AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ: ಸರ್ಕಾರದ ನೆರವಿಲ್ಲದೆ ಬೆಳೆದು ನಿಂತ ಶಾಲೆಯ ಕಥೆ ಇದು

ಗದಗ ಜಿಲ್ಲೆಯ ಮುಂಡರಗಿಯ ಎಸ್​ಎಂ ಭೂಮರಡ್ಡಿ ಸರ್ಕಾರಿ ಶಾಲೆ ಸರ್ಕಾರದ ದೊಡ್ಡ ಅನುದಾನವಿಲ್ಲದೆ, ಸಾರ್ವಜನಿಕರ ದೇಣಿಗೆ ಹಾಗೂ ಶಿಕ್ಷಕರ ಪರಿಶ್ರಮದಿಂದ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿದೆ. ಸುಂದರ ವಾತಾವರಣ, ಗುಣಮಟ್ಟದ ಬೋಧನೆಯಿಂದ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಶೇ. 50ರಷ್ಟು ಹೆಚ್ಚಾಗಿದೆ. ಸಮುದಾಯದ ಸಹಭಾಗಿತ್ವದಿಂದ ಸರ್ಕಾರಿ ಶಾಲೆಗಳು ಹೇಗೆ ಮಾದರಿಯಾಗಬಹುದು ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಸರ್ಕಾರಿ ಶಾಲೆ: ಸರ್ಕಾರದ ನೆರವಿಲ್ಲದೆ ಬೆಳೆದು ನಿಂತ ಶಾಲೆಯ ಕಥೆ ಇದು
ಸರ್ಕಾರಿ ಶಾಲೆImage Credit source: tv9 kannada
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Sep 14, 2026 | 3:05 PM

Share

ಗದಗ, ಸೆಪ್ಟೆಂಬರ್​ 14: ಸರ್ಕಾರಿ ಶಾಲೆ ಅಂದರೆ ಮೂಗು ಮುರಿಯುವವರೇ ಹೆಚ್ಚು. ಮಕ್ಕಳಿಲ್ಲದೆ ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿವೆ. ಆದರೆ ಗದಗ ಜಿಲ್ಲೆಯಲ್ಲಿ ಇದಕ್ಕೆ ತದ್ವಿರುದ್ಧವಾದ ಚಿತ್ರಣವೊಂದು ಕಂಡುಬಂದಿದೆ. ಸರ್ಕಾರದ ದೊಡ್ಡ ಮಟ್ಟದ ಅನುದಾನವಿಲ್ಲದೆ, ಸಾರ್ವಜನಿಕರ ಸಹಭಾಗಿತ್ವ ಹಾಗೂ ಶಿಕ್ಷಕರ ಶ್ರಮದಿಂದಲೇ ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ನಿಂತಿದೆ. ಸುಂದರ ಪರಿಸರ, ಗುಣಮಟ್ಟದ ಬೋಧನೆಯಿಂದ ರಾಜ್ಯದಲ್ಲೇ ಗಮನ ಸೆಳೆದಿದೆ. ಅಷ್ಟೇ ಅಲ್ಲ, ಕಳೆದ ವರ್ಷ ಶೇಕಡಾ 50ರಷ್ಟು ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಳದಿಂದ ಜಿಲ್ಲೆಯಲ್ಲಿ ಗಮನ ಸೆಳೆದಿದೆ.

ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆದ ಸರ್ಕಾರಿ ಶಾಲೆ

ಗದಗ ಜಿಲ್ಲೆಯ ಮುಂಡರಗಿ ಪಟ್ಟಣದ ಅನ್ನದಾನೇಶ್ವರ ನಗರದಲ್ಲಿರುವ ಎಸ್​ಎಂ ಭೂಮರಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿ ಬೆಳೆದು ನಿಂತಿದೆ. ಕಳೆದ ವರ್ಷ ಗದಗ ಜಿಲ್ಲೆಯಲ್ಲಿಯೇ ಶೇಕಡಾ 50ರಷ್ಟು ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಳಗೊಂಡ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Re

ಇದನ್ನೂ ಓದಿ: ಕಳಪೆ ಶೂ ಭಾಗ್ಯ: ಗುತ್ತಿಗೆದಾರನನ್ನು ಬಿಟ್ಟು ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚನೆ; ಇದೆಂಥಾ ನಿರ್ಧಾರ?

