IPL 2021: ಆರ್​ಸಿಬಿ ತಂಡದಿಂದ ಹೊರನಡೆದ ಜೋಶ್ ಫಿಲಿಪ್.. ಬದಲಿ ಆಟಗಾರನ್ನಾಗಿ ಬಂದ ಸೂಪರ್ ಸ್ಮ್ಯಾಶ್ ಲೀಗ್‌ನ ಸೂಪರ್ ಸ್ಟಾರ್!

|

Updated on: Mar 11, 2021 | 1:54 PM

IPL 2021: ಅಲೆನ್ ಸೂಪರ್ ಸ್ಮ್ಯಾಶ್ ಲೀಗ್‌ನ ಈ ಆವೃತ್ತಿಯಲ್ಲಿ ಅತಿ ಹೆಚ್ಚು (512) ರನ್ ಗಳಿಸಿದ ಆಟಗಾರನ್ನಾಗಿದ್ದಾರೆ. ಆರು ಅರ್ಧಶತಕಗಳನ್ನು ಗಳಿಸಿರುವ ಅಲೆನ್ ಅವರ ಗರಿಷ್ಠ ಸ್ಕೋರ್ ಔಟಾಗದೆ 92 ರನ್ ಆಗಿದೆ.

IPL 2021: ಆರ್​ಸಿಬಿ ತಂಡದಿಂದ ಹೊರನಡೆದ ಜೋಶ್ ಫಿಲಿಪ್.. ಬದಲಿ ಆಟಗಾರನ್ನಾಗಿ ಬಂದ ಸೂಪರ್ ಸ್ಮ್ಯಾಶ್ ಲೀಗ್‌ನ ಸೂಪರ್ ಸ್ಟಾರ್!
ಫಿನ್ ಅಲೆನ್, ಜೋಶ್ ಫಿಲಿಪ್
Follow us on

ಬೆಂಗಳೂರು: ಐಪಿಎಲ್ 2021 ಆರಂಭಕ್ಕೂ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ದೊಡ್ಡ ಬದಲಾವಣೆಯಾಗಿದೆ. ಆಸ್ಟ್ರೇಲಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಜೋಶ್ ಫಿಲಿಪ್ ಐಪಿಎಲ್ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಆರ್ಸಿಬಿ ತಂಡ ಉದಯೋನ್ಮುಖ ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಫಿನ್ ಅಲೆನ್ ಅವರನ್ನು ಜೋಶ್ ಫಿಲಿಪ್ ಬದಲಿಗೆ ತಂಡದಲ್ಲಿ ಸೇರಿಸಿಕೊಂಡಿದೆ. ಐಪಿಎಲ್ 2021 ರ ಹರಾಜಿನಲ್ಲಿ ಅಲೆನ್‌ನನ್ನು ಅವರ ಮೂಲ ಬೆಲೆ 20 ಲಕ್ಷ ರೂಪಾಯಿಗೆ ಯಾರೂ ಖರೀದಿಸಲಿಲ್ಲ. ಈಗ ಫಿಲಿಪ್ ಹೊರನಡೆದ ಕಾರಣದಿಂದಾಗಿ ಫಿನ್ ಅಲೆನ್​ಗೆ ತಂಡದಲ್ಲಿ ಆಡಲು ಅವಕಾಶ ಸಿಗುತ್ತಿದೆ.

ಈ ನಿರ್ಧಾರಕ್ಕೆ ನಮಗೆ ವಿಷಾದವಿದೆ..
ಜೋಶ್ ಫಿಲಿಪ್ ಐಪಿಲ್​ನಿಂದ ಹೊರಗುಳಿದಿರುವುದರ ಬಗ್ಗೆ ಟ್ವೀಟ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಜೋಶ್ ಫಿಲಿಪ್ ವೈಯಕ್ತಿಕ ಕಾರಣಗಳಿಗಾಗಿ ಐಪಿಎಲ್ 2021 ರಿಂದ ಹೊರಗುಳಿಯಲು ನಿರ್ಧಾರಿಸಿದ್ದಾರೆ. ಫಿಲಿಪ್ ಅವರ ಈ ನಿರ್ಧಾರಕ್ಕೆ ನಮಗೆ ವಿಷಾದವಿದೆ. ಈ ಕಾರಣದಿಂದಾಗಿ, ನಾವು ಟಾಪ್-ಆರ್ಡರ್ ರನ್ನಿಂಗ್ ಬ್ಯಾಟ್ಸ್‌ಮನ್‌ ಬದಲಿಗೆ ಉದಯೋನ್ಮುಖ ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಫಿನ್ ಅಲೆನ್ ಅವರನ್ನು ಬದಲಿ ಆಟಗಾರನ್ನಾಗಿ ಆಯ್ಕೆ ಮಾಡಿದ್ದೇವೆ ಎಂದಿದೆ.

