SA vs AUS: 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಟಿ20 ವಿಶ್ವಕಪ್‌ ಫೈನಲ್​ಗೇರಿದ ದಕ್ಷಿಣ ಆಫ್ರಿಕಾ

|

Updated on: Oct 17, 2024 | 10:33 PM

Women’s T20 World Cup 2024: ಯುಎಇಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವನಿತಾ ತಂಡ ಹಾಗೂ ಆಸ್ಟ್ರೇಲಿಯಾ ವನಿತಾ ತಂಡಗಳ ನಡುವಿನ ಮಹಿಳಾ ಟಿ20 ವಿಶ್ವಕಪ್​ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸೀಸ್ ಪಡೆಯನ್ನು 8 ವಿಕೆಟ್​ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್​ ಫೈನಲ್​ಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ.

SA vs AUS: 6 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಟಿ20 ವಿಶ್ವಕಪ್‌ ಫೈನಲ್​ಗೇರಿದ ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ವನಿತಾ ಪಡೆ
Follow us on

ಯುಎಇಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವನಿತಾ ತಂಡ ಹಾಗೂ ಆಸ್ಟ್ರೇಲಿಯಾ ವನಿತಾ ತಂಡಗಳ ನಡುವಿನ ಮಹಿಳಾ ಟಿ20 ವಿಶ್ವಕಪ್​ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸೀಸ್ ಪಡೆಯನ್ನು 8 ವಿಕೆಟ್​ಗಳಿಂದ ಮಣಿಸಿದ ದಕ್ಷಿಣ ಆಫ್ರಿಕಾ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್​ ಫೈನಲ್​ಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಆಫ್ರಿಕಾ ಪರ ಬ್ಯಾಟಿಂಗ್​ನಲ್ಲಿ ಮಿಂಚಿದ ಅನ್ನೆಕೆ ಬಾಷ್ ಸಿಡಿಲಬ್ಬರದ ಅರ್ಧಶತಕ ಸಿಡಿಸಿದರೆ, ನಾಯಕಿ ಲಾರಾ ವೊಲ್ವಾರ್ಡ್ಟ್ ಕೂಡ 42 ರನ್​ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ತಂಡ ಕಳೆದ ಆವೃತ್ತಿಯ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡರೆ, ಇತ್ತ ಟೂರ್ನಿಯಲ್ಲಿ ಅಜೇಯ ತಂಡವಾಗಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದ್ದ ಆಸ್ಟ್ರೇಲಿಯಾ ತಂಡ 2009 ರ ನಂತರ ಇದೇ ಮೊದಲ ಬಾರಿಗೆ ಫೈನಲ್​ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಉಳಿದಂತೆ ಇದುವರೆಗೆ ನಡೆದಿರುವ 8 ಆವೃತ್ತಿಗಳ 7 ಆವೃತ್ತಿಗಳಲ್ಲಿ ಆಸ್ಟ್ರೇಲಿಯಾ ತಂಡ ಫೈನಲ್ ಆಡಿತ್ತು. ಆದರೆ ಈ ಬಾರಿ ಆಸೀಸ್ ಪ್ರಯಾಣ ಸೆಮಿಫೈನಲ್​ನಲ್ಲಿಯೇ ಅಂತ್ಯಗೊಂಡಿದೆ.

ಆಸೀಸ್ ಆಮೆಗತಿಯ ಬ್ಯಾಟಿಂಗ್

ಉಭಯ ತಂಡಗಳ ನಡುವೆ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 134 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ತಂಡದ ಪರ ಬೆತ್ ಮೂನಿ 44 ರನ್​ಗಳ ಅತ್ಯಧಿಕ ಇನ್ನಿಂಗ್ಸ್ ಆಡಿದರೆ, ಆಲ್​ರೌಂಡರ್ ಎಲ್ಲಿಸ್ ಪೆರ್ರಿ 31 ರನ್​ಗಳ ಕಾಣಿಕೆ ನೀಡಿದರು. ನಾಯಕಿ ಮೆಕ್‌ಗ್ರಾತ್ 27 ರನ್​ಗಳ ಇನ್ನಿಂಗ್ಸ್ ಆಡಿದರಾದರೂ, ಅವರ ಇನ್ನಿಂಗ್ಸ್​ನಲ್ಲಿ ವೇಗ ಇರಲಿಲ್ಲ. ಆಫ್ರಿಕಾ ಬೌಲರ್​ಗಳ ಕರಾರುವಕ್ಕಾದ ದಾಳಿಗೆ ಆಸೀಸ್ ತಂಡದ ಯಾವ ಬ್ಯಾಟರ್​ಗೂ ಆಕ್ರಮಣಕಾರಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ತಂಡ ಕೇವಲ 5 ವಿಕೆಟ್ ಕಳೆದುಕೊಂಡಿತ್ತಾದರೂ ಬೃಹತ್ ಮೊತ್ತ ಕಲೆಹಾಕುವಲ್ಲಿ ಎಡವಿತು.

ಬಾಷ್- ಲಾರಾ ಗೆಲುವಿನಜೊತೆಯಾಟ

ಇನ್ನು 134 ರನ್​ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊದಲ ವಿಕೆಟ್​ಗೆ 25 ರನ್​​ಗಳ ಜೊತೆಯಾಟ ಸಿಕ್ಕಿತು. ಈ ವೇಳೆ 15 ರನ್​ಗಳ ವೈಯಕ್ತಿಕ ಸ್ಕೋರ್​ಗೆ ತಜ್ಮಿನ್ ಬ್ರಿಟ್ಸ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ಆ ಬಳಿಕ ಜೊತೆಯಾದ ನಾಯಕಿ ಲಾರಾ ವೊಲ್ವಾರ್ಡ್ಟ್ ಹಾಗೂ ಅನ್ನೆಕೆ ಬಾಷ್ 96 ರನ್​ಗಳ ಜೊತೆಯಾಟವನ್ನಾಡುವ ಮೂಲಕ ತಂಡದ ಗೆಲುವನ್ನು ಖಚಿತ ಪಡಿಸಿದರು. ಈ ವೇಳೆ ನಾಯಕಿ ಲಾರಾ 37 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, 48 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್​ ಸಹಿತ ಅಜೇಯ 74 ರನ್ ಬಾರಿಸಿದ ಬಾಷ್ ತಂಡವನ್ನು ಫೈನಲ್​ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದರು.

ನಾಳೆ 2ನೇ ಸೆಮಿಫೈನಲ್

ಇದೀಗ ಸತತ ಎರಡನೇ ಬಾರಿಗೆ ಫೈನಲ್​ಗೇರಿರುವ ದಕ್ಷಿಣ ಆಫ್ರಿಕಾ ತಂಡ ನಾಳೆ ನಡೆಯಲ್ಲಿರುವ ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ವಿಜೇತ ತಂಡವನ್ನು ಅಕ್ಟೋಬರ್ 20 ರಂದು ನಡೆಯಲ್ಲಿರುವ ಫೈನಲ್​ನಲ್ಲಿ ಎದುರಿಸಲಿದೆ. ನಾಳೆ ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್ ನಡುವೆ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲ್ಲಿದ್ದು, ಇಲ್ಲಿ ಗೆದ್ದ ತಂಡ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಇನ್ನು ಮೊದಲ ಸೆಮಿಫೈನಲ್​ ಪಂದ್ಯದಲ್ಲಿ ಅಜೇಯ 74 ರನ್​ಗಳ ಇನ್ನಿಂಗ್ಸ್ ಆಡಿದ ಅನ್ನೆಕೆ ಬಾಷ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:20 pm, Thu, 17 October 24