ಆಸ್ಟ್ರೇಲಿಯಾ ತಂಡದ ಡೆಡ್ಲಿ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್, ಲಾಕ್ಡೌನ್ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದಾರೆ. ಭಾರತೀಯ ಸಿನಿಮಾ ಹಾಡುಗಳಿಗೆ ಟಿಕ್ ಟಾಕ್ ವಿಡಿಯೋ ಮೂಲಕ, ಇಲ್ಲಿನ ಕ್ರಿಕೆಟ್ ಪ್ರೇಮಿಗಳ ಮನಸ್ಸನ್ನೂ ಕದ್ದಿದ್ದಾರೆ.
ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನ ಪ್ರತಿನಿಧಿಸೋ ಡೇವಿಡ್ ವಾರ್ನರ್, ತೆಲುಗು ಸಿನಿಮಾ ಡೈಲಾಗ್ಗಳನ್ನ ಹೊಡೆಯೋ ಮೂಲಕ, ತೆಲುಗು ಕ್ರಿಕೆಟ್ ಪ್ರೇಮಿಗಳ ಮನಸ್ಸು ಕದ್ದಿದ್ದಾರೆ. ಇತ್ತೀಚೆಗೆ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಪುರಂಲೋ ಸಿನಿಮಾದ ಬುಟ್ಟ ಬೊಮ್ಮಾ.. ಬುಟ್ಟ ಬೊಮ್ಮಾ ಹಾಡಿಗೆ ವಾರ್ನರ್ ಮತ್ತು ಪತ್ನಿ ಕ್ಯಾಂಡಿ ಟಿಕ್ ಟಾಕ್ ಮಾಡಿದ್ದರು.
ಈ ವಿಡಿಯೋವನ್ನ ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಈ ಟಿಕ್ ಟಾಕ್ ವಿಡಿಯೋ ನೋಡಿ ಅಲ್ಲು ಅರ್ಜುನ್ ಕೂಡ ಟ್ವಿಟರ್ ಮೂಲಕ ವಾರ್ನರ್ಗೆ ಧನ್ಯವಾದ ತಿಳಿಸಿದ್ದರು.
ಪೋಕಿರಿ ಡೈಲಾಗ್ ಹೇಳಿದ ವಾರ್ನರ್:
ಇದಾದ ಬಳಿಕ ಡೇವಿಡ್ ವಾರ್ನರ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಪೋಕಿರಿ ಸಿನಿಮಾ ಡೈಲಾಗ್ ಹೇಳಿದ್ದ ಟಿಕ್ ಟಾಕ್ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿ ಅನೇಕರು ವಾರ್ನರ್ ಅವರ ತೆಲುಗು ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಡೇವಿಡ್ ವಾರ್ನರ್ ತೆಲುಗು ಪ್ರೀತಿಗೆ ಟಾಲಿವುಡ್ನಲ್ಲಿ ಅವಕಾಶದ ಬಾಗಿಲು ತೆರೆಯುವಂತೆ ಮಾಡಿದೆ. ನಿಜ.. ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್, ಡೇವಿಡ್ ವಾರ್ನರ್ಗೆ ತಮ್ಮ ಸಿನಿಮಾದಲ್ಲಿ ನಟಿಸೋದಕ್ಕೆ ಆಫರ್ ನೀಡಿದ್ದಾರೆ.
ಅತಿಥಿ ಪಾತ್ರಕ್ಕೆ ಆಫರ್ ನೀಡಿದ ಪುರಿ ಜಗನ್ನಾಥ್:
ಟಾಲಿವುಡ್ನಲ್ಲಿ ಪೋಕಿರಿ ಸೇರಿದಂತೆ ಸಾಕಷ್ಟು ಹಿಟ್ ಸಿನಿಮಾಗಳನ್ನ ನೀಡಿರೋ ಪುರಿ, ಈಗ ಹೊಸ ಸಿನಿಮಾದ ನಿರ್ಮಾಣದಲ್ಲಿದ್ದಾರೆ. ಈ ಸಿನಿಮಾದಲ್ಲಿ ವಾರ್ನರ್ಗೆ ಪಾತ್ರವೊಂದನ್ನ ನೀಡೋದಕ್ಕೆ ಮುಂದಾಗಿದ್ದಾರೆ. ವಾರ್ನರ್ ಪೋಕಿರಿ ಸಿನಿಮಾದ ಡೈಲಾಗ್ ಟಿಕ್ ಟಾಕ್ ವಿಡಿಯೋಗೆ, ಪುರಿ ರೀ ಟ್ವಿಟ್ ಮಾಡಿದ್ದಾರೆ. ಡೇವಿಡ್ ಇದು ನೀವು. ಈ ಸಂಭಾಷಣೆ ನಿಮಗೆ ಸೂಕ್ತವಾಗಿದೆ. ನೀವು ನಟನಾಗಿ ಅದ್ಭುತವಾಗಿದ್ದೀರಿ. ನನ್ನ ಚಿತ್ರದಲ್ಲಿ ನೀವು ಅತಿಥಿ ಪಾತ್ರ ಮಾಡುತ್ತೀರಿ ಎಂದು ಭಾವಿಸುತ್ತೇವೆ. ನಿಮ್ಮನ್ನು ಪ್ರೀತಿಸುತ್ತೇನೆ ಎಂದಿದ್ದಾರೆ.
ಪುರಿ ಜಗನ್ನಾಥ್ ಟ್ವೀಟ್ಗೆ ವಾರ್ನರ್ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗೆ ವಾರ್ನರ್ ತೆಲುಗು ಸಿನಿಮಾ ಟಿಕ್ ಟಾಕ್ ವಿಡಿಯೋ ಮಾಡ್ತೀರೋದನ್ನ ನೋಡಿದ್ರೆ, ಟಾಲಿವುಡ್ನಲ್ಲಿ ಒಂದು ಕೈ ನೋಡೇ ಬಿಡೋಣ ಅನ್ನೋ ಆಲೋಚನೆಯಲ್ಲಿದ್ದಂತೆ ಕಾಣ್ತಿದ್ದಾರೆ.
Published On - 1:30 pm, Tue, 12 May 20