Gadag: ಜಿಲ್ಲೆಯ ಯುವ ಕ್ರೀಡಾ ಫ್ರತಿಭೆಗಳಿಗೆ ಸಹಕಾರಿಯಾಗಲೆಂದು ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ರಾಜ್ಯದ ಎರಡನೇ ಅತೀ ದೊಡ್ಡ ಸಿಂಥೆಟಿಕ್ ಟ್ರ್ಯಾಕ್ (Synthetic Track Stadium), ಕ್ರೀಡಾ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಹಾಗೂ ಅವೈಜ್ಞಾನಿಕ ನಿರ್ವಾಹಣೆಯಿಂದಾಗಿ ದುಸ್ಥಿತಿಗೆ ತಲುಪಿದ್ದು, ಕ್ರೀಡಾಪಟುಗಳ ಆಕ್ರೋಶಕ್ಕೆ ಕಾರಣವಾಗಿದೆ. ವಾಸ್ತವವಾಗಿ ಯುವ ಅಥ್ಲಿಟ್ಗಳ (Athletes) ಅಭ್ಯಾಸಕ್ಕೆಂದು ನಿರ್ಮಾಣವಾದ ಕ್ರೀಡಾಂಗಣವನ್ನು ಬೇರೆ ಬೇರೆ ಕಾರ್ಯಕ್ರಮ ಹಾಗೂ ಜನಸಾಮಾನ್ಯರು ಮುಂಜಾನೆ ವಾಕ್ ಮಾಡಲು ಅವಕಾಶ ನೀಡಲಾಗುತ್ತಿದೆ. ಇದರಿಂದ ಸಿಂಥೆಟಿಕ್ ಟ್ರ್ಯಾಕ್ ಸಂಪೂರ್ಣ ಹಾಳಾಗಿದ್ದು ನಮ್ಮ ಅಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಅಥ್ಲಿಟ್ಗಳು ತಮ್ಮ ಅಳಲು ತೊಡಿಕೊಂಡಿದ್ದಾರೆ. ಕ್ರೀಡಾ ಇಲಾಖೆ ನಿರ್ಲಕ್ಷ್ಯದಿಂದಲೇ ಸಿಂಥೆಟಿಕ್ ಟ್ರ್ಯಾಕ್ ಹಾಳಾಗಿದೆ ಅಂತ ಕ್ರೀಡಾಪಟುಗಳು ಕೆಂಡಕಾರಿದ್ದಾರೆ.
ಕ್ರೀಡೆ ಬಗ್ಗೆ ಹೆಚ್ಚು ಆಸಕ್ತಿ ಇರುವ ಗದಗ ಶಾಸಕರೂ ಆದ ಸಚಿವ ಎಚ್ ಕೆ ಪಾಟೀಲ್ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದಾಗ 2.54ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಮಾಡಿದ್ದರು. ಈ ಸಿಂಥೆಟಿಕ್ ಟ್ರ್ಯಾಕ್ ಗದಗ ಜಿಲ್ಲೆಯ ಅಥ್ಲೆಟಿಕ್ ಕ್ರೀಡಾಪಟುಗಳಿಗೆ ತುಂಬಾ ಅನಕೂಲ ಆಗಿತ್ತು. ಈ ಟ್ರ್ಯಾಕ್ನಲ್ಲಿ ಓಡಿದ ಅಥ್ಲೆಟಿಕ್ ಕ್ರೀಡಾಪಟುಗಳು ಈಗ ರಾಜ್ಯ, ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ. ಆದರೆ ಈಗ ಈ ಸಿಂಥೆಟಿಕ್ ಟ್ರ್ಯಾಕ್ ಈಗ ಸಂಪೂರ್ಣ ಹಳ್ಳಹಿಡಿದಿದೆ. ಎಲ್ಲಿ ಬೇಕಾದಲ್ಲಿ ಟ್ರ್ಯಾಕ್ ಕಿತ್ತು ಹೋಗಿದೆ.
