AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್‌ಗೆ ಅ. 5ರವರೆಗೆ ನ್ಯಾಯಾಂಗ ಬಂಧನ; ಅ. 6ಕ್ಕೇ ಉಪಚುನಾವಣೆ!

ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು 19 ವರ್ಷಗಳ ಹಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋಂಟಾಯ್ ನ್ಯಾಯಾಲಯ ಆದೇಶ ಹೊರಡಿಸಿದೆ. ಅಕ್ಟೋಬರ್ 6ರಂದು ನಂದಿಗ್ರಾಮ ಉಪಚುನಾವಣೆ ನಡೆಯಲಿದ್ದು, ಪ್ರಚಾರದ ಸಮಯದಲ್ಲೇ ಅಭ್ಯರ್ಥಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವುದು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರಕ್ಕೆ ಭಾರಿ ಹಿನ್ನಡೆ ತಂದೊಡ್ಡಿದೆ. ಇದು ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ.

ನಂದಿಗ್ರಾಮದ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್‌ಗೆ ಅ. 5ರವರೆಗೆ ನ್ಯಾಯಾಂಗ ಬಂಧನ; ಅ. 6ಕ್ಕೇ ಉಪಚುನಾವಣೆ!
ಮಿಲನ್ ಪ್ರಧಾನ್ Image Credit source: PTI
ಸುಷ್ಮಾ ಚಕ್ರೆ
|

Updated on:Sep 21, 2026 | 10:59 PM

Share

ನಂದಿಗ್ರಾಮ, ಸೆಪ್ಟೆಂಬರ್ 21: ಪಶ್ಚಿಮ ಬಂಗಾಳದ ಬಹು ಪ್ರತಿಷ್ಠಿತ ಕಣವಾದ ನಂದಿಗ್ರಾಮದ ಉಪಚುನಾವಣೆಯಲ್ಲಿ ಹೊಸ ಹೊಸ ತಿರುವುಗಳು ಉಂಟಾಗುತ್ತಿವೆ. ಬಿಜೆಪಿ ನಾಯಕ ಹಾಗೂ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿಯನ್ನು ಭೇಟಿಯಾದ ಬೆನ್ನಲ್ಲೇ ಟಿಎಂಸಿ ಅಭ್ಯರ್ಥಿ ತನ್ನ ನಾಮಪತ್ರ ವಾಪಾಸ್ ಪಡೆದಿದ್ದರು. ಬೇರೆ ವಿಧಿಯಿಲ್ಲದೆ ಮಮತಾ ಬ್ಯಾನರ್ಜಿ ಕಾಂಗ್ರೆಸ್​ಗೆ ಬೆಂಬಲ ಘೋಷಿಸಿದ್ದರು. ಅದಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಬಂಧನವಾಗಿತ್ತು. ಇದೀಗ ಅಕ್ಟೋಬರ್ 6ಕ್ಕೆ ನಂದಿಗ್ರಾಮದ ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್ 5ರವರೆಗೂ ಮಿಲನ್ ಪ್ರಧಾನ್ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಹೀಗಾಗಿ, ಚುನಾವಣಾ ಕಣದಲ್ಲಿದ್ದರೂ ಅವರಿಗೆ ಪ್ರಚಾರ ನಡೆಸಲು ಯಾವುದೇ ಅವಕಾಶ ಸಿಗುವುದಿಲ್ಲ.

ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಕೋಂಟಾಯ್ ನ್ಯಾಯಾಲಯವು ಇಂದು ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆದರೆ, ಮಿಲನ್ ಪ್ರಧಾನ್ ಅವರ ಪರ ವಕೀಲರು ಈ ನ್ಯಾಯಾಲಯದ ಆದೇಶವನ್ನು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ನಂದಿಗ್ರಾಮ ಉಪಚುನಾವಣೆ; ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಬಂಧನ!

