ಆಸ್ಟ್ರೇಲಿಯನ್ ಓಪನ್ ಆರಂಭಕ್ಕೂ ಮುನ್ನ ಖ್ಯಾತ ಟೆನಿಸ್ ತಾರೆ ನೊವಾಕ್ ಜೊಕೊವಿಚ್ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ಸುದ್ದಿಯಾಗಿರುವುದು ವಿಷಪ್ರಾಶನ ಮಾಡಿದ್ದರು ಎಂಬ ಆಘಾತಕಾರಿ ಹೇಳಿಕೆಯೊಂದಿಗೆ ಎಂಬುದೇ ಅಚ್ಚರಿ. ಸಂದರ್ಶನವೊಂದರಲ್ಲಿ ಮಾತನಾಡಿದ ನೊವಾಕ್ ಜೊಕೊವಿಚ್ ಮೂರು ವರ್ಷಗಳ ಹಿಂದಿನ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.
2021-22ರ ರ ಆಸ್ಟ್ರೇಲಿಯನ್ ಓಪನ್ ಟೂರ್ನಿಯಿಂದ ನೊವಾಕ್ ಜೊಕೊವಿಚ್ ಹಿಂದೆ ಸರಿದಿದ್ದರು. ಕೋವಿಡ್-19 ಲಸಿಕೆ ಪಡೆಯದಿದ್ದ ಕಾರಣ ಜೊಕೊವಿಚ್ಗೆ ಟೂರ್ನಿಯಲ್ಲಿ ಕಣಕ್ಕಿಳಿಯಲು ಅವಕಾಶ ನೀಡಿರಲಿಲ್ಲ. ಅಲ್ಲದೆ ಕೊರೋನಾ ಲಸಿಕೆ ಪಡೆಯಲು ಹಿಂದೇಟು ಹಾಕಿದ್ದರಿಂದ ಆಸ್ಟ್ರೇಲಿಯಾದಿಂದ ತೆರಳುವಂತೆ ಸೂಚಿಸಲಾಗಿತ್ತು. ಹೀಗಾಗಿ ಆಸ್ಟ್ರೇಲಿಯನ್ ಓಪನ್ನಲ್ಲಿ ಕಣಕ್ಕಿಳಿಯದೇ ನೊವಾಕ್ ಜೊಕೊವಿಚ್ ತವರಿಗೆ ಹಿಂತಿರುಗಿದ್ದರು.
ಆಸ್ಟ್ರೇಲಿಯನ್ ಓಪನ್ನಿಂದ ಹಿಂದೆ ಸರಿದು ಸರ್ಬಿಯಾಗೆ ವಾಪಾಸಾದಗ ನನ್ನ ಆರೋಗ್ಯದಲ್ಲಿ ಏರುಪೇರಾಗ ತೊಡಗಿತು. ಹೀಗಾಗಿ ನಾನು ವೈದ್ಯಕೀಯ ಪರೀಕ್ಷೆಗೆ ಒಳಗಾದೆ. ಈ ವೇಳೆ ನಾನು ಸೇವಿಸಿದ ಆಹಾರದಲ್ಲಿ ವಿಷಕಾರಿ ಅಂಶಗಳಿರುವುದು ಗೊತ್ತಾಯಿತು ಎಂದು ನೊವಾಕ್ ಜೊಕೊವಿಚ್ GQ ಮ್ಯಾಗಝಿನ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಅಂದು ನಾನು ಮೆಲ್ಬೋರ್ನ್ನ ಪ್ರತಿಷ್ಠಿತ ಹೋಟೆಲ್ನಲ್ಲಿ ತಂಗಿದ್ದೆ. ಈ ವೇಳೆ ನೀಡಿದ ಆಹಾರದಲ್ಲಿ ವಿಷಕಾರಿ ಅಂಶಗಳನ್ನು ಬೆರೆಸಿರುವ ಸಾಧ್ಯತೆಯಿದೆ. ಏಕೆಂದರೆ ವೈದ್ಯಕೀಯ ಪರೀಕ್ಷೆಯಲ್ಲಿ ನನ್ನ ಆಹಾರದಲ್ಲಿ ಸೀಸ ಮತ್ತು ಪಾದರಸದ ಅಂಶಗಳು ಕಂಡು ಬಂದಿದ್ದವು. ಇದನ್ನು ನೋಡಿ ಅಚ್ಚರಿಗೊಂಡಿದ್ದೆ ಎಂದು ನೊವಾಕ್ ಜೊಕೊವಿಚ್ ತಿಳಿಸಿದ್ದಾರೆ.
ಈ ಬಗ್ಗೆ ನಾನು ಪ್ರಶ್ನಿಸಿದಾಗ, ಗೌಪ್ಯತೆಯ ಕಾರಣಗಳಿಗಾಗಿ ವೈಯುಕ್ತಿಕ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಗೃಹ ವ್ಯವಹಾರಗಳ ಇಲಾಖೆಯ ವಕ್ತಾರರೊಬ್ಬರು ತಿಳಿಸಿದ್ದರು. ಹೀಗಾಗಿ ಈ ವಿಷಯವನ್ನು ನಾನು ಹೇಳಲು ಹೋಗಿರಲಿಲ್ಲ. ಅಲ್ಲದೆ ಈ ವಿಷಯವನ್ನು ಅಲ್ಲಿಗೆ ಬಿಟ್ಟಿದ್ದೆ ಎಂದು ನೊವಾಕ್ ಜೊಕೊವಿಚ್ ತಿಳಿಸಿದರು.
ಇದನ್ನೂ ಓದಿ: 1,955 ಎಸೆತಗಳಲ್ಲಿ ಇತಿಹಾಸ ರಚಿಸಿದ ಗ್ಲೆನ್ ಮ್ಯಾಕ್ಸ್ವೆಲ್
ಆಸ್ಟ್ರೇಲಿಯನ್ ಓಪನ್ ಪುರುಷರ ಟೆನಿಸ್ ಟೂರ್ನಿಯು ಜನವರಿ 12 ರಿಂದ ಶುರುವಾಗಲಿದೆ. ಈ ಟೂರ್ನಿಯ ಆರಂಭಕ್ಕೂ ಮುನ್ನ ಸರ್ಬಿಯನ್ ತಾರೆ ನೊವಾಕ್ ಜೊಕೊವಿಚ್ ನೀಡಿರುವ ಈ ಹೇಳಿಕೆಯು ಸಂಚಲನ ಸೃಷ್ಟಿಸಿದ್ದು, ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
Published On - 12:42 pm, Sat, 11 January 25