
ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಆಟಗಾರ ವಿಲ್ ಪುಕೋವ್‌ಸ್ಕಿ ತಮ್ಮ 16ನೇ ವಯಸ್ಸಿನಲ್ಲಿ ಶಾಲಾ ದಿನಗಳಲ್ಲಿ ಸಂಭವಿಸಿದ ಮೆದುಳಿನ ಆಘಾತವನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಬ್ರೈಟನ್ ಗ್ರಾಮರ್ ಸ್ಕೂಲ್ ವಿರುದ್ಧ ವಿಕ್ಟೋರಿಯಾ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಆರಂಭಿಸಿದ್ದಾರೆ. 2014ರಲ್ಲಿ ನಡೆದ ಈ ಘಟನೆಯೇ ತಮ್ಮ ಕ್ರಿಕೆಟ್ ಬದುಕನ್ನು ಅರ್ಧಕ್ಕೇ ಕೊನೆಗೊಳಿಸಲು ಕಾರಣ ಎಂದು 28 ವರ್ಷದ ವಿಲ್ ಪುಕೋವ್‌ಸ್ಕಿ ಗಂಭೀರ ಆರೋಪ ಮಾಡಿದ್ದಾರೆ.
ಮೇ 2014ರಲ್ಲಿ ವಿಲ್ ಪುಕೋವ್‌ಸ್ಕಿ ಅವರು ಶಾಲೆಯ ಫುಟ್‌ಬಾಲ್ ತಂಡದ ಪರವಾಗಿ ಆಡುತ್ತಿದ್ದರು. ಪಂದ್ಯವೊಂದರಲ್ಲಿ ತಂಡ ಭಾರಿ ಸೋಲು ಅನುಭವಿಸಿದ ನಂತರ, ಕೋಚ್ ಅಲೆಕ್ಸ್ ಸಿಲ್ವಾನ್ ಅವರು ಆಟಗಾರರಿಗೆ ಶಿಕ್ಷೆಯ ರೂಪದಲ್ಲಿ ಅತ್ಯಂತ ಕಠಿಣ ಹಾಗೂ ಆಕ್ರಮಣಕಾರಿ ತರಬೇತಿ ಸೆಷನ್ ಆಯೋಜಿಸಿದ್ದರು.
ಈ ವೇಳೆ ನಡೆದ ತೀವ್ರ ಪೈಪೋಟಿಯ ಡ್ರಿಲ್‌ನಲ್ಲಿ ವಿಲ್ ಪುಕೋವ್‌ಸ್ಕಿ ಅವರ ತಲೆ, ಸಹಪಾಠಿಯೊಬ್ಬರ ಮಂಡಿಗೆ ಬಲವಾಗಿ ಬಡಿದು, ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅಂದು ತಲೆ ಬಡಿದಿದ್ದರಿಂದ ನನ್ನ ಮೆದುಳಿನಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ವಿಲ್ ಪುಕೋವ್‌ಸ್ಕಿ ಆರೋಪ ಮಾಡಿದ್ದಾರೆ.
ವಿಲ್ ಪುಕೋವ್‌ಸ್ಕಿ ಪರ ವಕೀಲರು ಕೋರ್ಟ್‌ಗೆ ಸಲ್ಲಿಸಿರುವ ದೂರಿನಲ್ಲಿ ಶಾಲೆಯ ಬೇಜವಾಬ್ದಾರಿತನವನ್ನು ಎತ್ತಿ ತೋರಿಸಿದ್ದಾರೆ.
ಪ್ರೋಟೋಕಾಲ್ ಉಲ್ಲಂಘನೆ: ಪ್ರಜ್ಞೆ ತಪ್ಪಿ ಬಿದ್ದ ಹುಡುಗನನ್ನು ಮೈದಾನದ ಬದಿಯಲ್ಲಿ ಏಕಾಂಗಿಯಾಗಿ ಬಿಡಲಾಗಿತ್ತು. ನಂತರ ಯಾವುದೇ ಸೂಕ್ತ ವೈದ್ಯಕೀಯ ತಪಾಸಣೆ ನಡೆಸದೆ ತಕ್ಷಣವೇ ಮತ್ತೆ ತರಬೇತಿಯಲ್ಲಿ ಪಾಲ್ಗೊಳ್ಳಲು ಅನುಮತಿಸಲಾಯಿತು.
ಪೋಷಕರಿಗೆ ಮಾಹಿತಿ ಇಲ್ಲ: ಗಂಭೀರ ಹೆಡ್-ಇಂಜುರಿ ಸಂಭವಿಸಿದರೂ ಶಾಲಾ ಆಡಳಿತ ಮಂಡಳಿ ವಿಲ್ ಪುಕೋವ್‌ಸ್ಕಿ ಅವರ ಪೋಷಕರಿಗೆ ತಕ್ಷಣ ಮಾಹಿತಿ ನೀಡಿರಲಿಲ್ಲ.
ಅನರ್ಹ ಕೋಚ್: ಜೂನಿಯರ್ ಆಟಗಾರರನ್ನು ಮುನ್ನಡೆಸಲು ಕೋಚ್‌ಗೆ ಯಾವುದೇ ಸೂಕ್ತ ಅರ್ಹತೆ ಅಥವಾ ತರಬೇತಿ ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಘಟನೆ ನಡೆದ ನಂತರದ ದಿನಗಳಲ್ಲಿ ತೀವ್ರ ತಲೆನೋವು, ವಾಕರಿಕೆ ಹಾಗೂ ದೃಷ್ಟಿ ಮಂದವಾಗುವ ಸಮಸ್ಯೆ ಎದುರಾಯಿತು. ಆಸ್ಪತ್ರೆಯ ವೈದ್ಯರು 6 ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದರು.
