ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) ಮೊದಲ ಆವೃತ್ತಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮೆಗಾ ಕ್ರಿಕೆಟ್ ಲೀಗ್ ಶನಿವಾರ (ಮಾರ್ಚ್ 4) ಆರಂಭವಾಗಲಿದೆ. ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ (Gujarat Giants and Mumbai Indians) ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯಕ್ಕೂ ಮುನ್ನ ಅದ್ಧೂರಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಂಬೈ ಮತ್ತು ನವಿ ಮುಂಬೈ ಮೈದಾನಗಳಲ್ಲಿ ಬಿಸಿಸಿಐ (BCCI) ಈ ಟೂರ್ನಿಯನ್ನು ಆಯೋಜಿಸಿದೆ. ಲೀಗ್ ಸುತ್ತಿನಲ್ಲಿ ಐದು ತಂಡಗಳು ಎರಡು ಬಾರಿ ಮುಖಾಮುಖಿಯಾಗಲಿವೆ. ಲೀಗ್ ಸುತ್ತಿನಲ್ಲಿ ಒಟ್ಟು 20 ಪಂದ್ಯಗಳು ನಡೆಯಲಿವೆ. ವಾಸ್ತವವಾಗಿ ಐಪಿಎಲ್ (IPL)ನಲ್ಲಿರುವ ನಿಯಮಗಳಿಗೂ ಹಾಗೂ ಡಬ್ಲ್ಯುಪಿಲ್ನಲ್ಲಿರುವ ನಿಯಮಗಳಿಗೂ ಅಷ್ಟಾಗಿ ವ್ಯತ್ಯಾಸಗಳಿಲ್ಲದಿದ್ದರು ಕೆಲವೊಂದು ಬದಲಾವಣೆ ಮಾಡಲಾಗಿದೆ. ಅದರ ಪೂರ್ಣ ವಿವರ ಇಲ್ಲಿದೆ.
ಇಡೀ ಟೂರ್ನಿಯಲ್ಲಿ ಫೈನಲ್ ತಲುಪಲು ಐದು ತಂಡಗಳು ಪೈಪೋಟಿ ನಡೆಸಲಿವೆ. ಒಂದು ವೇಳೆ 20 ಪಂದ್ಯಗಳ ನಂತರ ಮೂರು ತಂಡಗಳು ಒಂದೇ ಅಂಕಗಳನ್ನು ಹೊಂದಿದ್ದರೆ, ಆ ಬಳಿಕ ರನ್ ರೇಟ್ ಮೇಲೆ ಗಮನಹರಿಸಲಾಗುತ್ತದೆ. ಇಲ್ಲಿ ಉತ್ತಮ ರನ್ ರೇಟ್ ಹೊಂದಿರುವ ತಂಡ ನೇರವಾಗಿ ಫೈನಲ್‌ಗೆ ಹೋಗುತ್ತದೆ. ಉಳಿದ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳು ಫೈನಲ್‌ಗೆ ತಲುಪಲು ಪರಸ್ಪರ ಮುಖಾಮುಖಿಯಾಗಲಿವೆ. ಬಳಿಕ ಫೈನಲ್‌ನಲ್ಲಿ ಪಂದ್ಯ ಡ್ರಾ ಆದಲ್ಲಿ ಸೂಪರ್ ಓವರ್ ಆಡಲಾಗುತ್ತದೆ. ಆದರೆ ಸೂಪರ್ ಓವರ್‌ನಲ್ಲಿಯೂ ಪಂದ್ಯ ಮತ್ತೆ ಟೈ ಆದರೆ, ಒಂದು ನಿರ್ದಿಷ್ಟ ಫಲಿತಾಂಶ ಹೊರಬರುವವರೆಗೂ ಸೂಪರ್ ಓವರ್ ಆಡಿಸಲಾಗುತ್ತದೆ.
WPL 2023: ಟೂರ್ನಿ ಆರಂಭಕ್ಕೂ ಮುನ್ನ ಆರ್ಸಿಬಿ ಸೇರಿಕೊಂಡ ಸಾನಿಯಾ ಮಿರ್ಜಾ; ಹೇಳಿದ್ದೇನು ಗೊತ್ತಾ?
