AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ HIV ಹೆಚ್ಚಳ: ಆತಂಕಗೊಂಡು ಸ್ವಯಂ ತಪಾಸಣೆಗೆ ಒಳಪಟ್ಟ ಯುವಕ-ಯುವತಿಯರು

ಯುವ ಸಮೂಹದಲ್ಲಿ ಹೆಚ್ಚುತ್ತಿರುವ HIV ಸೋಂಕು ತಡೆಗೆ ಆರೋಗ್ಯ ಇಲಾಖೆಯ QR ಕೋಡ್ ಸ್ವಯಂ ತಪಾಸಣೆ ಅಭಿಯಾನ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಕರ್ನಾಟಕದಲ್ಲಿ ಆರಂಭವಾದ ಈ ಕಾರ್ಯಕ್ರಮದ ಮೂಲಕ 6 ಲಕ್ಷಕ್ಕೂ ಹೆಚ್ಚು ಜನರು ತಮ್ಮ ಆರೋಗ್ಯವನ್ನು ಸ್ಕ್ಯಾನ್ ಮಾಡಿಕೊಂಡಿದ್ದು, 5 ಸಾವಿರ ಮಂದಿ HIV ಅಪಾಯದಲ್ಲಿರುವುದು ಪತ್ತೆಯಾಗಿದೆ.

ಬೆಂಗಳೂರಿನಲ್ಲಿ HIV ಹೆಚ್ಚಳ: ಆತಂಕಗೊಂಡು ಸ್ವಯಂ ತಪಾಸಣೆಗೆ ಒಳಪಟ್ಟ ಯುವಕ-ಯುವತಿಯರು
ಪ್ರಾತಿನಿಧಿಕ ಚಿತ್ರImage Credit source: Getty images
ವಿನಯ್​ ಕಾಶಪ್ಪನವರ್​
| Edited By: |

Updated on: Oct 04, 2026 | 8:44 PM

Share

ಮುಖ್ಯಾಂಶಗಳು

  • ರಾಜ್ಯದಲ್ಲಿ ಹೆಚ್​ಐವಿ ಸೋಂಕು ಕಡಿವಾಣಕ್ಕೆ ಆರೋಗ್ಯ ಇಲಾಖೆ ದಿಟ್ಟ ಹೆಜ್ಜೆ
  • QR ಕೋಡ್ ಸೆಲ್ಫ್ ಅಸೆಸ್ಮೆಂಟ್ ಅಭಿಯಾನಕ್ಕೆ ಭರ್ಜರಿ ಸ್ಪಂದನೆ
  • 6 ಲಕ್ಷ ಜನರಿಂದ ಸ್ವಯಂ ತಪಾಸಣೆ

ಬೆಂಗಳೂರು, ಅಕ್ಟೋಬರ್​​​ 04: ಯುವ ಸಮೂಹದಲ್ಲಿ ಹೆಚ್​​ಐವಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಯುವಕ-ಯುವತಿಯರಲ್ಲಿ ಆತಂಕ ಹೆಚ್ಚಾಗಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಹೆಚ್​​ಐವಿ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಕೈಗೊಂಡಿರುವ ಕ್ಯೂಆರ್​ ಕೋಡ್ ಸೆಲ್ಫ್ ಅಸೆಸ್ಮೆಂಟ್ ಅಭಿಯಾನಕ್ಕೆ ದಾಖಲೆ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬರೋಬ್ಬರಿ 6 ಲಕ್ಷ ಜನ ಕ್ಯೂಆರ್​ ಕೋಡ್ ಸ್ಕ್ಯಾನ್ ಮಾಡಿ ತಾವೇ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರೆ ಇನ್ನು 5 ಸಾವಿರ ಜನರು ರಿಸ್ಕ್​ನಲ್ಲಿದ್ದಾರೆ.