ಈ ಮೊದಲ ಆಘಾತದಿಂದ ಅವರ ಮೆದುಳಿಗೆ ಶಾಶ್ವತ ಹಾನಿಯಾಗಿದ್ದು, ಆನಂತರ ಅವರು ಮಾನಸಿಕ ಖಿನ್ನತೆ ಮತ್ತು ಅತಿಯಾದ ಆತಂಕದ (OCD) ಕಾಯಿಲೆಗೆ ತುತ್ತಾದರು ಎಂದು ವಕೀಲರು ವಾದಿಸಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್‌ನ ಮುಂದಿನ ಭರವಸೆಯ ಬ್ಯಾಟರ್ ಎಂದು ಗುರುತಿಸಲ್ಪಟ್ಟಿದ್ದ ವಿಲ್ ಪುಕೋವ್‌ಸ್ಕಿ, 2021ರಲ್ಲಿ ಭಾರತದ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿ 62 ರನ್ ಗಳಿಸಿದ್ದರು. ಇದಾಗ್ಯೂ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹೆಚ್ಚು ಕಾಲ ಮುಂದುವರೆದಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ವೃತ್ತಿಜೀವನದಲ್ಲಿ ಸರಣಿ ಮೆದುಳಿನ ಆಘಾತಗಳು.
2014ರಲ್ಲಿ ಶಾಲೆಯ ತರಬೇತಿ ವೇಳೆ ಪುಕೋವ್‌ಸ್ಕಿ ಅವರ ತಲೆಗೆ ಬಲವಾದ ಪೆಟ್ಟು ಬಿದ್ದಾಗ ಅವರಿಗೆ “ಟ್ರಾಮ್ಯಾಟಿಕ್ ಬ್ರೈನ್ ಇಂಜುರಿ” (ಶಾಶ್ವತ ಮೆದುಳಿನ ಹಾನಿ) ಆಗಿತ್ತು. ಶಾಲಾ ಆಡಳಿತ ಮಂಡಳಿ ಆ ಸಮಯದಲ್ಲಿ ತಕ್ಷಣವೇ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸದ ಕಾರಣ, ಅವರ ಮೆದುಳು ಆ ಆಘಾತದಿಂದ ಎಂದಿಗೂ ಪೂರ್ತಿಯಾಗಿ ಚೇತರಿಸಿಕೊಳ್ಳಲೇ ಇಲ್ಲ.
ಮೊದಲ ಆಘಾತ ಸರಿಯಾಗಿ ಗುಣವಾಗದ ಕಾರಣ, ಅವರ ಮೆದುಳು ಭವಿಷ್ಯದಲ್ಲಿ ತಲೆಗೆ ಬೀಳುವ ಸಣ್ಣ ಪೆಟ್ಟುಗಳಿಗೂ ಅತಿಯಾಗಿ ಸ್ಪಂದಿಸುವಷ್ಟು ಸೂಕ್ಷ್ಮವಾಯಿತು. ಅಂದರೆ, ಸಾಮಾನ್ಯ ಆಟಗಾರನಿಗೆ ತೊಂದರೆ ಕೊಡದ ಸಣ್ಣ ಹೆಡ್-ಇಂಜುರಿ ಕೂಡ ಪುಕೋವ್‌ಸ್ಕಿ ಅವರ ಮೇಲೆ ಗಂಭೀರ ಪರಿಣಾಮ ಬೀರತೊಡಗಿತು.
ಕ್ರಿಕೆಟ್ ಆಡುವಾಗ ಅವರಿಗೆ ಒಟ್ಟು 13 ಬಾರಿ ಮೆದುಳಿನ ಆಘಾತಗಳಾಗಲು ಮುಖ್ಯ ಕಾರಣ ಈ ಶಾಲಾ ದಿನಗಳ ಇಂಜುರಿ ಎನ್ನಲಾಗಿದೆ. ಮೊದಲೇ ದುರ್ಬಲವಾಗಿದ್ದ ಮೆದುಳಿಗೆ ಮತ್ತೆ ಮತ್ತೆ ಬಾಲ್ ಬಡಿದಾಗ ಸಮಸ್ಯೆ ತೀವ್ರಗೊಳ್ಳುತ್ತಾ ಹೋಯಿತು.
ವೈದ್ಯಕೀಯ ಮಂಡಳಿಯ ಕಟ್ಟುನಿಟ್ಟಿನ ಸಲಹೆಯ ಮೇರೆಗೆ, ಬೇರೆ ದಾರಿಯಿಲ್ಲದೆ ಅವರು ಏಪ್ರಿಲ್ 2025 ರಲ್ಲಿ ತಮ್ಮ 27ನೇ ವಯಸ್ಸಿಗೆ ವಿಲ್ ಪುಕೋವ್‌ಸ್ಕಿ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಇದನ್ನೂ ಓದಿ: ನೀವು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ ಗ್ರೇಟ್, ಮೈದಾನದಲ್ಲಿ ಅಲ್ಲ!
ಇದೀಗ ತಮ್ಮ ಇಂದಿನ ಈ ದುಸ್ಥಿತಿಗೆ ಅಂದಿನ ಶಾಲಾ ಆಡಳಿತ ಮಂಡಳಿಯ ಘೋರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ವಿಲ್ ಪುಕೋವ್‌ಸ್ಕಿ, ಬ್ರೈಟನ್ ಗ್ರಾಮರ್ ಸ್ಕೂಲ್ ವಿರುದ್ಧ ವಿಕ್ಟೋರಿಯಾ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಸಮರ ಆರಂಭಿಸಿದ್ದಾರೆ.