ಐಪಿಎಲ್ನಂತೆಯೇ ಡಬ್ಲ್ಯುಪಿಲ್ನಲ್ಲಿಯೂ ನಾಲ್ಕು ಸ್ಟ್ರಾಟೆಜಿಕ್ ಟೈಮ್ ಔಟ್‌ಗಳನ್ನು ತೆಗೆದುಕೊಳ್ಳಬಹುದಾಗಿದೆ. ಫೀಲ್ಡಿಂಗ್ ತಂಡವು ಇದನ್ನು 6 ರಿಂದ 9 ನೇ ಓವರ್ ಒಳಗೆ ತೆಗೆದುಕೊಳ್ಳಬಹುದಾಗಿದೆ. ಇತ್ತ ಬ್ಯಾಟಿಂಗ್ ಮಾಡುವ ತಂಡ ಇದನ್ನು 13 ರಿಂದ 16 ನೇ ಓವರ್ ಒಳಗೆ ಬಳಸಬಹುದಾಗಿದೆ. ಒಂದು ವಿಕೆಟ್ ಪತನವಾದರೆ, ಅಂಪೈರ್‌ನ ನಿರ್ಧಾರವನ್ನು ಪ್ರಶ್ನಿಸಲು ಪ್ರತಿ ತಂಡವು 2 ಡಿಆರ್‌ಎಸ್ ತೆಗೆದುಕೊಳ್ಳುವ ಅವಕಾಶ ಹೊಂದಿದೆ. ವಿಕೆಟ್ ಪತನವಾದ 90 ಸೆಕೆಂಡುಗಳ ನಂತರ ಹೊಸ ಬ್ಯಾಟರ್ ಮೈದಾನಕ್ಕೆ ಪ್ರವೇಶಿಸದಿದ್ದರೆ, ಆ ಆಟಗಾರ್ತಿಗೆ ದಂಡ ವಿಧಿಸಲಾಗುತ್ತದೆ.
ಈ ಟೂರ್ನಿಯಲ್ಲಿ ಒಟ್ಟು 5 ತಂಡಗಳಿದ್ದು, ಒಟ್ಟು 22 ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯವು 26 ಮಾರ್ಚ್ 2023 ರಂದು ಬ್ರಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಸಮಾರಂಭ ಮಾರ್ಚ್ 4 ರಂದು ಸಂಜೆ 4.30 ಕ್ಕೆ ಪ್ರಾರಂಭವಾಗಲಿದ್ದು, ನಂತರ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವು 7 ಗಂಟೆಗೆ ಪ್ರಾರಂಭವಾಗಲಿದೆ. ಎಲ್ಲಾ ಐಪಿಎಲ್ ಪಂದ್ಯಗಳನ್ನು ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಲೈವ್ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.
ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಅನ್ನು ಲೈವ್-ಸ್ಟ್ರೀಮಿಂಗ್ ಮಾಡುವ ಹಕ್ಕನ್ನು ಜಿಯೋ ಸಿನಿಮಾ ಪಡೆದುಕೊಂಡಿದೆ. ಈ ಪ್ಲಾಟ್‌ಫಾರ್ಮ್ ಎಲ್ಲಾ ಪಂದ್ಯಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಸ್ಟ್ರೀಮ್ ಮಾಡುತ್ತದೆ. ಈ ಜಿಯೋ ಸಿನಿಮಾ ಅಪ್ಲಿಕೇಶನ್ ಎಲ್ಲಾ ಬಳಕೆದಾರರಿಗೆ ಲಭ್ಯವಿದ್ದು, ಏರ್‌ಟೆಲ್, ಜಿಯೋ, ವಿ, ಅಥವಾ ಬಿಎಸ್‌ಎನ್‌ಎಲ್ ಗ್ರಾಹಕರು ಈ ಅಪ್ಲಿಕೇಶನ್ ಅನ್ನು ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡುವುದರೊಂದಿಗೆ ಇಡೀ ಟೂರ್ನಿಯನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:03 pm, Sat, 4 March 23