ಟೋಕಿಯೋ ಒಲಿಂಪಿಕ್ಸ್ ಮುಕ್ತಾಯವಾಗಿದೆ. 7 ಪದಕಗಳೊಂದಿಗೆ ಕ್ರೀಡಾಪಟುಗಳು ಕೂಡ ಭಾರತಕ್ಕೆ ಮರಳಿದ್ದಾರೆ. ಅದರಲ್ಲೂ ಈ ಬಾರಿ ಭಾರತ ಹಾಕಿ ತಂಡ 49 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ ಸೆಮಿ ಫೈನಲ್ಗೇರುವ ಮೂಲಕ ವಿಶೇಷ ಸಾಧನೆ ಮೆರೆದಿದೆ. ಒಂದು ಕಾಲದಲ್ಲಿ ಹಾಕಿ ಅಂಗಳವನ್ನು ಆಳಿದ್ದ ಭಾರತ ಆ ಬಳಿಕ ಎಡವಿದೆಲ್ಲಿ? ಕಳೆದ ನಾಲ್ಕು ದಶಕದಲ್ಲಿ ಭಾರತ ಹಾಕಿ ತಂಡವೇಕೆ ಪ್ರಮುಖ ಘಟ್ಟ ತಲುಪಿಲ್ಲ? 1980 ರಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಮತ್ತೊಮ್ಮೆ ಒಲಿಂಪಿಕ್ ಪದಕವನ್ನು ಹೇಗೆ ಪಡೆಯಿತು? ಈ ನಡುವಿನ ವರ್ಷಗಳಲ್ಲಿ ಹಾಕಿ ತಂಡದಲ್ಲಾದ ಬದಲಾವಣೆಗಳೇನು? ಈ ಬಾರಿಯ ಅತ್ಯುತ್ತಮ ಪ್ರದರ್ಶನಕ್ಕೆ ಕಾರಣವೇನು? ಎಂಬಿತ್ಯಾದಿ ಪ್ರಶ್ನೆಗಳು ಭಾರತದ ಹಾಕಿ ತಂಡ ಕಂಚಿನ ಪದಕಕ್ಕೆ ಮುತ್ತಿಕುವುದರೊಂದಿಗೆ ಹುಟ್ಟಿಕೊಂಡಿದೆ.
ಈಗ ಒಲಿಂಪಿಕ್ಸ್ ಮುಗಿದಿದೆ. ಏಳು ಪದಕ ಗೆದ್ದ ಸಂಭ್ರಮದಲ್ಲಿದ್ದಾರೆ ಇಡೀ ಭಾರತೀಯರು. ಈ ಸಂಭ್ರಮ ಮುಗಿಯುವ ಮೊದಲು ಮತ್ತು ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳುವ ಮುನ್ನ, ಭಾರತೀಯ ಹಾಕಿಯ ಮಹತ್ವದ ತಿರುವುಗಳೇನಾಗಿತ್ತು? ಸೋಲು-ಗೆಲುವಿಗೆ ಕಾರಣಗಳೇನು ಮತ್ತು ಅದಕ್ಕೇನು ಯೋಜನೆ ರೂಪಿಸಬೇಕು ಮತ್ತು ಹೇಗೆ ಅಭ್ಯಾಸ ಮಾಡಬೇಕು ಎಂಬುದನ್ನು ಅವಲೋಕಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಮಾತ್ರ ಭಾರತೀಯ ಹಾಕಿ ತಂಡಕ್ಕೆ ಮುಂದಿನ ಮೂರು ವರ್ಷಗಳಲ್ಲಿ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್- 2024 ಹೊಳೆಯುವ ಪದಕ ಗೆಲ್ಲಲು ಸಾಧ್ಯವಾಗಲಿದೆ.
ಹೌದು, ಪ್ರಸ್ತು ಭಾರತೀಯ ಹಾಕಿ ತಂಡದ ಪ್ರದರ್ಶನವನ್ನು ನಾವು ಅವಲೋಕಿಸುವ ಮುನ್ನ ಸುಮಾರು 12 ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ. ಏಕೆಂದರೆ 12 ವರ್ಷಗಳ ಹಿಂದೆ ಭಾರತ ಹಾಕಿ ತಂಡಕ್ಕೆ ಮೊದಲ ವಿದೇಶಿ ಕೋಚ್ನ ಆಗಮನವಾಗಿತ್ತು. ಅಲ್ಲಿಂದ ಭಾರತೀಯ ಹಾಕಿಯಲ್ಲಿ ಬದಲಾವಣೆಯ ಪರ್ವ ಶುರುವಾಗಿತ್ತು. ಇದಕ್ಕೂ ಮುನ್ನ ಭಾರತ ತಂಡದ ತಾಂತ್ರಿಕ ನಿರ್ದೇಶಕರಾಗಿ ರಿಕ್ ಚಾರ್ಲ್ಸ್‌ವರ್ತ್‌ಗೆ ಕಾರ್ಯನಿರ್ವಹಿಸಿದ್ದರು. ಅದಾಗ್ಯೂ ಅವರ ಅಧಿಕಾರಾವಧಿ ತುಂಬಾ ಕಡಿಮೆ ಇತ್ತು. ಹಾಗೆಯೇ ಮತ್ತೋರ್ವ ವಿದೇಶಿ ಕೋಚ್ ಗೆರ್ಹಾರ್ಡ್ ರಾಚ್ 2004 ರ ಅಥೆನ್ಸ್ ಒಲಿಂಪಿಕ್ಸ್ ವೇಳೆ ತಂಡದ ತರಬೇತುದಾರರಾಗಿದ್ದರು. ಆದರೆ ಅವರಂತಹ ತರಬೇತುದಾರರು ಭಾರತದಲ್ಲಿ ಹಲವು ಮಂದಿ ಇದ್ದರು. ಅವರಲ್ಲಿ ಅಂತಹದ್ದೇನು ವಿಶೇಷತೆ ಕೂಡ ಇದ್ದಿರಲಿಲ್ಲ ಎನ್ನಬಹುದು.
