IND vs SA: ಚೊಚ್ಚಲ ಶತಕ; ಏಕದಿನದಲ್ಲಿ ಕೊನೆಗೂ ಯಶಸ್ಸು ಕಂಡ ಜೈಸ್ವಾಲ್

Yashasvi Jaiswal's Maiden ODI Century: ವಿಶಾಖಪಟ್ಟಣಂನಲ್ಲಿ ನಡೆದ ಭಾರತ-ದಕ್ಷಿಣ ಆಫ್ರಿಕಾ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ತಮ್ಮ ಚೊಚ್ಚಲ ಏಕದಿನ ಶತಕ ಸಿಡಿಸಿ ಮಿಂಚಿದರು. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಜೈಸ್ವಾಲ್, 271 ರನ್‌ಗಳ ಗುರಿ ಬೆನ್ನಟ್ಟುವಾಗ ರೋಹಿತ್ ಶರ್ಮಾ ಜೊತೆ 155 ರನ್‌ಗಳ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಈ ನಿರ್ಣಾಯಕ ಪ್ರದರ್ಶನದಿಂದ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

IND vs SA: ಚೊಚ್ಚಲ ಶತಕ; ಏಕದಿನದಲ್ಲಿ ಕೊನೆಗೂ ಯಶಸ್ಸು ಕಂಡ ಜೈಸ್ವಾಲ್
Yashasvi Jaiswal

Updated on: Dec 06, 2025 | 9:06 PM

ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಆಫ್ರಿಕಾ ನೀಡಿರುವ 271 ರನ್​ಗಳ ಗುರಿ ಬೆನ್ನಟ್ಟಿರುವ ಟೀಂ ಇಂಡಿಯಾ ಪರ ಆರಂಭಿಕ ಯಶಸ್ವಿ ಜೈಸ್ವಾಲ್ (Yashasvi Jaiswal) ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಜೈಸ್ವಾಲ್, ಇದೀಗ ಸರಣಿ ನಿರ್ಧಾರಕ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ. ಇದು ಮಾತ್ರವಲ್ಲದೆ ಜೈಸ್ವಾಲ್, ರೋಹಿತ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್​ಗೆ 155 ರನ್​ಗಳ ಜೊತೆಯಾಟವನ್ನಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

111 ಎಸೆತಗಳಲ್ಲಿ ಶತಕ

ವಿಶಾಖಪಟ್ಟಣದಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್‌ಗೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಏಕೆಂದರೆ ಮೊದಲೆರಡು ಪಂದ್ಯಗಳಲ್ಲಿ ನಿರಾಶೆ ಮೂಡಿಸಿದ್ದ ಜೈಸ್ವಾಲ್ ಏಕದಿನ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಅಂಚಿನಲ್ಲಿದ್ದರು. ಆದರೆ ಇದೀಗ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ ಅಬ್ಬರಿಸಿದ ಜೈಸ್ವಾಲ್​, ಇನ್ನಿಂಗ್ಸ್​ನ 36 ನೇ ಓವರ್‌ನಲ್ಲಿ 111 ಎಸೆತಗಳಲ್ಲಿ ಶತಕ ದಾಖಲಿಸಿದರು. ಈ ಮೂಲಕ ತಮ್ಮ ಏಕದಿನ ವೃತ್ತಿಜೀವನದ ನಾಲ್ಕನೇ ಪಂದ್ಯದಲ್ಲಿ ಜೈಸ್ವಾಲ್ ಶತಕದ ಇನ್ನಿಂಗ್ಸ್ ಆಡಿದ್ದಾರೆ.

