ಮೊದಲ ಇನಿಂಗ್ಸ್‌ನಲ್ಲಿ ಸಮ ಸ್ಕೋರ್: ಡ್ರಾ ಆದರೆ ಫೈನಲ್ಗೇರುವುದು ಯಾರು?
Duleep Trophy 2026: ದುಲೀಪ್ ಟ್ರೋಫಿ 2026ರ ಮೊದಲ ಸೆಮಿಫೈನಲ್ ಪಂದ್ಯವು ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ ಹಾಗೂ ಅಪರೂಪದ ಘಟ್ಟಕ್ಕೆ ಸಾಕ್ಷಿಯಾಗಿದೆ. ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ಮತ್ತು ಈಸ್ಟ್ ಝೋನ್ ನಡುವಣ ಜಿದ್ದಾಜಿದ್ದಿನ ಹೋರಾಟದ ಫಲವಾಗಿ ಉಭಯ ತಂಡಗಳು ಪ್ರಥಮ ಇನಿಂಗ್ಸ್‌ನಲ್ಲಿ ಭರ್ಜರಿ ಸಮಬಲ (ಟೈ) ಸಾಧಿಸಿವೆ.

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ 2026ರ ಮೊದಲ ಸೆಮಿಫೈನಲ್ ಪಂದ್ಯವು ಅತ್ಯಂತ ರೋಚಕ ಘಟ್ಟ ತಲುಪಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೆಂಟ್ರಲ್ ಝೋನ್ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 266 ರನ್ಗಳಿಸಿ ಆಲೌಟ್ ಆಗಿದೆ. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಈಸ್ಟ್ ಝೋನ್ ತಂಡ 266 ರನ್ಗಳಿಸಿ ಸರ್ವಪತನ ಕಂಡಿದೆ.
ಇತಿಹಾಸದಲ್ಲೇ ಮೊದಲ ಟೈ:
ದುಲೀಪ್ ಟ್ರೋಫಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರಥಮ ಇನಿಂಗ್ಸ್‌ನಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿವೆ. ಹೀಗಾಗಿಯೇ ಈ ಪಂದ್ಯ ಡ್ರಾ ಆದರೆ ಯಾರು ಫೈನಲ್‌ಗೇರಲಿದ್ದಾರೆ ಎಂಬ ಕುತೂಹಲಕಾರಿ ಪ್ರಶ್ನೆ ಮೂಡಿದೆ. ಈ ರೋಚಕ ಪ್ರಶ್ನೆಗೆ ಇಲ್ಲಿದೆ ಉತ್ತರ…
ಸಾಮಾನ್ಯವಾಗಿ ನಾಕೌಟ್ ಪಂದ್ಯಗಳು ಡ್ರಾ ನಲ್ಲಿ ಅಂತ್ಯಗೊಂಡರೆ, ‘ಮೊದಲ ಇನಿಂಗ್ಸ್ ಮುನ್ನಡೆ’ ಪಡೆದ ತಂಡವು ಮುಂದಿನ ಹಂತಕ್ಕೆ (ಫೈನಲ್‌ಗೆ) ಅರ್ಹತೆ ಪಡೆಯುತ್ತದೆ. ಆದರೆ ಇಲ್ಲಿ ಎರಡು ತಂಡಗಳ ಸ್ಕೋರ್ ಸಮವಾಗಿರುವುದರಿಂದ ಮುನ್ನಡೆಯ ಲೆಕ್ಕಾಚಾರವೇ ಉಲ್ಟಾ ಆಗಿದೆ.