ಇದಾಗ್ಯೂ ಭಾರತದ ಮೊದಲ ವಿದೇಶಿ ಕೋಚ್ ಆಗಿ ಸಂಪೂರ್ಣ ಹಿಡಿತ ಸಾಧಿಸಿದ್ದು ಜೋಸ್ ಬ್ರಾಸಾ. ಸುಮಾರು 12 ವರ್ಷಗಳ ಭಾರತ ತಂಡದ ಸಾರಥ್ಯವನ್ನು ಬ್ರಾಸಾ ವಹಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ ಭಾರತ ತಂಡದ ಹೊಸ ಪರ್ವ ಶುರುವಾಗಿತ್ತು. ಹೀಗಾಗಿಯೇ ಬ್ರಾಸಾ ಅವರನ್ನೇ ಭಾರತದ ಮೊದಲ ವಿದೇಶಿ ಕೋಚ್ ಎಂದು ಹೇಳಬಹುದು. ಬ್ರಾಸಾ ಅವರು ಈ ಹಿಂದಿನ ಎಲ್ಲಾ ಕೋಚ್ಗಳಿಗಿಂತ ವಿಭಿನ್ನವಾಗಿದ್ದರು. ಹಳೆಯ ಕ್ಲಾಸ್ ರೂಮ್ಗಳ ಬ್ಲ್ಯಾಕ್ ಬೋರ್ಡ್ ಸೆಷನ್ಗಳನ್ನು ಬದಲಿಸಿದರ. ಆಟಗಾರರಲ್ಲಿ ‘ನಾವು ಕೊನೆಯ ಉಸಿರಿರುವವರೆಗೂ ಹೋರಾಡುತ್ತೇವೆ’ ಎಂಬ ಧ್ಯೇಯವಾಕ್ಯದೊಂದಿಗೆ ಹೊಸ ವಿಶ್ವಾಸ ಮೂಡಿಸಿದರು. ಪರಿಣಾಮ ತಂಡದಲ್ಲಿ ಬದಲಾವಣೆ ಕಾಣಿಸಲಾರಂಭಿಸಿತು.
ಚಾರ್ಲ್ಸ್‌ವರ್ತ್ ಮತ್ತು ಬ್ರಾಸಾ ಅವರ ಭವಿಷ್ಯವಾಣಿ ನಿಜವಾಯ್ತು:
ಟೀಮ್ ಇಂಡಿಯಾ ಹಾಕಿ ನಿರ್ದೇಶಕರಾಗಿದ್ದ ಚಾರ್ಲ್ಸ್‌ವರ್ತ್ ತಂಡಕ್ಕೆ ಬಹಳ ಕಾಲ ತರಬೇತಿ ನೀಡಿಲ್ಲದಿರಬಹುದು. ಆದರೆ ಆತನ ಬಳಿ ತಂಡಕ್ಕಾಗಿ ಅತ್ಯುತ್ತಮ ಮಾರ್ಗಸೂಚಿ ಇತ್ತು. ಅವರು ತಂಡದ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಂತೆ, ಭಾರತ ತಂಡದ ಪ್ರದರ್ಶನ ನೋಡಿ, ಈ ತಂಡವು ಅಗ್ರಸ್ಥಾನವನ್ನು ತಲುಪಲು ಎಂಟರಿಂದ ಹತ್ತು ವರ್ಷಗಳನ್ನು ತೆಗೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದರು. ಅಷ್ಟೇ ಭಾರತ ತಂಡವು “ಕಳೆದ 40 ವರ್ಷಗಳಿಂದ ಪಾತಾಳದತ್ತ ಸಾಗುತ್ತಿದೆ. ಈ ತಂಡವನ್ನು ಮೇಲೆತ್ತಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ” ಎಂದು ಕಿರುನಗೆಯೊಂದಿಗೆ ಭಾರತೀಯ ಹಾಕಿ ತಂಡದ ಪರಿಸ್ಥಿತಿಯನ್ನು ಅಂದು ವಿವರಿಸಿದ್ದರು.
ಹಾಗೆಯೇ ಜೋಸ್ ಬ್ರಾಸಾ ಕೂಡ ಭಾರತೀಯ ಹಾಕಿಯ ಪರಿಸ್ಥಿತಿ ಗಮನಿಸಿ ಇದೇ ಮಾತನಾಡಿದ್ದರು. ಕೊನೆಯ ಶ್ರೇಯಾಂಕದಲ್ಲಿರುವ ತಂಡವು ಅಗ್ರಸ್ಥಾನವನ್ನು ತಲುಪಲು ಅಥವಾ ಒಲಿಂಪಿಕ್ ವೇದಿಕೆಯಲ್ಲಿ ಭರ್ಜರಿಯಾಗಿ ಪ್ರದರ್ಶನ ನೀಡಲು ಸುಮಾರು 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದಿದ್ದರು. ಕಾಕತಾಳೀಯ ಎಂಬಂತೆ ಅಂದು ಬ್ರಾಸಾ ಅವರು ನುಡಿದಿದ್ದ ಭವಿಷ್ಯ ಇಂದು ನಿಜವಾಗಿದೆ. ನಿಖರವಾಗಿ 12 ವರ್ಷಗಳ ಬಳಿಕ ಭಾರತೀಯ ಹಾಕಿ ತಂಡ ಟೋಕಿಯೋ ಒಲಿಂಪಿಕ್ಸ್ ಮೂಲಕ ಮೈಕೊಡವಿ ನಿಂತುಕೊಂಡಿದೆ.
