ಹಾಕಿ ತಂಡದ ಜೆರ್ಸಿ ಬಣ್ಣ ನೀಲಿಯಿಂದ ಕೇಸರಿಗೆ ಬದಲು; ಹೊಸ ವಿವಾದ ಸೃಷ್ಟಿ
Indian Hockey Jersey Color Change: ಭಾರತೀಯ ಹಾಕಿ ತಂಡದ ಜೆರ್ಸಿ ಬಣ್ಣ ನೀಲಿಯಿಂದ ಕಿತ್ತಳೆಗೆ ಬದಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. 2026ರ ವಿಶ್ವಕಪ್‌ಗೆ ಮುನ್ನ ಹಾಕಿ ಇಂಡಿಯಾ ಮಾಡಿದ ಈ ಬದಲಾವಣೆಯನ್ನು ಮಾಜಿ ನಾಯಕ ವೀರೆನ್ ರಸ್ಕ್ವಿನ್ಹಾ ಸೇರಿದಂತೆ ಹಲವರು ವಿರೋಧಿಸಿದ್ದಾರೆ. ನೀಲಿ ಬಣ್ಣವು ತಂಡದ ಗುರುತು ಎಂದವರು ವಾದಿಸಿದ್ದಾರೆ. ಆದರೆ, ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ, ನೀಲಿ ಟರ್ಫ್‌ನ ಗೊಂದಲ ತಪ್ಪಿಸಲು ಮತ್ತು ರಾಷ್ಟ್ರ ಧ್ವಜದ ಬಣ್ಣದ ಆಯ್ಕೆ ಎಂದು ಸಮರ್ಥಿಸಿಕೊಂಡಿದ್ದಾರೆ. ಈ ನಿರ್ಧಾರ ಕ್ರೀಡಾ ವಲಯದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.

2026 ರ ಹಾಕಿ ವಿಶ್ವಕಪ್‌ಗೆ (2026 Hockey World Cup) ಮುಂಚಿತವಾಗಿ, ಭಾರತೀಯ ಹಾಕಿ ತಂಡದ (Indian Hockey) ಜೆರ್ಸಿ ಬಣ್ಣವನ್ನು ನೀಲಿ ಬಣ್ಣದಿಂದ ಕಿತ್ತಳೆ ಬಣ್ಣಕ್ಕೆ ಬದಲಾಯಿಸಲಾಗಿದೆ. ಹಾಕಿ ಇಂಡಿಯಾ ಜುಲೈ 27 ರಂದು ಪುರುಷ ಮತ್ತು ಮಹಿಳಾ ತಂಡಗಳ ಹೊಸ ಜೆರ್ಸಿಗಳನ್ನು ಬಿಡುಗಡೆ ಮಾಡಿದ್ದು, ಜೆರ್ಸಿ ಬಣ್ಣವನ್ನು ಬದಲಾಯಿಸಿರುವುದು ಈಗ ಹೊಸ ವಿವಾದಕ್ಕೆ ಕಾರಣವಾಗಿದೆ. ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವುದಕ್ಕೆ ಅಸಮಾಧಾನ ಹೊರಹಾಕಿರುವ ತಂಡದ ಮಾಜಿ ನಾಯಕ ವೀರೆನ್ ರಸ್ಕ್ವಿನ್ಹಾ, ನೀಲಿ ಜೆರ್ಸಿ ನಮ್ಮ ಗುರುತು ಅದನ್ನು ಬದಲಿಸಿರುವುದು ಸರಿಯಲ್ಲ ಎಂದಿದ್ದಾರೆ. ಮತ್ತೊಬ್ಬ ಮಾಜಿ ನಾಯಕ ಪಟ್ಗಟ್ ಸಿಂಗ್ ಕೂಡ ಜೆರ್ಸಿ ಬಣ್ಣ ಬದಲಾವಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡೆ ನಾಚಿಕೆಗೇಡಿನ ಸಂಗತಿ
ಹಾಕಿ ತಂಡದ ಜೆರ್ಸಿ ಬಣ್ಣವನ್ನು ಬದಲಿಸಿರುವ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪೋಸ್ಟ್ಗಳನ್ನು ಮಾಡಿರುವ ವೀರೆನ್, ‘ಹಾಕಿ ಇಂಡಿಯಾ ಖಂಡಿತವಾಗಿಯೂ ಬಹಳಷ್ಟು ಒಳ್ಳೆಯ ಕೆಲಸ ಮಾಡಿದೆ. ಆದರೆ ಜೆರ್ಸಿ ಬಣ್ಣವನ್ನು ಬದಲಿಸುವ ಈ ನಡೆ ನಾಚಿಕೆಗೇಡಿನ ಸಂಗತಿ. ನೀಲಿ ಬಣ್ಣವು ಯಾವಾಗಲೂ ಭಾರತೀಯ ತಂಡದ ಗುರುತು ಮತ್ತು ಪರಂಪರೆಯಾಗಿದೆ. ನಾನು ಹಲವು ವರ್ಷಗಳಿಂದ ನೀಲಿ ಜೆರ್ಸಿಯನ್ನು ಹೆಮ್ಮೆಯಿಂದ ಧರಿಸಿದ್ದೇನೆ. ಅಭಿಮಾನಿಗಳು ನಮ್ಮ ಭಾರತೀಯ ತಂಡವನ್ನು ನೀಲಿ ಬಣ್ಣದಲ್ಲಿ ನೋಡಲು ಬಯಸುತ್ತಾರೆ. ಹಾಗಾದರೆ ಕೇಸರಿ ಬಣ್ಣದ ಹಿಂದಿನ ತರ್ಕವೇನು?’ ಎಂದು ಬರೆದುಕೊಂಡಿದ್ದಾರೆ.
ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಮತ್ತೊಂದು ಪೋಸ್ಟ್ ಮಾಡಿರುವ ವೀರೆನ್, ‘ತಮ್ಮ ಪೋಸ್ಟ್‌ನಲ್ಲಿ ಅನೇಕ ಅನಗತ್ಯ ರಾಜಕೀಯ ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ. ಆದರೆ ನಾನು ಸ್ಪಷ್ಟಪಡಿಸುತ್ತೇನೆ, ನನ್ನ ಪ್ರಶ್ನೆಯು ತಂಡದ ಹೆಮ್ಮೆ, ಗುರುತು ಮತ್ತು ಪರಂಪರೆಯ ಬಗ್ಗೆ ಮಾತ್ರ ಎಂದಿದ್ದಾರೆ.
I’m seeing many unnecessary political comments on this. I don’t want to get into any of that. My simple & humble point is on pride, identity & legacy.
🇮🇳 is to 🏑 what Argentina is to Football. Will we ever see Argentina wearing Orange and White stripes as their 1st jersey? https://t.co/lAnu2gOR7y
— Viren Rasquinha (@virenrasquinha) July 30, 2026
ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ
ವೀರೆನ್ ರಸ್ಕ್ವಿನ್ಹಾ ಅವರ ಪ್ರಶ್ನೆಗೆ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಪ್ರತಿಕ್ರಿಯೆ ನೀಡಿದ್ದು, ‘ಟೀಮ್ ಇಂಡಿಯಾ ನೀಲಿ ಜೆರ್ಸಿ ಧರಿಸುವ ದೀರ್ಘಕಾಲದ ಸಂಪ್ರದಾಯವನ್ನು ಹೊಂದಿದೆ . ಆದರೆ ಈ ಬದಲಾವಣೆಯಲ್ಲಿ ಆಶ್ಚರ್ಯವೇನಿಲ್ಲ. 2014 ರಲ್ಲಿ ತಂಡವು ಹಳದಿ ಬಣ್ಣವನ್ನು ಧರಿಸಿ 2018 ರಲ್ಲಿ ತಿಳಿ ನೀಲಿ ಬಣ್ಣವನ್ನು ಅಳವಡಿಸಿಕೊಂಡಿದ್ದು ನನಗೆ ನೆನಪಿದೆ. ಈ ಬಾರಿ ತಂಡದ ಜೆರ್ಸಿ ಬಣ್ಣವನ್ನು ಬದಲಾಯಿಸುವ ಸಲಹೆಯು ತರಬೇತುದಾರರು, ಸಹಾಯಕ ಸಿಬ್ಬಂದಿ, ನಾಯಕ ಮತ್ತು ಆಟಗಾರರಿಂದ ಬಂದಿದೆ.
#WATCH | Bhubaneswar, Odisha: On Hockey India changed national team jerseys from blue to saffron, Hockey India President Dilip Kumar Tirkey says, “The World Cup for both men and women is set to begin on August 15th in the Netherlands and Belgium. Ahead of this, Team India’s… pic.twitter.com/1ym2HXSvVp
— ANI (@ANI) July 30, 2026
ಹಾಕಿ ಟರ್ಫ್ ನೀಲಿ ಬಣ್ಣದ್ದಾಗಿರುವುದರಿಂದ ಮತ್ತು ಆಟಗಾರರ ಕಿಟ್‌ಗಳು ಸಹ ನೀಲಿ ಬಣ್ಣದ್ದಾಗಿರುವುದರಿಂದ, ಪಂದ್ಯಗಳ ಸಮಯದಲ್ಲಿ ಗೊಂದಲ ಉಂಟಾಗುತ್ತಿತ್ತು. ಆದ್ದರಿಂದ, ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗಳು ಹಳದಿ ಮತ್ತು ಕಿತ್ತಳೆ ಬಣ್ಣಗಳನ್ನು ಸೂಚಿಸಿದ್ದರು. ಅಂತಿಮವಾಗಿ, ನಾವು ಕಿತ್ತಳೆ ಬಣ್ಣವನ್ನು ಆರಿಸಿಕೊಂಡಿದ್ದೇವೆ ಏಕೆಂದರೆ ಅದು ನಮ್ಮ ರಾಷ್ಟ್ರೀಯ ಧ್ವಜದ ಮೂರು ಬಣ್ಣಗಳಲ್ಲಿ ಒಂದಾಗಿದೆ’ ಎಂದಿದ್ದಾರೆ.




