WPL 2027: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನ ನಿಯಮಗಳಾವುವು? ಇಲ್ಲಿದೆ ಮಾಹಿತಿ

ವುಮೆನ್ಸ್ ಪ್ರೀಮಿಯರ್ ಲೀಗ್ 5ನೇ ಆವೃತ್ತಿಯ ಮಿನಿ ಆಟಗಾರರ ಹರಾಜು ಪ್ರಕ್ರಿಯೆಯು ಇದೇ ಅಕ್ಟೋಬರ್ 28 ರಂದು ಕೇರಳದ ಕೊಚ್ಚಿಯಲ್ಲಿರುವ ಗ್ರಾಂಡ್ ಹಯಾತ್‌ನಲ್ಲಿ ಸಂಜೆ 5:30 ಕ್ಕೆ ಅದ್ಧೂರಿಯಾಗಿ ಆರಂಭವಾಗಲಿದೆ. ಬಿಸಿಸಿಐ ಇತ್ತೀಚೆಗಷ್ಟೇ ಹರಾಜಿನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲಿರುವ ಆಟಗಾರ್ತಿಯರ ಅಧಿಕೃತ ಶಾರ್ಟ್‌ಲಿಸ್ಟ್ ಅನ್ನು ಪ್ರಕಟಿಸಿದ್ದು, ಈ ಬಾರಿ ಕೇವಲ ಬೆರಳೆಣಿಕೆಯಷ್ಟು ಸ್ಥಾನಗಳಿಗಾಗಿ ಭಾರಿ ಪೈಪೋಟಿ ಏರ್ಪಡುವುದು ಖಚಿತವಾಗಿದೆ.

WPL 2027: ವುಮೆನ್ಸ್ ಪ್ರೀಮಿಯರ್ ಲೀಗ್ ಹರಾಜಿನ ನಿಯಮಗಳಾವುವು? ಇಲ್ಲಿದೆ ಮಾಹಿತಿ
Wpl 2027
Image Credit source: WPL

Updated on: Oct 26, 2026 | 3:08 PM

ವುಮೆನ್ಸ್​ ಪ್ರೀಮಿಯರ್ ಲೀಗ್ 2027ರ ಆಟಗಾರ್ತಿಯರ ಮಿನಿ ಹರಾಜು ಪ್ರಕ್ರಿಯೆಯು ಅಕ್ಟೋಬರ್ 28, 2026 ರಂದು ಕೇರಳದ ಕೊಚ್ಚಿಯಲ್ಲಿರುವ ಗ್ರಾಂಡ್ ಹಯಾತ್ ಹೋಟೆಲ್‌ನಲ್ಲಿ ಜರುಗಲಿದೆ. ಈ ಹಿಂದಿನ ಸೀಸನ್‌ನಲ್ಲಿ ಮೆಗಾ ಹರಾಜು ಮುಗಿದಿರುವುದರಿಂದ, ಈ ಬಾರಿ ಮಿನಿ ಹರಾಜು ನಡೆಯುತ್ತಿದ್ದು, ಎಲ್ಲಾ ಐದು ಫ್ರಾಂಚೈಸಿಗಳು ತಮ್ಮ ಬಾಕಿ ಉಳಿದಿರುವ ಸ್ಲಾಟ್‌ಗಳನ್ನು ತುಂಬಿಸಿಕೊಳ್ಳಲು ರಣತಂತ್ರ ರೂಪಿಸುತ್ತಿವೆ. ಈ ಬಾರಿಯ ಹರಾಜನ್ನು ನಿಯಂತ್ರಿಸುವ ಪ್ರಮುಖ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಪರ್ಸ್ ಮೊತ್ತದ ನಿಯಮ:

ಪ್ರತಿ ಫ್ರಾಂಚೈಸಿಗೆ ತನ್ನ ಇಡೀ ತಂಡ (ಗರಿಷ್ಠ 18 ಆಟಗಾರ್ತಿಯರು) ರಚಿಸಲು ನಿಗದಿಪಡಿಸಲಾದ ಒಟ್ಟು ಪರ್ಸ್​ ಮೊತ್ತ 15 ಕೋಟಿ ರೂಪಾಯಿ. ಯಾವುದೇ ತಂಡವೂ ಈ ಮಿತಿಗಿಂತ ಹೆಚ್ಚು ಹಣವನ್ನು ಆಟಗಾರ್ತಿಯರ ವೇತನಕ್ಕಾಗಿ ಖರ್ಚು ಮಾಡುವಂತಿಲ್ಲ.

