ICC T20 ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ; 3ನೇ ಸ್ಥಾನ ಉಳಿಸಿಕೊಂಡ ರಾಹುಲ್, 7ನೇ ಸ್ಥಾನಕ್ಕೇರಿದ ಕಿಂಗ್​ ಕೊಹ್ಲಿ

ಕೆ.ಎಲ್. ರಾಹುಲ್ ಎಂದಿನಂತೆ ತಮ್ಮ ಮೂರನೇ ಸ್ಥಾನವನ್ನು ಉಳಿಸಿಕೊಂಡರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಪುರುಷರ ಟಿ-20 ಆಟಗಾರರ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ICC T20 ರ‍್ಯಾಂಕಿಂಗ್ ಪಟ್ಟಿ ಬಿಡುಗಡೆ; 3ನೇ ಸ್ಥಾನ ಉಳಿಸಿಕೊಂಡ ರಾಹುಲ್, 7ನೇ ಸ್ಥಾನಕ್ಕೇರಿದ ಕಿಂಗ್​ ಕೊಹ್ಲಿ
ಕೆ.ಎಲ್.ರಾಹುಲ್ ಹಾಗೂ ವಿರಾಟ್​ ಕೋಹ್ಲಿ

Updated on: Dec 24, 2020 | 1:51 PM

ದುಬೈ: ಐಸಿಸಿ​ T20 ವಿಭಾಗದ ರ‍್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಇಬ್ಬರು ಆಟಗಾರರಿಗೆ ಟಾಪ್​-10 ಒಳಗೆ ಸ್ಥಾನ ಸಿಕ್ಕಿದೆ. ಭಾರತೀಯ ಆಟಗಾರರಾದ ಕೆ.ಎಲ್.ರಾಹುಲ್ ಹಾಗೂ ಟೀಂ ಇಂಡಿಯಾದ ನಾಯಕ ವಿರಾಟ್​ ಕೊಹ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಕೆ.ಎಲ್. ರಾಹುಲ್ ಎಂದಿನಂತೆ ತಮ್ಮ ಮೂರನೇ ಸ್ಥಾನವನ್ನು ಉಳಿಸಿಕೊಂಡರೆ, ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಪುರುಷರ ಟಿ-20 ಆಟಗಾರರ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.

ರಾಹುಲ್ ಮತ್ತು ಕೊಹ್ಲಿ ಮಾತ್ರ, ಬ್ಯಾಟ್ಸ್‌ಮನ್, ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳು ಎಂಬ ಮೂರು ವಿಭಾಗಗಳಲ್ಲಿ ಆಟಗಾರರ ಶ್ರೇಯಾಂಕದ ಅಗ್ರ -10ರ ಪಟ್ಟಿಯಲ್ಲಿ ಸ್ಥಾನ ಪಡೆದ ಇಬ್ಬರು ಭಾರತೀಯ ಆಟಗಾರರಾಗಿದ್ದಾರೆ. ಇಂಗ್ಲೆಂಡ್​ ತಂಡದ ಡೇವಿಡ್ ಮಲನ್ 915 ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ಪಾಕಿಸ್ತಾದ ಬಾಬರ್ ಅಜಮ್ 820 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ನಂತರದ ಸ್ಥಾನವನ್ನು 816 ಅಂಕಗಳೊಂದಿಗೆ ಕನ್ನಡಿಗ ಕೆ.ಎಲ್.​ ರಾಹುಲ್​ ಪಡೆದುಕೊಂಡಿದ್ದಾರೆ. ನಾಯಕ ಕೊಹ್ಲಿ 697 ಅಂಕಗಳನ್ನು ಗಳಿಸುವುದರ ಮೂಲಕ 7ನೇ ಸ್ಥಾನಕ್ಕೇರಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ.

ಎಲ್ಲಾ ಮೂರು ಕ್ರಿಕೆಟ್​ ವಿಧಗಳಲ್ಲಿ ಕೊಹ್ಲಿ ಟಾಪ್-10 ರೊಳಗೆ ಸ್ಥಾನ ಪಡೆದಿದ್ದು, ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆದಿದ್ದರೆ, ಟೆಸ್ಟ್ ಬ್ಯಾಟಿಂಗ್ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟಿ20 ವಿಭಾಗದಲ್ಲಿ ಬೌಲರ್‌ ಮತ್ತು ಆಲ್‌ರೌಂಡರ್‌ಗಳ ಶ್ರೇಯಾಂಕವನ್ನು ಕ್ರಮವಾಗಿ ಅಫ್ಗಾನಿಸ್ತಾನದ ಜೋಡಿಗಳಾದ ರಶೀದ್ ಖಾನ್ ಮತ್ತು ಮೊಹಮ್ಮದ್ ನಬಿ ಪಡೆದುಕೊಂಡಿದ್ದಾರೆ.

ಐಸಿಸಿ ಪುರುಷರ ಟಿ20 ವಿಭಾಗದ ಶ್ರೇಯಾಂಕದಲ್ಲಿ ಪಾಕಿಸ್ತಾನ ಮೂರು ಅಂಕಗಳನ್ನು ಕಳೆದುಕೊಂಡಿದ್ದು, ನ್ಯೂಜಿಲೆಂಡ್ ಮೂರು ಅಂಕಗಳನ್ನು ಗಳಿಸುವುದರ ಜೊತೆಗೆ ಎರಡು ತಂಡಗಳು ನಾಲ್ಕನೇ ಮತ್ತು ಆರನೇ ಸ್ಥಾನಗಳನ್ನು ಉಳಿಸಿಕೊಂಡಿವೆ. 275 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್ ತಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ (272) ಮತ್ತು ಭಾರತ (268) ನಂತರದ ಸ್ಥಾನದಲ್ಲಿವೆ.

India vs Australia 2020 ಹಿಂದಿನ ಪ್ರವಾಸದ ಮೆಲ್ಬೋರ್ನ್ ಟೆಸ್ಟ್ ಗೆಲುವು ಈಗ ಸೋತು ಸುಣ್ಣವಾಗಿರುವ ಭಾರತ ತಂಡಕ್ಕೆ ಪಾಠವಾಗಬೇಕಿದೆ!

Published On - 9:27 pm, Wed, 23 December 20