ಸರ್ಕಾರಿ ಶಾಲೆ ಅಂದರೆ ಮೂಲಭೂತ ಸೌಕರ್ಯಗಳ ಕೊರತೆ ಎನ್ನುವ ಮಾತಿದೆ. ಆದರೆ ಈ ಶಾಲೆಯಲ್ಲಿ ಚಿತ್ರಣವೇ ಬೇರೆ. ಮಕ್ಕಳಿಗೆ ಶುದ್ಧ ಕುಡಿಯುವ ನೀರಿಗಾಗಿ ನೀರಿನ ಯಂತ್ರ. ಶಾಲಾ ಬಳಕೆಗಾಗಿ ಪ್ರತ್ಯೇಕ ಬೋರ್‌ವೆಲ್, ಸುಸಜ್ಜಿತ ಶೌಚಾಲಯ, ಆಟೋಟದ ಸಾಮಗ್ರಿಗಳು, ಪ್ರತಿ ತರಗತಿಯಲ್ಲೂ ಮಕ್ಕಳ ಕಲಿಕೆಗೆ ಪೂರಕವಾಗುವ ಕಲಾಕೃತಿಗಳು, ಟಿವಿ, ಫ್ಯಾನ್ ಸೇರಿದಂತೆ ಹಲವು ಸೌಲಭ್ಯಗಳು ಇವೆ. ಈ ಶಾಲೆಗೆ ಎಸ್​​ಎಂ ಭೂಮರಡ್ಡಿ ಕುಟುಂಬದ ಆಸರೆ ಹೆಚ್ಚಿದೆ.

ಮೂರು ವರ್ಷದಲ್ಲಿ 35 ಲಕ್ಷ ರೂ ದೇಣಿಗೆ 

ಶಾಲಾ ಆವರಣ ಧೂಳು ಮುಕ್ತವಾಗಿರಬೇಕು ಎನ್ನುವ ಉದ್ದೇಶದಿಂದ ಸಿಮೆಂಟ್ ಬ್ಲಾಕ್‌ಗಳನ್ನೂ ಅಳವಡಿಸಲಾಗಿದೆ. ಇನ್ನು ಶಾಲಾ ಆವರಣದಲ್ಲೇ ‘ವನರಂಗ’ ಎಂಬ ಸುಂದರ ವೇದಿಕೆ ನಿರ್ಮಿಸಲಾಗಿದೆ. ಇಷ್ಟೆಲ್ಲಾ ಸೌಲಭ್ಯಗಳು ಒಂದೇ ದಿನದಲ್ಲಿ ನಿರ್ಮಾಣವಾಗಿಲ್ಲ. ಮುಖ್ಯ ಶಿಕ್ಷಕ ಎಂಪಿ ಶೀರನಹಳ್ಳಿ ಹಾಗೂ ಶಾಲಾ ಸಿಬ್ಬಂದಿಯ ಸತತ ಪ್ರಯತ್ನ ಸಾಕಷ್ಟಿದೆ. ಜೊತೆಗೆ ಸಾರ್ವಜನಿಕರ ಸಹಭಾಗಿತ್ವ. ಇದರ ಫಲವಾಗಿ ಕಳೆದ ಮೂರು ವರ್ಷಗಳಲ್ಲಿ ಈ ಶಾಲೆಗೆ ಬರೋಬ್ಬರಿ 35 ಲಕ್ಷ ರೂ ದೇಣಿಗೆ ಹರಿದು ಬಂದಿದೆ.

LIVE TV

ಈ ದೇಣಿಗೆಯ ಹಣದಲ್ಲೇ ಎರಡು ಸುಸಜ್ಜಿತ ಕಲಿಕಾ ಕೊಠಡಿಗಳು ಸೇರಿದಂತೆ ಶಾಲೆಗೆ ಅಗತ್ಯವಿರುವ ಬಹುತೇಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸರ್ಕಾರಿ ಶಾಲೆಯನ್ನೂ ಸಮುದಾಯವೇ ತನ್ನ ಶಾಲೆ ಎಂದು ಭಾವಿಸಿದ್ರೆ, ಅದರ ಚಿತ್ರಣ ಹೇಗೆ ಬದಲಾಗಬಹುದು ಅನ್ನೋದಕ್ಕೆ ಈ ಶಾಲೆಯೇ ಸಾಕ್ಷಿಯಾಗಿದೆ.

ಮಕ್ಕಳ ಸಂಖ್ಯೆ ಬರೋಬ್ಬರಿ 482ಕ್ಕೆ ಏರಿಕೆ

ಇನ್ನು ಈ ಶಾಲೆಯ ಜನಪ್ರಿಯತೆ ಎಷ್ಟಿದೆ ಅನ್ನೋದಕ್ಕೆ ವಿದ್ಯಾರ್ಥಿಗಳ ಸಂಖ್ಯೆಯೇ ಸಾಕ್ಷಿ. ಕಳೆದ ವರ್ಷ 320 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ. ಈ ವರ್ಷ ಮಕ್ಕಳ ಸಂಖ್ಯೆ ಬರೋಬ್ಬರಿ 482ಕ್ಕೆ ಏರಿಕೆಯಾಗಿದೆ. ಇದು ಈ ಶಾಲೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ಪ್ರವೇಶಕ್ಕಾಗಿ ಬಂದ ಹಲವು ವಿದ್ಯಾರ್ಥಿಗಳಿಗೆ ಸೀಟು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸೌಲಭ್ಯ, ಸ್ವಚ್ಛತೆ, ಗುಣಮಟ್ಟದ ಕಲಿಕಾ ವಾತಾವರಣ. ಇವೆಲ್ಲವೂ ಪೋಷಕರನ್ನ ಸರ್ಕಾರಿ ಶಾಲೆಯತ್ತ ಸೆಳೆಯುತ್ತಿವೆ.

