IPL 2021: ಐಪಿಎಲ್ನ ಹೊಸ ನಿಯಮದಿಂದ ಯಾರಿಗೆ ಅನುಕೂಲ?
IPL 2021 New Rule: ಇನ್ನು ಕಳೆದ ಬಾರಿಯಂತೆ ಈ ಸಲ ಕೂಡ ಚೆಂಡಿಗೆ ಎಂಜಲು ಬಳಸುವುದನ್ನು ನಿಷೇಧಿಸಲಾಗಿದೆ. ಆಟಗಾರನು ಮೊದಲ ಬಾರಿಗೆ ಎಂಜಲು ಅನ್ವಯಿಸಿದರೆ, ಅಂಪೈರ್‌ಗಳು ಆಟಗಾರರಿಗೆ ಎಚ್ಚರಿಕೆ ನೀಡಲಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ದ್ವಿತಿಯಾರ್ಧದ ಆರಂಭಕ್ಕೂ ಮುನ್ನ ಐಪಿಎಲ್ನ ಕೆಲ ನಿಯಮಗಳನ್ನು ಬಿಸಿಸಿಐ ಬದಲಾಯಿಸಿದೆ. ಅದರಂತೆ ಉಳಿದ 31 ಪಂದ್ಯಗಳ ವೇಳೆ ಚೆಂಡು ಸ್ಟೇಡಿಯಂಗೆ ಹೋದರೆ, ಅಥವಾ ಮೈದಾನದಿಂದ ಹೊರಕ್ಕೆ ಹೋದರೆ ಚೆಂಡನ್ನು ಬದಲಿಸಿ ಹೊಸ ಚೆಂಡಿನೊಂದಿಗೆ ಪಂದ್ಯವನ್ನು ಮುಂದುವರೆಸಲಾಗುತ್ತದೆ. ಈ ಹಿಂದೆ ಕ್ರೀಡಾಂಗಣದಿಂದ ಚೆಂಡು ಹೊರ ಹೋದಾಗ ಅಥವಾ ಸ್ಟೇಡಿಯಂ ಸ್ಟ್ಯಾಂಡ್‌ನಲ್ಲಿ ಬಿದ್ದಾಗ ಅಂಪೈರ್‌ಗಳು ಚೆಂಡನ್ನು ಸ್ವಚ್ಛಗೊಳಿಸಿ ಅದೇ ಚೆಂಡಿನೊಂದಿಗೆ ಆಟವನ್ನು ಮುಂದುವರಿಸುತ್ತಿದ್ದರು. ಆದರೆ, ಈ ಬಾರಿ ನಿಯಮ ಬದಲಿಸಿದ್ದು, ಚೆಂಡು ಮೈದಾನದಿಂದ ಹೊರ ಹೋದರೆ ಹೊಸ ಚೆಂಡಿನ ಮೂಲಕ ಆಟವನ್ನು ಮುಂದುವರೆಸಲು ಬಿಸಿಸಿಐ ನಿರ್ಧರಿಸಿದೆ.
ಯುಎಇನಲ್ಲಿ ನಡೆಯಲಿರುವ ಐಪಿಎಲ್ ದ್ವಿತಿಯಾರ್ಧದ ವೇಳೆ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಚಿಂತಿಸಲಾಗಿದ್ದು, ಅದಕ್ಕಾಗಿ ಹೊಸ ನಿಯಮವನ್ನು ಪರಿಚಯಿಸಲಾಗಿದೆ. ಏಕೆಂದರೆ ಗ್ಯಾಲರಿಯಲ್ಲಿ ಪ್ರೇಕ್ಷಕರಿದ್ದರೆ ಚೆಂಡು ಸ್ಟೇಡಿಯಂಗೆ ಬಿದ್ದಾಗ ಅದನ್ನು ಸ್ಪರ್ಶಿಸುತ್ತಾರೆ. ಇಂತಹ ಸನ್ನಿವೇಶದಲ್ಲಿ ಯಾವುದಾದರೂ ಕೊರೋನಾ ಸೋಂಕಿತ ಪ್ರೇಕ್ಷಕರಿಂದ ಮೈದಾನದಲ್ಲಿರುವ ಆಟಗಾರರಿಗೆ ಸೋಂಕು ಹರಡುವ ಭೀತಿಯಿದೆ. ಹೀಗಾಗಿ, ಸ್ಟೇಡಿಯಂಗೆ ಚೆಂಡು ಹೋದರೆ, ಹೊಸ ಚೆಂಡಿನೊಂದಿಗೆ ಪಂದ್ಯವನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಆದರೆ ಪಂದ್ಯದ ನಡುವೆ ಚೆಂಡಿನ ಬದಲಾವಣೆಯಿಂದ ಯಾರಿಗೆ ಅನುಕೂಲ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಲಾಭ.