ಇಲ್ಲಿ ವಿಶೇಷವೆಂದರೆ, ಚಾರ್ಲ್ಸ್‌ವರ್ತ್ ಮತ್ತು ಬ್ರಾಸಾ ಇಬ್ಬರೂ ಗುರಿಯನ್ನು ಸಾಧಿಸಲು ವೃತ್ತಿಪರ ವಿಧಾನವನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿರುವುದು. ಆದರೆ ದುರದೃಷ್ಟವಶಾತ್ ಅದು ಫಲ ನೀಡಿರಲಿಲ್ಲ. ಹಾಕಿ ಇಂಡಿಯಾ ತರಬೇತುದಾರರನ್ನು ಆಗಾಗ್ಗೆ ಬದಲಿಸಿತು. ಪಂದ್ಯಾವಳಿಗೆ ಮುನ್ನ ಹೊಸ ತರಬೇತುದಾರನನ್ನು ಕರೆತರಲಾಯಿತು. ಅಂತಿಮವಾಗಿ ಗ್ರಹಾಂ ರೀಡ್ ಅವರ ತಂಡವು 12 ವರ್ಷಗಳ ಹಿಂದೆ ನಿಗದಿಪಡಿಸಿದ ಗುರಿಯನ್ನು ಸಾಧಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿತು.
ಈಗ ಎಲ್ಲರ ಮುಂದಿರುವ ಪ್ರಶ್ನೆ: ಕಳೆದ ನಾಲ್ಕು ದಶಕಗಳಲ್ಲಿ ಸಾಧ್ಯವಾಗದೇ ಇರುವ ಗೆಲುವು ಈ 12 ವರ್ಷಗಳಲ್ಲಿ ಹೇಗೆ ಲಭಿಸಿತು? ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶ ಎಂದರೆ ಬಹುತೇಕ ತರಬೇತುದಾರರೂ ಭಾರತೀಯ ಹಾಕಿ ವ್ಯವಸ್ಥೆಯ ಕೊರತೆಯ ಬಗ್ಗೆ ದೂರಿರುವುದು. ಇದಾಗ್ಯೂ ಪ್ರಪಂಚದಾದ್ಯಂತದ ಹಲವು ಕೋಚ್ಗಳು ಭಾರತ ತಂಡದ ಭಾಗವಾಗಲು ಬಯಸಿದ್ದರು. ಆ ಬಳಿಕ ಹಣ ಮತ್ತು ಗ್ಲಾಮರ್ನ ಹಾಕಿ ಇಂಡಿಯಾ ಲೀಗ್ ಕೂಡ ಬಂತು. ಇದೇ ವೇಳೆ ಮತ್ತಷ್ಟು ವಿದೇಶಿ ತರಬೇತುದಾರರು ಭಾರತೀಯ ಹಾಕಿಯತ್ತ ಆಕರ್ಷಿತರಾದರು. ಒಂದು ಕಾಲದಲ್ಲಿ ಹಾಕಿ ಅಂಗಳವನ್ನು ಆಳಿದ ತಂಡವನ್ನು ಮತ್ತೊಮ್ಮೆ ಅಗ್ರಸ್ಥಾನಕ್ಕೆ ಕೊಂಡೊಯ್ಯುವುದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ ಎಂದು ಅವರಿಗೂ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಹಾಕಿ ಇಂಡಿಯಾ ಲೀಗ್ ಬಳಿಕ ಭಾರತೀಯ ಹಾಕಿ ತಂಡದ ಕೋಚ್ ಆಗಲು ಹಲವು ವಿದೇಶಿ ತರಬೇತುದಾರರು ಆಸಕ್ತಿ ಹೊಂದಿದ್ದರು.
12 ವರ್ಷಗಳ ಹಿಂದಿನ ಕಥೆ:
ಕಳೆದ 12 ವರ್ಷಗಳಲ್ಲಿ ಏನಾಯಿತು ಎಂಬುದನ್ನು ಈಗ ಅವಲೋಕಿಸುವುದಾದರೆ, ಅಂದು ಭಾರತ ತಂಡದ ಕೋಚ್ ಜವಾಬ್ದಾರಿ ವಹಿಸಿಕೊಂಡ ಬೆನ್ನಲ್ಲೇ ಜೋಸ್ ಬ್ರಾಸಾ ತಂಡಕ್ಕಾಗಿ ಹಲವು ಅತ್ಯುತ್ತಮ ಕ್ರೀಡೋಪಕರಣಗಳನ್ನು ಕೇಳಿದ್ದರು. ಅವರು ಬಹುಶಃ ಐರೋಪ್ಯ ರಾಷ್ಟ್ರಗಳಲ್ಲಿ ಸಿಗುವಂತೆ ಇಲ್ಲೂ ಕೂಡ ತಾವು ಭಾವಿಸಿದ ಕ್ರೀಡೋಪಕರಣಗಳು ಸಿಗಲಿದೆ ಎಂದು ಭಾವಿಸಿದ್ದರು. ಆ ಬಳಿಕ ಭಾರತದಲ್ಲಿ ಇಂತಹ ವಿಷಯಗಳು ಹೇಗೆ ಕೆಲಸ ಮಾಡುತ್ತವೆ ಎಂದು ಅವರಿಗೂ ಅರಿವಾಯಿತು. ಅಧಿಕಾರಿಗಳಿಗೆ ಕೆಲವು ಹಾಕಿ ಕ್ರೀಡೋಪಕರಣಗಳ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಅವರ ಬೇಡಿಕೆಯ ಕಡತಗಳನ್ನು ಮುಂದೂಡಲಾಯಿತು. ಬ್ರಾಸಾ ಕೇಳುತ್ತಿದ್ದ ಉಪಕರಣಗಳ ಬಗ್ಗೆ ಭಾರತೀಯರಿಗೆ ತಿಳಿದಿರಲಿಲ್ಲ. ಏಕೆಂದರೆ ಅವುಗಳನ್ನು ಭಾರತೀಯ ಹಾಕಿಯಲ್ಲಿ ಎಂದಿಗೂ ಬಳಸಲಾಗಿರಲಿಲ್ಲ.
