ಸಿಡ್ನಿ ಟೆಸ್ಟ್ನಲ್ಲಿ ಶತಕ ಮತ್ತು ಅರ್ಧ ಶತಕ ಬಾರಿಸಿದ್ದೂ ಅಲ್ಲದೆ ಪಂದ್ಯದ ವ್ಯಕ್ತಿ ಪ್ರಶಸ್ತಿಯನ್ನು ಸಹ ಬಾಚಿಕೊಂಡ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಐಸಿಸಿ ಟೆಸ್ಟ್ ಱಂಕಿಂಗ್ನಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಜಿಗಿದಿದ್ದಾರೆ. ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.
ಇದೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 50 ಮತ್ತು ಎರಡನೆಯದರಲ್ಲಿ ದಿಟ್ಟ ಆಟವಾಡಿ 77 ರನ್ ಗಳಿಸಿದ ಭಾರತದ ಮಧ್ಯಮ ಕ್ರಮಾಂಕದ ಆಟಗಾರ ಚೇತೇಶ್ವರ್ ಪೂಜಾರಾ ಎರಡು ಸ್ಥಾನ ಮೇಲೇರಿ 8 ನೇ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.
ಐಸಿಸಿ ಮಂಗಳವಾರದಂದು ಬಿಡುಗಡೆ ಮಾಡಿರುವ ಚಾರ್ಟ್ ಪ್ರಕಾರ 870 ಪಾಯಿಂಟ್ಗಳೊಂದಿಗೆ ಕೊಹ್ಲಿ ಮೂರನೆ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಜಾರಿಯಲ್ಲಿರುವ ಸರಣಿಯಲ್ಲಿ ಮೊದಲ ಟೆಸ್ಟ್ ಆಡಿದ ನಂತರ ಕೊಹ್ಲಿ ಪಿತೃತ್ವದ ರಜೆ ಪಡೆದು ಸ್ವದೇಶಕ್ಕೆ ಮರಳಿದರು. ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮ ಸೋಮವಾರದಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದೇ ದಿನ ಟೀಮ್ ಇಂಡಿಯಾದ ಆಟಗಾರರು ಸಿಡ್ನಿ ಟೆಸ್ಟ್ನಲ್ಲಿ ಅಪ್ರತಿಮ ಹೋರಾಟ ಮನೋಭಾವವನ್ನು ಪ್ರದರ್ಶಿಸಿ ಪಂದ್ಯವನ್ನು ಡ್ರಾ ಮಾಡಿಕೊಂಡರು.
ಮೂರನೆ ಟೆಸ್ಟ್ನ ಐದನೇ ದಿನ ಸೆನ್ಸೇಷನಲ್ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ ಮೂರು ರನ್ಗಳಿಂದ ಶತಕ ತಪ್ಪಿಸಿಕೊಂಡ ಭಾರತದ ವಿಕೆಟ್ಕೀಪರ್/ಬ್ಯಾಟ್ಸ್ಮನ್ ರಿಷಭ್ ಪಂತ್ 19 ಸ್ಥಾನಗಳನ್ನು ಜಿಗಿದು 26ನೇ ಸ್ಥಾನಕ್ಕೆ ಬಂದಿದ್ದಾರೆ. ಸಿಡ್ನಿಯಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಸಹ ತಮ್ಮ ಱಂಕಿಂಗ್ ಉತ್ತಮಪಡಿಸಿಕೊಂಡು ಕ್ರಮವಾಗಿ 52 ಮತ್ತು 89ನೇ ಸ್ಥಾನಗಳಿಗೆ ಜಿಗಿದಿದ್ದಾರೆ. ಈಗಷ್ಟೇ ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟಿರುವ ಶುಭ್ಮನ್ ಗಿಲ್ 69ನೇ ಸ್ಥಾನದಲ್ಲಿದ್ದಾರೆ.
ಬೌಲರ್ಗಳ ವಿಷಯಕ್ಕೆ ಬಂದರೆ, ಎರಡು ಸ್ಥಾನ ಕೆಳಗೆ ಜಾರಿರುವ ರವಿಚಂದ್ರನ್ ಅಶ್ವಿನ್ 9 ನೇ ಸ್ಥಾನದಲ್ಲಿದ್ದರೆ ಒಂದು ಸ್ಥಾನ ಕಳೆದುಕೊಂಡಿರುವ ಜಸ್ಪ್ರೀತ್ ಬುಮ್ರಾ 10 ನೇ ಸ್ಥಾನದಲ್ಲಿದ್ದಾರೆ. ಇವರಿಬ್ಬರನ್ನು ಬಿಟ್ಟರೆ ಭಾರತದ ಇನ್ಯಾವುದೇ ಬೌಲರ್ ಟಾಪ್-10 ನಲ್ಲಿಲ್ಲ.
ಆಸ್ಡ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಮೊದಲ ಸ್ಥಾನದಲ್ಲಿ ಮುಂದುವರಿದ್ದಾರೆ, ಎರಡು ಮತ್ತು ಮೂರನೆ ಸ್ಥಾನದಲ್ಲಿ ಕ್ರಮವಾಗಿ ಇಂಗ್ಲೆಂಡ್ ವೇಗ್ ಬೌಲರ್ ಸ್ಟುವರ್ಟ್ ಬ್ರಾಡ್ ಮತ್ತು ನ್ಯೂಜಿಲೆಂಡ್ನ ನೀಲ್ ವ್ಯಾಗ್ನರ್ ಇದ್ದಾರೆ.