India vs England Test Series: 2ನೇ ಟೆಸ್ಟ್​ನಲ್ಲಿ ನದೀಮ್ ಬದಲು ಅಕ್ಸರ್ ಪಟೇಲ್ ಆಟ

|

Updated on: Feb 10, 2021 | 10:08 PM

ನದೀಮ್ ಮತ್ತು ವಾಷಿಂಗ್ಟನ್​ ಸುಂದರ್ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದರು ಅಂತ ಬಹಿರಂಗವಾಗೇ ಕೊಹ್ಲಿ ಅಸಾಮಾಧಾನ ಹೊರಹಾಕಿದ್ದರು.

India vs England Test Series: 2ನೇ ಟೆಸ್ಟ್​ನಲ್ಲಿ ನದೀಮ್ ಬದಲು ಅಕ್ಸರ್ ಪಟೇಲ್ ಆಟ
ವಿರಾಟ್​ ಕೊಹ್ಲಿಯೊಂದಗೆ ಅಕ್ಸರ್ ಪಟೇಲ್
Follow us on

ಚೆನೈಯಲ್ಲಿ ಅನಿರೀಕ್ಷಿತ 227 ರನ್​ಗಳ ಸೋಲನ್ನು ಅನುಭವಿಸಿದ ಭಾರತ ತಂಡಕ್ಕೆ ಅದೇ ಮೈದಾನದ ಬೇರೆ ಪಿಚ್​ನಲ್ಲಿ ​ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮೊಣಕಾಲು ಗಾಯದಿಂದ ಚೇತರಿಸಿಕೊಂಡಿರುವ ಎಡಗೈ ಸ್ಪಿನ್ನರ್ ಅಕ್ಸರ್ ಪಟೇಲ್ ಆಡುವ ಎಲೆವೆನ್ ಸೇರಿಕೊಳ್ಳವುದು ಖಚಿತ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ. ಪಟೇಲ್ ತಂಡದೊಂದಿಗೆ ಅಭ್ಯಾಸವನ್ನೂ ಪ್ರಾರಂಭಿಸಿದ್ದು ಮೊದಲ ಟೆಸ್ಟ್​ನಲ್ಲಿ ಆಡಿದ ಮತ್ತೊಬ್ಬ ಎಡಗೈ ಸ್ಪಿನ್ನರ್ ಶಾಹಭಾಜ್ ನದೀಮ್ ಅವರು ಪಟೇಲ್​ಗೆ ಸ್ಥಾನ ತೆರವು ಮಾಡಲಿದ್ದಾರೆ.

ಮೊದಲ ಟೆಸ್ಟ್​ನಲ್ಲಿ ಆಡಬೇಕಿದ್ದ ಪಟೇಲ್ ಅಭ್ಯಾಸ ಮಾಡುತ್ತಿದ್ದಾಗ ಗಾಯಗೊಂಡಿದ್ದರಿಂದ ಕಡೇ ಗಳಿಗೆಯಲ್ಲಿ ಬದಲೀ ಆಟಗಾರನಾಗಿ ಲಭ್ಯರಿದ್ದ ನದೀಮ್ ಅವರನ್ನು ಟೀಮಿಗೆ ಸೇರಿಸಿಕೊಳ್ಳಲಾಗಿತ್ತು.

