ಹಾಕಿ ತಂಡದ ಜೆರ್ಸಿ ಬಣ್ಣ ಬದಲಾವಣೆಯನ್ನು ಟೀಕಿಸಿದ ಕಾಂಗ್ರೆಸ್; ಹಾಕಿ ಇಂಡಿಯಾದ ಸಮರ್ಥನೆ ಏನು?

Indian Hockey Jersey Color Change: ಭಾರತೀಯ ಹಾಕಿ ತಂಡದ ಜೆರ್ಸಿ ಬಣ್ಣ ಬದಲಾವಣೆ ಕುರಿತು ಎಐಸಿಸಿ ಅಧ್ಯಕ್ಷ ಖರ್ಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. 'ಮೆನ್ ಇನ್ ಬ್ಲೂ' ಗುರುತನ್ನು ಬದಲಾಯಿಸುವುದು ರಾಷ್ಟ್ರೀಯ ಗುರುತು ಮತ್ತು ಕ್ರೀಡಾ ಸಂಪ್ರದಾಯಕ್ಕೆ ಧಕ್ಕೆ ಎಂದಿದ್ದಾರೆ. ಹಾಕಿ ಇಂಡಿಯಾ ನೀಲಿ ಟರ್ಫ್‌ನಲ್ಲಿ ಗೋಚರತೆ ಮತ್ತು ರಾಷ್ಟ್ರಧ್ವಜದ ಬಣ್ಣದ ಪ್ರತಿನಿಧಿತ್ವಕ್ಕಾಗಿ ಕಿತ್ತಳೆಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ಸಮರ್ಥಿಸಿದೆ. ಈ ನಿರ್ಧಾರ ರಾಜಕೀಯ ಹಸ್ತಕ್ಷೇಪದ ಕುರಿತು ಚರ್ಚೆ ಹುಟ್ಟುಹಾಕಿದೆ.

ಹಾಕಿ ತಂಡದ ಜೆರ್ಸಿ ಬಣ್ಣ ಬದಲಾವಣೆಯನ್ನು ಟೀಕಿಸಿದ ಕಾಂಗ್ರೆಸ್; ಹಾಕಿ ಇಂಡಿಯಾದ ಸಮರ್ಥನೆ ಏನು?
Mallikarjun Kharge

Updated on: Aug 02, 2026 | 8:14 PM

2026 ರ ಹಾಕಿ ವಿಶ್ವಕಪ್‌ಗಾಗಿ ಹಾಕಿ ಇಂಡಿಯಾ (Hockey India), ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳ ಜೆರ್ಸಿ ಬಣ್ಣವನ್ನು ಬದಲಿಸಿದೆ. ಈ ಮೊದಲು ಭಾರತ ಹಾಕಿ ತಂಡ ನೀಲಿ ಬಣ್ಣದ ಜೆರ್ಸಿ ತೊಟ್ಟು ಆಡುತ್ತಿತ್ತು. ಹಾಗೆಯೇ ಬಿಳಿ ಮತ್ತು ಕೇಸರಿ ಮಿಶ್ರಿತ ಜೆರ್ಸಿಯನ್ನೂ ತೊಟ್ಟು ಆಡುತ್ತಿತ್ತು. ಇದೀಗ ಸಂಪೂರ್ಣ ಕೇಸರಿ ಬಣ್ಣದ ಜೆರ್ಸಿಯನ್ನು ತೊಟ್ಟು ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಕಣಕ್ಕಿಳಿಯಿವೆ. ಇದ್ದಕ್ಕಿದಂತೆ ಹಾಕಿ ತಂಡದ ಜೆರ್ಸಿ ಬಣ್ಣವನ್ನು ( Indian Hockey Jersey Controversy) ಬದಲಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಅದು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್ ಪಕ್ಷ ಕೂಡ ಹಾಕಿ ಇಂಡಿಯಾದ ಈ ನಿರ್ಧಾರವನ್ನು ಪ್ರಶ್ನಿಸಿದೆ.

ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ

ಹಾಕಿ ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವುದನ್ನು ಕಟುವಾಗಿ ಟೀಕಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘ಭಾರತೀಯ ಹಾಕಿ ತಂಡದ ಜೆರ್ಸಿಯ ಬಣ್ಣವನ್ನು ಬದಲಾಯಿಸುವ ನಿರ್ಧಾರವು ಕೇವಲ ಕ್ರೀಡಾ ನಿರ್ಧಾರವಲ್ಲ, ಬದಲಾಗಿ ಕೋಟ್ಯಂತರ ಭಾರತೀಯರ ಭಾವನೆಗಳು ಮತ್ತು ನಮ್ಮ ಕ್ರೀಡಾ ಸಂಪ್ರದಾಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಹಲವು ವರ್ಷಗಳಿಂದ ಭಾರತೀಯ ಆಟಗಾರರನ್ನು “ಮೆನ್ ಇನ್ ಬ್ಲೂ”, “ದಿ ಬ್ಲೂಸ್” ಅಥವಾ “ದಿ ಬ್ಲೂ ಟೈಗರ್ಸ್” ಎಂದು ಪ್ರಪಂಚದಾದ್ಯಂತ ಕರೆಯಲಾಗುತ್ತದೆ. ಈ ಗುರುತು ಕೇವಲ ಜೆರ್ಸಿಯ ಬಣ್ಣದ ಬಗ್ಗೆ ಅಲ್ಲ, ಬದಲಾಗಿ ಭಾರತೀಯ ಕ್ರೀಡೆಗಳ ಪರಂಪರೆಯಾಗಿದೆ.

ತಮಗೆ ಬೇಕಾದ ರೀತಿಯಲ್ಲಿ ಬದಲಾವಣೆ

ಈ ಐತಿಹಾಸಿಕ ಗುರುತನ್ನು ಬದಲಾಯಿಸುವ ಅಗತ್ಯ ಇಂದು ಏಕೆ ಬಂತು ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಪ್ರಶ್ನೆ ಬಣ್ಣದ ಬಗ್ಗೆ ಅಲ್ಲ, ಬದಲಿಗೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಭಾವನೆಗಳಿಗೆ ಗೌರವದ ಬಗ್ಗೆ. ಇದರ ಜೊತೆಗೆ ರಾಷ್ಟ್ರೀಯ ಗುರುತು ಮತ್ತು ಚಿಹ್ನೆಗಳನ್ನು ಬದಲಾಯಿಸುವ ಪ್ರವೃತ್ತಿಯನ್ನು ಪ್ರಶ್ನಿಸಿದ ಖರ್ಗೆ, ಈ ರೀತಿಯ ನಿರ್ಧಾರಗಳನ್ನು ಸಾರ್ವಜನಿಕ ಒಪ್ಪಿಗೆಯಿಲ್ಲದೆ ಮಾಡಲಾಗಿದೆ. ಈ ಹಿಂದೆ ರಸ್ತೆ ಪಾದಚಾರಿ ಮಾರ್ಗಗಳಲ್ಲಿ, ಸಂಸತ್ತಿನ ಸಿಬ್ಬಂದಿಯ ಸಮವಸ್ತ್ರಗಳಲ್ಲಿ, ದೂರದರ್ಶನ ಲೋಗೋದಲ್ಲಿ ಮತ್ತು ಈಗ ಕ್ರೀಡಾ ಜೆರ್ಸಿಗಳಲ್ಲಿ ತಮಗೆ ಬೇಕಾದ ರೀತಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ಹೀಗಾಗಿ ರಾಷ್ಟ್ರೀಯ ಚಿಹ್ನೆಗಳು, ಕ್ರೀಡೆಗಳು ಮತ್ತು ಕ್ರೀಡಾಪಟುಗಳನ್ನು ಸಂಕುಚಿತ ಮನಸ್ಸಿನ ರಾಜಕೀಯ ಪ್ರಯೋಗದ ಸಾಧನವಾಗಿ ಬಳಸಬಾರದು. ಸರ್ಕಾರ ಮತ್ತು ಸಂಬಂಧಿತ ಸಂಸ್ಥೆಗಳು ತಕ್ಷಣವೇ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಮತ್ತು ಹಾಕಿ ಇಂಡಿಯಾ ಕಾರ್ಯಕಾರಿ ಮಂಡಳಿಯ ಜ್ಞಾನ ಮತ್ತು ಒಪ್ಪಿಗೆಯಿಲ್ಲದೆ ಇಂತಹ ಮಹತ್ವದ ನಿರ್ಧಾರವನ್ನು ಹೇಗೆ ತೆಗೆದುಕೊಳ್ಳಲಾಯಿತು ಎಂಬುದನ್ನು ವಿವರಿಸಬೇಕು ಎಂದಿದ್ದಾರೆ.