ಸೂಪರ್ ಸ್ಮ್ಯಾಶ್ ಟಿ20 ಲೀಗ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು..
ಆಸ್ಟ್ರೇಲಿಯಾದ ಜೋಶ್ ಫಿಲಿಪ್ 2020 ರ ಆವೃತ್ತಿಯಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್​ಗೆ ಪಾದಾರ್ಪಣೆ ಮಾಡಿದರು. ಆರ್​ಸಿಬಿ ಪರ ಐದು ಪಂದ್ಯಗಳನ್ನಾಡಿರುವ ಜೋಶ್ ಫಿಲಿಪ್ 78 ರನ್ ಗಳಿಸಿದ್ದಾರೆ. ಹಾಗೆಯೇ, ಫಿನ್ ಅಲೆನ್ ಇದುವರೆಗೆ ನ್ಯೂಜಿಲೆಂಡ್ ಪರ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ. ಇತ್ತೀಚೆಗೆ ಅವರು ನ್ಯೂಜಿಲೆಂಡ್ ಸೂಪರ್ ಸ್ಮ್ಯಾಶ್ ಟಿ20 ಲೀಗ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರು.

ಸೂಪರ್ ಸ್ಮ್ಯಾಶ್ ಲೀಗ್‌ನಲ್ಲಿ ಮಿಂಚಿದ ಅಲೆನ್
ಸೂಪರ್ ಸ್ಮ್ಯಾಶ್ ಲೀಗ್‌ನಲ್ಲಿ ವೆಲ್ಲಿಂಗ್ಟನ್ ತಂಡದ ಅದ್ಭುತ ಪ್ರದರ್ಶನದಲ್ಲಿ 21 ವರ್ಷದ ಫಿನ್ ಅಲೆನ್ ಅವರ ಪಾತ್ರ ಅಪಾರವಾಗಿದೆ. ಅಲೆನ್ ಸೂಪರ್ ಸ್ಮ್ಯಾಶ್ ಲೀಗ್‌ನ ಈ ಆವೃತ್ತಿಯಲ್ಲಿ ಅತಿ ಹೆಚ್ಚು (512) ರನ್ ಗಳಿಸಿದ ಆಟಗಾರನ್ನಾಗಿದ್ದಾರೆ. ಆರು ಅರ್ಧಶತಕಗಳನ್ನು ಗಳಿಸಿರುವ ಅಲೆನ್ ಅವರ ಗರಿಷ್ಠ ಸ್ಕೋರ್ ಔಟಾಗದೆ 92 ರನ್ ಆಗಿದೆ. 193 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟಿಂಗ್​ ಮಾಡಿರುವ ಅಲೆನ್, ಸೂಪರ್ ಸ್ಮ್ಯಾಶ್‌ನಲ್ಲಿ 56 ಬೌಂಡರಿ ಮತ್ತು 25 ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಅಲ್ಲದೆ ಕೇವಲ ಎರಡು ಪಂದ್ಯಗಳಲ್ಲಿ ಎರಡಂಕಿಗಿಂತ ಕಡಿಮೆ ರನ್​ಗೆ ಔಟ್​ ಆಗಿದ್ದಾರೆ. ಫಿನ್ ಅಲೆನ್ ಈ ಆವೃತ್ತಿಯಲ್ಲಿ ಹೆಚ್ಚು ರನ್, ಹೆಚ್ಚು ಅರ್ಧಶತಕ, ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ.

ಇದನ್ನೂ ಓದಿ:IPL 2021: ಚುಟುಕು ಸಮರಕ್ಕಾಗಿ RCB ಆಪದ್ಬಾಂಧವ ಶಸ್ತ್ರಾಭ್ಯಾಸ.. ಹೇಗಿದೆ ನೋಡಿ ಎಬಿ ಡಿವಿಲಿಯರ್ಸ್ ಐಫೋನ್ ಔಟ್..!