ದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ 2011ರ ವಿಶ್ವಕಪ್ ಏಕದಿನ ಫೈನಲ್ ಪಂದ್ಯದಲ್ಲಿ ಶತಕ ಮಿಸ್ ಆಗೋದಕ್ಕೆ ಧೋನಿಯೇ ಕಾರಣ ಎಂದು ಗಂಭೀರ್ ಗಂಭೀರ ಆರೋಪ ಮಾಡಿದ್ದಾರೆ.
2011ರ ವಿಶ್ವಕಪ್ ಏಕದಿನ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿಯಂತೆ ಗೌತಮ್ ಗಂಭೀರ್ ಹೋರಾಟವೂ ರಣರೋಚಕವಾಗಿತ್ತು. ಆವತ್ತು 97 ರನ್ಗಳಿಸಿದ್ದ ಗಂಭೀರ್, ತಿಸ್ಸಾರಾ ಪರೇರಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. 97 ರನ್ಗಳಿಸಿದ್ದ ಗೌತಿಗೆ ಶತಕ ಪೂರೈಸೋದಕ್ಕೆ ಕೇವಲ 3 ರನ್ಗಳು ಮಾತ್ರ ಬೇಕಿತ್ತು.
ಆದರೆ ಶತಕವಂಚಿತನಾಗಿ ಗಂಭೀರ್ ಔಟಾದ್ರೂ ವಿಶ್ವಕಪ್ ಗೆಲುವಿಗಾಗಿ ಹೋರಾಡಿದ್ದನ್ನ ಯಾರೂ ಮರೆಯೋ ಹಾಗಿಲ್ಲ. ಶತಕ ಸಿಡಿಸದಿದ್ರೂ ಗಂಭೀರ್ ವಿಶ್ವಕಪ್ ಗೆಲುವಿನ ಹೀರೋ ಅನ್ನೋದನ್ನ ಯಾವೊಬ್ಬ ಕ್ರಿಕೆಟ್ ಪ್ರೇಮಿಯೂ ಅಲ್ಲಗೆಳೆಯೋದಿಲ್ಲ. ಆದರೆ ಗಂಭೀರ್ ಈ ವಿಚಾರದಲ್ಲಿ ಧೋನಿಯನ್ನ ಖಳನಾಯಕನನ್ನಾಗಿ ನಿರೂಪಿಸೋದಕ್ಕೆ ಮುಂದಾಗಿದ್ದಾರೆ.
ಶತಕ ಮಿಸ್ ಆಗೋದಕ್ಕೆ ಧೋನಿಯೇ ಕಾರಣ ಎಂದ ಗಂಭೀರ್!
ಧೋನಿ ವಿಚಾರದಲ್ಲಿ ಗೌತಮ್ ಗಂಭೀರ್ ಕುಣಿಯೋಕೆ ಬಾರದವನು ನೆಲ ಡೊಂಕು ಅನ್ನೋ ಹಾಗೇ, ಶತಕ ಸಿಡಿಸೋಕಾಗದ ಗಂಭೀರ್, ಧೋನಿ ಮೇಲೆ ಗೂಬೆ ಕೂರಿಸಿದ್ದಾರೆ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನಾನು ಶತಕವಂಚಿತನಾಗೋದಕ್ಕೆ ಮಾಹಿಯೇ ಕಾರಣ ಅಂತಾ ಆರೋಪ ಮಾಡಿದ್ದಾರೆ.
ಶತಕದ ಬಗ್ಗೆ ಯೋಚಿಸಿರಲಿಲ್ಲ:
‘‘ ನನಗೆ ತುಂಬಾ ಜನ ಕೇಳಿದ್ದಾರೆ. ನೀವ್ಯಾಕೆ 97 ರನ್ಗಳಾಗಿದ್ದಾಗ ವಿಕೆಟ್ ಒಪ್ಪಿಸಿದ್ರಿ. ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸೋ ಅವಕಾಶವನ್ನ ಕೈಚೆಲ್ಲಿದ್ರಿ ಅಂತ. ಆದ್ರೆ ಆವತ್ತು ನಾನು ನನ್ನ ವೈಯಕ್ತಿಕ ಸಾಧನೆಯ ಬಗ್ಗೆ ಯೋಚಿಸಿರಲಿಲ್ಲ. ಆದ್ರೆ ಧೋನಿ ಆಡಿದ ಅದೊಂದು ಮಾತು ನನ್ನ ದಾರಿ ತಪ್ಪಿಸಿಬಿಡ್ತು’’ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
‘‘ ನನಗಿನ್ನೂ ನೆನಪಿದೆ. ಧೋನಿ ನನಗೆ ಹೇಳಿದ್ರು. ನಿನ್ನ ಶತಕ ಕಂಪ್ಲೀಟ್ ಆಗೋದಕ್ಕೆ ಇನ್ನು 3 ರನ್ ಬೇಕಿದೆ. ಆ ಮೂರು ರನ್ ಹೊಡೆದು ಶತಕ ಪೂರೈಸು ಅಂತ. ಧೋನಿ ಹೀಗೆ ಹೇಳೋದಕ್ಕಿಂತ ಮೊದಲು ನನ್ನ ಮನಸ್ಸಿನಲ್ಲಿ ಒಂದೇ ಆಲೋಚನೆ ಇತ್ತು. ಶ್ರೀಲಂಕಾ ನೀಡಿದ ಟಾರ್ಗೆಟ್ ಅನ್ನ ಬೆನ್ನತ್ತೋದು. ಆದ್ರೆ ಧೋನಿ ಹೀಗೆ ಹೇಳಿದ್ದು ಏಕಾಏಕಿ ನನಗೆ ನನ್ನ ಶತಕದ ಮೇಲೆ ಗಮನ ಕೇಂದ್ರಿಕೃತವಾಗೋ ಹಾಗೇ ಆಯ್ತು. ಸುಲಭವಾಗಿ ಶತಕ ಸಿಡಿಸಿಬಹುದು ಅಂತಾ ಲೇಜಿ ಶಾಟ್ ಹೊಡೆದು ಔಟಾಗಿಬಿಟ್ಟೆ ಎಂದು ಗೌತಮ್ ಗಂಭೀರ್ ಆರೋಪಿಸಿದ್ದಾರೆ.