‘ಅಕ್ಸರ್​ ಮೊಣಕಾಲಿಗೆ ಪೆಟ್ಟಾಗಿತ್ತು, ಅವರೀಗ ಚೇತರಿಸಕೊಂಡಿದ್ದು ನೆಟ್ಸ್​ನಲ್ಲಿ ಬ್ಯಾಟಂಗ್ ಅಭ್ಯಾಸ ಶುರುಮಾಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಅವರು ಬೌಲಿಂಗ್ ಅಭ್ಯಾಸವನ್ನು ಆರಂಭಿಸಲಿದ್ದಾರೆ. ಮೊದಲ ಟೆಸ್ಟ್​ಗೆ ಅವರೇ ಪ್ರಥಮ ಆಯ್ಕೆಯಾಗಿದ್ದರು. ಎರಡನೇ ಟೆಸ್ಟ್​ಗೆ ಆಡುವ ಇಲೆವೆನ್ ಅನ್ನು ಕೋಚ್ ರವಿ ಶಾಸ್ತ್ರೀ, ನಾಯಕ ವಿರಾಟ್​ ಕೊಹ್ಲಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅಂತಿಮಗೊಳಿಸಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಶಾಹಭಾಜ್ ನದೀಮ್

ನದೀಮ್ ಬೌಲಿಂಗ್ ಪ್ರದರ್ಶನದ ಬಗ್ಗೆ ಕೊಹ್ಲಿ ಮೊದಲ ಟೆಸ್ಟ್ ಮುಗಿದ ನಂತರ ನಿರಾಶೆ ವ್ಯಕ್ತಪಡಿಸಿದ್ದರು. ನದೀಮ್ ಮತ್ತು ವಾಷಿಂಗ್ಟನ್​ ಸುಂದರ್ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳ ಮೇಲೆ ಒತ್ತಡ ಹೇರುವಲ್ಲಿ ವಿಫಲರಾದರು ಅಂತ ಬಹಿರಂಗವಾಗೇ ಕೊಹ್ಲಿ ಅಸಾಮಾಧಾನ ಹೊರಹಾಕಿದ್ದರು. ಆಂಗ್ಲ ಬ್ಯಾಟ್ಸ್​ಮನ್​ಗಳ ಮೇಲೆ ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮ ಮತ್ತು ರವಿಚಂದ್ರನ್ ಅಶ್ವಿನ್ ಸೃಷ್ಟಿಸಿದ್ದ ಒತ್ತಡವನ್ನು ಕಾಯ್ದುಕೊಳ್ಳಲು ಸುಂದರ್ ಮತ್ತು ನದೀಮ್​ ವಿಫಲರಾದರು ಅಂತ ಕೊಹ್ಲಿ ಹೇಳಿದ್ದರು.

ಮೊದಲ ಟೆಸ್ಟ್​ನಲ್ಲಿ ನದೀಮ್ ಒಟ್ಟು 4 ವಿಕೆಟ್ ಪಡೆದರಾದರೂ ಅದಕ್ಕಾಗಿ 233 ರನ್​ಗಳನ್ನು ಖರ್ಚು ಮಾಡಿದರು. ಅದು ಸಾಲದೆಂಬಂತೆ ಮರು ಪಂದ್ಯದಲ್ಲಿ 9 ಬಾರಿ ಓವರ್​ಸ್ಟೆಪ್ ಮಾಡಿ ನೋ ಬಾಲ್​ಗಳನ್ನು ಎಸೆದರು. ಟೆಸ್ಟ್ ಕ್ರಿಕೆಟ್​ನಲ್ಲಿ ಒಬ್ಬ ಸ್ಪಿನ್ನರ್ ನೋ ಬಾಲ್ ಎಸೆಯುವುದನ್ನು ಅಪರಾಧ ಎಂದು ಉಲ್ಲೇಖಿಸಲಾಗುತ್ತದೆ. ತಮ್ಮಿಂದ ಪ್ರಮಾದವಾಗುತ್ತಿರುವುದನ್ನು ಖುದ್ದು ನದೀಮ್ ಅಂಗೀಕರಿಸಿದ್ದಾರೆ. ಎಸೆತವನ್ನು ಬೌಲ್ ಮಾಡುವ ಮುನ್ನ ತಾನು ಮಾಡುವ ಜಿಗಿತದಲ್ಲಿ ಎಡವಟ್ಟಾಗಿ ಓವರ್​ಸ್ಟೆಪ್​ ಮಾಡುತ್ತಿರುವುದಾಗಿ ಅವರು ಹೇಳಿದ್ದಾರೆ.

