
ಭಾರತ ಮತ್ತು ಮುಂಬೈ ಇಂಡಿಯನ್ಸ್ ಟೀಮಿನ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾಗೂ ತನ್ನ ಕರೀಯರ್ ಶುರುವಾಗುವ ಸಂದರ್ಭದಲ್ಲಿ ಅಂಥ ಮಹತ್ವಾಕಾಂಕ್ಷೆ ಇದ್ದೀತು. ಈಗ ಬಿಡಿ, ಅವರು ವಿಶ್ವದ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರೆಂದು ಗುರುತಿಸಿಕೊಳ್ಳುತ್ತಾರೆ. ಗೆಳೆಯರಿಂದ ಮತ್ತು ಆತ್ಮೀಯರಿಂದ ಬೂಮ್ ಬೂಮ್ ಎಂದು ಕರೆಸಿಕೊಳ್ಳುವ ಬುಮ್ರಾ ಬುಧವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮಾರಕ ಬೌಲಿಂಗ್ ಪ್ರದರ್ಶನ ನೀಡಿ ಕೇವಲ 14 ರನ್ಗಳಿಗೆ 3 ವಿಕೆಟ್ ಪಡೆದು ಮುಂಬೈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಅಂದಹಾಗೆ, ಬುಮ್ರಾ ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ 100 ವಿಕೆಟ್ ಪಡೆದ ಸಾಧನೆಯನ್ನು ಸಹ ಈ ಪಂದ್ಯದಲ್ಲಿ ಮಾಡಿದರು. ಆವರ ಈ ಸಾಧನೆಯ ವೈಶಿಷ್ಟ್ಯತೆಯೇನು ಗೊತ್ತಾ? ಐಪಿಎಲ್ನಲ್ಲಿ ಅವರ ಮೊದಲ ಮತ್ತು 100 ನೇ ವಿಕೆಟ್ ವಿರಾಟ್ ಕೊಹ್ಲಿ!
ನಿಖರವಾಗಿ ಯಾರ್ಕರ್ಗಳನ್ನು ಎಸೆಯುತ್ತಿದ್ದರಿಂದ ಬುಮ್ರಾರನ್ನು ಮೊದಲೆಲ್ಲ ಸೀಮಿತ ಓವರ್ಗಳ ಸ್ಪೆಷಲಿಸ್ಟ್ ಎನ್ನುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಅವರೊಬ್ಬ ಪರಿಪೂರ್ಣ ಬೌಲರ್ ಆಗಿ ರೂಪುಗೊಂಡು, ಟೆಸ್ಟ್ಗಳಲ್ಲೂ ಅದೇ ವೇಗ, ಮೊನಚು, ನಿಖರತೆ, ಸ್ವಿಂಗ್ ಮತ್ತು ಸೀಮ್ ಹಾಗೂ ಅದ್ಭುತ ನಿಯಂತ್ರಣದೊಂದಿಗೆ ಆಕ್ರಮಣ ನಡೆಸಿ ಭಾರತಕ್ಕೆ ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.
ಬುಮ್ರಾ, ಸೀಮಿತ ಓವರ್ ಪಂದ್ಯಗಳಲ್ಲಿ ಡೆತ್ ಓವರ್ಗಳನ್ನು ಅಥವಾ ವಿಶಿಷ್ಟ ಸಂದರ್ಭಗಳಲ್ಲಿ ಬೌಲ್ ಮಾಡಬೇಕಾಗುವ ಸೂಪರ್ ಓವರ್ಗಳನ್ನು ಎಸೆಯುವುದರಲ್ಲಿ, ಕೇವಲ ಪರಿಣಿತರು ಮಾತ್ರವಲ್ಲ, ನಿಷ್ಣಾತರೂ ಹೌದು. ಈ ಐಪಿಎಲ್ ಸೀಸನ್ನಲ್ಲಿ ಮುಂಬೈ ಟೀಮಿನ ನಿಷ್ಠಾವಂತ ಬೌಲರ್ ಲಸಿತ್ ಮಲಿಂಗ ಆಡುತ್ತಿಲ್ಲವಾದ್ದರಿಂದ ಡೆತ್ ಓವರಗಳನ್ನು ಎಸೆಯುವ ಜವಾಬ್ದಾರಿ ಬುಮ್ರಾ ಮೇಲೆ ಜಾಸ್ತಿಯಿದೆ. ಕ್ರಿಕೆಟ್ ಪ್ರೇಮಿಗಳು ಸದರಿ ಸೀಸನ್ನಲ್ಲಿ ಬುಮ್ರಾ ಬೌಲಿಂಗ್ ಆಕ್ರಮಣದ ಪ್ಯಾಟರ್ನ್ ಗಮನಿಸಿರಬಹುದು. ಆರಂಭದಲ್ಲಿ ಅಂದರೆ, ಪವರ್ ಪ್ಲೇ ಜಾರಿಯಲ್ಲಿರುವಾಗ ಒಂದು ಓವರ್ ಎಸೆಯುತ್ತಾರೆ; ನಂತರ, ಮಿಡ್ಲ್ ಒವರ್ಗಳಲ್ಲಿ ಇನ್ನೊಂದು ಓವರ್ ಬೌಲ್ ಮಾಡುತ್ತಾರೆ, ಮತ್ತು ಅಂತಿಮವಾಗಿ 18 ಮತ್ತು 20 ನೇ ಇಲ್ಲವೇ 17 ಮತ್ತು 19ನೇ ಓವರ್ಗಳನ್ನು ಬೌಲ್ ಮಾಡುತ್ತಾರೆ.