ಈ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ಓಡಬೇಕು ಅಂದರೆ ಕಡ್ಡಾಯವಾಗಿ ಶೂ ಧರಿಸಿಯೇ ಓಡಬೇಕು. ಬರಿ ಗಾಲಿನಲ್ಲಿ, ಪಾದರಕ್ಷೆ ಹಾಕಿಕೊಂಡು ಈ ಟ್ರ್ಯಾಕ್ನಲ್ಲಿ ಸುತ್ತಾಡುವಂತಿಲ್ಲ. ಆದರೆ, ಸಾರ್ವಜನಿಕರನ್ನು ಬೇಕಾಬಿಟ್ಟಿ ಅಡ್ಡಾಡಲು ಕ್ರೀಡಾ ಇಲಾಖೆ ಅವಕಾಶ ನೀಡಿದೆ. ಇಲ್ಲಿ ಬೆಳಗ್ಗೆ, ಸಂಜೆ ವೇಳೆ ಸಿಂಥೆಟಿಕ್ ಟ್ರ್ಯಾಕ್ನಲ್ಲಿ ವಾಕಿಂಗ್ ಮಾಡಲು ನೂರಾರು ಜನರು ಆಗಮಿಸುತ್ತಾರೆ. ಹೀಗಾಗಿಯೇ ಟ್ರ್ಯಾಕ್ ಸಂಪೂರ್ಣ ಹದಗೆಟ್ಟಿದೆ. ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾದ ಆದ ಟ್ರ್ಯಾಕ್ ಹಾಳಾಗಲು ಕ್ರೀಡಾ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತ ಕ್ರೀಡಾಪ್ರೇಮಿ ಚಂದ್ರಕಾಂತ್ ಕ್ರೀಡಾ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.
ಸಿಂಥೆಟಿಕ್ ಟ್ರ್ಯಾಕ್ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಬಳಸುವಂತಿಲ್ಲ. ಆದರೆ, ಕ್ರೀಡಾ ಇಲಾಖೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ಯುವ ಅಥ್ಲೆಟಿಕ್ ಕ್ರೀಡಾಪಟುಗಳ ಭವಿಷ್ಯಕ್ಕೆ ಕೊಳ್ಳೆ ಇಡುತ್ತಿದ್ದಾರೆ. ಬೇರೆ ಬೇರೆ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಮೂಲಕ ಕ್ರೀಡಾ ಇಲಾಖೆ ಅಧಿಕಾರಿಗಳು ಆಸ್ತಿ ಹಾಳು ಮಾಡುತ್ತಿದ್ದಾರೆ. ಇದು ಕ್ರೀಡಾಪಟುಗಳು, ಕ್ರೀಡಾಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಉತ್ಸವ, ಕ್ರಿಕೆಟ್ ಟೋರ್ನಾಮೆಂಟ್ಗೆ ಕ್ರೀಡಾ ಇಲಾಖೆ ನಿಯಮ ಉಲ್ಲಂಘಿಸಿ ಅನುಮತಿ ನೀಡಿದ್ದಾರೆ. ಈ ಕಾರ್ಯಕ್ರಮಗಳಿಗೆ ಸಾವಿರಾರು ಜನರು ಜಮಾಯಿಸಿದ ಕಾರಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ಸಂಪೂರ್ಣ ಹಾಳಾಗಿ ಹೋಗಿದೆ.