ಹರಾಜು ಪ್ರಕ್ರಿಯೆ ಆರಂಭವಾಗುವ ಮುನ್ನವೇ, ತಂಡಗಳು ತಾವು ಉಳಿಸಿಕೊಂಡ ಆಟಗಾರ್ತಿಯರ ಒಟ್ಟು ವೇತನವನ್ನು ಈ 15 ಕೋಟಿ ರೂ.ಗಳಿಂದ ಕಡಿತಗೊಳಿಸುತ್ತವೆ.

ಉದಾಹರಣೆಗೆ: ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ ತನ್ನ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಳ್ಳಲು 14.1 ಕೋಟಿ ರೂಪಾಯಿಗಳನ್ನು ಬಳಸಿಕೊಂಡಿದೆ.

15 ಕೋಟಿ (ಒಟ್ಟು) – 14.1 ಕೋಟಿ (ಖರ್ಚಾದದ್ದು) = 90 ಲಕ್ಷ ರೂಪಾಯಿ. ಈ ಮೊತ್ತದೊಂದಿಗೆ ಮುಂಬೈ ಇಂಡಿಯನ್ಸ್​ ಹರಾಜಿನಲ್ಲಿ ಕಣಕ್ಕಿಳಿಯುತ್ತದೆ.

15 ಕೋಟಿ ರೂಪಾಯಿಗಳಲ್ಲಿ ಆಟಗಾರ್ತಿಯರನ್ನು ಉಳಿಸಿಕೊಳ್ಳಲು ಖರ್ಚಾದ ಹಣವನ್ನು ಕಳೆದಾಗ ಸಿಗುವ ಉಳಿಕೆ ಮೊತ್ತವೇ ಹರಾಜಿನ ದಿನ ತಂಡಗಳ ಕೈಯಲ್ಲಿರುವ ನಿಜವಾದ ಬಜೆಟ್ ಆಗಿದೆ. ಅಂದರೆ ಮುಂಬೈ ಇಂಡಿಯನ್ಸ್​

ಸ್ಲಾಟ್ ನಿಯಮಗಳು:

ಗರಿಷ್ಠ ಆಟಗಾರ್ತಿಯರ ಸಂಖ್ಯೆ: ಪ್ರತಿ ತಂಡವು ತನ್ನ ಸ್ಕ್ವಾಡ್‌ನಲ್ಲಿ ಗರಿಷ್ಠ 18 ಆಟಗಾರ್ತಿಯರನ್ನು ಮಾತ್ರ ಹೊಂದಲು ಅವಕಾಶವಿದೆ.

ವಿದೇಶಿ ಆಟಗಾರ್ತಿಯರ ಮಿತಿ: ಒಟ್ಟು 18 ಆಟಗಾರ್ತಿಯರಲ್ಲಿ ಗರಿಷ್ಠ 6 ವಿದೇಶಿ ಆಟಗಾರ್ತಿಯರನ್ನು ಮಾತ್ರ ಖರೀದಿಸಬಹುದು.
ಲಭ್ಯವಿರುವ ಒಟ್ಟು ಸ್ಲಾಟ್‌ಗಳು: ಲೀಗ್‌ನಾದ್ಯಂತ ಈಗಾಗಲೇ 63 ಆಟಗಾರ್ತಿಯರನ್ನು ಉಳಿಸಿಕೊಳ್ಳಲಾಗಿದೆ. ಹೀಗಾಗಿ ಈ ಹರಾಜಿನಲ್ಲಿ ಕೇವಲ 27 ಸ್ಲಾಟ್‌ಗಳು ಮಾತ್ರ ಲಭ್ಯವಿದ್ದು, ಅದರಲ್ಲಿ 20 ಭಾರತೀಯ ಮತ್ತು 7 ವಿದೇಶಿ ಆಟಗಾರ್ತಿಯರಿಗೆ ಅವಕಾಶವಿದೆ.

ಹರಾಜು ಪೂಲ್ ಮತ್ತು ಮೂಲ ಬೆಲೆ:

ಶಾರ್ಟ್‌ಲಿಸ್ಟ್ ಆದ ಆಟಗಾರ್ತಿಯರು: ಒಟ್ಟು 146 ಆಟಗಾರ್ತಿಯರು (119 ಭಾರತೀಯರು ಮತ್ತು 27 ವಿದೇಶಿ ಆಟಗಾರ್ತಿಯರು) ಹರಾಜಿನ ಕಣದಲ್ಲಿದ್ದಾರೆ.

