
ದುಬೈನಲ್ಲಿ ನಡೆಯುತ್ತಿರುವ 2026 ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದ್ದಾರೆ. ಥೈಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾಗಿದ್ದ ಮಂಧಾನ ಇಂದು ನಡೆದ ಹಾಂಗ್ ಕಾಂಗ್-ಚೀನಾ ವಿರುದ್ಧದ ಎರಡನೇ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸಿದರು. ಈ ಪಂದ್ಯದಲ್ಲಿ 64 ಎಸೆತಗಳನ್ನು ಎದುರಿಸಿದ ಸ್ಮೃತಿ 14 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 124 ರನ್ ಬಾರಿಸಿದರು. ಸ್ಮೃತಿ ಅವರ ಈ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಟೀಂ ಇಂಡಿಯಾ 193 ರನ್ ಕಲೆಹಾಕಿತು. ಇತ್ತ ಈ ಶತಕದ ಇನ್ನಿಂಗ್ಸ್ ಮೂಲಕ ಸ್ಮೃತಿ ಮಂಧಾನ ಎರಡೆರಡು ವಿಶ್ವದಾಖಲೆಗಳನ್ನು ಮುರಿದಿದ್ದಾರೆ.
ಈ ಪಂದ್ಯದಲ್ಲಿ ಮಂಧಾನ ಕೇವಲ 57 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಇದು ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಮಂಧಾನ ಅವರ ಎರಡನೇ ಶತಕವಾಗಿದೆ. ಅಲ್ಲದೆ ಮಂಧಾನ ಮಹಿಳಾ ಏಷ್ಯಾಕಪ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಹಾಗೆಯೇ ಈ ಶತಕದ ಇನ್ನಿಂಗ್ಸ್ ಮೂಲಕ ಮಂಧಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರ್ತಿ ಎಂಬ ವಿಶ್ವದಾಖಲೆಯ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ದಾಖಲೆಯನ್ನು ನಿರ್ಮಿಸಿದ್ದಾರೆ.
ಹಾಂಗ್ ಕಾಂಗ್ ವಿರುದ್ಧದ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಸ್ಮೃತಿ ಮಂಧಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆಯನ್ನು ಮುರಿದರು. ಈ ಮೊದಲು ಈ ದಾಖಲೆ ಮಿಥಾಲಿ ರಾಜ್ ಅವರ ಹೆಸರಿನಲ್ಲಿತ್ತು. ಟೀಂ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,868 ರನ್ ಕಲೆಹಾಕಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ ಮಂಧಾನ, ಮಿಥಾಲಿ ಅವರನ್ನು ಹಿಂದಿಕ್ಕಿದ್ದಾರೆ.
ಹಾಗೆಯೇ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ದಾಖಲೆಯೂ ಮಂಧಾನ ಖಾತೆಗೆ ಸೇರಿದೆ. ಮಂಧಾನ ಇದುವರೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 18 ಶತಕಗಳನ್ನು ಬಾರಿಸಿದ್ದಾರೆ. ಇದರಲ್ಲಿ 14 ಏಕದಿನ ಶತಕಗಳು ಸೇರಿದ್ದರೆ, ಟೆಸ್ಟ್ ಮತ್ತು ಟಿ20ಕ್ರಿಕೆಟ್‌ನಲ್ಲಿ ತಲಾ ಎರಡು ಶತಕಗಳನ್ನು ಬಾರಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಮಂಧಾನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17 ಶತಕಗಳನ್ನು ಬಾರಿಸಿದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೊಲ್ಪರ್ಟ್ ಅವರನ್ನು ಹಿಂದಿಕ್ಕಿದ್ದಾರೆ.
14 ಬೌಂಡರಿ, 7 ಸಿಕ್ಸರ್; ಸಿಡಿಲಬ್ಬರದ ಶತಕ ಬಾರಿಸಿದ ಸ್ಮೃತಿ ಮಂಧಾನ
ಇದಲ್ಲದೆ ಮಂಧಾನ, ಮಹಿಳಾ ಏಷ್ಯಾಕಪ್‌ನಲ್ಲಿ ತಮ್ಮ ಮೊದಲ ಶತಕ ಬಾರಿಸುವುದರ ಜೊತೆಗೆ ಟೂರ್ನಿಯಲ್ಲಿ ಅತಿ ಹೆಚ್ಚು ಸ್ಕೋರ್ ಬಾರಿಸಿದ ಇನ್ನಿಂಗ್ಸ್‌ನ ದಾಖಲೆಯನ್ನೂ ನಿರ್ಮಿಸಿದರು. ಈ ಮೊದಲು ದಾಖಲೆಯನ್ನು ಹೊಂದಿದ್ದ ಶ್ರೀಲಂಕಾ ನಾಯಕಿ ಚಮರಿ ಅಟಪಟ್ಟು 2024 ರಲ್ಲಿ 119 ರನ್ಗಳ ಇನ್ನಿಂಗ್ಸ್ ಆಡಿದ್ದರು. ಇದೀಗ ಹಾಂಗ್ ಕಾಂಗ್ ವಿರುದ್ಧ 64 ಎಸೆತಗಳಲ್ಲಿ 124 ರನ್ ಸಿಡಿಸುವ ಮೂಲಕ ಮಂಧಾನ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
Published On - 10:02 pm, Thu, 3 September 26