ಬ್ರಾಸಾ ಅವರಂತೆ ಆಧುನಿಕ ತರಬೇತುದಾರರು ಭಾರತದಲ್ಲಿ ಲಭ್ಯವಿಲ್ಲವೆಂದಲ್ಲ. ಆದರೆ ಆಟವನ್ನು ಸುಧಾರಿಸುವತ್ತ ಗಮನಹರಿಸಿದ ಭಾರತೀಯ ತರಬೇತುದಾರ ಅಂತಿಮವಾಗಿ ಕ್ರೀಡೆಯ ಬಗ್ಗೆ ಕಾಳಜಿ ವಹಿಸುವ ಮೂಲಕ ‘ಮೇಲಧಿಕಾರಿಗಳಿಗೆ’ ಕೋಪಕ್ಕೆ ಗುರಿಯಾಗಿದ್ದರು. ಇನ್ನು ಬಾಸ್ ಅನ್ನು ಸಂತೋಷವಾಗಿರಿಸಿದವರಿಗೆ ಮೈದಾನದಲ್ಲಿ ಆಟದ ತಂತ್ರವನ್ನು ಸುಧಾರಿಸಲು ಯಾವುದೇ ಆಲೋಚನೆ ಇರಲಿಲ್ಲ. ಇಂತಹ ಸನ್ನಿವೇಶದಲ್ಲಿ, ಜೋಸ್ ಬ್ರಾಸಾ ವಿಭಿನ್ನ ವಿಧಾನವನ್ನು ಅನುಸರಿಸಲು ಮುಂದಾದರು.
ಆಟಗಾರರಿಗೆ ಜಿಪಿಎಸ್, ಹೃದಯ ಬಡಿತ ಯಂತ್ರಗಳು, ಪ್ರತಿ ಹಂತದಲ್ಲಿ ಆಟಗಾರರ ಚಲನೆಯನ್ನು ಅಳೆಯುವ ಯಂತ್ರಗಳು, ಇತ್ಯಾದಿ ಎಲ್ಲವನ್ನು ಪರಿಚಯಿಸಿದರು. ಆ ಬಳಿಕ ಮಾನವ ಕಾರ್ಯಕ್ಷಮತೆ ವಿಶ್ಲೇಷಕ – ದೈಹಿಕ ತರಬೇತುದಾರ ಜೀಸಸ್ ಗಾರ್ಸಿಯಾ ಪಲ್ಲರ್ಸ್ ಅವರನ್ನು ಕರೆತರಲಾಯಿತು. ಅವರು ಪ್ರತಿ ಸಣ್ಣ ವಿವರವನ್ನು ವಿಶ್ಲೇಷಿಸಲು ಆರಂಭಿಸಿದರು. ಟರ್ಫ್‌ಗೆ ನೀರು ಹಾಕಲು ಬಳಸುವ ಸ್ಪ್ರಿಂಕ್ಲರ್‌ಗಳ ಕೋನ ಕೂಡ ಜೆಟ್ ನೀರನ್ನು ಸರಿಯಾಗಿ ಸಿಂಪಡಿಸಿದ್ದಾರೆಯೇ ಎಂದು ಪರೀಕ್ಷಿಸಲು ಕೂಡ ಶುರು ಮಾಡಿದರು.
ಸಮಸ್ಯೆಯೆಂದರೆ ಬ್ರಾಸಾ ಯುರೋಪಿಯನ್ ತರಬೇತುದಾರನಂತೆ ಎಲ್ಲವನ್ನೂ ಹೊಂದಿರಲಿಲ್ಲ. ಪ್ರತಿಯೊಂದು ಸಣ್ಣ ಕೆಲಸವನ್ನೂ ತಾನೇ ಮಾಡಬೇಕೆಂದು ಅವರಿಗೂ ತಿಳಿದಿರಲಿಲ್ಲ. ಬ್ರಾಸಾ ಅವರ ಮೊದಲ ತರಬೇತಿ ಶಿಬಿರವು ಪುಣೆಯಲ್ಲಿತ್ತು. ಇದು ಒಂದು ದಿನ ತಡವಾಯಿತು. ಇದನ್ನು ವರದಿ ಮಾಡಲು ಹೋದ ಹಿರಿಯ ಪತ್ರಕರ್ತರೊಬ್ಬರು ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತದ ತಯಾರಿ ಎರಡೂವರೆ ಗಂಟೆ ವಿಳಂಬವಾಗಿದೆ. ಅವರು ಶಿಬಿರದಲ್ಲಿ ಕಳೆಯಬೇಕಾಗಿದ್ದ ಸಮಯದ ಅವಧಿಯನ್ನು ಬಹಿರಂಗಪಡಿಸಿದ್ದರು.
ಸುಲಭವಾಗಿ ಬದಲಾವಣೆಯಾಗಿಲ್ಲ:
ಆಟಗಾರರಿಗೆ ಕೂಲಂಕುಷ ಪರೀಕ್ಷೆಯು ಅಂದುಕೊಂಡಷ್ಟು ಸುಲಭವಲ್ಲ. ಮತ್ತು ‘ಸರ್ಕಾರಿ’ ಶೈಲಿಯಲ್ಲಿ ಕೆಲಸ ಮಾಡುವರು ಮಾತ್ರವಲ್ಲ, ಆಟಗಾರರು ಕೂಡ ಬದಲಾವಣೆಗಳಿಗೆ ಸಿದ್ಧರಿರಲಿಲ್ಲ. ತಮ್ಮ ದೇಹದ ಮೇಲೆ ಬ್ಯಾಂಡ್ನೊಂದಿಗೆ ಓಡುವುದು ಏಕೆ ಅಗತ್ಯ ಎಂದು ಅವರಿಗೆ ಅರ್ಥವಾಗಲಿಲ್ಲ. ಒಬ್ಬ ಆಟಗಾರನು, “ಬ್ರಾದಂತೆ ಕಾಣುವ ಇದನ್ನೇಕೆ ಧರಿಸಲು ಹೇಳುತ್ತಿದ್ದಾರೆ ಎಂದು ಗೊತ್ತಿಲ್ಲ” ಎಂದೇಳಿದ್ದರು.