ಹೀಗಾಗಿ ಯುವ ಅಥ್ಲೆಟಿಕ್ ಕ್ರೀಡಾಪಟುಗಳ ತರಬೇತಿಗೆ ತೀವ್ರ ಸಮಸ್ಯೆಯಾಗಿದೆ. ಕ್ರೀಡಾಪಟುಗಳಿಗೆ ಸಮಸ್ಯೆ ಆಗ್ತಾಯಿದ್ರೂ ಯಾರೂ ಬಾಯಿ ಬಿಡ್ತಾಯಿಲ್ಲ. ಎಲ್ಲ ನಮ್ಮ ಭವಿಷ್ಯಕ್ಕೆ ಕಲ್ಲು ಬಿಳುತ್ತೋ ಅನ್ನೋ ಆತಂಕದಲ್ಲೇ ಹಾನಿಯಾದ ಟ್ರ್ಯಾಕ್ನಲ್ಲೇ ಪ್ರ್ಯಾಕ್ಟಿಸ್ ಮಾಡುತ್ತಿದ್ದಾರೆ. ಕ್ರೀಡಾಂಗಣದಲ್ಲಿ ನೀರಿಲ್ಲ. ಟ್ರ್ಯಾಕ್ ನಿರ್ವಹಣೆ ಮಾಡ್ತಾಯಿಲ್ಲ. ಸಿಂಥೆಟಿಕ್ ಟ್ರ್ಯಾಕ್ನಲ್ಲಿ ನೀರು ಹಾಕಿಯೇ ಓಡಬೇಕು. ಇಲ್ಲದಿದ್ದರೆ ಕ್ರೀಡಾಪಟುಗಳು ಕಾಲು ನೋವಿಗೆ ತುತ್ತಾಗುತ್ತಾರೆ ಎಂದು ಕ್ರೀಡಾಪಟು ಶಶಿಕಾಂತ ನೋವು ವ್ಯಕ್ತಪಡಿಸಿದ್ದಾರೆ.
ಅಥ್ಲೆಟಿಕ್ಸಗಳಿಗೆ ಕ್ರೀಡಾಂಗಣದಲ್ಲಿ ಪ್ರ್ಯಾಕ್ಟಿಸ್ಗೆ ಸರಿಯಾಗಿ ಅವಕಾಶ ಸಿಗುತ್ತಿಲ್ಲ. ಸಾಕಷ್ಟು ಜನ ವಾಕರ್ಸ್ಗಳು ಬಂದು ವಾಕ್ ಮಾಡುತ್ತಾರೆ. ಹೀಗಾಗಿ ಕ್ರೀಡಾಪಟಗಳಿಗೆ ಉಪಯೋಗ ಆಗುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ. ರಾಷ್ಟ್ರ, ಅಂತರಾಷ್ಟ್ರ ಮಟ್ಟಕ್ಕೆ ಕ್ರೀಡಾಪಟುಗಳು ನೀಡಿದ ಟ್ರ್ಯಾಕ್ನ ಸ್ಥಿತಿ ನೋಡಿ ಕ್ರೀಡಾಪಟುಗಳು ಮಮ್ಮಲಮರುಗುತ್ತಿದ್ದಾರೆ. ಈ ಟ್ರ್ಯಾಕ್ ಯಾವ ಉದ್ದೇಶಕ್ಕೆ ನಿರ್ಮಾಣ ಆಗಿದೆಯೋ ಅದೇ ಉದ್ದೇಶಕ್ಕೆ ಬಳಸಬೇಕು. ಅಥ್ಲೆಟಿಕ್ಸ್ಗಳಿಗೆ ಉಪಯೋಗ ಆಗಬೇಕಾದರೆ, ಸಾರ್ವಜನಿಕರಿಗೆ ಅವಕಾಶ ನೀಡಬಾರದು ಎಂದು ಕ್ರೀಡಾಪಟುಗಳು ಒತ್ತಾಯಿಸಿದ್ದಾರೆ. ಇನ್ನಾದರೂ ಕ್ರೀಡಾ ಇಲಾಖೆ ಅಧಿಕಾರಿಗಳು, ಸಚಿವರು, ಜಿಲ್ಲಾಡಳಿತ ಎಚ್ಚೆತ್ತುಕೊಂಡು ಜಿಲ್ಲೆಯ ಕ್ರೀಡಾಪಟುಗಳ ಭವಿಷ್ಯ ದಾರಿ ಮಾಡಿಕೊಡುತ್ತಾ ಅಂತ ಕಾದುನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:26 pm, Fri, 24 November 23