ಜಿಮ್ಮಿ ಕುರಿತು ಹೋಲ್ಡಿಂಗ್ ಹೇಳಿರುವುದು ಸತ್ಯವಾದರೂ ಅವರ ಶ್ರೇಷ್ಠತೆ ಬಗ್ಗೆ ಎರಡು ಮಾತಿಲ್ಲ

|

Updated on: Aug 27, 2020 | 4:27 PM

ವಿಶ್ವದ ಸರ್ವಕಾಲಿಕ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿರುವ ಜೇಮ್ಸ್ ಌಂಡರ್ಸನ್ ಟೆಸ್ಟ್​ಗಳಲ್ಲಿ 600 ವಿಕೆಟ್ ಗಳಿಸಿದ ಮೊದಲ ವೇಗದ ಬೌಲರ್​ನೆಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡ ಮೇಲೆ ವಿಶ್ವದ ಹಾಲಿ ಮತ್ತು ಮಾಜಿ ಆಟಗಾರರೆಲ್ಲ ಅವರನ್ನು ಅಭಿನಂದಿಸಿದ್ದಾರೆ. ಜಿಮ್ಮಿ ಎಲ್ಲ ಪ್ರಶಂಸೆಗಳಿಗೆ ಅರ್ಹರು, ಅದರಲ್ಲಿ ಎರಡು ಮಾತಿಲ್ಲ. ಇಂದಷ್ಟೇ ತಾನು ತಂದೆಯಾಗುತ್ತಿರುವ ಸಂತೋಷದ ಸಂಗತಿಯನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ‘ನಿಸ್ಸಂದೇಹವಾಗಿ ನಾನೆದುರಿಸಿದ ಶ್ರೇಷ್ಠ ವೇಗದ ಬೌಲರ್​ಗಳಲ್ಲಿ ಜಿಮ್ಮಿ ಒಬ್ಬರು,’ ಎಂದು ಟ್ವೀಟ್ ಮಾಡಿದ್ದಾರೆ. ಭಾರತದ ಮಾಜಿ […]

ಜಿಮ್ಮಿ ಕುರಿತು ಹೋಲ್ಡಿಂಗ್ ಹೇಳಿರುವುದು ಸತ್ಯವಾದರೂ ಅವರ ಶ್ರೇಷ್ಠತೆ ಬಗ್ಗೆ ಎರಡು ಮಾತಿಲ್ಲ
Follow us on

ವಿಶ್ವದ ಸರ್ವಕಾಲಿಕ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿರುವ ಜೇಮ್ಸ್ ಌಂಡರ್ಸನ್ ಟೆಸ್ಟ್​ಗಳಲ್ಲಿ 600 ವಿಕೆಟ್ ಗಳಿಸಿದ ಮೊದಲ ವೇಗದ ಬೌಲರ್​ನೆಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡ ಮೇಲೆ ವಿಶ್ವದ ಹಾಲಿ ಮತ್ತು ಮಾಜಿ ಆಟಗಾರರೆಲ್ಲ ಅವರನ್ನು ಅಭಿನಂದಿಸಿದ್ದಾರೆ. ಜಿಮ್ಮಿ ಎಲ್ಲ ಪ್ರಶಂಸೆಗಳಿಗೆ ಅರ್ಹರು, ಅದರಲ್ಲಿ ಎರಡು ಮಾತಿಲ್ಲ.

ಇಂದಷ್ಟೇ ತಾನು ತಂದೆಯಾಗುತ್ತಿರುವ ಸಂತೋಷದ ಸಂಗತಿಯನ್ನು ಇನ್ಸ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರುವ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ‘ನಿಸ್ಸಂದೇಹವಾಗಿ ನಾನೆದುರಿಸಿದ ಶ್ರೇಷ್ಠ ವೇಗದ ಬೌಲರ್​ಗಳಲ್ಲಿ ಜಿಮ್ಮಿ ಒಬ್ಬರು,’ ಎಂದು ಟ್ವೀಟ್ ಮಾಡಿದ್ದಾರೆ.

ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ‘ನಿಮ್ಮ ಈ ಮಹತ್ಸಾಧನೆ ಶ್ರೇಷ್ಠತೆಯ ಪ್ರತೀಕವಾಗಿದೆ, ವೇಗದ ಬೌಲರ್​ನೊಬ್ಬ 156 ಟೆಸ್ಟ್ ಪಂದ್ಯಗಳನ್ನಾಡುವುದು ಸಾಮಾನ್ಯ ಮಾತಲ್ಲ. ಶ್ರೇಷ್ಠತೆಯನ್ನು ಸಾಧಿಸಬಹುದೆಂಬ ಅಂಶವನ್ನು ನೀವು ಯುವ ವೇಗದ ಬೌಲರ್​ಗಳಿಗೆ ಮನದಟ್ಟು ಮಾಡಿರುವಿರಿ,’ ಎಂದು ಟ್ವೀಟ್ ಮಾಡಿದ್ದಾರೆ. 


ಇದೊಂದು ಅಮೋಘ ಸಾಧನೆ, ಜಿಮ್ಮಿಗೆ ಅಭಿನಂದನೆಗಳು, 17 ವರ್ಷಗಳಲ್ಲಿ 600 ವಿಕೆಟ್ ಪಡಯುವ ಸಾಧನೆ ಮಾಡಿದ್ದು ನಿಮ್ಮಲ್ಲಿರುವ ಆತ್ಮಸ್ಥೈರ್ಯ, ಪರಿಶ್ರಮ ಮತ್ತು ಬೌಲಿಂಗ್​ನಲ್ಲಿ ಮಾಡುವಾಗ ನೀವು ಕಾಯ್ದುಕೊಳ್ಳುವ ನಿಖರತೆಯ ದ್ಯೋತಕವಾಗಿದೆ,’ ಎಂದು ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ ಹೊಗಳಿದ್ದಾರೆ.

600 ವಿಕೆಟ್ ಕ್ಲಬ್​ನ ಕೆಲವೇ ಸದಸ್ಯರಲ್ಲಿ ಒಬ್ಬರಾಗಿರುವ ಲೆಜಂಡರಿ ಲೆಗ್​ಸ್ಪಿನ್ನರ್ ಅನಿಲ್ ಕುಂಬ್ಳೆ, ‘ಒಬ್ಬ ವೇಗದ ಬೌಲರ್ ಈ ಸಾಧನೆ ಮಾಡಿರುವುದು ಭಾರಿ ದೊಡ್ಡ ಸಾಧನೆ, ಅವರನ್ನು ಈ ಕ್ಲಬ್​ಗೆ ಸ್ವಾಗತಿಸುತ್ತೇನೆ.’ ಎಂದಿದ್ದಾರೆ.

ವೆಸ್ಟ್​ಇಂಡೀಸ್​ನ ಮಾಜಿ ವೇಗದ ಬೌಲರ್ ಮತ್ತು ಈಗ ಪೂರ್ಣಪ್ರಮಾಣದ ಕಾಮೆಂಟೇಟರ್ ಆಗಿರುವ ಮೈಕೆಲ್ ಹೋಲ್ಡಿಂಗ್​ಗೆ ಮಾತ್ರ ಜಿಮ್ಮಿಯ ಸಾಧನೆ ಅಷ್ಟೊಂದು ಮಹತ್ವದೆನಿಸುತ್ತಿಲ್ಲ. ಹಾಗಂತ ಜಿಮ್ಮಿ ಸಾಧನೆ ಬಗ್ಗೆ ಅವರು ನಿಕೃಷ್ಟವಾಗೇನೂ ಮಾತಾಡಿಲ್ಲ. ‘ಜಿಮ್ಮಿ ಸಾಧನೆ ವಿದೇಶಗಳಿಗಿಂತ ಸ್ವದೇಶದ ಪಿಚ್​ಗಳಲ್ಲಿ ಚೆನ್ನಾಗಿದೆ, ಇಂಗ್ಲಿಷ್ ಕಂಡೀಷನ್​ಗಳಲ್ಲಿ ಅವರು ಹೆಚ್ಚು ಮಾರಕ ಬೌಲರ್ ಎನಿಸುತ್ತಾರೆ,’ ಎಂದು ಮೈಕಿ ಹೇಳುತ್ತಾರೆ.