ಡೆಲ್ಲಿಯಲ್ಲಿ ಮತದಾರರ ಆಕ್ರೋಶ ಗಮನ ಬೇರೆಡೆ ಸೆಳೆಯಲು ಗೌತಿ ತಂತ್ರ!
ಮೊನ್ನೆ ದೆಹಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಕುರಿತು ಸಂಸದೀಯ ಸಮಿತಿ ಸಭೆ ಕರೆಯಲಾಗಿತ್ತು. ಆದ್ರೆ ಈ ಸಭೆಗೆ ಸಂಸದ ಗೌತಮ್ ಗಂಭೀರ್ ಗೈರು ಹಾಜರಾಗಿದ್ರು. ಆದ್ರೆ ಗಂಭೀರ್ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಪಂದ್ಯದ ಕಾಮೆಂಟೇಟರ್ ಆಗಿ ಇಂದೋರ್‌ನಲ್ಲಿದ್ದರು. ಹೀಗಾಗಿ ದೆಹಲಿಯಲ್ಲಿ ಗಂಭೀರ್ ಕಾಣೆಯಾಗಿದ್ದಾರೆ ಎನ್ನುವ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇದನ್ನ ನೋಡಿದ ಗಂಭೀರ್, ಆಕ್ರೋಶಗೊಂಡು ದೆಹಲಿ ನಾಗರಿಕರ ಗಮನ ಬೇರೆಡೆ ಸೆಳೆಯಲು ಗಂಭೀರ್ ಧೋನಿ ಮೇಲೆ ಗೂಬೆ ಕೂರಿಸೋ ಪ್ರಯತ್ನ ಮಾಡಿದ್ದಾರೆ ಎನ್ನಲಾಗುತ್ತಿದೆ.
ಗಂಭೀರ್ ಹೇಳಿದ ಮಾತಿಗೆ ಮಹೇಂದ್ರ ಸಿಂಗ್ ಧೋನಿ ಕಿಂಚಿತ್ತೂ ತಲೆಕೆಡಿಸಿಕೊಂಡಿಲ್ಲ. ಗಂಭೀರ್ನಿಂದ ಇಂತಹ ಆರೋಪಗಳು ಹೊಸದೇನಲ್ಲ ಮೊದಲಿನಿಂದಲೂ ಅಷ್ಟೇ. ಅದಕ್ಕೆ ಯಾರ್ ಏನೇ ಅಂದ್ರೂ ಧೋನಿ ಪ್ರತಿಕ್ರಿಯೆ ನೀಡೋದಕ್ಕೆ ಹೋಗೋದಿಲ್ಲ. ತಮ್ಮ ಕ್ರಿಕೆಟ್ ಬದುಕಾಯ್ತು.. ತಮ್ಮ ಕುಟುಂಬವಾಯ್ತು ಅಂತಾ ಸುಮ್ಮನಿರ್ತಾರೆ. ಆದ್ರೆ ಗಂಭೀರ್ ಮಾತ್ರ ಭಾರತೀಯ ಕ್ರಿಕೆಟ್ಗೆ ಮೆರುಗು ತಂದುಕೊಟ್ಟ ಧೋನಿ ವಿಚಾರದಲ್ಲಿ ಪದೆ ಪದೆ ಇಲ್ಲ ಸಲ್ಲದ ಆರೋಪ ಮಾಡಿ ಅಭಿಮಾನಿಗಳ ದೃಷ್ಟಿಯಲ್ಲಿ ಕೆಳಕ್ಕೆ ಬೀಳ್ತಿದ್ದಾರೆ.
Published On - 12:46 pm, Tue, 19 November 19