WPL 2026: ಈ ಆವೃತ್ತಿಯಲ್ಲಿ ಮೊದಲ ಸೋಲಿಗೆ ಕೊರಳೊಡ್ಡಿದ ಆರ್​ಸಿಬಿ

Delhi Capitals vs RCB WPL 2026 Match 15: 2026ರ ಮಹಿಳಾ ಪ್ರೀಮಿಯರ್ ಲೀಗ್‌ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ತಮ್ಮ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡಿತು. ಆರ್​ಸಿಬಿ ನೀಡಿದ 109 ರನ್‌ಗಳ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳಿಂದ ಸುಲಭವಾಗಿ ಬೆನ್ನಟ್ಟಿ, 26 ಎಸೆತಗಳು ಬಾಕಿ ಇರುವಾಗಲೇ ಭರ್ಜರಿ ಗೆಲುವು ಸಾಧಿಸಿತು. ಇದು WPL 2026 ರಲ್ಲಿ ಉಭಯ ತಂಡಗಳ ಎರಡನೇ ಮುಖಾಮುಖಿಯಾಗಿತ್ತು.

WPL 2026: ಈ ಆವೃತ್ತಿಯಲ್ಲಿ ಮೊದಲ ಸೋಲಿಗೆ ಕೊರಳೊಡ್ಡಿದ ಆರ್​ಸಿಬಿ
Dc Vs Rcb

Updated on: Jan 24, 2026 | 11:05 PM

2026 ರ ಮಹಿಳಾ ಪ್ರೀಮಿಯರ್ ಲೀಗ್‌ನ (Women’s Premier League) 15 ನೇ ಪಂದ್ಯವು ವಡೋದರಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs RCB) ನಡುವೆ ನಡೆಯಿತು. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ, ಡೆಲ್ಲಿ ತಂಡವನ್ನು ಏಕಪಕ್ಷೀಯವಾಗಿ ಮಣಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿಯಲ್ಲೂ ಅದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಡೆಲ್ಲಿ ತಂಡ ಯಶಸ್ವಿಯಾಯಿತು. ಆರ್​ಸಿಬಿ ನೀಡಿದ 109 ರನ್​ಗಳ ಅಲ್ಪ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನು 26 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್​ಗಳಿಂದ ಗೆದ್ದುಕೊಂಡಿತು.

ಆರ್​ಸಿಬಿ ಪೆವಿಲಿಯನ್ ಪರೇಡ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿಗೆ ಸಾಧಾರಣ ಆರಂಭ ಸಿಕ್ಕಿತು. ಮೊದಲ ವಿಕೆಟ್​ಗೆ 36 ರನ್​ಗಳ ಜೊತೆಯಾಟ ಸಿಕ್ಕಿತು. ಹ್ಯಾರಿಸ್ ಈ ಪಂದ್ಯದಲ್ಲೂ ವಿಫಲರಾಗಿ 9 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ತಂಡದ ಪರ ನಾಯಕಿ ಮಂಧಾನ ಏಕಾಂಗಿ ಹೋರಾಟ ನಡೆಸಿ 34 ಎಸೆತಗಳಲ್ಲಿ 6 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 38 ರನ್ ಕಲೆಹಾಕಿದ್ದನ್ನೂ ಬಿಟ್ಟರೆ ಉಳಿದವರಿಂದ ಹೇಳಿಕೊಳ್ಳುವಂಹ ಪ್ರದರ್ಶನ ಮೂಡಿಬರಲಿಲ್ಲ. ಸ್ಮೃತಿ ಔಟಾದ ಬಳಿಕ ತಂಡದ ಇನ್ನಿಂಗ್ಸ್ ಕುಸಿಯಲಾರಂಭಿಸಿತು. ಅಂತಿಮವಾಗಿ ಆರ್​ಸಿಬಿ 109 ರನ್‌ಗಳಿಗೆ ಆಲೌಟ್ ಆಯಿತು.

ಡೆಲ್ಲಿಗೆ ಸುಲಭ ಜಯ

110 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜೆಮಿಮಾ ರೊಡ್ರಿಗಸ್ ಅವರ ಡೆಲ್ಲಿ ತಂಡವು ಇನ್ನಿಂಗ್ಸ್‌ನ ಆರಂಭದಲ್ಲಿಯೇ ಸ್ಫೋಟಕ ಆರಂಭಿಕರಾದ ಲೆಸ್ಲಿ ಮತ್ತು ಶಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಂಡು ಕಳಪೆ ಆರಂಭವನ್ನು ಪಡೆಯಿತು. ಆದಾಗ್ಯೂ, ಇದರ ನಂತರ ಲಾರಾ ವೂಲ್‌ಫೋರ್ಟ್ ಮತ್ತು ನಾಯಕಿ ಜೆಮಿಮಾ ರೊಡ್ರಿಗಸ್ ಅದ್ಭುತ ಪಾಲುದಾರಿಕೆಯನ್ನು ಮಾಡಿ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ದರು. ಹೀಗಾಗಿ ಡೆಲ್ಲಿ ತಂಡವು ಕೇವಲ 15.4 ಓವರ್‌ಗಳಲ್ಲಿ 110 ರನ್‌ಗಳ ಗುರಿಯನ್ನು ತಲುಪಿ ಆರ್‌ಸಿಬಿಯನ್ನು ಸೋಲಿಸಿ ಲೀಗ್​ನಲ್ಲಿ ಮೂರನೇ ಗೆಲುವು ದಾಖಲಿಸಿತು.

IPL 2026: ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನಾಡಲು ಒಪ್ಪಿಗೆ ಸೂಚಿಸಿದ ಆರ್​ಸಿಬಿ ಫ್ರಾಂಚೈಸಿ..! ಆದರೆ?

ಅಗ್ರಸ್ಥಾನದಲ್ಲಿ ಆರ್​ಸಿಬಿ

ಆರ್‌ಸಿಬಿ ಈಗಾಗಲೇ ಸತತ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಪ್ಲೇಆಫ್​ಗೆ ಅರ್ಹತೆ ಪಡೆದಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ಈ ಪಂದ್ಯವನ್ನು ಗೆಲ್ಲುವ ಮೂಲಕ ಪ್ಲೇಆಫ್‌ನ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಡೆಲ್ಲಿ ತಂಡ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರೆ, ಈ ಸೋಲಿನ ಹೊರತಾಗಿಯೂ ಆರ್​ಸಿಬಿ ಅಗ್ರಸ್ಥಾನದಲ್ಲಿ ಮುಂದುವರೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:58 pm, Sat, 24 January 26