ಹೌದು, ಪಂದ್ಯದ ನಡುವೆ ಹೊಸ ಚೆಂಡಿನ ಬಳಕೆಯಿಂದ ಬ್ಯಾಟ್ಸ್ಮನ್ಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಏಕೆಂದರೆ ಹೊಸ ಚೆಂಡು ಬೌಲರುಗಳ ಹಿಡಿತದಲ್ಲಿರುವುದಿಲ್ಲ. ಅಂದರೆ ಬೌಲರುಗಳು ಬಯಸಿದಂತೆ ಬೌಲಿಂಗ್ ಮಾಡಲಾಗುವುದಿಲ್ಲ. ಚೆಂಡು ಹಳೆಯದಾದಷ್ಟು ಅಥವಾ ಹೊಳಪು ಕಳೆದುಕೊಂಡಷ್ಟು ಬೌಲರುಗಳು ಯಶಸ್ಸು ಸಾಧಿಸುತ್ತಾರೆ. ಹೀಗಾಗಿಯೇ ಪಂದ್ಯದ ವೇಳೆ ಬೌಲರುಗಳು ಚೆಂಡನ್ನು ಒರಸುತ್ತಿರುತ್ತಾರೆ. ಅದರಲ್ಲೂ ವೇಗಿಗಳು ಸ್ವಿಂಗ್ ಮಾಡಲು ಮತ್ತು ಗ್ರಿಪ್ ಸಿಗಲು ಹೆಚ್ಚು ಸವೆದಿರಬೇಕಾಗುತ್ತದೆ. ಹಾಗೆಯೇ ಯುಎಇಯ ಪಿಚ್‌ಗಳು ಸಾಮಾನ್ಯವಾಗಿ ಸ್ಪಿನ್ನರ್‌ಗಳಿಗೆ ಸಹಕಾರಿ. ಆದರೆ ಹೊಸ ನಿಯಮದಂತೆ ಪ್ರತಿ ಬಾರಿಯೂ ಸ್ಪಿನ್ನರ್‌ಗಳು ಹೊಸ ಚೆಂಡಿನೊಂದಿಗೆ ಬೌಲಿಂಗ್ ಮಾಡುವುದು ಕೂಡ ಸವಾಲಾಗಲಿದೆ. ಹೀಗಾಗಿ ಐಪಿಎಲ್ನ ಹೊಸ ನಿಯಮದಿಂದ ಬ್ಯಾಟ್ಸ್ಮನ್ಗಳು ಹೆಚ್ಚಿನ ಅನುಕೂಲ ಪಡೆಯಲಿದ್ದಾರೆ.
ಇನ್ನು ಕಳೆದ ಬಾರಿಯಂತೆ ಈ ಸಲ ಕೂಡ ಚೆಂಡಿಗೆ ಎಂಜಲು ಬಳಸುವುದನ್ನು ನಿಷೇಧಿಸಲಾಗಿದೆ. ಆಟಗಾರನು ಮೊದಲ ಬಾರಿಗೆ ಎಂಜಲು ಅನ್ವಯಿಸಿದರೆ, ಅಂಪೈರ್‌ಗಳು ಆಟಗಾರರಿಗೆ ಎಚ್ಚರಿಕೆ ನೀಡಲಿದ್ದಾರೆ. ಇದಾಗ್ಯೂ ಅದೇ ತಪ್ಪು ಮರುಕಳಿಸಿದರೆ ಬ್ಯಾಟಿಂಗ್ ತಂಡಕ್ಕೆ 5-ರನ್ ಪೆನಾಲ್ಟಿ ನೀಡಲಾಗುತ್ತದೆ. ಇತ್ತ ಹೊಸ ಚೆಂಡಿನ ಮೇಲ್ಮೈಯನ್ನು ಸವೆಸಲು ಬೌಲರುಗಳು ಎಂಜಲು ಮೊರೆ ಹೋಗುತ್ತಿದ್ದರು. ಈ ಬಾರಿ ಅದಕ್ಕೂ ಅವಕಾಶವಿರುವುದಿಲ್ಲ. ಹೀಗಾಗಿ ಸಿಕ್ಸರ್ಗೆ ಹೋದ ಚೆಂಡಿನ ಬದಲಾವಣೆಯಿಂದ ಬೌಲರುಗಳು ವಿಕೆಟ್ ಪಡೆಯಲು ಮತ್ತಷ್ಟು ಬೆವರಿಳಿಸಬೇಕಾಗುತ್ತದೆ. ಒಟ್ಟಿನಲ್ಲಿ ಐಪಿಎಲ್ನ ಹೊಸ ನಿಯಮವು ಬ್ಯಾಟ್ಸ್ಮನ್ಗಳಿಗೆ ಅನುಕೂಲಕರವಾಗಲಿದ್ದು, ಇದರಿಂದ ಯುಎಇ ಪಿಚ್ನಲ್ಲಿ ರನ್ ಮಳೆ ಹರಿದು ಬಂದರೂ ಅಚ್ಚರಿಪಡಬೇಕಿಲ್ಲ.
ಇದನ್ನೂ ಓದಿ:IPL 2021 Schedule: ಐಪಿಎಲ್ ವೇಳಾಪಟ್ಟಿ ಪ್ರಕಟ: ಸೆಪ್ಟೆಂಬರ್ 19 ರಿಂದ ಚುಟುಕು ಕ್ರಿಕೆಟ್ ಕದನ ಶುರು
ಇದನ್ನೂ ಓದಿ: Neeraj Chopra: ಆಸ್ಪತ್ರೆಯ ಬೆಡ್ನಿಂದ ಚಿನ್ನದ ಬೇಟೆ ತನಕ: ನೀರಜ್ ಚೋಪ್ರಾ ಎಂಬ ಗೋಲ್ಡನ್ ಸ್ಟಾರ್
ಇದನ್ನೂ ಓದಿ: IPL 2021: ಐಪಿಎಲ್ ಹೊಸ ಅಪ್ಡೇಡ್: ಆಟಗಾರರಿಗೆ ಬಿಗ್ ರಿಲೀಫ್
(IPL 2021 RULE CHANGE: Batsmen or Bowlers – Who are at advantage?)