ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
Australia vs India, 1st Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು, ಈ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವು ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತ ತಂಡವು 150 ರನ್ಗೆ ಆಲೌಟ್ ಆದರೆ, ಆಸ್ಟ್ರೇಲಿಯಾ ಕೇವಲ 104 ರನ್ಗಳಿಸಿ ಸರ್ವಪತನ ಕಂಡಿತು. ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ 201 ರನ್ಗಳ ದಾಖಲೆಯ ಜೊತೆಯಾಟದೊಂದಿಗೆ ಟೀಮ್ ಇಂಡಿಯಾಗೆ ಭರ್ಜರಿ ಆರಂಭ ಒದಗಿಸಿದ್ದರು. ಆದರೆ ಇಂತಹದೊಂದು ಅಮೋಘ ಆರಂಭಕ್ಕೆ ಕಾರಣವಾಗಿದ್ದು ಉಸ್ಮಾನ್ ಖ್ವಾಜಾ ಕೈಚೆಲ್ಲಿದ ಕ್ಯಾಚ್ ಎಂಬುದು ವಿಶೇಷ.
ಟೀಮ್ ಇಂಡಿಯಾದ ದ್ವಿತೀಯ ಇನಿಂಗ್ಸ್ನ 41ನೇ ಓವರ್ನ 5ನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಸ್ಲಿಪ್ನಲ್ಲಿ ಕ್ಯಾಚ್ ನೀಡಿದ್ದರು. ಈ ಕ್ಯಾಚ್ ಹಿಡಿಯುವಲ್ಲಿ ಉಸ್ಮಾನ್ ಖ್ವಾಜಾ ವಿಫಲರಾಗಿದ್ದರು.
ಚೆಂಡು ನೇರವಾಗಿ ಕೈನತ್ತ ಬಂದರೂ, ಅದನ್ನು ಉಸ್ಮಾನ್ ಖ್ವಾಜಾ ಸರಿಯಾಗಿ ಗುರುತಿಸಿರಲಿಲ್ಲ. ಪರಿಣಾಮ ಯಶಸ್ವಿ ಜೈಸ್ವಾಲ್ಗೆ ಮೊದಲ ಜೀವದಾನ ಲಭಿಸಿತು. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಯಶಸ್ವಿ ಜೈಸ್ವಾಲ್ ತನ್ನ ಸ್ಕೋರ್ ಅನ್ನು 161 ಕ್ಕೆ ತಲುಪಿಸಿದರು.
ಈ ಮೂಲಕ ಟೀಮ್ ಇಂಡಿಯಾ ಸ್ಕೋರ್ ಅನ್ನು 350 ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಈ ಒಂದು ಕ್ಯಾಚ್ ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾಗಿರುವುದು ಸ್ಪಷ್ಟ. ಏಕೆಂದರೆ 51 ರನ್ಗಳಿಸಿದ್ದ ವೇಳೆ ಸಿಕ್ಕ ಜೀವದಾನದ ಬಳಿಕ ಯಶಸ್ವಿ ಜೈಸ್ವಾಲ್ ಬರೋಬ್ಬರಿ 110 ರನ್ ಕಲೆಹಾಕಿದರು. ಇದೀಗ ಉಸ್ಮಾನ್ ಖ್ವಾಜಾ ಕೈ ಬಿಟ್ಟಿರುವ ಕ್ಯಾಚ್ ಪರ್ತ್ ಟೆಸ್ಟ್ ಪಂದ್ಯದ ಫಲಿತಾಂಶವನ್ನೇ ಬದಲಿಸಿದರೂ ಅಚ್ಚರಿಪಡಬೇಕಿಲ್ಲ.