ಹೆಚ್​ಐವಿ ಸೋಂಕಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೆಚ್​ಐವಿ ಪ್ರಕರಣಗಳು ಹೆಚ್ಚಳವಾಗಿವೆ. ಯುವ ಸಮೂಹದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಸೋಂಕಿಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಈ ರೀತಿಯ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲಾಗಿದೆ. ಕಾಲೇಜುಗಳು, ವಿಶ್ವವಿದ್ಯಾಲಯಗಳು, ಇಂಡಸ್ಟ್ರೀಸ್, ಬಸ್ ನಿಲ್ದಾಣಗಳು, ಹಾಸ್ಟೆಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಹೆಚ್​ಐವಿ ಜಾಗೃತಿ ಕ್ಯೂಆರ್​ ಕೋಡ್ ಅಳವಡಿಸಲಾಗಿತ್ತು.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹವಾಮಾನ ವೈಪರೀತ್ಯ: ವೈರಲ್ ಜ್ವರಕ್ಕೆ ಬೆಚ್ಚಿಬಿದ್ದ ಬೆಂಗಳೂರಿಗರು, ಆಸ್ಪತ್ರೆಗಳಲ್ಲಿ ರೋಗಿಗಳ ದಂಡು!

ಕ್ಯೂಆರ್ ಕೋಡ್ ಮೂಲಕ ಜನರಿಗೆ ತಪಾಸಣೆ ಮಾಡಿಕೊಳ್ಳಲು ಉತ್ತೇಜಿಸಲಾಗಿತ್ತು. ಈ ಕ್ಯೂಆರ್​ ಕೋಡ್​ನಲ್ಲಿ ಸುಮಾರು 6 ಪ್ರಶ್ನೆಗಳನ್ನು ಕೇಳಲಾಗಿದೆ. ನೀವು ರಿಸ್ಕ್ ಝೋನ್​ನಲ್ಲಿದ್ದೀರಾ? ಅಥವಾ ಸುರಕ್ಷಿತವಾಗಿದ್ದೀರಾ? ಎಂಬುದನ್ನು ಈ ಪ್ರಶ್ನೆಗಳ ಮೂಲಕ ತಿಳಿದುಕೊಳ್ಳಬಹುದು. ಸ್ಕ್ಯಾನ್ ಮಾಡಿದ ಬಳಿಕ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಉಚಿತ ಸಮಾಲೋಚನೆ ಮತ್ತು ತಪಾಸಣೆ ಮಾಡಿಸಿಕೊಳ್ಳಲು ಈ ಯೋಜನೆ ರೂಪಿಸಲಾಗಿತ್ತು.

ದಾಖಲೆ ಸ್ಕ್ಯಾನಿಂಗ್: 6 ಲಕ್ಷ ಜನರಿಂದ ಟೆಸ್ಟ್

ಯುವಕರಲ್ಲಿ ಹೆಚ್ಚುತ್ತಿರುವ ಅಸುರಕ್ಷಿತ ಲೈಂಗಿಕ ಸಂಪರ್ಕ ಹಿನ್ನೆಲೆಯಲ್ಲಿ ಹೆಚ್​​ಐವಿ ಪ್ರಕರಣಗಳು ಹೆಚ್ಚುತ್ತಿವೆ ಎಂಬ ವರದಿಗಳು ಕಂಡಬಂದಿವೆ. ಹೀಗಾಗಿ ಖಾಸಗಿತನಕ್ಕೆ ಧಕ್ಕೆ ಆಗದಂತೆ, ಯಾರಿಗೂ ಗೊತ್ತಾಗದಂತೆ ತಾವೇ ಮನೆಯಲ್ಲೇ ಕುಳಿತು ತಮ್ಮ ಆರೋಗ್ಯದ ಬಗ್ಗೆ ಅರಿತುಕೊಳ್ಳಲು ಈ ಕ್ಯೂಆರ್​ ವ್ಯವಸ್ಥೆ ಸಹಾಯಕವಾಗಿದೆ. ಜನರು ಸ್ವಯಂ ತಪಾಸಣೆಗೆ ಅನಕೂವಾಗುವಂತೆ ಸಾರ್ವಜನಿಕ ಸ್ಥಳಗಳಲ್ಲಿ ಈ ಕ್ಯೂಆರ್​ ಅಳವಡಿಲಾಗಿದ್ದು, ದಾಖಲೆಯ 6 ಲಕ್ಷ ಜನರು ತಪಾಸಣೆಗೆ ಒಳಪಟ್ಟಿದ್ದು, ಈ ಪೈಕಿ 5 ಸಾವಿರ ಜನರಲ್ಲಿ ಹೆಚ್​​ಐವಿ ರಿಸ್ಕ್ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಸ್ತುತ ಹೆಚ್ಐವಿ ಸೊಂಕಿತರ ವಿವರ