ಒಂದು ವೇಳೆ ಈ ಪಂದ್ಯದ ದ್ವಿತೀಯ ಇನಿಂಗ್ಸ್ ಸಂಪೂರ್ಣಗೊಳ್ಳದೆ ಪಂದ್ಯ ಡ್ರಾ ಆದರೆ ಯಾರು ಫೈನಲ್ ತಲುಪುತ್ತಾರೆ? ಬಿಸಿಸಿಐ ನಿಯಮಗಳು ಏನು ಹೇಳುತ್ತವೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಈಸ್ಟ್ ಝೋನ್ ಹಾಗೂ ಸೆಂಟ್ರಲ್ ಝೋನ್ ನಡುವಣ ಪಂದ್ಯವು ಅಧಿಕೃತವಾಗಿ ಡ್ರಾಗೊಂಡರೆ, ವಿಜೇತರನ್ನು ನಿರ್ಧರಿಸಲು ಬಿಸಿಸಿಐ ಈ ಕೆಳಗಿನ ಟೈಬ್ರೇಕ್ ನಿಯಮಗಳನ್ನು ಬಳಸಲಿದೆ…
ಸರಾಸರಿ ಲೆಕ್ಕಾಚಾರ:
ಮೊದಲ ಇನಿಂಗ್ಸ್ ಟೈ ಆಗಿರುವುದರಿಂದ, ಎರಡನೇ ಇನಿಂಗ್ಸ್ ಅಪೂರ್ಣಗೊಂಡು ಪಂದ್ಯ ಡ್ರಾಗೊಂಡರೆ, ವಿಜೇತರನ್ನು ನಿರ್ಧರಿಸಲು ರನ್ ಸರಾಸರಿ ನಿಯಮವನ್ನು ಬಳಸಲಾಗುತ್ತದೆ. ಇಲ್ಲಿ ಒಂದು ತಂಡವು ಪಂದ್ಯದಲ್ಲಿ ಗಳಿಸಿದ ಒಟ್ಟು ರನ್‌ಗಳನ್ನು, ಎದುರಾಳಿ ತಂಡವು ಬೌಲಿಂಗ್ ಮಾಡಿದ ಒಟ್ಟು ಓವರ್‌ಗಳಿಂದ ಭಾಗಿಸಿ ಸರಾಸರಿ ಲೆಕ್ಕ ಹಾಕಲಾಗುತ್ತದೆ.
ಉದಾಹರಣೆ: ಸೆಂಟ್ರಲ್ ಝೋನ್ ತಂಡದ ಮೊದಲ ಇನಿಂಗ್ಸ್‌ನ 266 ರನ್ ಹಾಗೂ ಎರಡನೇ ಇನಿಂಗ್ಸ್‌ನ ರನ್‌ಗಳನ್ನು ಸೇರಿಸಿ ಒಟ್ಟು ಎಷ್ಟು ರನ್ ಗಳಿಸಿದೆಯೋ, ಅದಕ್ಕೆ ಈಸ್ಟ್ ಝೋನ್ ಎಸೆದ ಒಟ್ಟು ಓವರ್‌ಗಳನ್ನು ಭಾಗಿಸಲಾಗುತ್ತದೆ. ಇದೇ ರೀತಿ ಈಸ್ಟ್ ಝೋನ್‌ನ ರನ್ ಸರಾಸರಿಯನ್ನೂ ಲೆಕ್ಕ ಹಾಕಲಾಗುತ್ತದೆ.
ಈ ಲೆಕ್ಕಾಚಾರದಲ್ಲಿ ಯಾರ ‘ರನ್ ಸರಾಸರಿ’ ಹೆಚ್ಚಿರುತ್ತದೆಯೋ ಆ ತಂಡವನ್ನು ವಿಜೇತರೆಂದು ಘೋಷಿಸಿ ಫೈನಲ್‌ಗೆ ಕಳುಹಿಸಲಾಗುತ್ತದೆ.
