ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್: ರೋಹಿತ್​ ಜೊತೆ ಯಾರು ಇನ್ನಿಂಗ್ಸ್ ಆರಂಭಿಸಬಹುದು- ಅಗರವಾಲ್ ಅಥವಾ ಗಿಲ್?

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jun 01, 2021 | 8:16 PM

ವಿದೇಶದ ಪಿಚ್​ಗಳಲ್ಲಿ ಇನ್ನಿಂಗ್ಸ್ ಆರಂಭಿಸುವುದು ಉಪಖಂಡದ ಪಿಚ್​ಗಳಲ್ಲಿ ಆರಂಭಿಸುವುದಕ್ಕಿಂತ ಬಹಳ ಭಿನ್ನವಾಗುರುತ್ತದೆ. ಭಾರತದ ಪಿಚ್​ಗಳಲ್ಲಿ ಹೆಚ್ಚು ಪುಟಿತವಿರೋದಿಲ್ಲ ಮತ್ತು ಬಾಲು ಗಾಳಿಯಲ್ಲಿ ಜಾಸ್ತಿ ಸ್ವಿಂಗ್ ಆಗುವುದಿಲ್ಲ.

ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್: ರೋಹಿತ್​ ಜೊತೆ ಯಾರು ಇನ್ನಿಂಗ್ಸ್ ಆರಂಭಿಸಬಹುದು- ಅಗರವಾಲ್ ಅಥವಾ ಗಿಲ್?
ರೋಹಿತ್ ಶರ್ಮ
Follow us on

ಭಾರತ ಕಳೆದ ವರ್ಷ (2020) ನ್ಯೂಜಿಲೆಂಡ್ ಪ್ರವಾಸದಲ್ಲಿ ಆಡಿದ ಟೆಸ್ಟ್​ ಸರಣಿಯನ್ನು 0-2 ಅಂತರದಿಂದ ಸೋತಿತ್ತು. ಆ ಸರಣಿಯಲ್ಲಿ ಕಿವೀಸ್ ವೇಗಿಗಳು- ಟಿಮ್ ಸೌಥಿ 14 ವಿಕೆಟ್​ ಪಡೆದರೆ ಅವರ ಅತ್ಯಂತ ಸಮರ್ಥ ಜೊತೆಗಾರ ಟ್ರೆಂಟ್​ ಬೌಲ್ಟ್ 11 ವಿಕೆಟ್ ಕಬಳಿಸಿದ್ದರು. ಮತ್ತೊಬ್ಬ ವೇಗದ ಬೌಲರ್ ಕೈಲ್ ಜೇಮಿಸನ್ 9 ಬಲಿಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ಇದನ್ನು ಯಾಕೆ ಹೇಳಬೇಕಾಗಿದೆಂದರೆ, ಜೂನ್ 18 ರಿಂದ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್​ನ ಸೌಥಾಂಪ್ಟನ್​ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್​ ಚಾಂಪಿಯನ್ ಟೆಸ್ಟ್​ನಲ್ಲಿ ಭಾರತದ ಬ್ಯಾಟ್ಸ್​ಮನ್​​ಗಳು ಇದೇ ಬೌಲರ್​ಗಳನ್ನು ಎದುರಿಸಲಿದ್ದಾರೆ. ಸೌಥಾಂಪ್ಟ್​ನ ರೋಸ್ ಬೋಲ್ ಪಿಚ್ ಇಂಗ್ಲೆಂಡ್​ನ ಇತರ ಮೈದಾನಗಳಲ್ಲಿನ ಪಿಚ್​ಗಳ ಹಾಗೆ ವೇಗದ ಬೌಲಿಂಗ್​ಗೆ ಸಂಪೂರ್ಣವಾಗಿ ನೆರವಾಗುವುದಿಲ್ಲವಾದರೂ, ಬಾಲು ಚೆನ್ನಾಗಿ ಸ್ವಿಂಗ್ ಆಗುತ್ತದೆ. ಸೌಥೀ, ಬೌಲ್ಟ್ ಅವರ ಖ್ಯಾತಿಯನ್ನು ಗಮನಕ್ಕೆ ತಂದುಕೊಂಡರೆ, ಭಾರತದ ಓಪನಿಂಗ್ ಬ್ಯಾಟ್ಸ್​ಮನ್​ಗಳಿಗೆ ಆಟಕ್ಕೆ ಕುದುರಿಕೊಳ್ಳವುದು ಸುಲಭವಾಗಲಾರದು. ಅಲ್ಲದೆ ಯಾವ ಜೋಡಿಯನ್ನು ಇನ್ನಿಂಗ್ಸ್ ಅರಂಭಿಸಲು ಕಳಿಸಬೇಕೆನ್ನುವ ಬಗ್ಗೆ ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಕೋಚ್ ರವಿ ಶಾಸ್ತ್ರೀ ಅವರಿಗೆ ತಲೆಬಿಸಿಯಾಗಲಿರುವುದು ಮಾತ್ರ ಸತ್ಯ.

