
ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವ ಇರಾದೆಯೊಂದಿಗೆ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವಹಿಸಿಕೊಂಡು ಟೂರ್ನಿಗೆ ಕಾಲಿಟ್ಟಿದ್ದ ಪಾಕಿಸ್ತಾನ ತಂಡ, ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧದ ಪಂದ್ಯವನ್ನು ಹೀನಾಯವಾಗಿ ಸೋತು ಇದೀಗ ಟೂರ್ನಿಯಿಂದ ಲೀಗ್ ಹಂತದಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಬಲಿಷ್ಠ ತಂಡಗಳಲ್ಲಿ ಒಂದಾಗಿದ್ದ ಪಾಕಿಸ್ತಾನದ ಈ ಹೀನಾಯ ಪ್ರದರ್ಶನ ತಂಡದ ಮಾಜಿ ಕ್ರಿಕೆಟಿಗರಾದ ವಾಸಿಮ್ ಅಕ್ರಮ್, ವಕಾರ್ ಯೂನಿಸ್ ಮತ್ತು ಶೋಯೆಬ್ ಅಖ್ತರ್ ಅವರನ್ನು ಕೆರಳುವಂತೆ ಮಾಡಿದೆ. ಹೀಗಾಗಿ ಇಡೀ ಪಾಕಿಸ್ತಾನ ತಂಡವನ್ನು ಬದಲಾಯಿಸುವ ಬಗ್ಗೆ ಈ ಪರಿಣಿತರು ಮಾತನಾಡುತ್ತಿದ್ದಾರೆ. ಏತನ್ಮಧ್ಯೆ, ಯುವರಾಜ್ ಸಿಂಗ್ ಅವರ ತಂದೆ ಮತ್ತು ಟೀಂ ಇಂಡಿಯಾದ ಮಾಜಿ ವೇಗಿ ಯೋಗರಾಜ್ ಸಿಂಗ್ ಅವರ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ ಅವರು ತಮ್ಮನ್ನು ಪಾಕಿಸ್ತಾನದ ಕೋಚ್ ಆಗಿ ನೇಮಿಸಿದರೆ, ಈ ತಂಡದ ಸ್ಥಿತಿ ಮತ್ತು ದಿಕ್ಕನ್ನು ಬದಲಾಯಿಸುತ್ತೇನೆ ಎಂದು ಹೇಳುತ್ತಿರುವುದನ್ನು ಕಾಣಬಹುದಾಗಿದೆ.
ಸ್ಪೋರ್ಟ್ಸ್ ನೆಕ್ಸ್ಟ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಯೋಗರಾಜ್ ಸಿಂಗ್, ‘ಕೆಲವೊಮ್ಮೆ ನನಗೆ ಪಾಕಿಸ್ತಾನ ತಂಡಕ್ಕೆ ಕರೆ ಮಾಡಿ, ನಿಮಗೆ ಕೋಚ್ ಇಲ್ಲದಿದ್ದರೆ ಈ ತಂಡವನ್ನು ಒಂದು ವರ್ಷ ನನಗೆ ಕೊಡಿ. ನಾನು ತಂಡದ ಆಟಗಾರರನ್ನು ಸಿಂಹಗಳನ್ನಾಗಿ ಮಾಡುತ್ತೇನೆ ಎಂದು ಹೇಳಬೇಕು ಅನಿಸುತ್ತದೆ ಎಂದಿದ್ದಾರೆ. ಇದಾದ ನಂತರ, ಯೋಗರಾಜ್ ಅವರನ್ನು ಪಾಕಿಸ್ತಾನದ ಕೋಚ್ ಆಗುತ್ತೀರಾ ಎಂದು ಕೇಳಲಾಗಿದೆ, ಅದಕ್ಕೆ ಅವರು ಅದರಲ್ಲಿ ಏನು ಸಮಸ್ಯೆ?. ಭಾರತ ಮತ್ತು ಪಾಕಿಸ್ತಾನ ಇಬ್ಬರು ಸಹೋದರರಂತೆ, ಅವರು ಇವತ್ತಲ್ಲದಿದ್ದರೂ ನಾಳೆ ಖಂಡಿತವಾಗಿಯೂ ಒಂದಾಗುತ್ತಾರೆ. ಪಾಕಿಸ್ತಾನಿ ಆಟಗಾರರಲ್ಲಿ ಪ್ರತಿಭೆ ಇದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ. ತಂಡದಲ್ಲಿ ಸ್ಟಾರ್ ಆಟಗಾರರ ದಂಡೆ ಇದೆ. ಪಾಕಿಸ್ತಾನ ತಂಡವು 150 ಕ್ಕಿಂತ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಬಲ್ಲ ಆಟಗಾರರನ್ನು ಹೊಂದಿದೆ, ಆದರೆ ಈ ತಂಡದಲ್ಲಿ ಉತ್ತಮ ವ್ಯವಸ್ಥೆಯ ಕೊರತೆಯಿದೆ ಎಂದು ಯೋಗರಾಜ್ ಹೇಳಿದ್ದಾರೆ.
ಯೋಗರಾಜ್ ಸಿಂಗ್ ಒಬ್ಬ ಉತ್ತಮ ತರಬೇತುದಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಅವರಿಗೆ ಯೋಗರಾಜ್ ಸಿಂಗ್ ಅವರೇ ತರಬೇತಿ ನೀಡಿ ಅವರನ್ನು ಒಬ್ಬ ಸ್ಟಾರ್ ಆಲ್ರೌಂಡರ್ ಆಗಿ ರೂಪಿಸಿದ್ದರು. ವಾಸ್ತವವಾಗಿ ಯೋಗರಾಜ್ ಅವರ ಮಗನಾಗಿರುವ ಯುವರಾಜ್ ಎಂದಿಗೂ ಕ್ರಿಕೆಟಿಗನಾಗಲು ಬಯಸಿರಲಿಲ್ಲ. ಆದರೆ ಯೋಗರಾಜ್ ಅವರ ಪರಿಶ್ರಮ ಯುವರಾಜ್ ಅವರನ್ನು ಒಬ್ಬ ಸ್ಟಾರ್ ಕ್ರಿಕೆಟಿಗನನ್ನಾಗಿ ಮಾಡಿದ್ದು ಮಾತ್ರವಲ್ಲದೆ, ಯುವಿಯ ಆಲ್ರೌಂಡರ್ ಆಡದಿಂದಾಗಿ ದೇಶಕ್ಕೆ ಎರಡು ವಿಶ್ವಕಪ್‌ಗಳನ್ನು ಗೆಲ್ಲುವಂತೆ ಮಾಡಿದರು. ಇತ್ತೀಚೆಗೆ ಯೋಗರಾಜ್ ಸಿಂಗ್ ಸಚಿನ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರಿಗೂ ತರಬೇತಿ ನೀಡಿದ್ದರು. ಅವರ ತರಬೇತಿಯಡಿಯಲ್ಲಿ ಅರ್ಜುನ್ ರಣಜಿ ಕ್ರಿಕೆಟ್‌ನಲ್ಲಿ ಅದ್ಭುತ ಶತಕ ಕೂಡ ಬಾರಿಸಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