ಕ್ವೋಶಿಯಂಟ್ ಲೆಕ್ಕಾಚಾರ:
ಸೆಂಟ್ರಲ್ ಝೋನ್ ಮತ್ತು ಈಸ್ಟ್ ಝೋನ್ ನಡುವಣ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಒಂದೂ ಎಸೆತ ಕಾಣದೆ ಅಥವಾ ಯಾವುದೇ ತಂಡಕ್ಕೆ ಮುನ್ನಡೆ ಸಾಧಿಸಲು ಸಾಧ್ಯವಾಗದಂತೆ ಮಳೆ ಬಂದು ಪಂದ್ಯ ಸಂಪೂರ್ಣವಾಗಿ ರದ್ದಾದರೆ ಮಾತ್ರ ಬಿಸಿಸಿಐ ಕ್ವೋಶಿಯಂಟ್ ನಿಯಮವನ್ನು ಅನ್ವಯಿಸಲಿದೆ.
ಕ್ವೋಶಿಯಂಟ್ ಲೆಕ್ಕಾಚಾರದ ಪ್ರಕಾರ, ಪಂದ್ಯಾವಳಿಯ ಈ ಹಂತದವರೆಗೆ ತಂಡಗಳು ಆಡಿರುವ ಒಟ್ಟಾರೆ ಪ್ರದರ್ಶನವನ್ನು ಪರಿಗಣಿಸಲಾಗುತ್ತದೆ. ಬ್ಯಾಟಿಂಗ್ ಸರಾಸರಿ ಮತ್ತು ಬೌಲಿಂಗ್ ಸರಾಸರಿಯ ಅನುಪಾತವನ್ನು ಲೆಕ್ಕಹಾಕಲಾಗುತ್ತದೆ. ಇದರಲ್ಲಿ ಯಾವ ತಂಡದ ‘ಕ್ವೋಶಿಯಂಟ್’ ಹೆಚ್ಚಿರುತ್ತದೆಯೋ ಆ ತಂಡವನ್ನು ವಿಜೇತರೆಂದು ಘೋಷಿಸಿ ಫೈನಲ್‌ಗೆ ಕಳುಹಿಸಲಾಗುತ್ತದೆ. ಆದರೆ ಈಗಾಗಲೇ ಸೆಂಟ್ರಲ್ ಝೋನ್ ತಂಡದ ಎರಡನೇ ಇನಿಂಗ್ಸ್ ಆರಂಭವಾಗಿರುವುದರಿಂದ ಈ ಪಂದ್ಯದಲ್ಲಿ ಕ್ವೋಶಿಯಂಟ್ ಲೆಕ್ಕಾಚಾರ ಬರುವ ಸಾಧ್ಯತೆ ತುಂಬಾ ಕಡಿಮೆ.
ಇದನ್ನೂ ಓದಿ: ಮುಂಬರುವ ಸರಣಿಗೂ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಡೌಟ್!
ಒಂದು ವೇಳೆ ಸೆಂಟ್ರಲ್ ಝೋನ್ ಮತ್ತು ಈಸ್ಟ್ ಝೋನ್ ನಡುವಣ ಪಂದ್ಯವು ಡ್ರಾಗೊಂಡರೆ, ನಿಯಮಾವಳಿಗಳ ಪ್ರಕಾರ ಉಭಯ ಇನಿಂಗ್ಸ್‌ಗಳ ಒಟ್ಟಾರೆ ‘ರನ್ ಸರಾಸರಿ’ಯ ಆಧಾರದ ಮೇಲೆಯೇ ಫೈನಲ್‌ಗೇರುವ ತಂಡ ಯಾವುದು ಎಂದು ಘೋಷಿಸಲಾಗುತ್ತದೆ. ಇದಾಗ್ಯೂ ಒಂದು ವೇಳೆ ರನ್ ಸರಾಸರಿಯ ಲೆಕ್ಕಾಚಾರವೂ ಸಮಬಲಗೊಂಡರೆ ಮಾತ್ರ, ಬಿಸಿಸಿಐ ‘ಕ್ವೋಶಿಯಂಟ್’ ನಿಯಮವನ್ನು ಅನ್ವಯಿಸಿ ಫಲಿತಾಂಶವನ್ನು ನಿರ್ಧರಿಸಲಿದೆ.