ವಿದೇಶದ ಪಿಚ್​ಗಳಲ್ಲಿ ಇನ್ನಿಂಗ್ಸ್ ಆರಂಭಿಸುವುದು ಉಪಖಂಡದ ಪಿಚ್​ಗಳಲ್ಲಿ ಆರಂಭಿಸುವುದಕ್ಕಿಂತ ಬಹಳ ಭಿನ್ನವಾಗುರುತ್ತದೆ. ಭಾರತದ ಪಿಚ್​ಗಳಲ್ಲಿ ಹೆಚ್ಚು ಪುಟಿತವಿರೋದಿಲ್ಲ ಮತ್ತು ಬಾಲು ಗಾಳಿಯಲ್ಲಿ ಜಾಸ್ತಿ ಸ್ವಿಂಗ್ ಆಗುವುದಿಲ್ಲ. ಆಸ್ಟ್ರೇಲಿಯ ವಿರುದ್ಧ ಆಡಿಎ2 ಟೆಸ್ಟ್ ಮತ್ತು ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ಆಡಿದ ಟೆಸ್ಟ ್ ಸರಣಿಯಲ್ಲಿ ರೋಹಿತ್ ಶರ್ಮ ಉತ್ತಮ ಪ್ರದರ್ಶನಗಳನ್ನು ನೀಡಿದರು. ಹಾಗಾಗಿ ಡಬ್ಲ್ಯೂಟಿಸಿಯಲ್ಲೂ ಅವರನ್ನು ಆರಂಭಿಕ ಸ್ಥಾನಕ್ಕೆ ಟೀಮ್ ಇಂಡಿಯಾ ಪರಿಗಣಿಸೋದು ನಿಶ್ಚಿತ.

ರೋಹಿತ್ ಅವರಲ್ಲಿ ಅನುಭವದ ಕೊರತೆ ಇಲ್ಲ. ಆದರೆ ಅವರು ಇಂಗ್ಲೆಂಡ್​ನಲ್ಲಿ ಕೇವಲ ಒಂದು ಟೆಸ್ಟ್ ಮಾತ್ರ ಆಡಿದ್ದು ಅದರಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡಿರಲಿಲ್ಲ. ನ್ಯೂಜಿಲೆಂಟ್​ ವಿರುದ್ಧ ನಡೆದ ಸರಣಿಯಲ್ಲಿ ಅವರು ಟೀಮಿನ ಭಾಗವಾಗಿರಲಿಲ್ಲ. ರೋಹಿತ್ ತಾಂತ್ರಿಕವಾಗಿ ನಿಪುಣ ಬ್ಯಾಟ್ಸ್​ಮನ್ ಅಲ್ಲ. ಆದರೆ ಅವರ ಬ್ಯಾಟಿಂಗ್​ನಲ್ಲಿ ಒಂದು ಬಗೆಯ ಸೊಬಗಿದೆ. ವಿಶ್ವದ ಯಾವುದೇ ಭಯಾನಕ ವೇಗದ ಬೌಲರ್​ನನ್ನು ಅವರು ಲೀಲಾಜಾಲವಾಗಿ ಎದುರಿಸುತ್ತಾರೆ.

