AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿವೃದ್ಧಿ ವಿಚಾರವಾಗಿ ಯುವಕನ ಪ್ರಶ್ನೆ, ಬಿಜೆಪಿ ಶಾಸಕ ಎಂ ಚಂದ್ರಪ್ಪ ಗರಂ: ವಾಗ್ವಾದದ ವಿಡಿಯೋ ವೈರಲ್

ಅಭಿವೃದ್ಧಿ ವಿಚಾರವಾಗಿ ಯುವಕನ ಪ್ರಶ್ನೆ, ಬಿಜೆಪಿ ಶಾಸಕ ಎಂ ಚಂದ್ರಪ್ಪ ಗರಂ: ವಾಗ್ವಾದದ ವಿಡಿಯೋ ವೈರಲ್

ಬಸವರಾಜ ಮುದನೂರ್
| Edited By: |

Updated on: Nov 24, 2026 | 10:27 AM

Share

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೋಗುಂಡೆ ಗ್ರಾಮದಲ್ಲಿ ಅಭಿವೃದ್ಧಿ ವಿಚಾರವಾಗಿ ಪ್ರಶ್ನಿಸಿದ ಯುವಕನ ಜತೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ವಾಗ್ವಾದ ನಡೆಸಿದ್ದಾರೆ. ಮುಚ್ಚುಗನೂರು ರಸ್ತೆ ಕಾಮಗಾರಿಯ ಭೂಮಿಪೂಜೆ ವೇಳೆ ನಡೆದ ಈ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿದೆ. “ದುಡ್ಡು ಕೊಡದೇ ನೀನು ಓಟು ಹಾಕಿಲ್ಲ” ಎಂದ ಶಾಸಕರಿಗೆ ಯುವಕ ತಿರುಗೇಟು ನೀಡಿದ್ದು, ಬಳಿಕ ಪೊಲೀಸರು ಮತ್ತು ಗ್ರಾಮಸ್ಥರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

ಚಿತ್ರದುರ್ಗ, ನವೆಂಬರ್ 24: ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಪ್ರಶ್ನಿಸಿದ ಯುವಕನೊಬ್ಬನ ಜತೆ ಹೊಳಲ್ಕೆರೆ ಬಿಜೆಪಿ ಶಾಸಕ ಎಂ. ಚಂದ್ರಪ್ಪ ವಾಗ್ವಾದ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೋಗುಂಡೆ ಗ್ರಾಮದಲ್ಲಿ ನಡೆದಿದೆ. ಶಾಸಕ ಮತ್ತು ಯುವಕನ ನಡುವಿನ ಮಾತಿನ ಚಕಮಕಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋಗುಂಡೆ ಗ್ರಾಮದಲ್ಲಿ ಮುಚ್ಚುಗನೂರು ರಸ್ತೆ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಯುವಕನೊಬ್ಬ ಶಾಸಕ ಎಂ. ಚಂದ್ರಪ್ಪ ಅವರನ್ನು ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಾದ ಶಾಸಕರು ಯುವಕನ ಜತೆ ಮಾತಿನ ಚಕಮಕಿಗೆ ಇಳಿದಿದ್ದಾರೆ.

ಈ ವೇಳೆ, ‘‘ದುಡ್ಡು ಕೊಡದೇ ನೀನು ಓಟು ಹಾಕಿಲ್ಲ’’ ಎಂದು ಶಾಸಕ ಚಂದ್ರಪ್ಪ ಹೇಳಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಯುವಕ, ‘‘ನಾನೇನು ನಿಮ್ಮ ಮನೆಗೆ ಬಂದು ಹಣ ಕೇಳಿಲ್ಲ’’ ಎಂದು ತಿರುಗೇಟು ನೀಡಿದ್ದಾನೆ. ಅಲ್ಲದೆ, ತನ್ನ ವಿರುದ್ಧ ಮಾತನಾಡಲು ಯುವಕನನ್ನು ಕರೆಸಿದ್ದೀರಾ ಎಂದು ಶಾಸಕರು ಪ್ರಶ್ನಿಸಿದ್ದಾರೆ. ವಾಗ್ವಾದದ ವೇಳೆ ತಮ್ಮ ಕ್ಷೇತ್ರದ ಕೆಲಸಗಳ ಬಗ್ಗೆ ಸಮರ್ಥನೆ ಮಾಡಿಕೊಂಡ ಶಾಸಕ ಚಂದ್ರಪ್ಪ, ‘‘ಗೆದ್ದ ಮೇಲೆ ಗ್ರಾಮದತ್ತ ತಿರುಗಿ ನೋಡದವನು ನಾನಲ್ಲ. ಚುನಾವಣೆಗೆ ಮಾತ್ರ ಗ್ರಾಮಕ್ಕೆ ಬರುವವನೂ ನಾನಲ್ಲ. ನಿಮ್ಮ ಗ್ರಾಮಕ್ಕೆ ಸಾಕಷ್ಟು ಬಾರಿ ಬಂದಿದ್ದೇನೆ. ಕ್ಷೇತ್ರದಲ್ಲಿ 493 ಹಳ್ಳಿಗಳಿದ್ದು, ಒಂದೊಂದು ಗ್ರಾಮಕ್ಕೂ 15ರಿಂದ 20 ಬಾರಿ ಭೇಟಿ ನೀಡಿದ್ದೇನೆ. ಐದು ವರ್ಷ ಕ್ಷೇತ್ರದತ್ತ ತಿರುಗಿ ನೋಡದ ಅಯೋಗ್ಯ ನಾನಲ್ಲ’’ ಎಂದು ಹೇಳಿದ್ದಾರೆ.

ಇದೇ ವೇಳೆ, ಪರೋಕ್ಷವಾಗಿ ಮಾಜಿ ಸಚಿವ ಆಂಜನೇಯ ವಿರುದ್ಧವೂ ಶಾಸಕ ಚಂದ್ರಪ್ಪ ವಾಗ್ದಾಳಿ ನಡೆಸಿದ್ದಾರೆ. ಯುವಕನ ಪ್ರಶ್ನೆಯಿಂದ ಸಿಟ್ಟಾಗಿದ್ದ ಶಾಸಕರು, ಆತನನ್ನು ಕಾರ್ಯಕ್ರಮದಿಂದ ಕಳುಹಿಸುವಂತೆ ಸೂಚಿಸಿದ್ದಾರೆ. ಬಳಿಕ ಪೊಲೀಸರು ಹಾಗೂ ಗ್ರಾಮಸ್ಥರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಶಾಸಕ ಎಂ. ಚಂದ್ರಪ್ಪ ಮತ್ತು ಯುವಕನ ನಡುವಿನ ವಾಗ್ವಾದದ ವಿಡಿಯೋ ಇದೀಗ ವೈರಲ್ ಆಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ ಮುದನೂರ್
ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More