‘ಗಾಂಧಿಗಿರಿ’ ಭಾಷಣಕ್ಕೆ ಟೀಕೆ: ಸ್ಪಷ್ಟನೆ ಕೊಟ್ಟ ಸಂಜಯ್ ದತ್
ಬಾಲಿವುಡ್ ನಟ ಸಂಜಯ್ ದತ್ ಅವರು ಇತ್ತೀಚೆಗಷ್ಟೆ ಶೇಖರ್ ಸುಮನ್ ನಡೆಸಿಕೊಡುವ ಶೋ ಒಂದಕ್ಕೆ ಅತಿಥಿಯಾಗಿ ಹೋಗಿದ್ದರು. ಅಲ್ಲಿ ಅವರು ಆಡಿದ್ದ ಮಾತುಗಳು ಬಿಜೆಪಿ ಬೆಂಬಲಿಗರನ್ನು ಕೆರಳಿಸಿದೆ. ಇದೀಗ ಸಂಜಯ್ ದತ್ ಅವರು ಆ ಬಗ್ಗೆ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಜಯ್ ದತ್ ಏನು ಮಾತನಾಡಿದ್ದರು? ವಿವಾದ ಆಗಲು ಕಾರಣ ಏನು? ಗಾಂಧಿಗಿರಿ ಭಾಷಣಕ್ಕೆ ಕೊಟ್ಟ ಸ್ಪಷ್ಟನೆ ಏನು? ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಬಾಲಿವುಡ್ ನಟ ಸಂಜಯ್ ದತ್ ಸ್ಪಷ್ಟನೆ
- ಸರ್ಕಾರವನ್ನು ಲಘುವಾಗಿ ಟೀಕೆ ಮಾಡಿದ್ದ ನಟ
- ‘ಗಾಂಧಿಗಿರಿ’ ಭಾಷಣದ ಬಗ್ಗೆ ನಟನ ಸ್ಪಷ್ಟನೆ
ಬಾಲಿವುಡ್ ನಟ ಸಂಜಯ್ ದತ್ ವಿವಾದದ ಕೇಂದ್ರ ಬಿಂದು ಆಗಿದ್ದಾರೆ. ಈ ಹಿಂದೆ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಲ್ಲಿದ್ದು, ಜೈಲಿಗೆ ಸಹ ಹೋಗಿ ಬಂದಿರುವ ಸಂಜಯ್ ದತ್ ಅವರು ಈಗ ಸರ್ಕಾರವನ್ನು ಪರೋಕ್ಷವಾಗಿ ಟೀಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಸಂಜಯ್ ದತ್ ಅವರು ಇತ್ತೀಚೆಗಷ್ಟೆ ಶೇಖರ್ ಸುಮನ್ ನಡೆಸಿಕೊಡುವ ಶೋ ಒಂದಕ್ಕೆ ಅತಿಥಿಯಾಗಿ ಹೋಗಿದ್ದರು. ಅಲ್ಲಿ ಅವರು ಆಡಿದ್ದ ಮಾತುಗಳು ಬಿಜೆಪಿ ಬೆಂಬಲಿಗರನ್ನು ಕೆರಳಿಸಿದೆ. ಇದೀಗ ಸಂಜಯ್ ದತ್ ಅವರು ಆ ಬಗ್ಗೆ ಸ್ಪಷ್ಟನೆಯನ್ನು ಸಹ ನಿಡಿದ್ದಾರೆ.
ಸಂಜಯ್ ದತ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ, ತಾವು ಪಿಎಂ ಆದರೆ ಏನು ಮಾಡುವುದಾಗಿ ತಮ್ಮ ಬಲು ಜನಪ್ರಿಯ ಪಾತ್ರವಾದ ‘ಮುನ್ನಾಭಾಯಿ’ ರೀತಿಯಲ್ಲಿ ಹೇಳಿದ್ದರು. ಈ ವೇಳೆ ಅವರು ಆಡಿದ ಮಾತುಗಳು ಹಾಲಿ ಸರ್ಕಾರವನ್ನು ಪರೋಕ್ಷವಾಗಿ ಟೀಕೆ ಮಾಡಿದಂತಿತ್ತು. ತಾವು ಎಲ್ಲರನ್ನೂ ಒಳಗೊಂಡಂತೆ ಸರ್ಕಾರ ನಡೆಸುವುದಾಗಿ, ‘ನಮ್ಮವರನ್ನು ಮಾತ್ರವೇ ಅಲ್ಲದೆ, ಎಲ್ಲರನ್ನೂ ನಮ್ಮವರನ್ನಾಗಿ ನೋಡುವುದಾಗಿ’ ಸಂಜಯ್ ದತ್ ಹೇಳಿದ್ದರು. ವಿದೇಶ ಪ್ರವಾಸಕ್ಕಿಂತಲೂ ದೇಶದ ನಾಗರೀಕರ ಜೊತೆಗೆ ಹೆಚ್ಚಿಗೆ ಬೆರೆಯುವುದಾಗಿ ಅವರು ಮುನ್ನಾಭಾಯಿ ಶೈಲಿಯಲ್ಲಿ ಅವರು ಹೇಳಿದ್ದರು.