ರೋಹಿತ್​ ಬ್ಯಾಟಿಂಗ್​ ವೈಶಿಷ್ಟ್ಯತೆಯೆಂದರೆ ಎಸೆತವನ್ನು ಬೇಗನೇ ಗುರುತಿಸುವುದು ಮತ್ತು ನಿರ್ಭೀತಿಯಿಂದ ಹೊಡೆತ ಬಾರಿಸುವುದು. ಬಾಲು ಪುಟಿದ ನಂತರ ವೇಗವಾಗಿ ಬ್ಯಾಟಿಗೆ ಬರುವುದನ್ನು ಅವರು ಇಷ್ಟಪಡುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ಕಿವಿಗಳ ವೇಗದ ದಾಳಿಯನ್ನು ಹೇಗೆ ಎದುರಿಸಿ ಆಡಲಿದ್ದಾರೆ ಎನ್ನುವುದು ಕುತೂಹಲಕಾರಿ ಅಂಶ.

ಆದರೆ ಟೀಮ್ ಇಂಡಿಯಾ ಮುಂದಿರುವ ಅತಿ ದೊಡ್ಡ ಸಮಸ್ಯೆ ಎಂದರೆ ರೋಹಿತ್​ಗೆ ಜೊತೆಗಾರನಾಗಿ ಯಾರನ್ನು ಕಳಿಸುವುದು ಅನ್ನೋದು. ಮಾಯಾಂಕ್ ಅಗರವಾಲ್ ನಿಸ್ಸಂದೇಹವಾಗಿ ಉತ್ತಮ ಟೆಕ್ನಿಕ್ ಉಳ್ಳ ಓಪನರ್.. ಅಲ್ಲದೆ ನ್ಯೂಜಿಲೆಂಡ್​ ವಿರುದ್ಧ ನಡೆದ ಸರಣಿಯಲ್ಲಿ ಅವರು 4 ಇನ್ನಿಂಗ್ಸ್​ಗಳಿಂದ 102 ರನ್ ಗಳಿಸಿ ಭಾರತದ ಪರ ಅತಿಹೆಚ್ಚು ರನ್​ ಗಳಿಸಿದ ಗೌರವಕ್ಕೆ ಪಾತ್ರರಾಗಿದ್ದರು. ಮಾಯಾಂಕ್ ಸರಣಿಯಲ್ಲಿ 200ಕ್ಕಿಂತ ಜಾಸ್ತಿ ಎಸೆತಗಳನ್ನು ಎದುರಿಸಿದ್ದು ಸಹ ಗಮನಾರ್ಹ ಸಂಗತಿಯೇ.