ಸುಂದರ್ ಮೊದಲ ಇನ್ನಿಂಗ್ಸ್​ನಲ್ಲಿ 26 ಓವರ್​ಗಳನ್ನು ಬೌಲ್ ಮಾಡಿ ಒಂದೂ ವಿಕೆಟ್ ಪಡೆಯದೇ ಹೋದರು. ಅವರ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಂತೆ ಗೋಚರಿಸಿದ ಕೊಹ್ಲಿ ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 1 ಓವರ್ ಮಾತ್ರ ಬೌಲ್ ಮಾಡಿಸಿದರು. ಆದರೆ, ಬ್ಯಾಟಿಂಗ್​ನಲ್ಲಿ ಮಿಂಚಿದ ಸುಂದರ್ ಅಡುವ ಇಲೆವೆನ್​ನಲ್ಲಿ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆಯಿದೆ.

ಇದನ್ನೂ ಓದಿ: ಭಾರತದ ಸೋಲಿಗೆ ಪಿಚ್ ಕಾರಣ ಎಂದ ವಿರಾಟ್ ಕೊಹ್ಲಿ, ಬೌಲರ್​ಗಳಿಂದ ಗೆಲುವು ದಕ್ಕಿತು ಎಂದ ಜೋ ರೂಟ್

ವಾಷಿಂಗ್ಟನ್ ಸುಂದರ್

ಆದರೆ, ಎಡಗೈ ರಿಸ್ಟ್​ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಮೊದಲ ಟೆಸ್ಟ್​ನಿಂದ ಹೊರಗಿಟ್ಟಿದ್ದಕ್ಕೆ ಸಾಕಷ್ಟು ಚರ್ಚೆಗಳು ನಡೆದರೂ ಚೈನಾಮನ್​ಗಳನ್ನು ಬೌಲ್ ಮಾಡುವ ಯಾದವ್​ರನ್ನು ಎರಡನೇ ಟೆಸ್ಟ್​ನಲ್ಲಿ ಆಡಿಸುವ ಸಾಧ್ಯತೆ ತೀರಾ ಕಮ್ಮಿ.

ಮೊದಲ ಟೆಸ್ಟ್​ನಲ್ಲಿ ಯಾವ ಕಾಂಬಿನೇಷನೊಂದಿಗೆ ಕಣಕ್ಕಿಳಿಯಬೇಕುನ್ನುವ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇತ್ತು. ಮೊದಲ ಟೆಸ್ಟ್​ಗೆ ಆಯ್ಕೆ ಮಾಡಿದ ಸದಸ್ಯರ ಬಗ್ಗೆ ನಮಗೆ ಯಾವುದೇ ವಿಷಾದವಿಲ್ಲ. ಮುಂಬರುವ ದಿನಗಳಲ್ಲಿ ನಾವು ಭಿನ್ನ ಕಾಂಬಿನೇಷನ್​ಗಳ ಬಗ್ಗೆ ಯೋಚಿಸಲಿದ್ದೇವೆ. ಬಲಗೈ ಬ್ಯಾಟ್ಸ್​ಮನ್​ಗೆ ಆಫ್​ ಸ್ಟಂಪ್​ನಿಂದ ಆಚೆ ಹೋಗುವ ಎಸೆತಗಳನ್ನು ಬೌಲ್ ಮಾಡುವ ಬೌಲರ್​ಗಳ ಬಗ್ಗೆ ನಾವು ಯೋಚಿಸಿಬೇಕಿದೆ, ಅದು ಖಂಡಿತವಾಗಿಯೂ ಆಕ್ರಮಣವನ್ನು ವೈವಿಧ್ಯಮಯ ಮಾಡಲಿದೆ,’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

Published On - 8:35 pm, Wed, 10 February 21