ಹಾಗಾದರೆ, ಡೆತ್ ಬೌಲ
ಕ್ರಿಕೆಟ್ ವೆಬ್ಸೈಟೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬುಮ್ರಾ ತಮ್ಮ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಡೆತ್ ಓವರ್ಗಳನ್ನು ಹೀಗೇಯೇ ಅಂತ ವ್ಯಾಖ್ಯಾನಿಸುವುದು ಕಷ್ಟವೆಂದು ಬುಮ್ರಾ ಹೇಳುತ್ತಾರೆ. ಪ್ರತಿಯೊಬ್ಬ ಬೌಲರ್ ಭಿನ್ನವಾಗಿ ಯೋಚಿಸುತ್ತಾನೆ ಮತ್ತು ತನ್ನದೇ ಆದ ಯೋಜನೆಯೊಂದಿಗೆ ದಾಳಿಗಿಳಿಯುತ್ತಾನೆ ಅಂತ ಅವರು ವಿವರಿಸುತ್ತಾರೆ.
‘‘ನನ್ನದು ಬಹಳ ಸರಳವಾದ ತಂತ್ರಗಾರಿಕೆ. ಮೊದಲು ನಾನು ಪಿಚ್ ಹೇಗಿದೆ, ಹೇಗೆ ವರ್ತಿಸುತ್ತಿದೆ ಎನ್ನುವುದನ್ನು ಗಣನೆಗೆ ತೆಗೆದುಕೊಂಡು ಮ್ಯಾಚ್ ಯಾವ ಸ್ಥಿತಿಯಲ್ಲಿದೆ ಅಂತ ಯೋಚಿಸುತ್ತೇನೆ. ಕೊನೆಯಲ್ಲಿ, ಯಾವ ಎಸೆತ ಸೂಕ್ತವಾದದ್ದ್ದು ಅಂತ ನಿರ್ಧರಿಸಿ ಬೌಲ್ ಮಾಡುತ್ತೇನೆ. ಹೊರಗಡೆ ಕೂತು ಯಾರ್ಕರ್ ಎಸೆಯಬೇಕು, ಸ್ಲೋ ಬೌನ್ಸರ್ ಎಸೆಯಬೇಕು ಅಂತ ಹೇಳುವುದು ಸುಲಭ. ಆದರೆ ಬೌಲರ್ ಆ ಸಂದರ್ಭದಲ್ಲಿ ತನ್ನೆಲ್ಲ ವಿವೇಕ ಮತ್ತು ಬುದ್ಧಿಮತ್ತೆಯನ್ನು ಬಳಸಬೇಕಾಗುತ್ತದೆ. ನಾನು ಒಂದು ಸಲಕ್ಕೆ ಒಂದು ಎಸೆತದ ಬಗ್ಗೆ ಮಾತ್ರ ಯೋಚಿಸುತ್ತೇನೆ,’’ ಎಂದು ಬುಮ್ರಾ ಹೇಳಿದ್ದಾರೆ.
ಪ್ರಸಕ್ತ ಸೀಸನ್ನಲ್ಲಿ 17 ವಿಕೆಟ್ಗಳನ್ನು ಪಡೆದಿರುವ ಮತ್ತು ಎರಡು ಸೂಪರ್ ಓವರ್ಗಳನ್ನು ಬೌಲ್ ಮಾಡಿರುವ ಬುಮ್ರಾ ತನ್ನ ನಿಯಂತ್ರಣದಲ್ಲಿರುವ ಆಯಾಮಗಳನ್ನಷ್ಟೇ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾರೆ.
‘‘ನನ್ನ ನಿಯಂತ್ರಣದಲ್ಲಿರುವುದನ್ನು ಮತ್ತು ನನಗೆ ಸಾಧ್ಯವಾಗಬಹುದಾದನ್ನು ಮಾತ್ರ ಮಾಡಲು ಪ್ರಯತ್ನಿಸುತ್ತೇನೆ. ನನ್ನ ಗಮನವೆಲ್ಲ ವರ್ತಮಾನದ ಮೇಲಿರುತ್ತದೆ. ಒತ್ತಡಕ್ಕೆ ಸಿಲುಕಿಕೊಂಡಾಗ ನನ್ನನ್ನು ನಾನು ಪ್ರಶ್ನಿಸಿಕೊಳ್ಳುತ್ತೇನೆ, ‘ಈ ಸಂದರ್ಭದಲ್ಲಿ ನಾನು ಏನು ಮಾಡುವುದನ್ನು ಟೀಮು ನಿರೀಕ್ಷಿಸುತ್ತಿದೆ,’ ಅಂತ ಯೋಚಿಸಿ ಇಡೀ ಸನ್ನಿವೇಶವನ್ನು ನನ್ನಿಂದ ಪ್ರತ್ಯೇಕಿಸುತ್ತೇನೆ. ಯಾವ ಎಸೆತ ಸೂಕ್ತ ಅಂತ ಅಂದುಕೊಳ್ಳುತ್ತೇನೆಯೋ ಅದನ್ನೇ ಬೌಲ್ ಮಾಡುತ್ತೇನೆ. ಏನೆಲ್ಲ ಯೋಚಿಸುವುದಕ್ಕಿಂತ ವಾಸ್ತವದಲ್ಲಿ ನೆಲೆಗೊಂಡಿರುವುದು ನನಗೆ ಬಹಳ ನೆರವಾಗುತ್ತದೆ,’’ ಎಂದು ಬುಮ್ರಾ ಹೇಳುತ್ತಾರೆ