ನೀವು ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇ ಗ್ರೇಟ್, ಮೈದಾನದಲ್ಲಿ ಅಲ್ಲ!
ಪಾಕಿಸ್ತಾನ್ ಕ್ರಿಕೆಟ್ ತಂಡದ ಇತ್ತೀಚಿನ ಕಳಪೆ ಪ್ರದರ್ಶನ ಹಾಗೂ ತಂಡದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಇಂಗ್ಲೆಂಡ್ ಪ್ರವಾಸದಲ್ಲಿನ ಸರಣಿ ಸೋಲು ಮತ್ತು ಹಿರಿಯ ಆಟಗಾರರ ಬೇಜವಾಬ್ದಾರಿಯುತ ಆಟದ ವಿರುದ್ಧ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡ 194 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ನಾಯಕ ಬಾಬರ್ ಆಝಂ ಕೇವಲ 8 ಮತ್ತು 6 ರನ್ ಗಳಿಸಿ ಸಂಪೂರ್ಣ ವೈಫಲ್ಯ ಕಂಡಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಾಸಿತ್ ಅಲಿ, ಬಾಬರ್ ಆಝಂ ವಿರುದ್ಧ ಅತ್ಯಂತ ಕಠಿಣ ಪದಗಳಿಂದ ವಾಗ್ದಾಳಿ ನಡೆಸಿದ್ದಾರೆ.
ದಿ ಗೇಮ್ ಪ್ಲ್ಯಾನ್ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಾಸಿತ್ ಅಲಿ, ಬಾಬರ್ ಆಝಂ ಅವರ ‘ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್’ ಎಂಬ ಇಮೇಜ್ ಕೇವಲ ಸಾಮಾಜಿಕ ಜಾಲತಾಣಗಳಿಗೆ ಸೀಮಿತ ಎಂದು ದೂರಿದ್ದಾರೆ.
ಸೋಶಿಯಲ್ ಮೀಡಿಯಾ ಕಿಂಗ್:
ಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾಗದಿದ್ದರೆ ನೀವು ಎಂತಹ ಶ್ರೇಷ್ಠ ಆಟಗಾರ? ನಿಮ್ಮ ಅಭಿಮಾನಿಗಳ ಬಳಗ ಹಾಗೂ ಸೋಶಿಯಲ್ ಮೀಡಿಯಾ ಮುಂದೆ ಮಾತ್ರ ನೀವು ಗ್ರೇಟ್, ಮೈದಾನದಲ್ಲಿ ಅಲ್ಲ ಎಂದು ಬಾಸಿತ್ ಅಲಿ, ಬಾಬರ್ ಆಝಂ ಅವರನ್ನು ಹೀಯಾಳಿಸಿದ್ದಾರೆ.
ಇಂತಹ ಹೀಯಾಳಿಕೆಗೆ ಮುಖ್ಯ ಕಾರಣ, ಬಾಬರ್ ಆಝಂ ಅವರ ವೈಯಕ್ತಿಕ ಪಿಆರ್ ತಂಡ ಮತ್ತು ಅವರ ಆನ್‌ಲೈನ್ ಅಭಿಮಾನಿಗಳು ಮೈದಾನದ ಪ್ರದರ್ಶನಕ್ಕಿಂತ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಅವರ ಇಮೇಜ್ ಅನ್ನು ದೊಡ್ಡದಾಗಿ ಬಿಂಬಿಸುತ್ತಿರುವುದು. ಆದರೆ ಮೈದಾನದಲ್ಲಿ ಮಾತ್ರ ಅದಕ್ಕೆ ತಕ್ಕ ಪ್ರದರ್ಶನ ಬರುತ್ತಿಲ್ಲ ಎಂದು ಬಾಸಿತ್ ಅಲಿ ಕಟುವಾಗಿ ಟೀಕಿಸಿದ್ದಾರೆ.
