ಪಾಕ್ ತಂಡದ ಹೀನಾಯ ಪ್ರದರ್ಶನ; ಪಿಸಿಬಿ ಖಜಾನೆಗೆ 25 ಕೋಟಿ ನಷ್ಟ..!
ಪಾಕಿಸ್ತಾನ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ತಂಡದ ವೈಫಲ್ಯದಿಂದ ಪ್ರಸಾರಕರು ಮಾಧ್ಯಮ ಹಕ್ಕುಗಳನ್ನು ಖರೀದಿಸಲು ಆಸಕ್ತಿ ತೋರಿಸಿಲ್ಲ. ಪರಿಣಾಮವಾಗಿ, ಪಿಸಿಬಿಗೆ 25 ಕೋಟಿ ರೂಪಾಯಿಗಳ ನಷ್ಟವುಂಟಾಗಿದೆ. ವೀಕ್ಷಕರ ಸಂಖ್ಯೆ ಕುಸಿದಿರುವುದರಿಂದ ಜಾಹೀರಾತುದಾರರ ನಿರಾಸಕ್ತಿ ಇದಕ್ಕೆ ಮುಖ್ಯ ಕಾರಣ. ಬಾಬರ್ ಆಝಂ, ಶಾಹೀನ್ ಅಫ್ರಿದಿ ಅವರ ಕಳಪೆ ಫಾರ್ಮ್ ಸಹ ಪಿಸಿಬಿಯ ಬ್ರ್ಯಾಂಡ್ ಮೌಲ್ಯಕ್ಕೆ ಹೊಡೆತ ನೀಡಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಸತತ ಕಳಪೆ ಪ್ರದರ್ಶನ ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಖಜಾನೆಗೆ ದೊಡ್ಡ ಹೊಡೆತ ನೀಡಿದೆ. ದೇಶೀಯ, ಅಂತರರಾಷ್ಟ್ರೀಯ ಸೀಸನ್ ಮಾಧ್ಯಮ ಹಕ್ಕುಗಳ ಮಾರಾಟದಲ್ಲಿ ಪಿಸಿಬಿ ಪ್ರಮುಖ ಹಿನ್ನಡೆ ಅನುಭವಿಸಿದೆ. ತವರು ಸರಣಿಯ ಪ್ರಸಾರ ಹಕ್ಕುಗಳಿಗಾಗಿ ಮಂಡಳಿಯು 60 ಕೋಟಿ ಪಾಕಿಸ್ತಾನಿ ರೂಪಾಯಿಗಳ ಮೂಲ ಬೆಲೆಯನ್ನು ನಿಗದಿಪಡಿಸಿತ್ತು, ಆದರೆ ಯಾವುದೇ ಪ್ರಮುಖ ಅಂತರರಾಷ್ಟ್ರೀಯ ಅಥವಾ ಖಾಸಗಿ ಪ್ರಸಾರಕರು ಹಕ್ಕು ಖರೀದಿಸಲು ಆಸಕ್ತಿಯನ್ನು ತೋರಿಸಿಲ್ಲ. ಹೀಗಾಗಿ ಪಿಸಿಬಿ, ಸರ್ಕಾರಿ ಸ್ವಾಮ್ಯದ ಚಾನೆಲ್ ಪಿಟಿವಿ ಸ್ಪೋರ್ಟ್ಸ್ ಜೊತೆ ಕೇವಲ 35 ಕೋಟಿ ರೂಪಾಯಿಗಳಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಯಿತು.
ಪಿಸಿಬಿಗೆ 25 ಕೋಟಿ ರೂ. ನಷ್ಟ
ಮಾಧ್ಯಮ ವರದಿಗಳ ಪ್ರಕಾರ, ತಂಡದ ಕಳಪೆ ಪ್ರದರ್ಶನದಿಂದಾಗಿ ಪಾಕಿಸ್ತಾನ ಕ್ರಿಕೆಟ್‌ನ ಖ್ಯಾತಿ ಕುಸಿದಿದೆ ಎಂಬ ಕಾರಣಕ್ಕೆ ಪ್ರಸಾರಕರು ಮಂಡಳಿಯ ಷರತ್ತುಗಳನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ಮೊಹ್ಸಿನ್ ನಖ್ವಿ ನೇತೃತ್ವದ ಪಿಸಿಬಿಗೆ 25 ಕೋಟಿ ರೂಗಳ ನಷ್ಟವುಂಟಾಗಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಹಾಗೂ ಶ್ರೀಲಂಕಾದೊಂದಿಗಿನ ತ್ರಿಕೋನ ಸರಣಿಯನ್ನು ಆಡುವುದರಲ್ಲಿತ್ತು. ಹೀಗಾಗಿ ಪ್ರಸಾರ ಹಕ್ಕುಗಳ ಖರೀದಿಗೆ ಪೈಪೋಟಿಯುಂಟಾಗಬಹುದೆಂದು ಪಿಸಿಬಿ ಆಶಿಸಿತ್ತು. ಇದರಿಂದಾಗಿಯೇ ಪಿಸಿಬಿ ಪ್ರಸಾರ ಹಕ್ಕುಗಳಿಗೆ ಹೆಚ್ಚಿನ ಬೆಲೆಯನ್ನು ನಿಗದಿಪಡಿಸಿತ್ತು.
