ ಸಂಭವವಿದೆ. ಬ್ಯಾಟಿಂಗ್ನಲ್ಲಿ ಹೆಚ್ಚಿನ ಆಯ್ಕೆ ಇಲ್ಲದ ಕಾರಣ ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್ ಎಡವುತ್ತಿದ್ದರೂ ಆಡಿಸಲೇ ಬೇಕಿದೆ.
Babar Azam: ಸಿಡಿಲಬ್ಬರದ ಶತಕ ಸಿಡಿಸಿದ ಬಾಬರ್ ಆಝಂ
ಹಾರ್ದಿಕ್ ಪಾಂಡ್ಯ ಕಡೆಯಿಂದ ನಾಯಕನ ಆಟ ಬರುತ್ತಿಲ್ಲ. ಕೇವಲ ಎರಡೇ ಎರಡು ಅಂತರರಾಷ್ಟ್ರೀಯ ಪಂದ್ಯವನ್ನಾಡಿರುವ ತಿಲಕ್ ವರ್ಮಾ ಮಾತ್ರ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ. ಅಕ್ಷರ್ ಪಟೇಲ್ ಆಲ್ರೌಂಡ್ ಆಟ ಕೂಡ ಸದ್ದು ಮಾಡುತ್ತಿಲ್ಲ. ಬೌಲರ್ಗಳು ಜಯಕ್ಕಾಗಿ ಕೆಚ್ಚೆದೆಯ ಹೋರಾಟ ನಡೆಸಬೇಕಿದೆ. ಯುಜ್ವೇಂದ್ರ ಚಹಲ್ ಸ್ಪಿನ್ ಜಾದು ಕೆಲಸ ಮಾಡಬೇಕಿದೆ. ಅರ್ಶ್ದೀಪ್ ಸಿಂಗ್, ಮುಖೇಶ್ ಕುಮಾರ್ ಮತ್ತು ಉಮ್ರಾನ್ ಮಲಿಕ್ ಇನ್ನಷ್ಟು ಮಾರಕವಾಗಬೇಕಿದೆ.
ಟೆಸ್ಟ್ ಹಾಗೂ ಏಕದಿನ ಸರಣಿ ಕಳೆದುಕೊಂಡಿದ್ದ ವೆಸ್ಟ್ ಇಂಡೀಸ್ ತಂಡ ಟಿ20 ಕ್ರಿಕೆಟ್ಗೆ ಹೇಳಿ ಮಾಡಿಸಿದಂತಿದೆ. ನಾಯಕ ರೋವ್ಮನ್ ಪೊವೆಲ್, ಬ್ರಾಂಡನ್ ಕಿಂಗ್ ಮತ್ತು ಅನುಭವಿ ನಿಕೋಲಸ್ ಪೂರನ್ ಭರ್ಜರಿ ಫಾರ್ಮ್ನಲ್ಲಿದ್ದು, ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮ್ಯಾಚ್ ವಿನ್ನಿಂಗ್ ಪ್ರದರ್ಶನ ತೋರುತ್ತಿರುವ ಪೂರನ್ ಕಟ್ಟಿಹಾಕಲು ಟೀಮ್ ಇಂಡಿಯಾ ಪ್ಲಾನ್ ರೂಪಿಸಬೇಕಿದೆ. ಇವರೊಂದಿಗೆ ಖೈಲ್ ಮೇಯರ್ಸ್, ಚಾರ್ಲೆಸ್ ಮತ್ತು ಹೆಟ್ಮೇರ್ ಅಬ್ಬರಿಸಿದರೆ ವಿಂಡೀಸ್ ದೊಡ್ಡ ಮೊತ್ತ ಕಲೆಹಾಕುವುದು ಖಚಿತ. ಬೌಲಿಂಗ್ನಲ್ಲಿ ಒಬೆಡ್ ಮೆಕಾಯ್, ರೊಮಾರಿಯೋ ಶೆಫೆರನ್ ಮತ್ತು ಜೇಸನ್ ಹೋಲ್ಡರ್ ಮಾರಕವಾಗಿದ್ದಾರೆ. ಕೆರಿಬಿಯನ್ ಪಡೆಯಲ್ಲಿ ಇಂದಿನ ಪಂದ್ಯಕ್ಕೆ ಬದಲಾವಣೆ ಅನುಮಾನ.
ಭಾರತ-ವೆಸ್ಟ್ ಇಂಡೀಸ್ ನಡುವಣ ತೃತೀಯ ಟಿ20 ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ ಶುರುವಾಗಲಿದೆ. ದೂರದರ್ಶನ ಸ್ಪೋರ್ಟ್ಸ್ (ಡಿಡಿ ಸ್ಪೋರ್ಟ್ಸ್) ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ. ಜೊತೆಗೆ ಲೈವ್ ಸ್ಟ್ರೀಮಿಂಗ್ ಫ್ಯಾನ್ ಮತ್ತು ಜಿಯೋ ಸಿನಿಮಾದಲ್ಲಿ ಲಭ್ಯವಿರುತ್ತದೆ.
ಭಾರತ ಟಿ20 ತಂಡ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ನಾಯಕ), ತಿಲಕ್ ವರ್ಮಾ, ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್.
ವೆಸ್ಟ್ ಇಂಡೀಸ್ ಟಿ20 ತಂಡ: ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್, ಶಿಮ್ರೋನ್ ಹೆಟ್ಮೆರ್, ಶಾಯ್ ಹೋಪ್, ಬ್ರಾಂಡನ್ ಕಿಂಗ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫೆರನ್ ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಅಕೆಲ್ ಹೊಸೈನ್, ಒಬೆಡ್ ಮೆಕಾಯ್, ಒಶಾನೆ ಥೋಮಸ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