ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ (RR vs KKR) ನಡುವಣ ಪಂದ್ಯ ರಣ ರೋಚಕವಾಗಿತ್ತು. ಕೊನೆಯ ಹಂತದ ವರೆಗೂ ನಡೆದ ಹೈವೋಲ್ಟೇಜ್ ಮ್ಯಾಚ್ನಲ್ಲಿ ಸಂಜು ಸ್ಯಾಮ್ಸನ್ ಬಳಗ 7 ರನ್ಗಳ ಜಯ ಸಾಧಿಸಿತು. ದೊಡ್ಡ ಮೊತ್ತದ ಟಾರ್ಗೆಟ್ ಇದ್ದರೂ ಶ್ರೇಯಸ್ ಅಯ್ಯರ್ ಪಡೆ ಗೆಲುವಿಗಾಗಿ ಕೊನೆಯ ಓವರ್ ವರೆಗೂ ಹೋರಾಟ ನಡೆಸಿತು. ಆದರೆ, ಡೆತ್ ಓವರ್ಗಳಲ್ಲಿ ಆರ್ ಆರ್ ಬೌಲರ್ಗಳು ನೀಡಿದ ಪ್ರದರ್ಶನದಿಂದ ಕೆಕೆಆರ್ ಟೂರ್ನಿಯಲ್ಲಿ ನಾಲ್ಕನೇ ಸೋಲು ಕಂಡಿದೆ. ರಾಜಸ್ಥಾನ್ ತಂಡ ಎರಡನೇ ಸ್ಥಾನದಲ್ಲಿ ಭದ್ರವಾಗಿದೆ. ಈ ಪಂದ್ಯದ ಪ್ರಮುಖ ಹೈಲೇಟ್ ಜೋಸ್ ಬಟ್ಲರ್ (Jos Butler) ಸ್ಫೋಟಕ ಶತಕ ಮತ್ತು ಯುಜ್ವೇಂದ್ರ ಚಹಲ್ (Yuzvendra Chahal) ಹ್ಯಾಟ್ರಿಕ್ ವಿಕೆಟ್ (ಒಟ್ಟು 5 ವಿಕೆಟ್). ಇದು ಐಪಿಎಲ್ ಇತಿಹಾಸದಲ್ಲಿ ನೂತನ ದಾಖಲೆ ಕೂಡ ಆಯಿತು. ಐಪಿಎಲ್‌ನಲ್ಲಿ ಇದುವರೆಗೆ ಒಂದು ಪಂದ್ಯದಲ್ಲಿ ಶತಕ ಮತ್ತು ಐದು ವಿಕೆಟ್ ಸಾಧನೆ ಮಾಡಿದ ಇತಿಹಾಸವಿರಲಿಲ್ಲ.
ಚಹಲ್ ಹ್ಯಾಟ್ರಿಕ್:
ರಾಜಸ್ಥಾನ್ ನೀಡಿದ್ದ 218 ರನ್ಗಳ ಬೃಹತ್ ಮೊತ್ತವನ್ನು ಬೆನ್ನನಟ್ಟಿದ ಕೆಕೆಆರ್ ತಂಡದ ಪರವಾಗಿ ಅನುಭವಿ ಆರೋನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಅವರಿಂದ ಭರ್ಜರಿ ಪ್ರದರ್ಶನ ಬಂತು. ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅಯ್ಯರ್ ಕೆಕೆಆರ್ ತಂಡಕ್ಕೆ ಜಯವನ್ನು ನೀಡಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಈ ಸಂದರ್ಭ ದಾಳಿಗಿಳಿದ ಯುಜ್ವೇಂದ್ರ ಚಹಲ್ ಕೆಕೆಆರ್ ತಂಡದ ಯೋಜನೆಯನ್ನು ಬುಡಮೇಲು ಮಾಡಿದರು. ಪಂದ್ಯದ ದಿಕ್ಕನ್ನೇ ಬದಲಿಸಿದರು. 17ನೇ ಓವರ್‌ನಲ್ಲಿ ಕೇವಲ 2 ರನ್ ನೀಡಿ ಹ್ಯಾಟ್ರಿಕ್ ವಿಕೆಟ್ ಸಹಿತ ನಾಲ್ಕು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಿಂಚಿದರು. ಈ ಓವರ್ನ ಮೊದಲ ಎಸೆತದಲ್ಲಿ ವೆಂಕಟೇಶ್ ಅಯ್ಯರ್(6) ಹಾಗೂ 4ನೇ ಬಾಲ್‌ನಲ್ಲಿ ಶ್ರೇಯಸ್ ಅಯ್ಯರ್(85), 5ನೇ ಬಾಲ್‌ನಲ್ಲಿ ಶಿವಂ ಮಾವಿ(0) ಹಾಗೂ 6ನೇ ಬಾಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್(0) ವಿಕೆಟ್ ಕಬಳಿಸುವ ಮೂಲಕ 2022ರ ಐಪಿಎಲ್‌ನ ಮೊದಲ ಹ್ಯಾಟ್ರಿಕ್ ಪಡೆದರು.