ಚೊಚ್ಚಲ ಏಕದಿನ ಶತಕ

ವಾಸ್ತವವಾಗಿ ಏಕದಿನ ತಂಡದ ನಾಯಕ ಶುಭ್​ಮನ್ ಗಿಲ್ ಗಾಯದಿಂದಾಗಿ, ಈ ಸರಣಿಯಲ್ಲಿ ಇನ್ನಿಂಗ್ಸ್ ಆರಂಭಿಸುವ ಅವಕಾಶ ಜೈಸ್ವಾಲ್‌ಗೆ ದೊರೆಯಿತು. ಇದಕ್ಕೂ ಮೊದಲು, ಅವರು ವರ್ಷದ ಆರಂಭದಲ್ಲಿ ನಡೆದ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿದ್ದರು. ಅವರ ಚೊಚ್ಚಲ ಏಕದಿನ ಪಂದ್ಯದ ನಂತರ, ಜೈಸ್ವಾಲ್‌ಗೆ ಈ ಸ್ವರೂಪದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದಾಗ್ಯೂ ಈ ಸರಣಿಯಲ್ಲಿ ಅವರು ಉತ್ತಮ ಆರಂಭ ಮಾಡಿರಲಿಲ್ಲ. ಮೊದಲ ಪಂದ್ಯದಲ್ಲಿ ಕೇವಲ 18 ರನ್ ಮತ್ತು ಎರಡನೇ ಪಂದ್ಯದಲ್ಲಿ 22 ರನ್ ಗಳಿಸಿದ್ದ ಜೈಸ್ವಾಲ್ ಒತ್ತಡಕ್ಕೆ ಒಳಗಾಗಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಅದ್ಭುತ ಶತಕ ಗಳಿಸುವ ಮೂಲಕ ಆಯ್ಕೆ ಮಂಡಳಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆದಾಗ್ಯೂ, ಈ ಪಂದ್ಯದಲ್ಲಿ ಜೈಸ್ವಾಲ್​ಗೆ ವೇಗದ ಆರಂಭ ಸಿಗಲಿಲ್ಲ. ತುಂಬಾ ನಿಧಾನಗತಿಯ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದರು. ಇದರಿಂದಾಗಿ ತಮ್ಮ ಅರ್ಧಶತಕ ಪೂರೈಸಲು 75 ಎಸೆತಗಳನ್ನು ತೆಗೆದುಕೊಂಡ ಜೈಸ್ವಾಲ್, ಆ ನಂತರ ತಮ್ಮ ಬ್ಯಾಟಿಂಗ್‌ ಗೇರ್ ಬದಲಿಸಿ ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕವನ್ನು ಕಲೆಹಾಕಿದರು.

Ranji Trophy: ರಣಜಿ ಅಂಗಳದಲ್ಲಿ 156 ರನ್ ಚಚ್ಚಿದ ಯಶಸ್ವಿ ಜೈಸ್ವಾಲ್

ಧೋನಿಯನ್ನು ನೆನಪಿಸಿದ ಜೈಸ್ವಾಲ್

ಜೈಸ್ವಾಲ್ ಅವರ ಈ ಶತಕ 20 ವರ್ಷಗಳ ಹಿಂದಿನ ಎಂಎಸ್ ಧೋನಿ ಅವರ ಸಾಧನೆಯನ್ನು ನೆನಪಿಸುತ್ತದೆ. ವಾಸ್ತವವಾಗಿ, 2005 ರಲ್ಲಿ, ಎಂಎಸ್ ಧೋನಿ ವಿಶಾಖಪಟ್ಟಣದಲ್ಲಿ ತಮ್ಮ ಮೊದಲ ಏಕದಿನ ಶತಕವನ್ನು ಸಿಡಿಸಿದ್ದರು. ನಂತರ ಧೋನಿ ತಮ್ಮ ಐದನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 148 ರನ್​ಗಳ ಇನ್ನಿಂಗ್ಸ್ ಆಡಿದ್ದರು. ಏತನ್ಮಧ್ಯೆ, ಜೈಸ್ವಾಲ್ ನಾಲ್ಕನೇ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ಅಜೇಯ 116 ರನ್ (121 ಎಸೆತಗಳು, 12 ಬೌಂಡರಿಗಳು, 2 ಸಿಕ್ಸರ್‌ಗಳು) ಗಳಿಸುವ ಮೂಲಕ ಟೀಂ ಇಂಡಿಯಾವನ್ನು 9 ವಿಕೆಟ್‌ಗಳ ಗೆಲುವಿಗೆ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Sat, 6 December 25