ಹಾಕಿ ಇಂಡಿಯಾದ ಸಮರ್ಥನೆ ಏನು?

ಇನ್ನು ಜೆರ್ಸಿ ಬಣ್ಣವನ್ನು ಬದಲಿಸಿರುವ ಬಗ್ಗೆ ಹಾಕಿ ಇಂಡಿಯಾ ಅಧ್ಯಕ್ಷ ಹಾಗೂ ಆಟಗಾರರು ಕೂಡ ಪ್ರತಿಕ್ರಿಯಿಸಿದ್ದು, ‘ಟೀಂ ಇಂಡಿಯಾ ನೀಲಿ ಜೆರ್ಸಿ ಧರಿಸುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿದೆ. ಆದರೆ ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ. 2014 ರಲ್ಲಿ ತಂಡವು ಹಳದಿ ಬಣ್ಣವನ್ನು ಧರಿಸಿ 2018 ರಲ್ಲಿ ತಿಳಿ ನೀಲಿ ಬಣ್ಣವನ್ನು ಅಳವಡಿಸಿಕೊಂಡಿದ್ದು ನನಗೆ ನೆನಪಿದೆ. ಈ ಬಾರಿ ತಂಡದ ಜೆರ್ಸಿ ಬಣ್ಣವನ್ನು ಬದಲಾಯಿಸುವ ಸಲಹೆಯು ತರಬೇತುದಾರರು, ಸಹಾಯಕ ಸಿಬ್ಬಂದಿ, ನಾಯಕ ಮತ್ತು ಆಟಗಾರರಿಂದ ಬಂದಿದೆ.

ಹಾಕಿ ಟರ್ಫ್ ನೀಲಿ ಬಣ್ಣದ್ದಾಗಿರುವುದರಿಂದ ಮತ್ತು ಆಟಗಾರರ ಕಿಟ್‌ಗಳು ಸಹ ನೀಲಿ ಬಣ್ಣದ್ದಾಗಿರುವುದರಿಂದ, ಪಂದ್ಯಗಳ ಸಮಯದಲ್ಲಿ ಗೊಂದಲ ಉಂಟಾಗುತ್ತಿತ್ತು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಸೂಚಿಸಿದ್ದರು. ಅಂತಿಮವಾಗಿ, ನಾವು ಕಿತ್ತಳೆ ಬಣ್ಣವನ್ನು ಆರಿಸಿಕೊಂಡಿದ್ದೇವೆ ಏಕೆಂದರೆ ಅದು ನಮ್ಮ ರಾಷ್ಟ್ರೀಯ ಧ್ವಜದ ಮೂರು ಬಣ್ಣಗಳಲ್ಲಿ ಒಂದಾಗಿದೆ’ ಎಂದಿದ್ದಾರೆ.

Published On - 8:08 pm, Sun, 2 August 26

Loading...
Unable to load recommendations.
Follow Us