ಕೆಲ ಹಿರಿಯ ಆಟಗಾರರಿಗೆ ನಿಮ್ಮ ಹಾಕಿ ಸ್ಟಿಕ್ ಮೇಲೆ ಹಿಡಿತ ಸರಿಯಾಗಿಲ್ಲ. ಅವರ ಆಹಾರ ಪದ್ಧತಿ ಚೆನ್ನಾಗಿಲ್ಲ ಎಂದು ಅವರಿಗೆ ತಿಳಿಸಲಾಯಿತು. ದಾಲ್, ರೊಟ್ಟಿ ಮತ್ತು ಅನ್ನದಂತಹ ಆಹಾರವು ಮೆನುವಿನಿಂದ ಹೊರಗಿಡಲಾಯಿತು. ಇದರಿಂದ ಆಟಗಾರರು ಕೂಡ ತುಂಬಾ ಅಸಮಾಧಾನಗೊಂಡರು. ಆದರೆ ಕೆಲವು ತಿಂಗಳುಗಳ ನಂತರ, ಬದಲಾವಣೆ ಕಾಣಿಸಲಾರಂಭಿಸಿತು. ಆಟಗಾರರು ಕೂಡ ತಮ್ಮ ಪ್ರದರ್ಶನ ಉತ್ತಮಗೊಂಡಿರುವುದು ಗಮನಿಸಿದರು.
ಭಾರತೀಯ ತಂಡಕ್ಕಾಗಿ ಇಂಗ್ಲಿಷ್ ತರಗತಿಗಳನ್ನು ಆರಂಭಿಸಲಾಯಿತು. ಪ್ರತಿ ಆಟಗಾರನಿಗೂ ಕಂಪ್ಯೂಟರ್ ನೀಡಲಾಯಿತು. ಕಂಪ್ಯೂಟರ್ ಬಳಸಲು ಗೊತ್ತಿಲ್ಲದವರಿಗೆ ಅದನ್ನು ನಿರ್ವಹಿಸಲು ತರಬೇತಿ ನೀಡಲಾಯಿತು. ಅಷ್ಟೇ ಅಲ್ಲದೆ ಆಟಗಾರರಿಗೆ “ಹಾಕಿ ಆಡಲು ಮೆದುಳು ಕೂಡ ಬೇಕು.” ಎಂದು ಬ್ರಾಸಾ ಬಿಡಿಸಿ ತಿಳಿಸಿದ್ದರು.
ಇಂದು, ಅದರ ವಿಶೇಷತೆ ಏನು ಎಂಬುದನ್ನು ನಾವು ಯೋಚಿಸಬಹುದು? ಚಾರ್ಲ್ಸ್‌ವರ್ತ್ ಕೂಡ ಇದನ್ನೇ ಮಾಡಲು ಬಯಸಿದ್ದರು. ಓಲ್ಟ್‌ಮ್ಯಾನ್ಸ್ ಕೂಡ ಅದನ್ನೇ ಬಯಸಿದ್ದರು. ಭಾರತೀಯರಲ್ಲಿ, ಹರೇಂದ್ರ ಸಿಂಗ್ ತಂಡದ ಕೋಚ್ ಆಗಿದ್ದರು. ಅವರಿಗೂ ಇಂತಹ ಕ್ರೀಡೋಪಕರಣಗಳು, ಬದಲಾವಣೆಗಳು ಬೇಕಿತ್ತು. ಆದರೆ, ಅಂತಿಮವಾಗಿ, ಬ್ರಾಸಾ ಕಾಲದಲ್ಲಿ ಅದು ಆರಂಭವಾಯಿತು. ಅವರು 12 ವರ್ಷಗಳ ಹಿಂದೆಯೇ ಒಲಿಂಪಿಕ್ ಪದಕಕ್ಕೆ ಅಡಿಪಾಯ ಹಾಕಿದ್ದರು.
