ಕಳಪೆ ಶೂ ಭಾಗ್ಯ: ಗುತ್ತಿಗೆದಾರನನ್ನು ಬಿಟ್ಟು ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚನೆ; ಇದೆಂಥಾ ನಿರ್ಧಾರ?
ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಾಲೆ ಶುರುವಾಗಿ ಮೂರು ತಿಂಗಳ ಬಳಿಕ ವಿತರಣೆ ಮಾಡಿದ್ದ ಉಚಿತ ಶೂಗಳು ಮೂರೇ ದಿನದಲ್ಲಿ ಹರಿದು ಹೋಗಿದ್ದವು. ಈ ಕುರಿತು ಲೋಕಾಯುಕ್ತ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಆದರೆ, ರಾಜ್ಯಮಟ್ಟದಲ್ಲಿ ಟೆಂಡರ್ ಮೂಲಕ ನಡೆದ ಖರೀದಿ ಪ್ರಕ್ರಿಯೆಯ ಅಕ್ರಮಕ್ಕೆ ಜಿಲ್ಲಾಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚಿಸಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಧಾರವಾಡ, ಸೆಪ್ಟೆಂಬರ್ 13: ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ನೀಡುವ ರಾಜ್ಯ ಸರಕಾರದ ಮಹತ್ವದ ಯೋಜನೆಯಲ್ಲಿ ಈ ಬಾರಿ ದೊಡ್ಡ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಶೂ ಧರಿಸಿದ ಮೂರೇ ದಿನಗಳಲ್ಲಿ ಅವು ಹರಿದು ಹೋಗಿದ್ದವು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಿತ್ತರವಾಗುತ್ತಿದ್ದಂತೆಯೇ ಲೋಕಾಯುಕ್ತರು ಸ್ವಯಂ ಪ್ರೇರಿತರಾಗಿ ಕೇಸ್ ದಾಖಲಿಸಿಕೊಂಡಿದ್ದರು. ಆದರೆ ಲೋಕಾಯುಕ್ತರ ನಡೆ ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದಂತೆ ಎನ್ನುವ ಮಾತಿಗೆ ಸಾಕ್ಷಿಯಾಗಿದೆ.
ರಾಜ್ಯಮಟ್ಟದ ಟೆಂಡರ್‌ನಿಂದ ಕಳಪೆ ಶೂ ಪೂರೈಕೆ ಆರೋಪ
ರಾಜ್ಯ ಸರಕಾರ ಪ್ರತಿವರ್ಷ ಸರಕಾರಿ ಶಾಲಾ ಮಕ್ಕಳಿಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್ ಗಳನ್ನು ನೀಡುತ್ತದೆ. ಇದುವರೆಗೆ ಇವುಗಳನ್ನು ಖರೀದಿಸಲು ಆಯಾ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸುಧಾರಣಾ ಸಮಿತಿಯವರಿಗೆ ಅಧಿಕಾರ ನೀಡಲಾಗಿತ್ತು. ಆದರೆ ಪ್ರತಿವರ್ಷ ಖರೀದಿ ಪ್ರಕ್ರಿಯೆ ವಿಳಂಬವಾಗುತ್ತಿದೆ ಅಂತಾ ರಾಜ್ಯ ಸರಕಾರ ಈ ವರ್ಷ ರಾಜ್ಯಮಟ್ಟದಲ್ಲಿಯೇ ಟೆಂಡರ್ ಕರೆದು ಗುತ್ತಿಗೆ ನೀಡಿದೆ. ಆದರೆ ಈ ಬಾರಿ ಗುತ್ತಿಗೆ ಪಡೆದಿದ್ದ ಕಂಪನಿಯವರು ನೀಡಿರುವ ಶೂಗಳ ಸ್ಥಿತಿ ಮಾತ್ರ ಹೇಳತೀರದಾಗಿದೆ.
ಉಪಲೋಕಾಯುಕ್ತರಿಂದ ಸುಮೋಟೋ ಕೇಸ್ ದಾಖಲು
ಶಾಲೆಗಳು ಆರಂಭವಾಗಿ ಮೂರು ತಿಂಗಳ ಬಳಿಕ ಶೂ ವಿತರಣೆ ಮಾಡಲಾಗಿತ್ತು. ಆದರೆ ಪೂರೈಕೆಯಾಗಿದ್ದ ಶೂಗಳು ಕಳಪೆ. ಟಿವಿ9 ಈ ಬಗ್ಗೆ ವಿಸ್ತ್ರತ ವರದಿಯನ್ನು ಮಾಡಿತ್ತು. ಆ ಹಿನ್ನೆಲೆಯಲ್ಲಿ ಇದೀಗ ಉಪ ಲೋಕಾಯುಕ್ತ ನ್ಯಾ. ಫಣೀಂದ್ರ ಅವರು ಸ್ವಯಂ ಪ್ರೇರಿತ ಕೇಸ್ ದಾಖಲಿಸಲು ಸೂಚಿಸಿದ್ದಾರೆ. ಇದರಿಂದಾಗಿ ಅಕ್ರಮ ಎಸಗಿದವರ ವಿರುದ್ಧ ಕ್ರಮ ಆಗುತ್ತೆ ಎಂದು ಪೋಷಕರು ಖುಷಿಯಾಗಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಶೂ ಭಾಗ್ಯ: ಒಂದೇ ವಾರದಲ್ಲಿ ಬಯಲಾಯ್ತು ಅಸಲಿ ಗುಣಮಟ್ಟ!