ಪಾಠದ ಜೊತೆಗೆ ಮಕ್ಕಳಿಗೆ ಪರಿಸರದ ಬಗ್ಗೆ ಅರಿವು

ಮಕ್ಕಳಿಗೆ ಪಾಠದ ಜೊತೆಗೆ ಪರಿಸರದ ಬಗ್ಗೆ ಅರಿವು ಮೂಡಿಸಲು ಎರೆಹುಳು ತೊಟ್ಟಿ, ಆಟದ ಮೂಲಕ ಕಲಿಯಲು ಆಟೋಟದ ಸಾಮಗ್ರಿಗಳು, ಮಕ್ಕಳ ಪ್ರತಿಭೆ ಅನಾವರಣಕ್ಕೆ ವನರಂಗ ವೇದಿಕೆ, ಇನ್ನು ಮಧ್ಯಾಹ್ನದ ಬಿಸಿಯೂಟಕ್ಕೂ ವ್ಯವಸ್ಥೆ ಅಚ್ಚುಕಟ್ಟಾಗಿದೆ. ಶಾಲೆಯ ಸ್ವಚ್ಛ ಆವರಣದಲ್ಲೇ ಮಕ್ಕಳು ಒಟ್ಟಾಗಿ ಕುಳಿತು ಬಿಸಿಯೂಟ ಸವಿಯುತ್ತಾರೆ. ಇದರಿಂದ ಶಾಲೆ ಅನ್ನೋದು ಕೇವಲ ಪಾಠ ಕಲಿಸುವ ಸ್ಥಳವಾಗದೆ. ಮಕ್ಕಳು ಖುಷಿಯಿಂದ ಕಲಿಯುವ ಜ್ಞಾನ ದೇಗುಲವಾಗಿ ಬದಲಾಗಿದೆ.

Gdg (1)

ಇಂದಿನ ದಿನಗಳಲ್ಲಿ ಶಿಕ್ಷಣವೂ ದೊಡ್ಡ ಮಟ್ಟದ ವ್ಯವಹಾರವಾಗಿ ಬದಲಾಗ್ತಿದೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕ. ವಿವಿಧ ಹೆಸರಿನ ಫೀಸ್‌ಗಳು, ಇವೆಲ್ಲದರ ನಡುವೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರಿ ಶಾಲೆಗಳೇ ದೊಡ್ಡ ಆಶಾಕಿರಣ. ಆದರೆ ಸರ್ಕಾರಿ ಶಾಲೆ ಅಂದರೆ ಗುಣಮಟ್ಟ ಕಡಿಮೆ ಎನ್ನುವ ಭಾವನೆ ಬದಲಾಗಬೇಕಿದೆ.

ಇದನ್ನೂ ಓದಿ: ಬೆಂಗಳೂರಿನ ಟ್ರಾಫಿಕ್ ದಟ್ಟಣೆ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ!

ಒಂದು ಕಾಲದಲ್ಲಿ ಮಕ್ಕಳನ್ನ ಹುಡುಕುತ್ತಿದ್ದ ಸರ್ಕಾರಿ ಶಾಲೆ, ಇಂದು ಮಕ್ಕಳನ್ನ ದಾಖಲಿಸಿಕೊಳ್ಳಲು ಜಾಗ ಹುಡುಕುವಂತಾಗಿದೆ. ಸರ್ಕಾರದ ಅನುದಾನವೊಂದನ್ನೇ ಅವಲಂಬಿಸದೆ ಶಿಕ್ಷಕರು ಮತ್ತು ಸಾರ್ವಜನಿಕರ ಸಹಭಾಗಿತ್ವದಿಂದ ಶಾಲೆ ಬೆಳೆದು ನಿಂತಿದೆ. ಸರ್ಕಾರಿ ಶಾಲೆ ಅಂದರೆ ಹೀಗಿರಬೇಕು ಅನ್ನೋ ಮಾದರಿ ನಿರ್ಮಿಸಿದೆ. ಸರ್ಕಾರಿ ಶಾಲೆಗಳ ಬಗ್ಗೆ ಇರುವ ನಕಾರಾತ್ಮಕ ಭಾವನೆ ಬದಲಾಗಬೇಕಾದರೆ ಮುಂಡರಗಿಯ ಎಸ್.ಎಂ. ಭೂಮರಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂತಹ ಜ್ಞಾನ ದೇಗುಲಗಳು ಇನ್ನಷ್ಟು ಹೆಚ್ಚಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us