ಬಿಡ್ಡಿಂಗ್ ಬೆಲೆ: ಹರಾಜಿನಲ್ಲಿ ಆಟಗಾರ್ತಿಯರ ಮೂಲ ಬೆಲೆ 10 ಲಕ್ಷ ರೂ. ನಿಂದ ಆರಂಭವಾಗಿ ಗರಿಷ್ಠ 50 ಲಕ್ಷ ರೂ. ವರೆಗೆ ಇರುತ್ತದೆ.

ಗರಿಷ್ಠ ಮೂಲ ಬೆಲೆ: ಗರಿಷ್ಠ ಬೇಸ್ ಪ್ರೈಸ್ ಅನ್ನು 50 ಲಕ್ಷ ರೂಪಾಯಿ ಎಂದು ನಿಗದಿಪಡಿಸಲಾಗಿದೆ. ಇಂಗ್ಲೆಂಡ್‌ನ ಸೋಫಿಯಾ ಡಂಕ್ಲಿ ಮತ್ತು ಆಸ್ಟ್ರೇಲಿಯಾದ ಸೋಫಿ ಮೊಲಿನೆಕ್ಸ್ ಈ ಅತ್ಯಧಿಕ ಬೆಲೆಯ ಪಟ್ಟಿಯಲ್ಲಿದ್ದಾರೆ.

ಮೊದಲ ಹಂತದಲ್ಲಿ ಮಾರಾಟವಾಗದ ಆಟಗಾರ್ತಿಯರನ್ನು ಹರಾಜಿನ ಕೊನೆಯಲ್ಲಿ ಫ್ರಾಂಚೈಸಿಗಳ ವಿನಂತಿಯ ಮೇರೆಗೆ ‘ಆಕ್ಸಿಲರೇಟೆಡ್ ರೌಂಡ್’ ನಲ್ಲಿ ಮತ್ತೊಮ್ಮೆ ಹರಾಜಿಗೆ ತರಲಾಗುತ್ತದೆ. ಆಗ ಅವರ ಮೂಲ ಬೆಲೆಯನ್ನು ಅರ್ಧದಷ್ಟು ಕಡಿಮೆ ಮಾಡುವ ಅವಕಾಶವೂ ಇರುತ್ತದೆ.

ಇದನ್ನೂ ಓದಿ: WPL 2027: ಯಾವ ತಂಡದ ಬಳಿ ಇದೆ ಗರಿಷ್ಠ ಮೊತ್ತ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಒಟ್ಟಾರೆಯಾಗಿ ಹೇಳುವುದಾದರೆ, ಈ ಬಾರಿಯ WPL 2027ರ ಮಿನಿ ಹರಾಜು ಕೇವಲ ಆಟಗಾರ್ತಿಯರ ಖರೀದಿಯಷ್ಟೇ ಅಲ್ಲ; ಇದು ಮುಂಬರುವ ಸೀಸನ್‌ನ ಪ್ರಶಸ್ತಿ ರೇಸ್‌ನಲ್ಲಿ ಫ್ರಾಂಚೈಸಿಗಳ ಭವಿಷ್ಯವನ್ನು ನಿರ್ಧರಿಸುವ ಚದುರಂಗದಾಟ.ಕೈಯಲ್ಲಿರುವ ಕಡಿಮೆ ಬಜೆಟ್ ಮತ್ತು ಸೀಮಿತ ವಿದೇಶಿ ಸ್ಲಾಟ್‌ಗಳ ನಡುವೆ ಸಮತೋಲನ ಸಾಧಿಸಬೇಕಾದ ಅನಿವಾರ್ಯತೆ ತಂಡಗಳ ಮುಂದಿದೆ. ಅದರಂತೆ, ಅಕ್ಟೋಬರ್ 28 ರಂದು ಕೊಚ್ಚಿಯಲ್ಲಿ ನಡೆಯಲಿರುವ ಈ ಹರಾಜಿನಲ್ಲಿ ಯಾವ ತಂಡವು ಚಾಣಾಕ್ಷ ತಂತ್ರಗಳ ಮೂಲಕ ಬಲಿಷ್ಠ ಆಟಗಾರ್ತಿಯರನ್ನು ತನ್ನದಾಗಿಸಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us