ಟೆನಿಸ್ನಲ್ಲಿ ದಶಕಗಳ ಕಾಲ ಭಾರತವನ್ನು ಮುನ್ನಡೆಸಿದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ (Sania Mirza) ಕೆಲವು ದಿನಗಳ ಹಿಂದೆ ವೃತ್ತಿ ಬದುಕಿಗೆ ವಿದಾಯ ಹೇಳಿದ್ದರು. ಆ ಬಳಿಕ ಹೊಸ ಇನ್ನಿಂಗ್ಸ್ ಆರಂಭಿಸಿದ್ದ ಸಾನಿಯಾ ಅವರನ್ನು ಕ್ರಿಕೆಟ್ ಜಗತ್ತು ಕೈಬೀಸಿ ಕರೆದಿತ್ತು. ಇದರ ಫಲವಾಗಿ ಭಾರತದಲ್ಲಿ ನೂತನವಾಗಿ ಆರಂಭವಾಗುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (Women’s Premier League) ಸಾನಿಯಾ ಕಾಣಿಸಿಕೊಳ್ಳುತ್ತಿದ್ದು, ಅವರನ್ನು ಆರ್ಸಿಬಿ (RCB) ತಂಡದ ಮಾರ್ಗದರ್ಶಕರಾಗಿ ಆಯ್ಕೆ ಮಾಡಲಾಗಿದೆ. ಇದೀಗ ಈ ಚೊಚ್ಚಲ ಟೂರ್ನಿ ಇಂದಿನಿಂದ ಆರಂಭವಾಗುತ್ತಿದ್ದು, ಟೂರ್ನಿ ಪ್ರಾರಂಭವಾಗುವ ಒಂದು ದಿನದ ಮೊದಲು, ಸಾನಿಯಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಅಲ್ಲದೆ ತಂಡವನ್ನು ಮುಖಾಮುಖಿ ಬೇಟಿ ಮಾಡಿ ಆಟಗಾರ್ತಿಯರ ಜೊತೆ ಕಾಲಕಳೆದಿದ್ದಾರೆ. ಇದೀಗ ಈ ವಿಡಿಯೋವನ್ನು ಆರ್ಸಿಬಿ ಟ್ವೀಟ್ ಮಾಡಿದೆ.
ತಂಡದೊಂದಿಗೆ ಮಾತನಾಡಿದ ಸಾನಿಯಾ, ಕೆಲವು ದಿನಗಳ ಹಿಂದೆ ನಾನು ಟೆನಿಸ್ಗೆ ನಿವೃತ್ತಿ ಘೋಷಿಸಿದೆ. ದೇಶದಲ್ಲಿ ಮಹಿಳಾ ಕ್ರೀಡೆಗಾಗಿ ಕೆಲಸ ಮಾಡುವುದು ತನ್ನ ಜೀವನದ ಗುರಿಯಾಗಿದೆ. ಮಹಿಳೆಯರು ಹೆಚ್ಚಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು. ಯಾರಾದರೂ ಏನಾದರೂ ಮಾತನಾಡಲು ಬಯಸಿದರೆ ಅವರ ನೆರವಿಗಾಗಿ ನಾನಿದ್ದೇನೆ. ನಾನು ನಿಮಗೆ ನ್ನ ನಂಬರ್ ನೀಡಬಲ್ಲೆ, ನಾನು ಇಲ್ಲಿ ಇಲ್ಲದಿದ್ದರೆ ನೀವು ನನ್ನೊಂದಿಗೆ ಚಾಟ್ ಮಾಡಬಹುದು ಎಂದಿದ್ದಾರೆ.
ಈ ನಡುವೆ ಸಾನಿಯಾ ಆಟಗಾರ್ತಿಯರ ಜೊತೆ ಸಂವಾದ ಕೂಡ ನಡೆಸಿದರು. ಇದರಲ್ಲಿ ನಿವೃತ್ತಿಯ ಬಗ್ಗೆ ನಿರ್ಧರಿಸಲು ಎಷ್ಟು ಕಷ್ಟ ಎಂದು ಸಾನಿಯಾ ಅವರನ್ನು ನ್ಯೂಜಿಲೆಂಡ್‌ನ ಆಟಗಾರ್ತಿ ಸೋಫಿ ಡಿವೈನ್ ಕೇಳಿದರು. ಇದಕ್ಕೆ ಉತ್ತರಿಸಿದ ಸಾನಿಯಾ, ನಾನು ಸಿದ್ಧಳಾಗಿದ್ದೆ. ನನಗೂ ಒಬ್ಬ ಮಗನಿದ್ದು, ಕಳೆದ ಒಂದು ವರ್ಷ ಕಷ್ಟಗಳಿಂದ ಕೂಡಿದೆ. ನನಗೆ 3 ಶಸ್ತ್ರಚಿಕಿತ್ಸೆಗಳು ನಡೆದಿವೆ. ಆಸ್ಟ್ರೇಲಿಯನ್ ಓಪನ್ ನಂತರ ತಾನು ಆಡುವುದನ್ನು ನಿಲ್ಲಿಸಲು ಬಯಿಸಿದ್ದೆ ಎಂದು ಸಾನಿಯಾ ಹೇಳಿಕೊಂಡಿದ್ದಾರೆ.
Sania Mirza spent quality time with the RCB girls, giving them advice about handling pressure, shutting down the outside noise, and made it clear that they can come to her anytime for help! We’re lucky to have you with us, @MirzaSania. ?#PlayBold #SheIsBold #WPL2023 pic.twitter.com/WJjDLLBa7T
— Royal Challengers Bangalore (@RCBTweets) March 4, 2023
ಕಳೆದ ವಾರವಷ್ಟೇ ದುಬೈನಲ್ಲಿ 20 ವರ್ಷಗಳ ಟೆನಿಸ್ ವೃತ್ತಿಜೀವನಕ್ಕೆ ಸಾನಿಯಾ ವಿದಾಯ ಹೇಳಿದ್ದರು. ಕೊನೆಯ ಬಾರಿಗೆ 2023ರ ಆಸ್ಟ್ರೇಲಿಯನ್ ಓಪನ್ನಲ್ಲಿ ರೋಹನ್ ಬೋಪಣ್ಣ ಅವರೊಂದಿಗೆ ಮಿಶ್ರ ಡಬಲ್ಸ್‌ನಲ್ಲಿ ಕಣಕ್ಕಿಳಿದಿದ್ದ ಸಾನಿಯಾ, ಫೈನಲ್ನಲ್ಲಿ ಸೋತು ಪ್ರಶಸ್ತಿಯಿಂದ ವಂಚಿತರಾಗಿದ್ದರು. ತಮ್ಮ ಟೆನಿಸ್ ವೃತ್ತಿಜೀವನವನ್ನು 6 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ಕೊನೆಗೊಳಿಸಿದ ಸಾನಿಯಾ, ಮಹಿಳೆಯರ ಸಿಂಗಲ್ಸ್‌ನಲ್ಲಿ ಅಗ್ರ 100ರೊಳಗೆ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದಾರೆ. ಇದರೊಂದಿಗೆ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವದ 27 ನೇ ಶ್ರೇಯಾಂಕದ ಆಟಗಾರ್ತಿ ಕೂಡ ಆಗಿರುವ ಸಾನಿಯಾ, ಡಬಲ್ಸ್‌ನಲ್ಲಿ ವಿಶ್ವದ ಮಾಜಿ ನಂಬರ್ ಒನ್ ಆಟಗಾರ್ತಿಯಾಗಿದ್ದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Sat, 4 March 23