2 ಕ್ಯಾಚ್ ಬಿಟ್ಟ ಪ್ರತೀಕಾ; ಕ್ಲೀನ್ ಬೌಲ್ಡ್ ಮಾಡಿ ಗೇಟ್ ಔಟ್ ಎಂದ ಶಫಾಲಿ..! ವಿಡಿಯೋ

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ ಏಷ್ಯಾಕಪ್ T20 ಪಂದ್ಯದಲ್ಲಿ, ಪಾಕ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲೇ ಭಾರತ ಮುನೀಬಾ ಅಲಿಯ ಎರಡು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿತು. ಆದರೂ, ಶಫಾಲಿ ವರ್ಮಾ ಪ್ರಮುಖ ವಿಕೆಟ್ ಪಡೆದು ತಂಡಕ್ಕೆ ಮರಳಿ ಆಸರೆಯಾದರು. ಮುನೀಬಾ ಅಲಿ 13 ರನ್ ಗಳಿಸಿ ಔಟಾದರು. ಶಫಾಲಿಯವರ ಆಕ್ರಮಣಕಾರಿ ಸಂಭ್ರಮಾಚರಣೆ ಐಸಿಸಿ ನಿಯಮ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ.

2 ಕ್ಯಾಚ್ ಬಿಟ್ಟ ಪ್ರತೀಕಾ; ಕ್ಲೀನ್ ಬೌಲ್ಡ್ ಮಾಡಿ ಗೇಟ್ ಔಟ್ ಎಂದ ಶಫಾಲಿ..! ವಿಡಿಯೋ
ಭಾರತ vs ಪಾಕಿಸ್ತಾನ

Updated on: Sep 05, 2026 | 8:52 PM

ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳ 2026 ರ ಮಹಿಳಾ ಏಷ್ಯಾಕಪ್ ಟಿ20 ಪಂದ್ಯ ದುಬೈನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್‌ ಮಾಡುತ್ತಿದೆ. ಇತ್ತ ಟಾಸ್ ಸೋತು ಮೊದಲು ಬೌಲಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಆರಂಭದಲ್ಲೇ ಎರಡು ಸುಲಭ ಕ್ಯಾಚ್​ಗಳನ್ನು ಕೈಚೆಲ್ಲಿತು. ಅದರಲ್ಲೂ ಪಾಕಿಸ್ತಾನದ ಆರಂಭಿಕ ಆಟಗಾರ್ತಿ ಮುನೀಬಾ ಅಲಿ ನೀಡಿದ ಎರಡು ಕ್ಯಾಚ್​ಗಳನ್ನು ಭಾರತದ ಒಂದೇ ಫಿಲ್ಡರ್ ಕೈಚೆಲ್ಲಿದ್ದು, ತಂಡವನ್ನು ಒತ್ತಡಕ್ಕೆ ಸಿಲುಕಿಸಿತು. ಆದಾಗ್ಯೂ 5ನೇ ಓವರ್​ನಲ್ಲಿ ಬೌಲಿಂಗ್ ಮಾಡಲು ಬಂದ ಶಫಾಲಿ ವರ್ಮಾ ಓವರ್​ನ ಮೂರನೇ ಎಸೆತದಲ್ಲಿ ಮುನೀಬಾ ಅಲಿಯನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ತಂಡಕ್ಕೆ ಮೊದಲ ವಿಕೆಟ್ ತಂದುಕೊಟ್ಟರು.

ಟೀಂ ಇಂಡಿಯಾಕ್ಕೆ ಮುನೀಬಾ ಅಲಿ ಅವರ ವಿಕೆಟ್ ಅತ್ಯಗತ್ಯವಾಗಿತ್ತು. ಏಕೆಂದರೆ, ಪಾಕಿಸ್ತಾನ ಹಾಗೂ ಥೈಲ್ಯಾಂಡ್ ನಡುವಿನ ಮೊದಲ ಪಂದ್ಯದಲ್ಲಿ ಇದೇ ಮುನೀಬಾ ಅಲಿ 54 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದಲ್ಲೂ ಮುನೀಬಾ ಅಲಿ ಉತ್ತಮ ಆರಂಭವನ್ನು ಪಡೆದುಕೊಂಡಿದ್ದರು. ಹೀಗಾಗಿ ಅವರ ವಿಕೆಟ್ ಪಡೆಯುವುದು ತಂಡಕ್ಕೆ ಅವಶ್ಯಕವಾಗಿತ್ತು.

