
ಮಹಿಳಾ ಏಷ್ಯಾಕಪ್ ಟಿ20 2022 (Womens Asia Cup 2022) ಟೂರ್ನಿಗೆ ತೆರೆಬಿದ್ದಿದೆ. ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಶ್ರೀಲಂಕಾವನ್ನು (India Women vs Sri Lanka Women) ಸೋಲಿಸಿ ಏಳನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ. ಭಾರತ ಪುರುಷರ ತಂಡ ಕೂಡ ಏಳು ಬಾರಿ ಏಷ್ಯಾಕಪ್ ಜಯಿಸಿದೆ. ಈ ಮೂಲಕ ವನಿತೆಯರು ಈ ದಾಖಲೆಯಲ್ಲಿ ಸಮಭಲ ಸಾಧಿಸಿದ್ದಾರೆ. ಹೈವೋಲ್ಟೇಜ್ ಕದನ ಆಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಈ ಪಂದ್ಯ ನಿರಾಸೆ ಮೂಡಿಸಿತು. ಏಕಪಕ್ಷಿಯವಾಗಿ ನಡೆದ ಪಂದ್ಯದಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿತು. 8 ವಿಕೆಟ್ಗಳ ಅಮೋಘ ಗೆಲುವು ಕಂಡ ಟೀಮ್ ಇಂಡಿಯಾ ಏಷ್ಯಾಕಪ್ನಲ್ಲಿ ತಾನೇ ಬಲಿಷ್ಠ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿದೆ. 15 ವರ್ಷಗಳ ಬಳಿಕ ಫೈನಲ್ಗೆ ತಲುಪಿದ್ದ ಶ್ರೀಲಂಕಾ ಮಹಿಳಾ ತಂಡ ತೀರಾ ಕಳಪೆ ಪ್ರದರ್ಶನ ತೋರಿತು. ಇದರ ನಡುವೆ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet Kaur) ಇತಿಹಾಸ ನಿರ್ಮಿಸಿದ್ದಾರೆ.
ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ಸಾಧನೆ ಮಾಡಿದ್ದಾರೆ. ಅವರಿಗೆ ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯ 137 ಟಿ 20ಯ ಆಟವಾಗಿತ್ತು. ಇದಕ್ಕೂ ಮುನ್ನ ಇವರು ನ್ಯೂಜಿಲೆಂಡ್ ನಾಯಕಿ ಸೂಝಿ ಬೆಟ್ಸ್ ಅವರ ಜೊತೆ ಜಂಟಿ ಸ್ಥಾನ ಹಂಚಿಕೊಂಡಿದ್ದರು. ಕ್ರಿಕೆಟ್ ಲೋಕದಲ್ಲಿ ಅತಿ ಹೆಚ್ಚು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಪ್ಲೇಯರ್ ರೋಹಿತ್ ಶರ್ಮಾ ಆಗಿದ್ದು 142 ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಅಂತೆಯೆ ಮಹಿಳಾ ಟಿ20 ಕ್ರಿಕೆಟ್ನಲ್ಲಿ ಹರ್ಮನ್ (2694) ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯರ ಸಾಲಿನಲ್ಲಿ 6ನೇ ಸ್ಥಾನಕ್ಕೇರಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿದ ನಾಯಕಿ ಹರ್ಮನ್, ”ಈ ಗೆಲುವಿನ ಶ್ರೇಯವನ್ನು ಬೌಲರ್ಗಳು ಮತ್ತು ಫೀಲ್ಡರ್ಗಳಿಗೆ ನೀಡಿದ್ದಾರೆ. ‘ನಮ್ಮ ಗೆಲುವಿಗೆ ಮುಖ್ಯ ಕಾರಣ ಬೌಲರ್ಗಳು. ನಮ್ಮ ಫೀಲ್ಡಿಂಗ್ ವಿಭಾಗವು ಮೊದಲ ಎಸೆತದಿಂದಲೂ ಉತ್ತಮವಾಗಿ ಕಾರ್ಯ ನಿರ್ವಹಿಸಿತು. ಸುಲಭವಾಗಿ ರನ್ಗಳನ್ನು ಬಿಟ್ಟುಕೊಡಬಾರದು ಎಂದು ನಾವು ಚರ್ಚೆ ಮಾಡಿದ್ದೆವು. ಪಿಚ್ ಅರ್ಥ ಮಾಡಿಕೊಂಡು ಅದರಂತೆ ಫೀಲ್ಡಿಂಗ್ ಸೆಟ್ ಮಾಡುವುದು ಮುಖ್ಯವಾಗಿತ್ತು. ಅದರಂತೆ ಪಿಚ್ ಅನ್ನು ಅರಿತುಕೊಂಡೆ ಫೀಲ್ಡಿಂಗ್ ಸೆಟ್ ಮಾಡಿದ್ದೆವು. ಸ್ಕೋರ್ ಬೋರ್ಡ್ ಕಡೆ ನಾವು ನೋಡುತ್ತಿರಲಿಲ್ಲ”, ಎಂದು ಹೇಳಿದ್ದಾರೆ.
ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಮಹಿಳೆಯರ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿತ್ತು. ಆದರೆ, ಸ್ಲೋ ಪಿಚ್ನಲ್ಲಿ 9 ವಿಕೆಟ್ ಕಳೆದುಕೊಂಡು 65 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡ 9 ರನ್ ಗಳಿಸುವಷ್ಟರಲ್ಲಿ ನಾಯಕಿ ಚಾಮರಿ ಅಟಪಟ್ಟು(6), ಅನೌಷ್ಕಾ ಸಂಜೀವನಿ(2), ಮಾದವಿ(1) ಮತ್ತು ಹಾಸಿನಿ ಪೆರೇರಾ(0) ಔಟ್ ಆದರು. ಆರಂಭಿಕರು ಮತ್ತು ಮುರು ನಾಲ್ಕನೇ ವಿಕೆಟ್ ಪತನವಾದಂತೆ ಮಧ್ಯಮ ಕ್ರಮಾಂಕವೂ ಕುಸಿತ ಕಂಡಿತು. ನೀಲಾಕ್ಷಿ ಡಿ ಸಿಲ್ವಾ(6), ಕವಿಶಾ ದಿಲ್ಹಾರಿ(1), ಓಡಾಡಿ ರಣಸಿಂಘೆ(13), ಮಲ್ಶಾ ಶೆಹಾನಿ (0), ಸುಗಂಧಾ ಕುಮಾರಿ(6) ವಿಕೆಟ್ ಒಪ್ಪಿಸಿದರು. ಭಾರತದ ಪರ ರೇಣುಕಾ ಸಿಂಗ್ 3 ವಿಕೆಟ್ ಪಡೆದರು. ರಾಜೇಶ್ವರಿ ಗಾಯಕ್ವಾಡ್ ಮತ್ತು ಸ್ನೇಹ ರಾಣಾ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.
ಸಾಧಾರಣ ಗುರಿ ಬೆನ್ನತ್ತಿದ ಭಾರತ, ಕೇವಲ 8.3 ಓವರ್ಗಳಲ್ಲಿ ಗುರಿ ಮುಟ್ಟಿತು. ಸ್ಮೃತಿ ಮಂಧಾನ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ಗೆಲುವು ಸಾಧಿಸಿತು. ಮಂಧಾನ ಜೊತೆ ಆರಂಭಿಕರಾಗಿ ಬಂದ ಶೆಫಾಲಿ ವರ್ಮಾ (5) ಬೇಗ ವಿಕೆಟ್ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಜೆಮಿಮಾ ರಾಡ್ರಿಗಸ್ (2) ಕೂಡ ಜಾಸ್ತಿ ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ. ಆಗ ನಾಯಕಿ ಹರ್ಮನ್ಪ್ರೀತ್ ಕೌರ್ ಮಂಧಾನಗೆ ಜೊತೆಯಾದರು. ಬಿರುಸಿನಿಂದ ಆಡುತ್ತಿದ್ದ ಮಂಧಾನ 25 ಎಸೆತಗಳಲ್ಲಿ 6 ಬೌಡರಿ ಮತ್ತು 3 ಸಿಕ್ಸರ್ ಜೊತೆಗೆ 51ರನ್ಗಳಿಸಿ ಅಜೇಯರಾಗಿ ಉಳಿದುಕೊಂಡರು. ನಾಯಕಿ ಹರ್ಮನ್ಪ್ರೀತ್ ಕೌರ್ 11 ರನ್ ಗಳಿಸಿದರು. 4 ಓವರ್ಗಳಲ್ಲಿ ಕೇವಲ 7 ರನ್ ಬಿಟ್ಟುಕೊಟ್ಟ ದೀಪ್ತಿ ಶರ್ಮಾ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Published On - 8:51 am, Sun, 16 October 22