2007ರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 18ರಂದು ಪೊಲೀಸರು ಮಿಲನ್ ಪ್ರಧಾನ್ ಅವರನ್ನು ಬಂಧಿಸಿದ್ದರು. ತೃಣಮೂಲ ಕಾಂಗ್ರೆಸ್ (TMC) ಬಣದ ಅಭ್ಯರ್ಥಿ ನಾಮಪತ್ರ ಹಿಂಪಡೆದ ನಂತರ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನ್ ಅವರಿಗೆ ಬೆಂಬಲ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನವಾಗಿತ್ತು. 2007ರಲ್ಲಿ ಆಗಿನ ಎಡಫ್ರಂಟ್ ಸರ್ಕಾರದ ವಿರುದ್ಧ ನಂದಿಗ್ರಾಮ ಮತ್ತು ಖೇಜುರಿಯಲ್ಲಿ ನಡೆದ ಭೂ ಸ್ವಾಧೀನ ವಿರೋಧಿ ಹಿಂಸಾತ್ಮಕ ಚಳವಳಿಯಿಂದ ಮಿಲನ್ ಪ್ರಧಾನ್ ವಿರುದ್ಧದ ಪ್ರಕರಣಗಳು ಹುಟ್ಟಿಕೊಂಡಿವೆ. ಪೊಲೀಸರ ಪ್ರಕಾರ, ಅವರು ಹಲವು ವರ್ಷಗಳಿಂದ ಬಂಧನದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದರು, ಹೀಗಾಗಿ “ದೀರ್ಘಕಾಲದಿಂದ ಬಾಕಿ ಉಳಿದಿದ್ದ, ಜಾಮೀನು ರಹಿತ ವಾರಂಟ್‌ಗಳ” ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮಿಲನ್ ಪ್ರಧಾನ್ ಬಂಧನವು ಪಶ್ಚಿಮ ಬಂಗಾಳದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಈ ಬೆಳವಣಿಗೆಯು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದಿರುವ ಮಮತಾ ಬ್ಯಾನರ್ಜಿ, ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಹತ್ಯೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ವರ್ಷ ಅಧಿಕಾರ ಕಳೆದುಕೊಂಡ ಮಮತಾ ಬ್ಯಾನರ್ಜಿ, ಮಿಲನ್ ಪ್ರಧಾನ್ ಬಂಧನವು ಬಿಜೆಪಿಯ ಸೇಡಿನ ರಾಜಕೀಯದ ಭಾಗವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಪ್ರಜಾಪ್ರಭುತ್ವದ ಕೊಲೆ’; ನಂದಿಗ್ರಾಮದ ಅಭ್ಯರ್ಥಿ ಬಂಧನಕ್ಕೆ ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

“ನಂದಿಗ್ರಾಮ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗೆ ನಾವು ಬೆಂಬಲ ಸೂಚಿಸಿದ ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಬಂಧಿಸಲಾಯಿತು. ಈ ಬಂಧನದ ಸಮಯವು ಹಲವು ಅನುಮಾನಗಳನ್ನು ಮೂಡಿಸುತ್ತದೆ ಮತ್ತು ಹಳೆಯ ಪ್ರಕರಣವನ್ನು ಹುಡುಕಿ ತೆಗೆಯುವುದು ಬಿಜೆಪಿಯ ಸದಾಕಾಲದ ಸೂತ್ರವಾಗಿದೆ. ಆದರೆ ಈಗ ಏಕೆ? ನಾವು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ತಕ್ಷಣವೇ ಏಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

ನಂದಿಗ್ರಾಮ ಉಪಚುನಾವಣೆಗೆ ಅಕ್ಟೋಬರ್ 6 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9 ರಂದು ಮತ ಎಣಿಕೆ ನಡೆಯಲಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಈ ಕ್ಷೇತ್ರವನ್ನು ತೆರವುಗೊಳಿಸಿದ ನಂತರ ಉಪಚುನಾವಣೆ ಅನಿವಾರ್ಯವಾಯಿತು. ಸುವೇಂದು ಅಧಿಕಾರಿ ಅವರು 2026ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು. ಎರಡೂ ಕ್ಷೇತ್ರಗಳಲ್ಲಿ ಗೆದ್ದ ಅವರು, ಭವಾನಿಪುರ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:52 pm, Mon, 21 September 26

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More