Euro Cup 2024: ಸ್ಪೇನ್ vs ಇಂಗ್ಲೆಂಡ್ ನಡುವೆ ಯುರೋ ಕಪ್ ಫೈನಲ್ ಫೈಟ್

|

Updated on: Jul 11, 2024 | 2:31 PM

Euro Cup 2024 Final: ಯುರೋ ಕಪ್ ಇತಿಹಾಸದಲ್ಲೇ ಇಂಗ್ಲೆಂಡ್ ತಂಡವು ಎರಡನೇ ಬಾರಿಗೆ ಫೈನಲ್​ಗೆ ಪ್ರವೇಶಿಸಿದೆ. 2021 ರಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ್ದ ಆಂಗ್ಲರು ಈ ಬಾರಿಯಾದರೂ ಕಪ್ ಗೆಲ್ಲುವ ಹಂಬಲದಲ್ಲಿದ್ದಾರೆ. ಮತ್ತೊಂದೆಡೆ ಸ್ಪೇನ್ ಪಡೆಯು 12 ವರ್ಷಗಳ ಬಳಿಕ ಮತ್ತೊಮ್ಮೆ ಯುರೋ ಕಪ್ ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಜುಲೈ 15 ರಂದು ನಡೆಯಲಿರುವ ಯುರೋ ಕಪ್ ಫೈನಲ್ ಪಂದ್ಯದಲ್ಲಿ ರಣರೋಚಕ ಪೈಪೋಟಿ ನಿರೀಕ್ಷಿಸಬಹುದು.

Euro Cup 2024: ಸ್ಪೇನ್ vs ಇಂಗ್ಲೆಂಡ್ ನಡುವೆ ಯುರೋ ಕಪ್ ಫೈನಲ್ ಫೈಟ್
Euro Cup 2024 Final
Follow us on

ಯುರೋ ಕಪ್​ನ (Euro Cup 2024) ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನೆದರ್​ಲೆಂಡ್ಸ್ ವಿರುದ್ಧ ಇಂಗ್ಲೆಂಡ್ ತಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಯುರೋ ಕಪ್​ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಜರ್ಮನಿಯ ಸಿಗ್ನಲ್ ಇಡುನಾ ಪಾರ್ಕ್​ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದಿತ್ತು. ಆರಂಭದಿಂದೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ್ದ ನೆದರ್​ಲೆಂಡ್ಸ್ ತಂಡದ ಮುನ್ಪಡೆ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದೇ ವೇಳೆ ಇಂಗ್ಲೆಂಡ್ ತಂಡವು ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು.

ಇದರ ನಡುವೆ ಪಂದ್ಯದ 7ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸುವಲ್ಲಿ ಕ್ಸೇವಿ ಸೈಮನ್ಸ್ ಯಶಸ್ವಿಯಾದರು. ಆರಂಭದಲ್ಲೇ ಸಿಕ್ಕ ಮುನ್ನಡೆಯಿಂದ ಹಿಗ್ಗಿದ ನೆದರ್​ಲೆಂಡ್ಸ್ ತಂಡವು ಭರ್ಜರಿ ಪ್ರದರ್ಶನ ಮುಂದುವರೆಸಿದ್ದರು.

ಅತ್ತ ಆರಂಭದಲ್ಲೇ ಹಿನ್ನಡೆ ಅನುಭವಿಸಿದರೂ ಇಂಗ್ಲೆಂಡ್ ತಂಡ ಒತ್ತಡಕ್ಕೆ ಒಳಗಾಗಲಿಲ್ಲ. ಬದಲಾಗಿ ತಂಡದ ಮುನ್ಪಡೆ ಆಟಗಾರರಾದ ಹ್ಯಾರಿ ಕೇನ್, ಆಲಿ ವಾಟ್ಕಿನ್ಸ್, ಸಾಕಾ ಮತ್ತು ಬೆಲ್ಲಿಂಗ್​ಹ್ಯಾಮ್ ಉತ್ತಮ ಹೊಂದಾಣಿಕೆ ಪ್ರದರ್ಶನ ಮುಂದುವರೆಸಿದ್ದರು.

