ಕೋಟ್ಯಂತರ ರೂ ವೆಚ್ಚದ ಸರ್ಕಾರಿ ಕಟ್ಟಡ 9 ವರ್ಷಕ್ಕೆ ಅದ್ವಾನ: ಎಲ್ಲೆಡೆ ಬಿರುಕು, ವಿಷಜಂತುಗಳ ಕಾಟ
ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ 2 ಕೋಟಿ ವೆಚ್ಚದ ಸರ್ಕಾರಿ ಕಟ್ಟಡ ಕೇವಲ 9 ವರ್ಷದಲ್ಲೇ ಸಂಪೂರ್ಣ ಶಿಥಿಲವಾಗಿದೆ. ಗೋಡೆಗಳಲ್ಲಿ ಬಿರುಕು, ನೆಲ ಕುಸಿತ, ಹಾವುಗಳ ಕಾಟದಿಂದ ಸಿಬ್ಬಂದಿ ಜೀವಭಯದಲ್ಲೇ ಕೆಲಸ ಮಾಡುತ್ತಿದ್ದಾರೆ. ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎನ್ನಲಾಗಿದ್ದು, ಸಾರ್ವಜನಿಕರು ಸಮಗ್ರ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಗದಗ, ಸೆಪ್ಟೆಂಬರ್ 21: ಗದಗ ನಗರದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಚೇರಿ ಕಟ್ಟಡ ಕೇವಲ ಒಂಬತ್ತು ವರ್ಷಗಳಲ್ಲೇ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಕಚೇರಿಯ ಗೋಡೆಗಳಲ್ಲಿ ದೊಡ್ಡ ದೊಡ್ಡ ಬಿರುಕು ಬಿಟ್ಟಿದ್ದು, ಕುಸಿಯುತ್ತಿರುವ ನೆಲ, ಟೈಲ್ಸ್ ಕಿತ್ತುಬರುತ್ತಿವೆ. ಇಷ್ಟೇ ಅಲ್ಲ, ಬಿರುಕು ಬಿಟ್ಟ ನೆಲದ ಮೂಲಕ ವಿಷಜಂತುಗಳು ಕಚೇರಿಗೆ ಎಂಟ್ರಿ ಕೊಡುತ್ತಿದ್ದು, ಹಾವುಗಳನ್ನ ಕಂಡು ಅಧಿಕಾರಿಗಳು, ಸಿಬ್ಬಂದಿ ದಂಗಾಗಿದ್ದಾರೆ. ನಿತ್ಯ ಜೀವ ಭಯದಲ್ಲೇ ಕೆಲಸ ಮಾಡುವ ದುಸ್ಥಿತಿ ನಿರ್ಮಾಣವಾಗಿದೆ.
ನೆಲದ ಬಿರುಕುಗಳಿಂದ ವಿಷಜಂತುಗಳ ಪ್ರವೇಶ: ಜೀವಭಯದಲ್ಲಿ ಸಿಬ್ಬಂದಿ ಕರ್ತವ್ಯ
ಗದಗ ನಗರದ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ ಕೋಟ್ಯಂತರ ರೂ ವೆಚ್ಚದಲ್ಲಿ ನಿರ್ಮಾಣ ಮಾಡಿ ಕೇವಲ ಒಂಬತ್ತು ವರ್ಷ ಕಳೆದಿದೆ. ಸದ್ಯ ಕಟ್ಟಡದ ಸ್ಥಿತಿ ಸಂಪೂರ್ಣ ಅದ್ವಾನವಾಗಿದೆ. ಕಚೇರಿಯ ಗೋಡೆಗಳು, ನೆಲ ಬಿರುಕು ಬಿಟ್ಟಿದೆ. ಒಂದೊಂದು ಕೋಣೆಯ ಸ್ಥಿತಿ ನೋಡಿದರೂ ಕಟ್ಟಡದ ಗುಣಮಟ್ಟದ ಬಗ್ಗೆ ಅನುಮಾನ ಮೂಡುತ್ತದೆ.
ಇದನ್ನೂ ಓದಿ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ: ಸರ್ಕಾರದ ನೆರವಿಲ್ಲದೆ ಬೆಳೆದು ನಿಂತ ಶಾಲೆಯ ಕಥೆ ಇದು
ಇದು ಕೇವಲ ಬಿರುಕುಗಳ ಸಮಸ್ಯೆಯಲ್ಲ. ಸಿಬ್ಬಂದಿ ಹಾಗೂ ಕಚೇರಿಗೆ ಬರುವ ಸಾರ್ವಜನಿಕರ ಸುರಕ್ಷತೆಯ ಪ್ರಶ್ನೆಯೂ ಆಗಿದೆ. ನೆಲ ಬಿರುಕು ಬಿಟ್ಟಿರುವ ಕಾರಣ ಅದರ ಮೂಲಕ ವಿಷಜಂತುಗಳು ಕಚೇರಿ ಒಳಗೆ ಬರುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಕರ್ತವ್ಯದ ಸಮಯದಲ್ಲೇ ಹಾವು ಪ್ರತ್ಯಕ್ಷವಾಗಿರುವ ಘಟನೆಗಳು ನಡೆದಿವೆ ಎನ್ನಲಾಗಿದೆ. ಹೀಗಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಆತಂಕ ಹಾಗೂ ಭಯದಲ್ಲೇ ಕರ್ತವ್ಯ ನಿರ್ವಹಿಸುವಂತಾಗಿದೆ.
ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿ ಆರೋಪ
2017ರ ನವೆಂಬರ್ 19 ರಂದು ಕಟ್ಟಡ ಉದ್ಘಾಟನೆಯಾಗಿದೆ. ಸುಮಾರು 2 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡಕ್ಕೆ ಈಗ ಒಂಬತ್ತು ವರ್ಷ. ಆದರೆ ಕಟ್ಟಡದ ಸ್ಥಿತಿ ಮಾತ್ರ ಹಲವು ದಶಕಗಳಷ್ಟು ಹಳೆಯ ಕಟ್ಟಡದಂತಿದೆ. ಕೋಟ್ಯಂತರ ರೂ ಖರ್ಚು ಮಾಡಿದ ಕಟ್ಟಡ ಇಷ್ಟು ಬೇಗ ಶಿಥಿಲವಾಗಲು ಕಾರಣವೇನು? ಕಾಮಗಾರಿ ವೇಳೆ ಗುಣಮಟ್ಟದ ವಸ್ತು ಬಳಸಲಾಗಿತ್ತಾ, ತಾಂತ್ರಿಕ ಮೇಲ್ವಿಚಾರಣೆ ಸರಿಯಾಗಿ ನಡೆದಿತ್ತಾ ಅನ್ನೋ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಕಟ್ಟಡವನ್ನು ಸರ್ಕಾರಿ ಸಾಮ್ಯದ ನಿರ್ಮಿತಿ ಕೇಂದ್ರ ನಿರ್ಮಿಸಿದೆ. ಕಳಪೆ ಕಾಮಗಾರಿಯ ಗಂಭೀರ ಆರೋಪ ಕೇಳಿಬಂದಿದೆ.
ಸಮಗ್ರ ತನಿಖೆಗೆ ಸಾರ್ವಜನಿಕರ ಆಗ್ರಹ
ನಿರ್ಮಿತಿ ಕೇಂದ್ರದ ಇಂಜಿನಿಯರ್‌ಗಳು ನೇರವಾಗಿ ಕಾಮಗಾರಿ ಮೇಲ್ವಿಚಾರಣೆ ಮಾಡದೆ, ಕಾಮಗಾರಿಯನ್ನು ಬೇರೆಯವರಿಗೆ ವಹಿಸಲಾಗಿದೆ ಎಂಬ ಆರೋಪವೂ ಇದೆ. ಕಾಮಗಾರಿ ವಹಿಸುವ ಪ್ರಕ್ರಿಯೆಯಲ್ಲಿ ಕಮಿಷನ್ ಪಡೆದು ಕೆಲಸ ಹಸ್ತಾಂತರಿಸಲಾಗುತ್ತದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ಈ ಆರೋಪಗಳ ಸತ್ಯಾಸತ್ಯತೆ ಸಮಗ್ರ ತನಿಖೆಯಿಂದಲೇ ಹೊರಬರಬೇಕಿದೆ.
ಕಟ್ಟಡ ನಿರ್ಮಾಣದಿಂದ ಹಿಡಿದು ಇಂದಿನ ದುಸ್ಥಿತಿವರೆಗೂ ಸಮಗ್ರ ತಾಂತ್ರಿಕ ಪರಿಶೀಲನೆ ನಡೆಯಬೇಕು. ಕಾಮಗಾರಿಯಲ್ಲಿ ಲೋಪ ಕಂಡುಬಂದರೆ, ತಪ್ಪಿತಸ್ಥರು ಯಾರೇ ಆಗಿರಲಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹ. ಈ ಬಗ್ಗೆ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಶಿರೋಳ ಅವರನ್ನು ಕೇಳಿದರೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಫೋನ್ ಕೂಡ ರಿಸೀವ್ ಮಾಡುತ್ತಿಲ್ಲ.
ಇದನ್ನೂ ಓದಿ: ಗದಗ ತಹಶೀಲ್ದಾರ ಕಚೇರಿಯಲ್ಲಿ ಸದಾ ಸರ್ವರ್ ಡೌನ್: ದಾಖಲೆ ಪಡೆಯಲು ದಿನವಿಡೀ ಸರ್ಕಾರಿ ಕಚೇರಿಯಲ್ಲಿ ‘ಕುಸ್ತಿ’!
ಕಾಮಗಾರಿಯ ಗುಣಮಟ್ಟದ ಬಗ್ಗೆ ಕೇಳಿಬರುತ್ತಿರುವ ಆರೋಪಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ. ಸಾರ್ವಜನಿಕರ ಹಣದಲ್ಲಿ ಕಟ್ಟಿದ ಕಟ್ಟಡದ ದುಸ್ಥಿತಿಗೆ ಹೊಣೆ ಯಾರು? ತನಿಖೆ ಯಾವಾಗ? ಕ್ರಮ ಯಾವಾಗ? ಎಂಬ ಪ್ರಶ್ನೆಗಳಿ ಗದಗ ಜಿಲ್ಲಾಡಳಿ ನೀಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