ಹೋಲ್ಡಿಂಗ್ ಹೇಳಿರುವುದನ್ನು ಅಂಕಿ-ಅಂಶಗಳನ್ನು ಆಧಾರವಾಗಿಟ್ಟುಕೊಂಡು ನೋಡಿದ್ದೇಯಾದರೆ, ಅವರು ಹೇಳುತ್ತಿರುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ. ಜಿಮ್ಮಿ, ಇಂಗ್ಲೆಂಡ್​ನಲ್ಲಿ ತಾವಾಡಿರುವ 89 ಟೆಸ್ಟ್ ಪಂದ್ಯಗಳಲ್ಲಿ 23.83ರ ಸರಾಸರಿಯಲ್ಲಿ 384 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇನ್ನಿಂಗ್ಸೊಂದರಲ್ಲಿ 5 ಅಥವಾ ಅದಕ್ಕಿಂತ ಜಾಸ್ತಿ ವಿಕೆಟ್ ಪಡೆಯುವ ಸಾಧನೆಯನ್ನು 22 ಬಾರಿ ಮಾಡಿದ್ದಾರೆ. ಆದರೆ, ವಿದೇಶಗಳಲ್ಲಿ ಆಡಿರುವ 67 ಟೆಸ್ಟ್​ಗಳಲ್ಲಿ ಅವರು 32.05 ಸರಾಸರಿಯಲ್ಲಿ ಕೇವಲ 216 ವಿಕೆಟ್​ಗಳನ್ನು ಮಾತ್ರ ಪಡೆದಿದ್ದಾರೆ. 5 ವಿಕೆಟ್​ಗಳ ಸಾಧನೆ ಕೇವಲ 7 ಬಾರಿ ಮಾತ್ರ ಮಾಡಿದ್ದಾರೆ.

ಭಾರತದ ವಿರುದ್ಧ ಜಿಮ್ಮಿ ಮಾಡಿರುವ ಸಾಧನೆಯನ್ನೂ ಗಮನಿಸುವ. ತಮ್ಮ ದೇಶದಲ್ಲಿ ಅವರು ಭಾರತೀಯರ ವಿರುದ್ಧ 17 ಟೆಸ್ಟ್​ಗಳನ್ನಾಡಿದ್ದು 84 ವಿಕೆಟ್​ಗಳನ್ನು ಪಡೆದಿದ್ದಾರೆ, ಆದರೆ ಭಾರತದಲ್ಲಾಡಿದ 10 ಟೆಸ್ಟ್​ಗಳಲ್ಲಿ ಕೇವಲ 26 ವಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಮೈಕಿ ಉಲ್ಲೇಖಿಸಿರುವ ವ್ಯತ್ಯಾಸ ಸ್ಪಷ್ಟವಾಗಿ ಗೋಚರವಾಗುತ್ತದೆ.

ಆದರೆ, ಇದೇ ಮೈಕಿ, ಜಿಮ್ಮಿ ತಮ್ಮ ಕರೀಯರ್​ನುದ್ದಕ್ಕೂ ಬೌಲಿಂಗ್​ನಲ್ಲಿ ಕಾಯ್ದುಕೊಂಡಿರುವ ಸ್ಥಿರತೆ, ನಿಖರತೆ,ನಿಯಂತ್ರಣ ಹಾಗೂ ದೈಹಿಕ ಸಾಮರ್ಥ್ಯವನ್ನು ಮನಸಾರೆ ಕೊಂಡಾಡುತ್ತಾರೆ. ವೇಗದ ಬೌಲರ್​ನೊಬ್ಬ 156 ಟೆಸ್ಟ್​ಗಳನ್ನಾಡುವವುದೇ ಮಹತ್ತರವಾದ ಸಾಧನೆ ಮತ್ತು ನಿರಂತರವಾಗಿ ಉತ್ತಮ ಪ್ರದರ್ಶನಗಳನ್ನು ನೀಡಲು ಅವರು ತಮ್ಮನ್ನು ತಾವು ಪ್ರೇರೇಪಿಸಿಕೊಳ್ಳುವ ರೀತಿ ಯುವ ಆಟಗಾರರಿಗೆ ಸ್ಫೂರ್ತಿ, ಎಂದು ಹೇಳುತ್ತಾರೆ. 

ಆಗಲೇ ಹೇಳಿದಂತೆ, ಜೇಮ್ಸ್ ಌಂಡರ್ಸನ್ ವಿಶ್ವದ ಸರ್ವಕಾಲಿಕ ಶ್ರೇಷ್ಠ ಬೌಲರ್​ಗಳಲ್ಲೊಬ್ಬರೆನ್ನುವುದು ನಿರ್ವಿವಾದಿತ.

Published On - 4:18 pm, Thu, 27 August 20