2 ಕ್ಯಾಚ್ ಬಿಟ್ಟ ಪ್ರತೀಕಾ

ಅದರಂತೆ ಮೂರನೇ ಓವರ್​ನ ಬೌಲಿಂಗ್​ಗೆ ಇಳಿದ ಕ್ರಾಂತಿ ಗೌಡ್ ಅವರ ಎರಡನೇ ಎಸೆತದಲ್ಲಿ ಮುನೀಬಾ ಅಲಿ ದೊಡ್ಡ ಹೊಡೆತಕ್ಕೆ ಕೈಹಾಕಿದರು. ಆದರೆ ಚೆಂಡು ಬ್ಯಾಟ್​ನ ಮೇಲ್ಭಾಕಕ್ಕೆ ತಾಗಿ ಗಾಳಿಯಲ್ಲಿ ಮೇಲಕ್ಕೆ ಹೋಯಿತು. ಇತ್ತ ಅಲ್ಲೆ ನಿಂತಿದ್ದ ಪ್ರತೀಕಾ ರಾವಲ್ ಚೆಂಡು ಕೆಳಕ್ಕೆ ಬರುವುದಕ್ಕೆ ಕಾದು ಕುಳಿತಿದ್ದರು. ಅದರಂತೆ ಕ್ಯಾಚ್ ಅನ್ನು ಸುಲಭವಾಗಿ ಹಿಡಿದ ಪ್ರತೀಕಾ ಅದನ್ನು ಪೂರ್ಣಗೊಳಿಸುವಲ್ಲಿ ವಿಫಲರಾದರು. ಚೆಂಡು ಪ್ರತೀಕಾ ಅವರ ಕೈನಿಂದ ಜಾರಿ ನೆಲಕ್ಕಪ್ಪಳಿಸಿತು.

ಸೇಡು ತೀರಿಸಿಕೊಂಡ ಶಫಾಲಿ

ಆ ಸಮಯದಲ್ಲಿ ಮುನೀಬಾ ಅಲಿ 6 ರನ್ ಬಾರಿಸಿ ಆಡುತ್ತಿದ್ದರು. ಆ ನಂತರ 4ನೇ ಓವರ್​ನಲ್ಲಿ ರನೌಟ್ ಅವಕಾಶವೂ ಇತ್ತು. ಆದರೆ ಶಫಾಲಿ ವರ್ಮಾ ಚೆಂಡನ್ನು ಸರಿಯಾಗಿ ಹಿಡಿಯದ ಕಾರಣ ಆ ರನೌಟ್ ಅವಕಾಶ ಕೈತಪ್ಪಿತು. ಇದಾದ ಬಳಿಕ ಶಫಾಲಿ ಬೌಲ್ ಮಾಡಿದ 6ನೇ ಓವರ್​ನ ಎರಡನೇ ಎಸೆತದಲ್ಲೂ ಮುನೀಬಾ ಅಲಿ ಲಾಂಗ್ ಆನ್​ನಲ್ಲಿ ನೀಡಿದ ಕ್ಯಾಚ್ ಅನ್ನು ಮತ್ತೆ ಪ್ರತೀಕಾ ರಾವಲ್ ಅವರೇ ಕೈಚೆಲ್ಲಿದರು. ಹೀಗಾಗಿ ಆ ಚೆಂಡು ಬೌಂಡರಿ ಗೆರೆ ದಾಟಿತು. ಆದರೆ ನಂತರದ ಎಸೆತದಲ್ಲೇ ಶಫಾಲಿ, ಮುನೀಬಾ ಅಲಿಯನ್ನು ಕ್ಲೀನ್ ಬೌಲ್ಡ್ ಮಾಡಿದರು.ಮುನೀಬಾ ಅಲಿಯನ್ನು ಬೌಲ್ಡ್ ಮಾಡಿದ ಕೂಡಲೇ ಶಫಾಲಿ ತಮ್ಮ ಕೈಯನ್ನು ಮೇಲಕ್ಕೆತ್ತಿ ಮುನೀಬಾ ಅಲಿಗೆ ಪೆವಿಲಿಯನ್​ಗೆ ವಾಪಸ್ ಹೋಗುವಂತೆ ಸನ್ನೆ ಮಾಡಿದರು. ಇದು ಐಸಿಸಿ ನಿಯಮಗಳಿಗೆ ವಿರುದ್ಧವಾಗಿದ್ದು, ಶಫಾಲಿಗೆ ದಂಡ ಬೀಳಲಿದೆಯೇ ಎಂಬುದು ಮುಂದೆ ತಿಳಿಯಲಿದೆ. ಇತ್ತ ಎರಡು ಜೀವದಾನಗಳ ಹೊರತಾಗಿಯೂ ಮುನೀಬಾ ಅಲಿ ಕೇವಲ 13 ರನ್ ಬಾರಿಸಲಷ್ಟೇ ಶಕ್ತರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Sat, 5 September 26

ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Loading...
Unable to load recommendations.
Follow Us