ಆದರೆ, ವಾಸ್ತವ ಇದಕ್ಕೆ ತದ್ವಿರುದ್ಧವಾಗಿತ್ತು. ಪಾಕಿಸ್ತಾನ ತಂಡದ ಸತತ ಸೋಲುಗಳು ಮತ್ತು ಆಟದ ಗುಣಮಟ್ಟ ಕುಸಿಯುತ್ತಿರುವುದು ಅಭಿಮಾನಿಗಳನ್ನು ಭ್ರಮನಿರಸನಗೊಳಿಸಿದೆ. ಹೀಗಾಗಿ ವೀಕ್ಷಕರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿರುವುದರಿಂದ ಜಾಹೀರಾತು ಮತ್ತು ಟಿವಿ ನೆಟ್‌ವರ್ಕ್‌ಗಳು ನಿರಾಸಕ್ತಿ ತೋರಿವೆ. ಇದರಿಂದಾಗಿ ಪಿಟಿವಿ ಸ್ಪೋರ್ಟ್ಸ್ ತನ್ನದೇ ಆದ ನಿಯಮಗಳ ಮೇಲೆ ಒಪ್ಪಂದವನ್ನು ಅಂತಿಮಗೊಳಿಸಿದೆ.
ಪಾಕ್ ತಂಡದ ಹೀನಾಯ ಸ್ಥಿತಿ
ಕಾಗದದ ಮೇಲೆ ಬಲಿಷ್ಠವಾಗಿ ಕಾಣುವ ಪಾಕಿಸ್ತಾನ ತಂಡವು ಕಳೆದ ಕೆಲವು ವರ್ಷಗಳಿಂದ ಮೈದಾನದಲ್ಲಿ ನಿರಾಶಾದಾಯಕ ಪ್ರದರ್ಶನವನ್ನು ನೀಡುತ್ತಿದೆ. ಅದರಲ್ಲೂ ಟೆಸ್ಟ್ ಸ್ವರೂಪದಲ್ಲಿ ಪಾಕಿಸ್ತಾನದ ಪ್ರದರ್ಶನ ವಿಶೇಷವಾಗಿ ಕಳಪೆಯಾಗಿದೆ. ತಂಡವು ಪ್ರಸ್ತುತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯೂಟಿಸಿ) ಪಾಯಿಂಟ್‌ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂಗ್ಲೆಂಡ್ ವಿರುದ್ಧದ ಹೀನಾಯ ಟೆಸ್ಟ್ ಸೋಲಿನ ನಂತರ, ಹಲವಾರು ಪ್ರಮುಖ ಆಟಗಾರರನ್ನು ಹೊರಗಿಡಲಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ವಾಸ್ತವ ಸ್ಥಿತಿ ಬಯಲು ಮಾಡಿದ ಪಾಕಿಸ್ತಾನದ ಪ್ರಧಾನಿಯ ವಿಶ್ವಸಂಸ್ಥೆಯ ಭಾಷಣ
ಕಳೆದ ಎರಡು ಟಿ20 ವಿಶ್ವಕಪ್‌ಗಳಲ್ಲಿ, ತಂಡವು ಸೆಮಿಫೈನಲ್ ತಲುಪಲು ವಿಫಲವಾಗಿದ್ದಲ್ಲದೆ 2024 ರ ವಿಶ್ವಕಪ್ನಲ್ಲಿ ಗುಂಪು ಹಂತದಲ್ಲಿಯೇ ಹೊರಬಿದ್ದಿತ್ತು. ಇತ್ತೀಚೆಗೆ, ನಗೋಯಾ ಏಷ್ಯನ್ ಕ್ರೀಡಾಕೂಟದ ಪುರುಷರ ಕ್ರಿಕೆಟ್ ಫೈನಲ್‌ನಲ್ಲಿ ಭಾರತ, ಪಾಕಿಸ್ತಾನವನ್ನು 19 ರನ್‌ಗಳಿಂದ ಸೋಲಿಸಿ ಚಿನ್ನದ ಪದಕವನ್ನು ಕಿತ್ತುಕೊಂಡಿತ್ತು. ಏತನ್ಮಧ್ಯೆ, ಏಕದಿನ ಸ್ವರೂಪದಲ್ಲಿ, ಆಗಾಗ್ಗೆ ನಾಯಕತ್ವ ಬದಲಾವಣೆಗಳಿಂದಾಗಿ ತಂಡವು ಪ್ರಮುಖ ಪಂದ್ಯಗಳನ್ನು ಗೆಲ್ಲಲು ವಿಫಲವಾಗಿದೆ. ಪಾಕಿಸ್ತಾನಿ ಕ್ರಿಕೆಟ್‌ನ ಅತಿದೊಡ್ಡ ಬ್ರ್ಯಾಂಡ್‌ಗಳು ಮತ್ತು ಮುಖಗಳೆಂದು ಪರಿಗಣಿಸಲಾದ ಬಾಬರ್ ಆಝಂ ಮತ್ತು ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಅವರ ಕಳಪೆ ಫಾರ್ಮ್ ಪಿಸಿಬಿಯ ಬ್ರಾಂಡ್ ಮೌಲ್ಯಕ್ಕೆ ಗಮನಾರ್ಹ ಹೊಡೆತ ನೀಡಿದೆ.