ಆಸ್ಟ್ರೇಲಿಯ ವಿರುದ್ಧ ಆಡಿದ ಸರಣಿಯ ಮೊದಲೆರಡು ಟೆಸ್ಟ್​ಗಳಲ್ಲಿ ಅಗರವಾಲ್ ವಿಫಲರಾಗಿದ್ದರಿಂದ ಅವರು ಸ್ಥಾನ ಕಳೆದುಕೊಳ್ಳಬೇಕಾಯಿತು. ಅದರೆ, ಅವರ ಟೆಕ್ನಿಕ್ ಮತ್ತು ಶೈಲಿ ಇಂಗ್ಲಿಷ್​ ಕಂಡೀಶನ್​ಗಳಿಗೆ ಸೂಟ್​ ಆಗುತ್ತದೆ. ಅವರ ಪರವಾಗಿ ವಾದಿಸುವ ಸಂಗತಿಯೆಂದರೆ, ಆಸ್ಟ್ರೇಲಿಯಾದಲ್ಲಿ ಅವರ ಸ್ಥಾನಕ್ಕೆ ಬಂದ ಶುಭ್ಮನ್ ಗಿಲ್ ಅಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿದರೂ ಇಂಗ್ಲೆಂಡ್​ ವಿರುದ್ಧ ಮೊನ್ನೆ ಮುಕ್ತಾಯಗೊಂದ ಸ್ವದೇಶದ ಸರಣಿಯಲ್ಲಿ ಬಹಳ ಕೆಟ್ಟದ್ದಾಗಿ ವಿಫಲರಾದರು. ನಂತರ ನಡೆದ ಐಪಿಎಲ್ ಟೂರ್ನಿಯಲ್ಲೂ ಗಿಲ್ ಪ್ರಭಾವ ಬೀರಲಿಲ್ಲ. ಹಾಗಾಗಿ ಭಾರೀ ಒತ್ತಡದ ವಿಶ್ವ ಚಾಂಪಿಯನ್​ಶಿಪ್​ ಟೆಸ್ಟ್​ನಲ್ಲಿ ಅವರ ಮಾನಸಿಕ ಸಿದ್ಧತೆ ಸೂಕ್ತವಾಗರಲಾರದು.

ಈ ಮೂವರಲ್ಲಿ ರೋಹಿತ್ ಆಡುವುದು ನಿಶ್ಚಿತವಾಗಿರುವುದರಿಂದ ಅವರ ಜೊತೆಗಾರನ ಸ್ಥಾನಕ್ಕೆ ಅಗರವಾಲ್ ಮತ್ತು ಗಿಲ್ ನಡುವೆ ಸ್ಫರ್ಧೆ ಏರ್ಪಟ್ಟಿದೆ. ಕನ್ನಡಿಗನ ಬ್ಯಾಟಿಂಗ್​ ಶೈಲಿ ರೋಹಿತ್ ಅವರ ಶೈಲಿಗೆ ತದ್ವಿರುದ್ಧವಾಗಿದೆ. ಆರಂಭ ಆಟಗಾರನಲ್ಲಿ ಇರಬೇಕಿರುವ ತಾಳ್ಮೆ, ಶಿಸ್ತು ಮತ್ತು ತಾಂತ್ರಿಕ ನೈಪುಣ್ಯತೆ ಅವರಲ್ಲಿದೆ. ಗಿಲ್, ರೋಹಿತ್ ಅವರಂತೆ ಹೊಡೆತಗಳನ್ನು ಬಾರಿಸಲು ಮುಂದಾಗಿಬಿಡುತ್ತಾರೆ. ಚೆಂಡು ಹೊಯ್ದಾಡುವ ಇಂಗ್ಲೆಂಡ್​ ಪಿಚ್​ಗಳಲ್ಲಿ ಈ ತೆರನಾದ ಶೈಲಿ ಮಾರಕವಾಗಬಹುದು.

ಈ ಮೂವರಲ್ಲಿ ಯಾರೇ ಆವಕಾಶ ಪಡೆದರೂ ಅವರೆದಿರಿರುವ ಸವಾಲು ಸಾಮಾನ್ಯವಾಗಿಲ್ಲ. ಸೌಥೀ ಮತ್ತು ಬೌಲ್ಟ್ ಸೌಂಥಾಪ್ಟನ್​ ಪಿಚ್​ನಲ್ಲಿ ಬೆಂಕಿಯುಗುಳುವುದು ಮಾತ್ರ ಸತ್ಯ, ಯಾಕೆಂದರೆ ಇದು ಹೈ ಆಕ್ಟೇನ್ ಟೆಸ್ಟ್ ಪಂದ್ಯ.

ಇದನ್ನೂ ಓದಿ: WTC Final: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಯುವ ಸ್ಥಳಕ್ಕೂ ಟೈಟಾನಿಕ್ ಹಡಗಿಗೂ ಇದೆ ಅವಿನಾಭಾವ ಸಂಬಂಧ, ಏನದು?