
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ವಿಜಯ ಸಾಧಿಸಿದೆ. ಕಾಂಗರೂ ಪಡೆ ನೀಡಿದ್ದ 328 ರನ್ಗಳ ಗುರಿಯನ್ನು ಬೆನ್ನತ್ತಿದ ಭಾರತ 2ನೇ ಇನ್ನಿಂಗ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸಿ ಗೆಲುವು ದಕ್ಕಿಸಿಕೊಂಡಿದೆ. ಇನ್ನೂ 18 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಮುಟ್ಟಿದೆ. ಗೆಲ್ಲಲು 25 ಎಸೆತಕ್ಕೆ 10 ರನ್ ಬಾಕಿ ಇರುವಾಗ ವಾಷಿಂಗ್ಟನ್ ಸುಂದರ್ ನಿರ್ಗಮಿಸಿದರಾದರೂ, ಅನಂತರ ಬಂದ ಶಾರ್ದೂಲ್ ಠಾಕೂರ್, ರಿಷಬ್ ಪಂತ್ಗೆ ಸಾಥ್ ನೀಡಿದರು.
138 ಎಸೆತಗಳಲ್ಲಿ 89 ರನ್ ಗಳಿಸಿ ಅಜೇಯರಾದ ರಿಷಬ್ ಪಂತ್ ಮತ್ತು 146 ಎಸೆತಗಳಲ್ಲಿ 91 ರನ್ ಗಳಿಸಿದ ಶುಭ್ಮನ್ ಗಿಲ್ ಎಲ್ಲರ ಗಮನ ಸೆಳೆದಿದ್ದಾರೆ. ಈ ಗೆಲುವಿನ ಮೂಲಕ ಟೆಸ್ಟ್ ಸರಣಿ ಭಾರತದ ಪಾಲಾಗಿದೆ. ವಿಶೇಷವೆಂದರೆ ಬ್ರಿಸ್ಬೇನ್ನ ಗಬ್ಬಾ ಕ್ರೀಡಾಂಗಣದಲ್ಲಿ 32 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡ ಮಣ್ಣು ಮುಕ್ಕಿದೆ.
ಸರಣಿಯುದ್ದಕ್ಕೂ ಸ್ಲೆಡ್ಜಿಂಗ್ (Sledging) ಮೂಲಕ ಭಾರತದ ಆಟಗಾರರರನ್ನು ಗೋಳು ಹೊಯ್ದುಕೊಂಡಿದ್ದ ಆಸ್ಟ್ರೇಲಿಯಾದ ಆಟಗಾರರಿಗೆ ಸರಣಿ ಸೋಲು ಉಣಿಸುವ ಮೂಲಕ ಭಾರತೀಯ ಆಟಗಾರರು ಸರಿಯಾಗಿ ನೀರು ಕುಡಿಸಿದ್ದಾರೆ.
ಪ್ರಧಾನ ಮಂತ್ರಿಗಳಿಂದ ಅಭಿನಂದನೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿಜಯ ಸಾಧಿಸಿರುವ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.
ಈ ಸರಣಿಯಲ್ಲಿ ಭಾರತ ತಂಡದ ಆಟಗಾರರು ತೋರಿದ ಉತ್ಸಾಹ ಮತ್ತು ಗೆಲುವಿನೆಡೆಗೆ ಸಾಗಿದ ಪರಿ ನಿಜಕ್ಕೂ ಅಭಿನಂದನೀಯ ಎಂದು ಬಣ್ಣಿಸಿರುವ ಮೋದಿ, ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.




Published On - 1:08 pm, Tue, 19 January 21