ಕೆಕೆಆರ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದ ಯುಜ್ವೇಂದ್ರ ಚಹಲ್ 40 ರನ್ ನೀಡಿ 5 ವಿಕೆಟ್ ಪಡೆದರು. ಆ ಮೂಲಕ ರಾಜಸ್ಥಾನ್ ರಾಯಲ್ಸ್ ಪರವಾಗಿ ಐಪಿಎಲ್‌ನಲ್ಲಿ 5 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿದರು. ಜೊತೆಗೆ ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧ 5 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಯನ್ನು ಪಡೆದರು. ಹ್ಯಾಟ್ರಿಕ್ ವಿಕೆಟ್ ಕಿತ್ತ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಬಟ್ಲರ್ ಶತಕ:
ಐಪಿಎಲ್ 2022 ಆರಂಭದಿಂದಲೂ ಅಮೋಘ ಫಾರ್ಮ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಕೆಕೆಆರ್ ವಿರುದ್ಧವೂ ತಮ್ಮ ಅಬ್ಬರವನ್ನು ಮುಂದುವರಿಸಿದರು. ಕೇವಲ 61 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿ ಒಟ್ಟು 103 ರನ್‌ಗಳಿಸಿದರು. ಇವರ ಖಾತೆಯಿಂದ 9 ಬೌಂಡರಿ ಹಾಗೂ 5 ಸಿಕ್ಸರ್ ಮೂಡಿಬಂತು. ಬಟ್ಲರ್ ಹೊರತುಪಡಿಸಿ ಆರ್‌ಆರ್ ಪರವಾಗಿ ಪಡಿಕ್ಕಲ್ 24 ರನ್‌ಗಳಿಸಿದರೆ ಸಂಜು ಸ್ಯಾಮ್ಸನ್ 38 ರನ್‌ಗಳಿಸಿದರು. ಶಿಮ್ರಾನ್ ಹೇಟ್ಮೇಯರ್ 26 ರನ್‌ಗಳಿಸಿ ಅಜೇಯವಾಗುಳಿದರು. ಪರಿಣಾಮ ಆರ್‌ಆರ್ ನಿಗದಿತ 20 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 217 ರನ್ ಸಿಡಿಸಿತು.
ಬೃಹತ್ ಮೊತ್ತ ಬೆನ್ನಟ್ಟಿದ ಕೆಕೆಆರ್ ಗೆಲುವಿಗೆ ಆ್ಯರನ್ ಫಿಂಚ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ಹೋರಾಟ ನಡೆಸಿದರೂ ಫಲಸಿಗಲಿಲ್ಲ. ಫಿಂಚ್ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಔಟಾದರು. ಅಯ್ಯರ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಒಟ್ಟು 51 ಎಸೆತಗಳನ್ನು ಎದುರಿಸಿದ ಅಯ್ಯರ್ 7 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 85 ರನ್ ಗಳಿಸಿ ಔಟ್ ಆದರು. ಕೊನೆಯವರಾಗಿ ಔಟ್ ಆದ ಉಮೇಶ್ ಯಾದವ್ (21 ರನ್, 9 ಎಸೆತ, 1 ಬೌಂಡರಿ, 2 ಸಿಕ್ಸರ್) ಗೆಲುವಿಗಾಗಿ ಪ್ರಯತ್ನಿಸಿದರೂ ಸ್ವಲ್ಪದರಲ್ಲೇ ಎಡವಿದರು. ಅಂತಿಮವಾಗಿ ಕೆಕೆಆರ್ 19.4 ಓವರ್ಗೆ 210 ರನ್ ಗಳಿಸಿ ಆಲೌಟ್ ಆಯಿತು.
Cristiano Ronaldo: ದಿಗ್ಗಜ ಫುಟ್ಬಾಲಿಗ ಕ್ರಿಸ್ಟಿಯಾನೋ ರೊನಾಲ್ಡೋ ಗಂಡು ಮಗು ಸಾವು
Published On - 8:43 am, Tue, 19 April 22