ಆರೋಗ್ಯ ಇಲಾಖೆಯ ಪ್ರಸ್ತುತ ಅಂಕಿಅಂಶಗಳ ಪ್ರಕಾರ, 0 ಯಿಂದ 18 ವರ್ಷ ವಯಸ್ಸಿನವರಲ್ಲಿ 2,207 ಹೆಣ್ಣುಮಕ್ಕಳು ಹಾಗೂ 2,566 ಗಂಡುಮಕ್ಕಳು ಸೇರಿದಂತೆ ಒಟ್ಟು 4,774 ಸೋಂಕಿತರಿದ್ದಾರೆ. ಇನ್ನು 18 ರಿಂದ 30 ವರ್ಷದೊಳಗಿನವರ ಪೈಕಿ 10,223 ಮಹಿಳೆಯರು, 11,811 ಪುರುಷರು ಹಾಗೂ 193 ತೃತೀಯಲಿಂಗಿಗಳು ಸೇರಿದಂತೆ ಒಟ್ಟು 22,227 ಮಂದಿ ಸೋಂಕಿತರಾಗಿದ್ದಾರೆ. ಇನ್ನು 4,70,104 ಗರ್ಭಿಣಿಯರನ್ನು ತಪಾಸಣೆಗೆ ಒಳಪಡಿಸಿದಾಗ 170 ಪ್ರಕರಣಗಳು ಪತ್ತೆಯಾಗಿವೆ.

LIVE TV

ಗೌಪ್ಯತೆಗೆ ಸಂಪೂರ್ಣ ಭರವಸೆ ನೀಡಲಾಗಿದೆ. ಸ್ಕ್ಯಾನ್ ಮಾಡಿದವರ ಯಾವುದೇ ವೈಯಕ್ತಿಕ ಮಾಹಿತಿ, ಮೊಬೈಲ್ ನಂಬರ್ ಅಥವಾ ಹೆಸರನ್ನು ಎಲ್ಲಿಯೂ ಹಂಚಿಕೊಳ್ಳುವುದಿಲ್ಲ. ಎಲ್ಲಾ ಮಾಹಿತಿ ಗೌಪ್ಯವಾಗಿರುತ್ತದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಈ ಕಾರಣದಿಂದಲೇ ಲಕ್ಷಾಂತರ ಯುವಕರು ಆಸಕ್ತಿ ತೋರಿ ಸೆಲ್ಫ್ ಅಸೆಸ್ಮೆಂಟ್​ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ನಾಯಿಯೆಂದು ನಿರ್ಲಕ್ಷ್ಯಿಸಬೇಡಿ: ರೇಬಿಸ್ ವೈರಸ್ ಬಗ್ಗೆ ತಜ್ಞರಿಂದ ಗಂಭೀರ ಎಚ್ಚರಿಕೆ

ಹೆಚ್​​ಐವಿ ಬಂದರೆ ಜೀವನ ಮುಗಿಯಿತು ಎಂಬ ಭಯ ಬೇಡ, ಆರಂಭದಲ್ಲೇ ಪತ್ತೆ ಹಚ್ಚಿದರೆ ಚಿಕಿತ್ಸೆ ಮೂಲಕ ನಿಯಂತ್ರಿಸಬಹುದು. ಈ ಕ್ಯೂಆರ್​ ಕೋಡ್ ಅಭಿಯಾನ ಯುವಕರಲ್ಲಿ ಜಾಗೃತಿ ಮೂಡಿಸಿದ್ದು, ಹೆಚ್​​ಐವಿ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More