ಭಾರತೀಯ ಹಾಕಿ ವ್ಯವಸ್ಥೆಯಲ್ಲಿ ಒಂದು ಕಾಲವಿತ್ತು. ಇಡೀ ತಂಡವು ದೆಹಲಿಯ ರಾಷ್ಟ್ರೀಯ ಮತ್ತು ನೆಹರು ಕ್ರೀಡಾಂಗಣಗಳ ಸಮೀಪವಿದ್ದ ಗುರ್ಗಾಂವ್‌ನ ಲಾಡ್ಜ್‌ನಲ್ಲಿ ತಂಗಬೇಕಿತ್ತು. ಆ ವಸತಿಗೃಹದ ಹೆಸರನ್ನು ಬಹಿರಂಗಪಡಿಸುವುದು ಸರಿಯಲ್ಲ. ರಾಷ್ಟ್ರೀಯ ಹಾಕಿ ಶಿಬಿರಕ್ಕಾಗಿ ಅಲ್ಲಿ ಆಟಗಾರರು ತಂಗುತ್ತಿದ್ದರು. ಇದೇ ವೇಳೆ ಆಟಗಾರರು ಹೆದರುತ್ತಿದ್ದರು. ಅಲ್ಲದೆ ಅವರು ತಂಗುತ್ತಿದ್ದ ಲಾಡ್ಜ್ ಬಗ್ಗೆ ಹಾಸ್ಯ ಮಾಡುತ್ತಿದ್ದರು. “ಪೊಲೀಸರು ಇಲ್ಲಿಗೆ ಯಾವಾಗ ಬೇಕಾದರೂ ಬರಬಹುದು. ನಮ್ಮನ್ನು ವಿಚಾರಣೆಗೆ ಒಳಪಡಿಸಬಹುದು ಎಂದು. ಅಂದರೆ ಅಲ್ಲಿ ಅವ್ಯವಹಾರಗಳು ನಡೆಯುತ್ತಿದ್ದವು. ದೆಹಲಿಯಲ್ಲಿ ಶಿಬಿರಗಳು ನಡೆದಾಗಲೂ, ತಂಡವು ನೆಹರು ಕ್ರೀಡಾಂಗಣದ ಒದ್ದೆಯಾದ ಕೋಣೆಗಳಲ್ಲಿ ಅಥವಾ ಕರೋಲ್ ಬಾಗ್‌ನ ಸಣ್ಣ ಹೋಟೆಲ್‌ನಲ್ಲಿ ತಂಗುತ್ತಿತ್ತು. ಊಟಕ್ಕಾಗಿ ಫಾಸ್ಟ್ ಫುಡ್ಗಳ ಮೊರೆ ಹೋಗುವುದು ಸಾಮಾನ್ಯವಾಗಿತ್ತು. ಇದು ಅಂದಿನ ಪರಿಸ್ಥಿತಿಗೆ ಹಿಡಿದ ಕನ್ನಡಿ.
ಹೊಸ ಅಡಿಪಾಯ ಹಾಕಿದ ಬ್ರಾಸಾ:
ಭಾರತೀಯ ತರಬೇತುದಾರನ ದೃಷ್ಟಿಕೋನದಿಂದ, ಹರೇಂದ್ರ ಸಿಂಗ್ ಅವರು ಆಧುನಿಕ ಹಾಕಿಯನ್ನು ಕಲಿಯಲು ಮತ್ತು ಅದನ್ನು ತಂಡಕ್ಕೆ ಪರಿಚಯಿಸಲು ಉತ್ಸುಕರಾಗಿದ್ದರು. ಅಜಯ್ ಕುಮಾರ್ ಬನ್ಸಾಲ್ ಕೆಲ ಕಾಲ ತಂಡದ ಜೊತೆಯಲ್ಲಿದ್ದರು. ಅವರೊಂದಿಗೆ ತಂಡವು ಉತ್ತಮ ಫಲಿತಾಂಶಗಳನ್ನು ನೀಡಿತು. ಆದರೆ ಎಲ್ಲವೂ ಅಲ್ಪಾವಧಿಯದ್ದಾಗಿತ್ತು. ಹೀಗಾಗಿಯೇ ಭಾರತೀಯ ಹಾಕಿಗೆ ದೀರ್ಘಾವಧಿಯ ಪರಿಹಾರ ಅಗತ್ಯವಿತ್ತು. ಅಂತಹದೊಂದು ಬದಲಾವಣೆ ಬೇಕಿದ್ದರೆ, ತರಬೇತುದಾರನಿಗೆ ವೈಜ್ಞಾನಿಕ ಕ್ರೀಡೋಪಕರಣ ಅಗತ್ಯವಿತ್ತು. ಇದಕ್ಕಾಗಿ ಭಾರತೀಯ ತರಬೇತುದಾರನಿಗೆ ಹೆಚ್ಚಿನ ವೆಚ್ಚ ವ್ಯಯಿಸಬೇಕಿತ್ತು.
ಬ್ರಾಸಾ ತರಬೇತುದಾರರಾಗಿ ನೇಮಕವಾದಾಗ, MAV ಪರೀಕ್ಷೆ, ಹೃದಯ ಬಡಿತ ಮಾನಿಟರ್‌ಗಳು, ಲ್ಯಾಕ್ಟಿಕ್ ಆಸಿಡೋಸಿಸ್ ವಿಶ್ಲೇಷಕ, ಲೀನಿಯರ್ ಎನ್‌ಕೋಡರ್ ಮತ್ತು ಹೆಚ್ಚಿನವುಗಳೊಂದಿಗೆ ಪರಿಚಯಿಸಲಾಯಿತು. ಇದಾಗ್ಯೂ ಅವರು ಕೂಡ ಹೆಚ್ಚು ಸಮಯ ಉಳಿಯಲಿಲ್ಲ. 2010 ರಲ್ಲಿ, ವಿಶ್ವಕಪ್‌ಗಿಂತ ಸ್ವಲ್ಪ ಮುಂಚೆ, ಆಟಗಾರರು ಪುಣೆಯಲ್ಲಿ ಸ್ಟ್ರೈಕ್ ನಡೆಸಿದರು. ಬ್ರಾಸಾ ಆಟಗಾರರನ್ನು ಬೆಂಬಲಿಸಿದರು. ಬ್ರಾಸಾ ಅವರ ಬೇಡಿಕೆಗಳೇ ಹೆಚ್ಚು ಎಂದು ಪರಿಗಣಿಸಲಾಯಿತು. ಇಂತಹ ಪ್ರತಿಭಟನೆಗಳನ್ನು ಹಾಗೂ ಬೇಡಿಕೆಗಳನ್ನು ಸರ್ಕಾರಿ ಗುಮಾಸ್ತರಂತೆ ಕೆಲಸ ಮಾಡುವವರು ಸಹಿಸುವುದಿಲ್ಲ ಎಂದು ಬೇರೆ ಹೇಳಬೇಕಿಲ್ಲ.
ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಹಾಕಿ ಇಂಡಿಯಾ ಅಧಿಕಾರಿಗಳು, “ಬ್ರಾಸಾ ಯಾವಾಗಲೂ ಏನನ್ನಾದರೂ ಅಥವಾ ಇನ್ನೊಂದನ್ನು ಕೇಳುತ್ತಲೇ ಇರುತ್ತಾರೆ” ಎಂದು ಹೇಳುತ್ತಿದ್ದರು. ಆದರೆ ಅತ್ತ ಬ್ರಾಸಾ ಆಧುನಿಕ ತಂತ್ರಗಳಲ್ಲಿ ತರಬೇತಿ ಪಡೆಯಲು ಭಾರತೀಯ ಹಾಕಿಗೆ ಎಲ್ಲಾ ರೀತಿಯ ಯಂತ್ರಗಳ ಅಗತ್ಯವಿದೆ ಎಂದು ವಾದಿಸುತ್ತಿದ್ದರು. ಆಧುನಿಕತೆ ಇರದಿದ್ದರೆ ಹಾಕಿ ಉಳಿಯುವುದಿಲ್ಲ ಎಂದು ತಿಳಿಸಿದ್ದರು. ಭಾರತೀಯ ಹಾಕಿಯನ್ನು ಮೇಲೆತ್ತಲು ಬಯಸಿದ ಬ್ರಾಸಾ ಅವರನ್ನೇ ಕೋಚ್ ಹುದ್ದೆಯಿಂದ ಕೆಳಗಿಳಿಸಲಾಯಿತು. ಆದರೆ ಮುಂದೆ ತರಬೇತುದಾರನು ಕೂಡ ಬ್ರಾಸಾ ಹಾಕಿದ ಅಡಿಪಾಯದಲ್ಲಿ ಕೆಲವು ಮೂಲಭೂತ ಅಂಶಗಳನ್ನು ಸೇರಿಸಿ ಕೆಲಸವನ್ನು ಮುಂದುವರೆಸಿದರು.
ತರಬೇತುದಾರರ ಬದಲಾವಣೆಗಳು:
ಬ್ರಾಸಾದ ನಂತರ ಬಂದವರು ಉತ್ತಮ ಮತ್ತು ಅತ್ಯುತ್ತಮ ತರಬೇತಿ ನೀಡುವ ಸಾಮರ್ಥ್ಯ ಹೊಂದಿದ್ದರು. ಆದರೆ ನಿರಂತರ ಕೋಚ್ಗಳ ಬದಲಾವಣೆಯಿಂದ ಮೂಲ ವ್ಯವಸ್ಥೆಯು ಬೇರೂರಿತು ಮತ್ತು ಮುಂದುವರಿಯಿತು. 2012 ರಲ್ಲಿ ಮೈಕಲ್ ನೊಬ್ಸ್ ಜೊತೆ ಒಲಿಂಪಿಕ್ಸ್ ನಲ್ಲಿ ಭಾರತ 12 ನೇ ಸ್ಥಾನ ಪಡೆದು ಹೀನಾಯ ಪ್ರದರ್ಶನ ನೀಡಿತು. ಆ ಯುಗದ ಬಳಿಕ ಬಂದ ತರಬೇತುದಾರ ಡೇವಿಡ್ ಜಾನ್ ತಂಡವನ್ನು ವಿಶ್ವ ದರ್ಜೆಯ ಫಿಟ್ನೆಸ್ ಗೆ ಕೊಂಡೊಯ್ಯುವಲ್ಲಿ ಯಶಸ್ವಿಯಾದರು. ನಂತರ ಬಂದ ಟೆರ್ರಿ ವಾಲ್ಶ್ ಮತ್ತು ಪೌಲ್ ವ್ಯಾನ್ ಆಸ್ ಅವರನ್ನು ಅನಿಯಮಿತವಾಗಿ ತೆಗೆದುಹಾಕಲಾಯಿತು.
ಇದರ ನಂತರ, ಉನ್ನತ-ಕಾರ್ಯಕ್ಷಮತೆಯ ನಿರ್ದೇಶಕ ರೋಲೆಂಟ್ ಓಲ್ಟ್‌ಮ್ಯಾನ್ಸ್ 2013 ರಲ್ಲಿ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡರು. ಓಲ್ಟ್‌ಮ್ಯಾನ್ಸ್ ಭಾರತೀಯ ಹಾಕಿ ವ್ಯವಸ್ಥೆಯ ಭಾಗವಾಗಿದ್ದರು. ಇದರಿಂದ, ಹೆಚ್ಚಿನ ಮಾರ್ಪಾಡುಗಳ ಅಗತ್ಯವಿರಲಿಲ್ಲ. ಪರಿಣಾಮ ಭಾರತವು 2016 ರ ರಿಯೋ ಒಲಿಂಪಿಕ್ಸ್‌ನಲ್ಲಿ 8ನೇ ಸ್ಥಾನಕ್ಕೆ ಏರಿತು.
ಗ್ರಹಾಂ ರೀಡ್ ಮತ್ತು ಹರೇಂದ್ರ ಸಿಂಗ್ ಒಗ್ಗಟ್ಟು:
ಕೋಚ್ ಹುದ್ದೆಯಿಂದ ಓಲ್ಟ್‌ಮನ್ಸ್‌ನನ್ನು ತೆಗೆದುಹಾಕಲು ನಿರ್ಧರಿಸಿದಾಗ, ಮಹಿಳಾ ಹಾಕಿ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡುತ್ತಿದ್ದ ಕೋಚ್ ಸ್ಜೊರ್ಡ್ ಮರಿಜ್ನೆ ಅವರನ್ನು ನೇಮಿಸಲಾಯಿತು. ಆದರೆ ಅವರು ಪುರುಷರ ಹಾಕಿ ತಂಡದೊಂದಿಗೆ ಹೆಚ್ಚು ಕಾಲ ಉಳಿಯಲಿಲ್ಲ. ನಂತರ, ಹರೇಂದ್ರ ಸಿಂಗ್ ಗೆ ಅಧಿಕಾರ ವಹಿಸಿಕೊಳ್ಳುವಂತೆ ಕೇಳಲಾಯಿತು. ಗ್ರಹಾಂ ರೀಡ್ ಏಪ್ರಿಲ್ 2019 ರಲ್ಲಿ ಬಂದರು. ಭಾರತೀಯ ತಂಡವನ್ನು ಒಲಿಂಪಿಕ್ಸ್‌ಗೆ ಕರೆದೊಯ್ಯಲು ಅವರಿಗೆ ಕೇವಲ ಒಂದು ವರ್ಷವಿತ್ತು.
