Babar Azam: ಸಿಡಿಲಬ್ಬರದ ಶತಕ ಸಿಡಿಸಿದ ಬಾಬರ್ ಆಝಂ
Lanka Premier League 2023: ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಝಂ ಮಿಂಚಿದ್ದಾರೆ.
Lanka Premier League 2023: ಲಂಕಾ ಪ್ರೀಮಿಯರ್ ಲೀಗ್ನಲ್ಲಿ ಬಾಬರ್ ಆಝಂ (Babar Azam) ಭರ್ಜರಿ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಶ್ರೀಲಂಕಾದ ಪಲ್ಲೆಕೆಲೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಕೊಲಂಬೊ ಸ್ಟ್ರೈಕರ್ಸ್ ಮತ್ತು ಗಾಲೆ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿತ್ತು. ಅಲ್ಲದೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೊಲಂಬೊ ಸ್ಟ್ರೈಕರ್ಸ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಇನ್ನು ಮೊದಲು ಬ್ಯಾಟ್ ಮಾಡಿದ ಗಾಲೆ ಟೈಟಾನ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕರಾದ ಲಸಿತ್ ಕ್ರೂಸ್ಪುಲ್ಲೆ (36) ಹಾಗೂ ಶೆವೊನ್ ಡೇನಿಯಲ್ (49) ಮೊದಲ ವಿಕೆಟ್ಗೆ 87 ರನ್ಗಳ ಜೊತೆಯಾಟವಾಡಿದರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಭಾನುಕಾ ರಾಜಪಕ್ಸೆ 30 ರನ್ಗಳ ಕೊಡುಗೆ ನೀಡಿದರೆ, ಟಿಮ್ ಸೀಫರ್ಟ್ 35 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ನೊಂದಿಗೆ ಅಜೇಯ 54 ರನ್ ಚಚ್ಚಿದರು. ಈ ಮೂಲಕ ಗಾಲೆ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 188 ರನ್ ಕಲೆಹಾಕಿತು.
189 ರನ್ಗಳ ಕಠಿಣ ಗುರಿ ಪಡೆದ ಕೊಲಂಬೊ ಸ್ಟ್ರೈಕರ್ಸ್ ತಂಡಕ್ಕೆ ಬಾಬರ್ ಆಝಂ ಹಾಗೂ ಪಾತುಂ ನಿಸ್ಸಾಂಕ ಸ್ಪೋಟಕ ಆರಂಭ ಒದಗಿಸಿದ್ದರು. 12 ಓವರ್ಗಳಲ್ಲೇ ತಂಡದ ಮೊತ್ತವನ್ನು 100 ರ ಗಡಿದಾಟಿಸಿದ ಈ ಜೋಡಿ ಚೇಸಿಂಗ್ಗೆ ಭದ್ರ ಬುನಾದಿ ಹಾಕಿಕೊಟ್ಟರು.
ಈ ಹಂತದಲ್ಲಿ 54 ರನ್ ಬಾರಿಸಿದ್ದ ಪಾತುಂ ನಿಸ್ಸಂಕಾ ಔಟಾದರು. ಇದಾಗ್ಯೂ ಬಾಬರ್ ಆಝಂ ಹೋರಾಟ ಮುಂದುವರೆದಿತ್ತು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ ಮೈದಾನದ ಮೂಲೆ ಮೂಲೆಗೆ ಸಿಕ್ಸ್-ಫೋರ್ಗಳನ್ನು ಸಿಡಿಸಿದರು.
ಅಲ್ಲದೆ ಕೇವಲ 57 ಎಸೆತಗಳಲ್ಲಿ ಬಾಬರ್ ಆಝಂ ಶತಕ ಪೂರೈಸಿದರು. ಆದರೆ ಸೆಂಚುರಿ ಬೆನ್ನಲ್ಲೇ 59 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ 104 ರನ್ ಬಾರಿಸಿ ಬಾಬರ್ ಕೊನೆಯ ಓವರ್ನ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
ಇತ್ತ 5 ಎಸೆತಗಳಲ್ಲಿ 14 ರನ್ಗಳ ಗುರಿ ಪಡೆದಿದ್ದ ಕೊಲಂಬೊ ಸ್ಟ್ರೈಕರ್ಸ್ ಪರ ಮೊಹಮ್ಮದ್ ನವಾಝ್ ಅಬ್ಬರಿಸಿದರು. ವೇಗಿ ಕಸುನ್ ರಜಿತ ಅವರ ಮೊದಲ ಎರಡು ಎಸೆತಗಳಲ್ಲಿ ಒಟ್ಟು 4 ರನ್ ಕಲೆಹಾಕಿದ ನವಾಝ್, ಆ ಬಳಿಕ ಸಿಕ್ಸ್ ಹಾಗೂ ಫೋರ್ ಸಿಡಿಸಿದರು. ಈ ಮೂಲಕ 19.5 ಓವರ್ಗಳಲ್ಲಿ ಕೊಲಂಬೊ ಸ್ಟ್ರೈಕರ್ಸ್ ತಂಡವನ್ನು ಗುರಿ ಮುಟ್ಟಿಸಿ ರೋಚಕ ಜಯ ತಂದುಕೊಟ್ಟರು.
ಕೊಲಂಬೊ ಸ್ಟ್ರೈಕರ್ಸ್ ಪ್ಲೇಯಿಂಗ್: ನಿರೋಶನ್ ಡಿಕ್ವೆಲ್ಲಾ (ನಾಯಕ) , ಬಾಬರ್ ಆಝಂ , ಪಾತುಮ್ ನಿಸ್ಸಾಂಕ , ನುವಾನಿಡು ಫೆರ್ನಾಂಡೋ , ಮೊಹಮ್ಮದ್ ನವಾಜ್ , ಲಹಿರು ಉದಾರ , ಚಾಮಿಕ ಕರುಣಾರತ್ನೆ , ರಮೇಶ್ ಮೆಂಡಿಸ್ , ನಸೀಮ್ ಶಾ , ಲಕ್ಷಣ ಸಂಡಕನ್ , ಮತೀಶ ಪತಿರಣ.
ಇದನ್ನೂ ಓದಿ: Virat Kohli: 100 ಪಂದ್ಯಗಳ ಬಳಿಕ ವಿರಾಟ್ ಕೊಹ್ಲಿ-ಬಾಬರ್ ಆಝಂ ದಾಖಲೆ ಹೀಗಿವೆ
ಗಾಲೆ ಟೈಟಾನ್ಸ್ ಪ್ಲೇಯಿಂಗ್ 11: ಶೆವೊನ್ ಡೇನಿಯಲ್ , ಲಸಿತ್ ಕ್ರೂಸ್ಪುಲ್ಲೆ , ಭಾನುಕಾ ರಾಜಪಕ್ಸೆ , ಟಿಮ್ ಸೀಫರ್ಟ್ (ವಿಕೆಟ್ ಕೀಪರ್) , ಶಕಿಬ್ ಅಲ್ ಹಸನ್ , ದಸುನ್ ಶಾನಕ (ನಾಯಕ) , ಅಕಿಲಾ ದನಂಜಯ , ಕಸುನ್ ರಜಿತ , ಮಿನೋದ್ ಭಾನುಕಾ , ತಬ್ರೈಜ್ ಶಮ್ಸಿ , ರಿಚರ್ಡ್ ನಾಗರವ.