‘ನಮ್ಮ ದೇಶ ಅದ್ಭುತವಾದ ದೇಶ ಆದರೆ ಈ ದೇಶದಲ್ಲಿ ಮೊದಲು ಇದ್ದಂತೆ ಶಾಂತಿ ಈಗ ಇಲ್ಲವಾಗಿದೆ. ಮೊದಲು ಇದ್ದಂಥ ರೀತಿಯ ಶಾಂತಿ ಈಗ ಮತ್ತೆ ಬರಬೇಕೆಂದು ನಾನು ದೇವರಲ್ಲಿ ಕೇಳಿಕೊಳ್ಳುತ್ತೀನಿ’ ಎಂದು ಸಂಜಯ್ ದತ್ ಹೇಳಿದ್ದರು. ಸಂಜಯ್ ದತ್ ಅವರು ತಮ್ಮೆದುರಿಗೆ ಇದ್ದ ಟೆಲಿಪ್ರಾಂಫ್ಟರ್ ನೋಡಿಕೊಂಡು ಡೈಲಾಗ್ ಹೇಳುತ್ತಿದ್ದಾರೆ ಎಂಬುದು ವಿಡಿಯೋದಿಂದ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ ಇದೀಗ ಸಂಜಯ್ ದತ್ ಅವರು ಹಾಲಿ ಸರ್ಕಾರವನ್ನು ಟೀಕೆ ಮಾಡಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ:ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಆನ್ಲೈನ್ ಟ್ರೋಲಿಂಗ್ ಶುರುವಾಗುತ್ತಿದ್ದು ಆ ಬಗ್ಗೆ ಸ್ಪಷ್ಟನೆ ನೀಡಿರುವ ಸಂಜಯ್ ದತ್, ‘ಯಾವುದೇ ವ್ಯಕ್ತಿ, ಸಮುದಾಯ ಅಥವಾ ಸಂಸ್ಥೆಯ ಭಾವನೆಗಳಿಗೆ ನೋವುಂಟು ಮಾಡುವುದು, ಅವಮಾನಿಸುವುದು ಅಥವಾ ಅಗೌರವ ತೋರುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಆಡಿದ ಮಾತುಗಳು, ಹಗುರವಾದ ಮತ್ತು ಹಾಸ್ಯ ಭರಿತವಾಗಿರಬೇಕೆಂಬ ಉದ್ದೇಶದಿಂದ ರೂಪಿಸಲಾದ ಸಂಭಾಷಣೆಯ ಭಾಗವಾಗಿದ್ದವು. ‘ಮುನ್ನಾ ಭಾಯ್’ ಚಲನಚಿತ್ರಗಳಲ್ಲಿ ಕಂಡುಬರುವ ಹಾಸ್ಯ ಮತ್ತು ವ್ಯಂಗ್ಯದಂತೆಯೇ, ಅದರಲ್ಲೂ ವಿಶೇಷವಾಗಿ ಪ್ರೀತಿ, ಆತ್ಮೀಯತೆ, ಒಗ್ಗಟ್ಟು ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ‘ಗಾಂಧಿಗಿರಿ’ ಪರಿಕಲ್ಪನೆಯಂತೆಯೇ ಈ ಮಾತುಗಳ ಹಿಂದಿನ ಆಶಯವೂ ಇತ್ತು. ದುರದೃಷ್ಟವಶಾತ್, ನನ್ನ ಮಾತುಗಳನ್ನು ಆ ಮೂಲ ಉದ್ದೇಶಿತ ಸಂದರ್ಭದಿಂದ ಹೊರತಾಗಿ ತಪ್ಪಾಗಿ ಅರ್ಥೈಸಲಾಗಿದೆ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:16 pm, Sun, 4 October 26