ಪರಿಣಾಮ 18ನೇ ನಿಮಿಷದಲ್ಲಿ ಇಂಗ್ಲೆಂಡ್ ತಂಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿದೆ. ಈ ಪೆನಾಲ್ಟಿಯನ್ನು ಗೋಲಾಗಿಸುವಲ್ಲಿ ನಾಯಕ ಹ್ಯಾರಿ ಕೇನ್ ಯಶಸ್ವಿಯಾದರು. ಅದರಂತೆ ಮೊದಲಾರ್ಧವು 1-1 ಅಂತರದದಲ್ಲಿ ಕೊನೆಗೊಂಡಿತು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳಿಂದಲೂ ಭರ್ಜರಿ ಪೈಪೋಟಿ ಕಂಡು ಬಂದರೂ, 89ನೇ ನಿಮಿಷದವರೆಗೆ ಗೋಲು ದಾಖಲಿಸುವಲ್ಲಿ ಎರಡೂ ತಂಡಗಳ ಆಟಗಾರರು ವಿಫಲರಾದರು. ಆದರೆ ಇನ್ನೇನು ಪಂದ್ಯ ಮುಗಿಯಲಿದೆ ಎನ್ನುವಷ್ಟರಲ್ಲಿ 90ನೇ ನಿಮಿಷದಲ್ಲಿ ಇಂಗ್ಲೆಂಡ್​ನ ಆಲಿ ವಾಟ್ಕಿನ್ಸ್ ಅತ್ಯುತ್ತಮ ಡ್ರಿಬ್ಲಿಂಗ್ ಮೂಲಕ ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಿದರು.

ಈ ಗೋಲಿನೊಂದಿಗೆ ಇಂಗ್ಲೆಂಡ್ ತಂಡವು ಗೆಲುವನ್ನು ಖಚಿತಪಡಿಸಿಕೊಂಡಿತು. ಅದರಂತೆ ಅಂತಿಮವಾಗಿ 2-1 ಅಂತರದಿಂದ ಗೆಲ್ಲುವ ಮೂಲಕ ಇಂಗ್ಲೆಂಡ್ ತಂಡ ಯುರೋ ಕಪ್​ ಫೈನಲ್​ಗೆ ಪ್ರವೇಶಿಸಿದೆ.

ಸ್ಪೇನ್ vs ಇಂಗ್ಲೆಂಡ್ ಮುಖಾಮುಖಿ:

ಮೊದಲ ಸೆಮಿಫೈನಲ್​ನಲ್ಲಿ ಬಲಿಷ್ಠ ಫ್ರಾನ್ಸ್ ತಂಡವನ್ನು 2-1 ಅಂತರದಿಂದ ಮಣಿಸುವ ಮೂಲಕ ಸ್ಪೇನ್ ಪಡೆ ಫೈನಲ್​ಗೆ ಲಗ್ಗೆಯಿಟ್ಟಿದೆ. ಅದರಂತೆ ಜುಲೈ 15 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಸ್ಪೇನ್ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.

ಯುರೋ ಕಪ್​ ಇತಿಹಾಸದಲ್ಲಿ ಸ್ಪೇನ್ ತಂಡವು ಕೇವಲ 3 ಬಾರಿ ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿದೆ. 1964 ರಲ್ಲಿ ಚೊಚ್ಚಲ ಬಾರಿ ಟ್ರೋಫಿ ಗೆದ್ದಿದ್ದ ಸ್ಪೇನ್ ಆ ಬಳಿಕ 2008 ಮತ್ತು 2012 ರಲ್ಲಿ ಯುರೋ ಕಪ್ ಗೆದ್ದುಕೊಂಡಿದ್ದರು.

ಇದನ್ನೂ ಓದಿ: ಚಾಂಪಿಯನ್ಸ್​ ಟ್ರೋಫಿಯಿಂದ ಟೀಮ್ ಇಂಡಿಯಾ ಹಿಂದೆ ಸರಿದರೆ, ಯಾವ ತಂಡಕ್ಕೆ ಚಾನ್ಸ್?

ಇನ್ನು ಇಂಗ್ಲೆಂಡ್ ತಂಡವು ಇದುವರೆಗೆ ಯುರೋ ಕಪ್ ಗೆದ್ದಿಲ್ಲ. ಅದರಲ್ಲೂ 2021 ರಲ್ಲಿ ಫೈನಲ್​ಗೆ ಪ್ರವೇಶಿಸಿದ್ದ ಇಂಗ್ಲೆಂಡ್ ಅಂತಿಮ ಹಣಾಹಣಿಯಲ್ಲಿ ಇಟಲಿ ವಿರುದ್ಧ 3-2 ಅಂತರದಿಂದ ಸೋಲೊಪ್ಪಿಕೊಂಡಿತು. ಇದೀಗ 2ನೇ ಬಾರಿಗೆ ಫೈನಲ್​ಗೆ ಲಗ್ಗೆಯಿಟ್ಟಿರುವ ಆಂಗ್ಲರು ಚೊಚ್ಚಲ ಯುರೋ ಕಪ್ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

 

Published On - 2:27 pm, Thu, 11 July 24