ಅಷ್ಟೇ ಅಲ್ಲದೆ ಬಾಬರ್ ಆಝಂ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂದೂ ಶತಕ ಗಳಿಸಿಲ್ಲ ಎಂಬುದನ್ನು ಅವರು ನೆನಪಿಸಿದ್ದಾರೆ. ಬಾಬರ್ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಡಿಸೆಂಬರ್ 2022ರಲ್ಲಿ ನ್ಯೂಝಿಲೆಂಡ್ ವಿರುದ್ಧ ಬಾರಿಸಿದ್ದರು. ಇದಾದ ಬಳಿಕ ಅವರ ಬ್ಯಾಟ್ನಿಂದ ಮೂರಂಕಿ ಮೊತ್ತ ದಾಖಲಾಗಿಲ್ಲ. ಇಂತಹ ಬ್ಯಾಟರ್ನನ್ನು ಸೋಷಿಯಲ್ ಮೀಡಿಯಾದಲ್ಲಿ ಹೊಗಳಲಾಗುತ್ತಿದೆ ಎಂದು ಬಾಸಿತ್ ಅಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಬಾಬರ್ ಆಝಂ ಬ್ಯಾಟಿಂಗ್ ಪ್ರದರ್ಶನವನ್ನು ಕಟುವಾಗಿ ಟೀಕಿಸಿದ ಬಾಸಿತ್ ಅಲಿ, ‘ಇಡೀ ತಂಡದ ಬ್ಯಾಟಿಂಗ್ ಲೈನ್-ಅಪ್ ಬಾಬರ್ ಮೇಲೆಯೇ ಅವಲಂಬಿತವಾಗಿದೆ. ಆದರೆ, ಅವರು ಟೆಸ್ಟ್‌ನಲ್ಲಿ ಶತಕ ಬಾರಿಸಿ ವರ್ಷಗಳೇ ಕಳೆದಿವೆ. ಅದರಲ್ಲೂ ಲಾರ್ಡ್ಸ್ ಟೆಸ್ಟ್‌ನಲ್ಲಿ ಜೋಫ್ರಾ ಆರ್ಚರ್ ಎಸೆದ ಶಾರ್ಟ್ ಬಾಲ್‌ಗೆ ಅತ್ಯಂತ ಸುಲಭವಾಗಿ ವಿಕೆಟ್ ಒಪ್ಪಿಸಿದ ರೀತಿಗೆ ನನಗೆ ದೊಡ್ಡ ಅಚ್ಚರಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕ್ ತಂಡದ ಈ ದುಸ್ಥಿತಿಗೆ ಇಬ್ಬರು ಕಾರಣ!
ಬಾಬರ್ ಆಝಂ ಮತ್ತು ಶಾಹೀನ್ ಅಫ್ರಿದಿ ನಡುವಿನ ನಾಯಕತ್ವದ ಭಿನ್ನಾಭಿಪ್ರಾಯವೇ ಪಾಕಿಸ್ತಾನ್ ಕ್ರಿಕೆಟ್‌ನ ಇಂದಿನ ದುಸ್ಥಿತಿಗೆ ಪ್ರಮುಖ ಕಾರಣ. ಈ ನಾಯಕತ್ವದ ಕಚ್ಚಾಟದಿಂದಾಗಿ ಪಾಕಿಸ್ತಾನ್ ತಂಡದಲ್ಲಿ ಆಟಗಾರರು ಬಾಬರ್ ಬಣ ಮತ್ತು ಶಾಹೀನ್ ಬಣ ಎಂದು ವಿಭಜನೆಗೊಂಡರು. ಇದರಿಂದ ಆಟಗಾರರಲ್ಲಿ ಒಗ್ಗಟ್ಟು ಇಲ್ಲದಂತಾಗಿ, ಮೈದಾನದಲ್ಲಿ ಒಟ್ಟಾಗಿ ಹೋರಾಡುವ ಮನೋಭಾವ ಮಾಯವಾಯಿತು ಎಂದು ಎಂದೂ ಬಾಸಿತ್ ಅಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಮೊದಲ ಇನಿಂಗ್ಸ್ನಲ್ಲಿ ಸಮ ಸ್ಕೋರ್: ಡ್ರಾ ಆದರೆ ಫೈನಲ್ಗೇರುವುದು ಯಾರು?
ಒಟ್ಟಾರೆಯಾಗಿ ಹೇಳುವುದಾದರೆ, ಲಾರ್ಡ್ಸ್ ಮೈದಾನದಲ್ಲಿ ಎದುರಾದ ಹೀನಾಯ ಸೋಲು ಪಾಕಿಸ್ತಾನ್ ಕ್ರಿಕೆಟ್‌ನಲ್ಲಿನ ಗೊಂದಲ ಮತ್ತು ಬದ್ಧತೆಯ ಕೊರತೆಯನ್ನು ಎತ್ತಿ ತೋರಿಸಿದೆ. ಹಿರಿಯ ಆಟಗಾರರು ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಆಡದ ಹೊರತು ತಂಡಕ್ಕೆ ಭವಿಷ್ಯವಿಲ್ಲ ಎಂಬುದನ್ನು ಈ ಪ್ರದರ್ಶನ ಸಾಬೀತುಪಡಿಸಿದೆ.