ಇದರ ಬೆನ್ನಲ್ಲೇ ಕೋವಿಡ್ -19 ಸಾಂಕ್ರಾಮಿಕ ರೋಗವು ಅಡ್ಡಿಯಾಯಿತು. ಆದರೆ ಇದು ಭಾರತೀಯ ಹಾಕಿ ತಂಡವನ್ನು ಕಠಿಣವಾಗಿ ರೂಪಿಸಲು ಒಂದು ವರ್ಷ ಬೇಕಾಗಿತ್ತು. ಇತ್ತ ಟೋಕಿಯೋ ಒಲಿಂಪಿಕ್ಸ್ ಮುಂದೂಡಿದ್ದು ಭಾರತಕ್ಕೆ ವರದಾನವಾಯಿತು. ರೀಡ್ ತನ್ನ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಜ್ಜಾದರು. ಅಂತಿಮವಾಗಿ, ಬ್ರಾಸಾ ಅಥವಾ ಇತರ ತರಬೇತುದಾರರು ಯೋಜಿಸಿದ ರೀತಿಯಲ್ಲಿ ಇಲ್ಲದಿದ್ದರೂ ಭಾರತಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದರು. 12ನೇ ವರ್ಷದಲ್ಲಿ, ಭಾರತೀಯ ಹಾಕಿ ಪುನರುಜ್ಜೀವನಗೊಳಿಸುವ ಮಿಷನ್ ಆರಂಭವಾಯಿತು.
ಅತ್ತ ಲಕ್ನೋದಲ್ಲಿ ನಡೆದ 2016 ರ ಜೂನಿಯರ್ ವಿಶ್ವಕಪ್ ಭಾರತ ತಂಡದ ಮೇಲೂ ರೀಡ್ ಕಣ್ಣಿಟ್ಟಿದ್ದರು. ಅದರಂತೆ ಕೋಚ್ ಹರೇಂದ್ರ ಸಿಂಗ್ ಅವರ ಚಾಂಪಿಯನ್ ತಂಡದ ಎಂಟು ಪ್ರಮುಖ ಆಟಗಾರರನ್ನು ರೀಡ್ ಟೋಕಿಯೊ ಒಲಿಂಪಿಕ್ಸ್ಗಾಗಿ ಆಯ್ಕೆ ಮಾಡಿದರು. ಭಾರತೀಯ ತರಬೇತುದಾರರಲ್ಲಿ, ಹರೇಂದ್ರ ಸಿಂಗ್ ಜೂನಿಯರ್ ಅಥವಾ ಸೀನಿಯರ್ ತಂಡದೊಂದಿಗೆ ನಿರಂತರವಾಗಿ ಸಂಬಂಧ ಹೊಂದಿದ್ದರು. ಇದು ರೀಡ್ ಅವರಿಗೂ ಸಹಾಯಕವಾಯಿತು.
ಈ 12 ವರ್ಷಗಳಲ್ಲಿ, ಭಾರತೀಯ ಹಾಕಿ ತಂಡದಲ್ಲಿ ಹಲವು ಬದಲಾವಣೆಗಳನ್ನು ತರಾತುರಿಯಲ್ಲಿ ಮಾಡಲಾಗಿದೆ. ಪ್ರಪಂಚದಾದ್ಯಂತ, ತರಬೇತುದಾರರು ತಂಡವನ್ನು ರೂಪಿಸಲು ನಾಲ್ಕು ವರ್ಷಗಳ ಅಧಿಕಾರಾವಧಿಯನ್ನು ಹೊಂದಿರುತ್ತಾರೆ. ಆದರೆ ಭಾರತದಲ್ಲಿ ಅಂತಹದೊಂದು ಯೋಜನೆಯನ್ನೇ ನಿರ್ಲಕ್ಷಿಸಲಾಗಿದೆ. ಆದಾಗ್ಯೂ, ಆಹಾರದಿಂದ ಆಧುನಿಕ ಕ್ರೀಡೋಪಕರಣಗಳ ಬಳಕೆ ಮತ್ತು ಆಧುನಿಕ ತರಬೇತಿಗೆ ಆಟಗಾರರನ್ನು ಸಜ್ಜುಗೊಳಿಸುವ ಮೂಲಕ ಭಾರತ ತಂಡವನ್ನು ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಪದಕ ಗೆಲ್ಲುವಂತೆ ಮಾಡಿರುವುದು ಸಣ್ಣ ಸಾಧನೆಯಂತು ಅಲ್ಲ. ಅದು ಕೂಡ ಬರೋಬ್ಬರಿ 41 ವರ್ಷಗಳ ಬಳಿಕ ಎಂಬುದೇ ಇಲ್ಲಿ ವಿಶೇಷ.
ಇದನ್ನೂ ಓದಿ: IPL 2021: ಐಪಿಎಲ್ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?
ಇದನ್ನೂ ಓದಿ: IPL 2021: ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್: 12 ಆಟಗಾರರು ಕಣಕ್ಕಿಳಿಯುವುದು ಖಚಿತ