ಲೋಕಾಯುಕ್ತರ ಈ ನಿರ್ಧಾರದಿಂದ ಪೋಷಕರು ಹಾಗೂ ಅವರ ಮಕ್ಕಳಿಗೆ ಸಮಾಧಾನವೇನೋ ಆಗಿದೆ. ಆದರೆ ಇಲ್ಲಿ ಅಚ್ಚರಿಗೊಳಗಾದವರು ಶಿಕ್ಷಣ ಇಲಾಖೆ, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು. ಏಕೆಂದರೆ ಈ ಬಾರಿ ಶೂ ಹಾಗೂ ಸಾಕ್ಸ್ ಖರೀದಿ ಅಧಿಕಾರವನ್ನು ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸುಧಾರಣಾ ಸಮಿತಿಯವರಿಗೆ ನೀಡಿರಲಿಲ್ಲ. ಬದಲಾಗಿ ಕೇಂದ್ರಿಕೃತ ವ್ಯವಸ್ಥೆಯಲ್ಲಿ ಶೂ ಹಾಗೂ ಸಾಕ್ಸ್ ಗಳನ್ನು ಖರೀದಿಸಲಾಗಿದೆ.
ಡಿಡಿಪಿಐ, ಬಿಇಒಗಳ ಮೇಲೆ ಕ್ರಮಕ್ಕೆ ಅಧಿಕಾರಿಗಳ ಅಸಮಾಧಾನ
ರಾಜ್ಯಮಟ್ಟದಲ್ಲಿಯೇ ಟೆಂಡರ್ ಕರೆದು ಈ ಪ್ರಕ್ರಿಯೆಯನ್ನು ಮಾಡಲಾಗಿದೆ. ರಾಜ್ಯಮಟ್ಟದಲ್ಲಿ ಗುತ್ತಿಗೆ ಪಡೆದವರೇ ಎಲ್ಲಾ ಶಾಲೆಗಳಿಗೆ ಶೂ ಪೂರೈಕೆ ಮಾಡಿದ್ದಾರೆ. ಇಲ್ಲಿರುವ ಸಿಬ್ಬಂದಿಗೆ ಅವುಗಳನ್ನು ಸ್ವೀಕರಿಸೋದಷ್ಟೇ ಕೆಲಸ. ಆದರೆ ಇದೀಗ ಉಪಲೋಕಾಯುಕ್ತರು ನೀಡಿರುವ ಸೂಚನೆಯಂತೆ ಜಿಲ್ಲೆಗಳ ಡಿಡಿಪಿಐ ಹಾಗೂ ಎಲ್ಲಾ ಬಿಇಓಗಳ ಮೇಲೆ ಕೇಸ್ ದಾಖಲು ಮಾಡಬೇಕಿದೆ. ಅಚ್ಚರಿಯ ಸಂಗತಿ ಎಂದರೆ ಶೂ ಖರೀದಿಯಲ್ಲಿ ಇವರ ಪಾತ್ರವೇ ಇಲ್ಲ. ಆದರೂ ಅವರ ಮೇಲೆ ಗದಾಪ್ರಹಾರ ಮಾಡಿರುವುದು ಸಾರ್ವಜನಿಕರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದಂತೆ ಅಂತಾ ಜನರು ಮಾತಾಡುತ್ತಿದ್ದಾರೆ.
ಇನ್ನು ಒಂದೆರಡು ಕಡೆಗಳಲ್ಲಿ ಹೀಗೆ ಕಳಪೆ ಗುಣಮಟ್ಟದ ಶೂ ಪೂರೈಕೆಯಾಗಿದ್ದರೆ ಅವುಗಳನ್ನು ಬದಲಿಸಬಹುದಿತ್ತು. ಆದರೆ ಅನೇಕ ಜಿಲ್ಲೆಗಳಲ್ಲಿ ಈ ಸಮಸ್ಯೆ ಕಂಡುಬಂದಿದೆ. ಹೀಗಾಗಿ ಶೂಗಳನ್ನು ಬದಲಿಸಲು ಸಾಧ್ಯವೇ ಇಲ್ಲ. ಮೊದಲೇ ಶಾಲೆ ಶುರುವಾಗಿ ಮೂರು ತಿಂಗಳ ಬಳಿಕ ವಿತರಣೆಯಾಗಿವೆ. ಒಂದು ವೇಳೆ ಅವುಗಳನ್ನು ಬದಲಿಸಬೇಕೆಂದರೆ ಅದು ಮುಂದಿನ ವರ್ಷವೇ ಆಗುತ್ತೆ. ಹೀಗಾಗಿ ಸರಕಾರ ಇಂಥ ಅಕ್ರಮಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
ಇದನ್ನೂ ಓದಿ: ಧಾರವಾಡ: ಪರೀಕ್ಷೆ ಬಂದರೂ ಸಿಗದ ಪಠ್ಯಪುಸ್ತಕ; ಕೇಳೋರಿಲ್ಲ ವಿದ್ಯಾರ್ಥಿಗಳ ಗೋಳು
ಲೋಕಾಯುಕರು ಕೂಡ ಇದರಲ್ಲಿ ಅಕ್ರಮವೆಸಗಿದವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ವಿನಾಃ ಕಾರಣ ಜಿಲ್ಲಾಮಟ್ಟದಲ್ಲಿರುವ ಅಧಿಕಾರಿಗಳ ಮೇಲಲ್ಲ ಅನ್ನೋ ಆಗ್ರಹ ಕೇಳಿಬರುತ್ತಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಯಾವುದೂ ಸರಿ ಇಲ್ಲ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




